

ತುಮಕೂರು: ಸರ್ಕಾರಿ ಶಾಲಾ ಮಕ್ಕಳಿಗೆ ನಕಲಿ ವಿಮೆ ಪಾಲಿಸಿ ನೀಡಿದ್ದ ಪ್ರಕರಣದಲ್ಲಿ ತುಮಕೂರು ಗ್ರಾಮಾಂತರ ಶಾಸಕ ಡಿ.ಸಿ. ಗೌರಿಶಂಕರ್ಗೆ ಸಂಕಷ್ಟ ಎದುರಾಗಿದೆ. ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದ್ದು, ಅ.22ರಂದು ಖುದ್ದು ನ್ಯಾಯಾಲಯಕ್ಕೆ ಹಾಜರಾಗುವಂತೆ ಶಾಸಕರಿಗೆ ಸೂಚಿಸಿದೆ.
ಪ್ರಕರಣದ ಹಿನ್ನೆಲೆ: 2018ರಲ್ಲಿ ನಡೆದಿದ್ದ ಸಾರ್ವತ್ರಿಕ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ತುಮಕೂರು ಗ್ರಾಮಾಂತರ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಗೌರಿಶಂಕರ್ ಸ್ಪರ್ಧಿಸಿದ್ದರು. ಈ ಸಂದರ್ಭದಲ್ಲಿ ಕ್ಷೇತ್ರದ ವ್ಯಾಪ್ತಿಯಲ್ಲಿ ಇರುವ ಸುಮಾರು ಐವತ್ತು ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಅಂದಾಜು 40 ಸಾವಿರ ನಕಲಿ ವಿಮೆ ಪಾಲಿಸಿ ನೀಡಿದ್ದಾರೆ. ಇದರಲ್ಲಿ 16 ಸಾವಿರ ವಿದ್ಯಾರ್ಥಿಗಳಿಗೆ ನಕಲಿ ಸಮೂಹ ವಿಮೆ ಪಾಲಿಸಿ ನೀಡಿದ್ದಾರೆ ಎಂದು ಆರೋಪಿಸಿ ಮಾಜಿ ಶಾಸಕ ಬಿ.ಸುರೇಶ್ ಗೌಡ ಅವರ ಸಹೋದರ ರಮೇಶ್ ಬೆಟ್ಟಯ್ಯ ಎಂಬುವವರು ಪ್ರಧಾನಮಂತ್ರಿ ಹಾಗೂ ಮುಖ್ಯಮಂತ್ರಿಗೆ ದೂರು ಸಲ್ಲಿಸಿದ್ದರು. ದೂರಿನ ಮೇರೆಗೆ ಕ್ರಮ ಜರುಗಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಸೂಚನೆ ನೀಡಲಾಗಿತ್ತು. ಅದರಂತೆ 2020ರ ಜುಲೈ 18 ರಂದು ತುಮಕೂರು ಗ್ರಾಮಾಂತರ ಠಾಣೆ ಪೊಲೀಸರು ಗೌರಿಶಂಕರ್ ವಿರುದ್ಧ ಎಫ್ಐಆರ್ ದಾಖಲಿಸಿದ್ದರು. ಈ ಎಫ್ಐಆರ್ ರದ್ದು ಪಡಿಸಲು ಗೌರಿಶಂಕರ್ ಮಾಡಿಕೊಂಡ ಮನವಿಯನ್ನು ಹೈಕೋರ್ಟ್ ಈ ಹಿಂದೆಯೇ ತಿರಸ್ಕರಿಸಿತ್ತು.
ಸರ್ಕಾರಿ ಶಾಲಾ ಮಕ್ಕಳಿಗೆ ನಕಲಿ ವಿಮೆ ಪಾಲಿಸಿ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ತುಮಕೂರು ಗ್ರಾಮಾಂತರ ಠಾಣೆ ಪೊಲೀಸರು ಶಾಸಕ ಡಿ.ಸಿ. ಗೌರಿಶಂಕರ್ ವಿರುದ್ಧ ಆರೋಪಪಟ್ಟಿ ಸಲ್ಲಿಸಿದ್ದರು. ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ಅಧಿಕಾರಿಗಳು ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಸಿದ್ದರು.