ಶಾಸಕ ಶ್ರೀನಿವಾಸ್​ಗೆ ಎಚ್​ಡಿಕೆ ಮಾಸ್ಟರ್ ಸ್ಟ್ರೋಕ್! 25ಕ್ಕೆ ಗುಬ್ಬಿಯಲ್ಲೇ ಸಮಾವೇಶ, ಪರ್ಯಾಯ ನಾಯಕತ್ವ ಸೃಷ್ಟಿ

gubbi srinivas hdk
Published on

ತುಮಕೂರು: ಕಾಂಗ್ರೆಸ್ ಪಾಳಯದಲ್ಲಿ ಕಾಣಿಸಿಕೊಂಡು ಜೆಡಿಎಸ್ ವರಿಷ್ಠರಿಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದ ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್​ಗೆ ಜೆಡಿಎಸ್ ವರಿಷ್ಠರೇ ಮಾಸ್ಟರ್ ಸ್ಟ್ರೋಕ್ ನೀಡಿದ್ದು, ಜಿಲ್ಲಾ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ.

ಶಾಸಕ ಎಸ್.ಆರ್.ಶ್ರೀನಿವಾಸ್ ಅವರನ್ನು ದೂರವಿಟ್ಟು ಗುಬ್ಬಿ ಪಟ್ಟಣದ ಸರ್ಕಾರಿ ಕಾಲೇಜು ಮೈದಾನದಲ್ಲಿ ಬೃಹತ್ ಜೆಡಿಎಸ್ ಸಮಾವೇಶ ಮಾಡುತ್ತಿರುವುದು ಅಚ್ಚರಿ ಮೂಡಿಸಿದೆ. ಈ ಸಮಾವೇಶದಲ್ಲಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಭಾಗವಹಿಸುತ್ತಿದ್ದು, ಕ್ಷೇತ್ರದಲ್ಲಿ ಮುಂದಿನ ಚುನಾವಣೆಯಲ್ಲಿ ಶಾಸಕ ಶ್ರೀನಿವಾಸ್​ಗೆ ಟಿಕೆಟ್ ಕೈತಪ್ಪುವ ಸಂದೇಶ ರವಾನಿಸಲಿದ್ದಾರೆ.

ಅ.25ರಂದು ಮಧ್ಯಾಹ್ನ 12ಕ್ಕೆ ನಡೆಯಲಿರುವ ಸಮಾವೇಶದಲ್ಲಿ ಸಿ.ಎಸ್.ಪುರ ಭಾಗದ ಬಿಜೆಪಿ ಮುಖಂಡ ಬಿ.ಎಸ್.ನಾಗರಾಜು ಜೆಡಿಎಸ್ ಸೇರ್ಪಡೆಯಾಗುತ್ತಿದ್ದು, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಹುರಿಯಾಳು ಆಗಲಿದ್ದಾರೆ ಎಂದು ಶಾಸಕರ ವಿರೋಧಿ ಪಾಳಯದಲ್ಲಿ ಗುರುತಿಸಿಕೊಂಡಿರುವ ಜೆಡಿಎಸ್ ಸ್ಥಳೀಯ ಮುಖಂಡರೇ ಹೇಳಲಾರಂಭಿಸಿದ್ದಾರೆ.

ಸಮ್ಮಿಶ್ರ ಸರ್ಕಾರದಲ್ಲಿ ಮಂತ್ರಿ ಸ್ಥಾನ ನೀಡಿದ್ದರೂ ಪಕ್ಷದ ನಾಯಕತ್ವದ ವಿರುದ್ಧ ಮಾತನಾಡಿದ್ದಲ್ಲದೆ, ಕಾಂಗ್ರೆಸ್ ಮುಖಂಡ ಕೆ.ಎನ್.ರಾಜಣ್ಣ ಅವರ ಮನೆಯಲ್ಲಿ ಕಾಣಿಸಿಕೊಂಡಿದ್ದನ್ನೇ ನೆಪವಾಗಿಟ್ಟುಕೊಂಡು ಕ್ಷೇತ್ರದಲ್ಲಿ ಪ್ರತ್ಯೇಕ ನಾಯಕತ್ವ ಸೃಷ್ಟಿಸಲು ಜೆಡಿಎಸ್ ಮಾಸ್ಟರ್​ ಮೈಂಡ್​ ಚಿಂತಿಸಿರುವುದು ಎಸ್.ಆರ್.ಶ್ರೀನಿವಾಸ್ ಭವಿಷ್ಯದ ರಾಜಕೀಯ ನಡೆಯ ಬಗ್ಗೆ ಕುತೂಹಲ ಹುಟ್ಟುಹಾಕಿದೆ.

ಸಿ.ಎಸ್.ಪುರ ಜಿಪಂ ಕ್ಷೇತ್ರದಿಂದ ಬಿಜೆಪಿಯಿಂದ ಆಯ್ಕೆಯಾಗಿದ್ದ ಗಾಯತ್ರಿ ಅವರ ಪತಿ ಬಿ.ಎಸ್.ನಾಗರಾಜು ಕೂಡ ಒಕ್ಕಲಿಗ ಸಮುದಾಯದ ಮುಖಂಡರಾಗಿದ್ದು, ಚುನಾವಣಾ ಕಣಕ್ಕೆ ಅಗತ್ಯವಿರುವ ಸಕಲ ಸಂಪನ್ಮೂಲ ಹೊಂದಿದ್ದಾರೆ ಎನ್ನಲಾಗಿದೆ. ತುರುವೇಕೆರೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಸಿ.ಎಸ್.ಪುರ ಭಾಗದ ಮುಖಂಡ ಗುಬ್ಬಿ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಬಹುದೇ ಎಂಬ ಕುತೂಹಲಕ್ಕೆ ಕಾಲವೇ ಉತ್ತರಿಸಬೇಕಿದೆ.

ಕಾಂಗ್ರೆಸ್​ನಲ್ಲೂ ವಿರೋಧ!: ಡಿ.ಕೆ.ಶಿವಕುಮಾರ್ ಜತೆಗಿನ ನಂಟಸ್ಥಿಕೆ ಬಳಸಿಕೊಂಡು ವಾಸು ಕಾಂಗ್ರೆಸ್ ಸೇರ್ಪಡೆಯಾಗಬಹುದು ಎಂಬ ಊಹಾಪೋಹವೂ ಇದೆ. ಆದರೆ, ಶ್ರೀನಿವಾಸ್ ಕಾಂಗ್ರೆಸ್ ಸೇರ್ಪಡೆ ಬಗ್ಗೆ ಸ್ಥಳೀಯ ಮುಖಂಡರ ವಿರೋಧ ಈಗಾಗಲೇ ಸ್ಫೋಟವಾಗಿದೆ. ಕಾಂಗ್ರೆಸ್ ಸೇರ್ಪಡೆಯಾಗುವುದಾಗಿ ಹೇಳಿ ಎಚ್​ಡಿಡಿ ಮನೆಯ ಖಾಸಗಿ ಕಾರ್ಯಕ್ರಮ ಹಾಗೂ ಇತ್ತೀಚೆಗೆ ನಡೆದ ಪಕ್ಷದ ಸಭೆಯಲ್ಲಿಯೂ ವಾಸು ಕಾಣಿಸಿಕೊಂಡಿದ್ದು, ಅವರ ಪಕ್ಷ ಸೇರ್ಪಡೆಗೆ ಪೌರೋಹಿತ್ಯ ವಹಿಸಿದ್ದ ಕಾಂಗ್ರೆಸ್ ಮುಖಂಡರಿಗೂ ಇರುಸುಮುರುಸು ತಂದಿದೆ ಎನ್ನಲಾಗಿದೆ.

ಕ್ಷೇತ್ರದಲ್ಲಿ ಪಕ್ಷದ ವತಿಯಿಂದ ಯಾವುದೇ ಕಾರ್ಯಕ್ರಮವನ್ನು ನಾವು ಆಯೋಜಿಸಿಲ್ಲ, ಕಾರ್ಯಕ್ರಮ ನಡೆಸುತ್ತಿರುವ ಬಗ್ಗೆ ನನಗೆ ಮಾಹಿತಿಯೂ ಇಲ್ಲ. ಹರಿದಾಡುತ್ತಿರುವ ಆಹ್ವಾನ ಪತ್ರಿಕೆ ಸುಳ್ಳಾಗಿರಬಹುದು. ಜೆಡಿಎಸ್ ವರಿಷ್ಠರು ಈ ಬಗ್ಗೆ ನನಗೆ ಯಾವುದೇ ಸೂಚನೆಯನ್ನೂ ನೀಡಿಲ್ಲ.

| ಎಸ್.ಆರ್.ಶ್ರೀನಿವಾಸ್ ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net