ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ಆರೋಪ: WFI ಅಧ್ಯಕ್ಷರ ನಿವಾಸಕ್ಕೆ ದೆಹಲಿ ಪೊಲೀಸರ ಭೇಟಿ

WFI Chief
Published on

ನವದೆಹಲಿ: ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಹೊತ್ತಿರುವ ಭಾರತ ಕುಸ್ತಿ ಒಕ್ಕೂಟ (ಡಬ್ಲ್ಯುಎಫ್​ಐ)ದ ಅಧ್ಯಕ್ಷ ಬ್ರಿಜ್​ ಭೂಷನ್​​ ಶರಣ್​ ಸಿಂಗ್​ ಅವರ ಉತ್ತರದ ಪ್ರದೇಶದ ಗೊಂಡಾದಲ್ಲಿರುವ ನಿವಾಸಕ್ಕೆ ದೆಹಲಿ ಪೊಲೀಸರು ಇಂದು (ಜೂ.6) ಭೇಟಿ ನೀಡಿದ್ದಾರೆ.

ಪೊಲೀಸರ ಮೂಲಗಳ ಪ್ರಕಾರ ಸಿಂಗ್​ ವಿರುದ್ಧ ಇರುವ ಆರೋಪಿಗಳು ಸಂಬಂಧಿಸಿದ 12 ವ್ಯಕ್ತಿಗಳ ಬಳಿ ಹೇಳಿಕೆ ಪಡೆಯಲು ಗೊಂಡಾ ನಿವಾಸಕ್ಕೆ ಪೊಲೀಸರು ಭೇಟಿ ನೀಡಿದ್ದು, ಆ ವ್ಯಕ್ತಿಗಳ ಹೆಸರು, ವಿಳಾಸ ಮತ್ತು ಗುರುತಿನ ಚೀಟಿಗಳನ್ನು ಪೊಲೀಸರು ಪಡೆದುಕೊಂಡಿದ್ದಾರೆಂದು ತಿಳಿದುಬಂದಿದೆ.

ಸಾಕ್ಷಿಗಳಿಗಾಗಿ ಡೇಟಾ ಸಂಗ್ರಹಿಸಲಾಗಿದ್ದು, ಡಬ್ಲ್ಯುಎಫ್​ಐ ಮುಖ್ಯಸ್ಥರ ಅನೇಕ ಬೆಂಬಲಿಗರನ್ನೂ ಸಹ ಪೊಲೀಸರು ವಿಚಾರಣೆ ಮಾಡಿದ್ದಾರೆ. ಆದರೆ, ಸಿಂಗ್ ಅವರ ನಿವಾಸದಲ್ಲಿ ಪೊಲೀಸರು ವಿಚಾರಣೆ ನಡೆಸಿದ್ದಾರೆಯೇ ಎಂಬುದು ತಿಳಿದಿಲ್ಲ. ವಿಶೇಷ ತನಿಖಾ ತಂಡವು ಈವರೆಗೆ ಪ್ರಕರಣಕ್ಕೆ ಸಂಬಂಧಿಸಿದ 137 ಮಂದಿಯಿಂದ ಹೇಳಿಕೆಗಳನ್ನು ದಾಖಲಿಸಿದೆ.

ಎರಡು ಎಫ್​ಐಆರ್​ ದಾಖಲು

ಈಗಾಗಲೇ ದೆಹಲಿಯ ಕನ್ನಾಟ್ ಪ್ಲೇಸ್ ಪೊಲೀಸ್ ಠಾಣೆಯಲ್ಲಿ ಸಿಂಗ್​ ವಿರುದ್ಧ ಎರಡು ಎಫ್​ಐಆರ್​ ಹಾಗೂ 10 ದೂರುಗಳು ದಾಖಲಾಗಿವೆ. ಎರಡು ಎಫ್​ಐಆರ್​ ಪ್ರಕಾರ, ಲೈಂಗಿಕ ಬಯಕೆ ಈಡೇರಿಸಲು ಮಹಿಳಾ ಕುಸ್ತಿಪಟುಗಳನ್ನು ಒತ್ತಾಯಿಸಿದ ಆರೋಪ ಡಬ್ಲ್ಯುಎಫ್​ಐ ಮುಖ್ಯಸ್ಥರ ಮೇಲಿದೆ. ಸುಪ್ರೀಂ ಕೋರ್ಟ್ ಆದೇಶದ ನಂತರ ಪ್ರಕರಣ ದಾಖಲಾಗಿವೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್​ 354, 354 (ಎ), 354 (ಡಿ) ಮತ್ತು 34 ಅಡಿಯಲ್ಲಿ ಎರಡು ಎಫ್​ಐಆರ್​ ದಾಖಲಾಗಿದ್ದು, ಆರೋಪ ಸಾಬೀತಾದಲ್ಲಿ 3 ವರ್ಷ ಜೈಲು ಶಿಕ್ಷೆಗೆ ಗುರಿಯಾಬೇಕಾಗುತ್ತದೆ. ಮೊದಲ ಎಫ್​ಐಆರ್​ನಲ್ಲಿ ಆರು ಒಲಿಂಪಿಯನ್​ಗಳ ದೂರನ್ನು ಉಲ್ಲೇಖಿಸಲಾಗಿದೆ. ಎರಡನೇ ಎಫ್​ಐಆರ್​ ಅಪ್ರಾಪ್ತ ಕುಸ್ತಿಪಟುವಿನ ತಂದೆ ಮಾಡಿರುವ ಆರೋಪದ ಮೇಲೆ ದಾಖಲಾಗಿದೆ. ಫೋಟೋ ತೆಗೆದುಕೊಳ್ಳುವ ನೆಪದಲ್ಲಿ ಗಟ್ಟಿಯಾಗಿ ಹಿಡಿದುಕೊಂಡರು ಮತ್ತು ನನ್ನ ಭುಜವನ್ನು ಒತ್ತಿದರು. ಉದ್ದೇಶಪೂರ್ವಕವಾಗಿ ಅನುಚಿತವಾಗಿ ಸ್ಪರ್ಶಿಸಿದರು ಎಂದು ಅಪ್ರಾಪ್ತೆ ದೂರಿನಲ್ಲಿ ತಿಳಿಸಿದ್ದಾಳೆ.

ಕುಸ್ತಿಪಟುಗಳ ದೂರುಗಳೇನು?

ಹೋಟೆಲ್‌ನಲ್ಲಿ ಊಟ ಮಾಡುತ್ತಿದ್ದಾಗ ಡಬ್ಲ್ಯುಎಫ್‌ಐ ತರಬೇತುದಾರ ತನ್ನನ್ನು ಅನುಚಿತವಾಗಿ ಸ್ಪರ್ಶಿಸಿದ್ದಾರೆ ಎಂದು ದೂರುದಾರರೊಬ್ಬರು ಆರೋಪಿಸಿದ್ದಾರೆ. ಅಲ್ಲದೆ, ಬ್ರಿಜ್​ ಭೂಷಣ್​ ಸಿಂಗ್ ಅವರು ನನ್ನ ಭುಜಗಳು, ಮೊಣಕಾಲುಗಳು ಮತ್ತು ಅಂಗೈ ಅನ್ನು ದುರುದ್ದೇಶದಿಂದ ಮುಟ್ಟಿದರು. ಉಸಿರಾಟವನ್ನು ಪರಿಶೀಲಿಸುವ ನೆಪದಲ್ಲಿ ಎದೆ ಮತ್ತು ಹೊಟ್ಟೆಯನ್ನು ಸ್ಪರ್ಶಿಸಿದರು ಎಂದು ದೂರುದಾರೆ ದೂರಿನಲ್ಲಿ ಉಲ್ಲೇಖಿಸಿದ್ದಾಳೆ. ಡಬ್ಲ್ಯುಎಫ್‌ಐ ಮುಖ್ಯಸ್ಥರ ವಿರುದ್ಧ ದಾಖಲಾಗಿರುವ ಮತ್ತೊಂದು ದೂರಿನಲ್ಲಿ, ಕುಸ್ತಿಪಟುವಿನ ಟೀ ಶರ್ಟ್​ ತೆಗೆದು, ಆಕೆಯ ಎದೆಯ ಮೇಲೆ ಕೈಇಟ್ಟ ಆರೋಪವಿದೆ. ಬಲವಂತವಾಗಿ ನನ್ನನ್ನು ಹತ್ತಿರಕ್ಕೆ ಎಳೆದುಕೊಂಡರು ಎಂದು ದೂರಲಾಗಿದೆ. ಎಳೆದು ತಬ್ಬಿಕೊಂಡು ಹಣದ ಆಮಿಷವೊಡ್ಡಿ ಲೈಂಗಿಕ ಬಯಕೆ ಈಡೇರಿಸಲು ಒತ್ತಾಯಿಸಿದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಉಸಿರಾಟದ ಮಾದರಿಯನ್ನು ಪರೀಕ್ಷಿಸುವುದಾಗಿ ಹೇಳಿ ಹೊಟ್ಟೆಯನ್ನು ಅನುಚಿತವಾಗಿ ಸ್ಪರ್ಶಿಸಿದರು ಎಂದು ಮತ್ತೊಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಸಾಲಿನಲ್ಲಿ ನಿಂತಿದ್ದಾಗ ಅನುಚಿತವಾಗಿ ಸ್ಪರ್ಶಿಸಿದರು. ಅಂಗಾಂಗಳನ್ನು ಮುಟ್ಟಿದರು ಎಂದು ಇನ್ನೊಂದು ದೂರಿನಲ್ಲಿ ಆರೋಪಿಸಲಾಗಿದೆ.

ನೇಣು ಬಿಗಿದುಕೊಳ್ಳುತ್ತೇನೆ

ಆದರೆ ತನ್ನ ವಿರುದ್ಧದ ಲೈಂಗಿಕ ದೌರ್ಜನ್ಯದ ಆರೋಪಗಳನ್ನು ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರು ನಿರಾಕರಿಸಿದ್ದಾರೆ. ಬುಧವಾರ (ಮೇ 31) ಅವರು ಮತ್ತೊಮ್ಮೆ ತಮ್ಮ ವಿರುದ್ಧದ ಎಲ್ಲ ಆರೋಪಗಳನ್ನು ನಿರಾಕರಿಸಿದರು. ನನ್ನ ವಿರುದ್ಧ ಒಂದೇ ಒಂದು ಆರೋಪಗಳು ಸಾಬೀತಾದರೆ, ನಾನು ನೇಣು ಬಿಗಿದುಕೊಳ್ಳುತ್ತೇನೆ. ನಿಮ್ಮ ಬಳಿ ಯಾವುದೇ ಸಾಕ್ಷಿಗಳಿದ್ದರೆ ಅವುಗಳನ್ನು ಕೋರ್ಟ್​ಗೆ ಸಲ್ಲಿಸಿ, ನಾನು ಯಾವುದೇ ಶಿಕ್ಷೆಗೂ ಸಿದ್ಧ ಎಂದು ಹೇಳಿದ್ದಾರೆ.

ಇತ್ತ ಕುಸ್ತಿಪಟುಗಳು ಭಾರತೀಯ ಕುಸ್ತಿ ಒಕ್ಕೂಟದ (ಡಬ್ಲ್ಯುಎಫ್​ಐ) ಅಧ್ಯಕ್ಷ ಸ್ಥಾನದಿಂದ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ಕೆಳಗಿಳಿಸುವಂತೆ ಒತ್ತಾಯಿಸಿದ್ದು, ತಮ್ಮ ಪ್ರತಿಭಟನೆಯನ್ನು ಮುಂದುವರಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net