

ನವದೆಹಲಿ: ಮಾಹಿತಿ ತಂತ್ರಜ್ಞಾನ ಕಾನೂನನ್ನು ಬದಲಾಯಿಸುವ ಡಿಜಿಟಲ್ ಇಂಡಿಯಾ ಕಾನೂನನ್ನು ಮುಂದಿನ ವರ್ಷದ ಲೋಕಸಭೆ ಚುನಾವಣೆಗೂ ಮುನ್ನ ಜಾರಿಗೊಳಿಸಲು ಕೇಂದ್ರ ಸರ್ಕಾರಕ್ಕೆ ಸಾಧ್ಯವಾಗುವ ಸಂಭವ ಇಲ್ಲ ಎಂದು ಮಾಹಿತಿ ತಂತ್ರಜ್ಞಾನ ಸಚಿವ ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.
ಸಮಾಲೋಚನೆಗೆ ಇನ್ನೂ ಸಾಕಷ್ಟು ಸಮಯ ಇರುವುದರಿಂದ ವಿಳಂಬಗೊಳ್ಳಬಹುದು ಎಂದು ಜಾಗತಿಕ ತಂತ್ರಜ್ಞಾನ ಶೃಂಗಸಭೆಯಲ್ಲಿ ಅವರು ಅಭಿಪ್ರಾಯಪಟ್ಟರು. ಆದರೆ, ಡಿಜಿಟಲ್ ವೈಯಕ್ತಿಕ ಡೇಟಾ ರಕ್ಷಣಾ ಕಾನೂನಿನ ನಿಯಮಗಳು ಈ ತಿಂಗಳ ಕೊನೆಯಲ್ಲಿ ಹೊರಬೀಳಬಹುದು.
ಮಾಸಾಂತ್ಯ ಅಥವಾ ಜನವರಿ ಆರಂಭದಲ್ಲಿ ಆ ಕುರಿತು ಅಧಿಸೂಚನೆ ಹೊರಡಿಸುವ ನಿರೀಕ್ಷೆ ಇದೆ. ಈಗ ಜಾರಿಯಲ್ಲಿರುವ ಐಟಿ ಕಾನೂನಿನಲ್ಲಿ ಇಂಟರ್ನೆಟ್ ಎಂಬ ಪದವೇ ಇಲ್ಲ. ಅದನ್ನು ಸುಲಭವಾಗಿ ಬದಲಾಯಿಸಿ ಬೇರೆ ಕಾನೂನು ತರುವ ಬಗ್ಗೆ ಸಹಮತ ಇದೆ ಎಂದು ತಿಳಿಸಿದರು.