

ದೀಪಿಕಾ ಪಡುಕೋಣೆ ದಶಕದ ಬಳಿಕ ಸೌತ್ ಸಿನಿಮಾ ಇಂಡಸ್ಟ್ರಿಯತ್ತ ಹೊರಳಿದ್ದಾರೆ. ಬಹುಭಾಷೆಗಳಲ್ಲಿ ಸಿದ್ಧವಾಗುತ್ತಿರುವ ಚಿತ್ರಕ್ಕೆ ನಾಯಕಿಯಾಗಿ ದೀಪಿಕಾ ಆಯ್ಕೆಯಾಗಿದ್ದಾರೆ. ಬಾಹುಬಲಿ ಮೂಲಕ ಪ್ಯಾನ್ ಇಂಡಿಯಾ ಸೆನ್ಸೆಷನ್ ಸೃಷ್ಟಿಸಿದ್ದ ನಟ ಪ್ರಭಾಸ್ ಮುಂದಿನ ಸಿನಿಮಾದಲ್ಲಿ ಅವರಿಗೆ ಜೋಡಿಯಾಗಿ ದೀಪಿಕಾ ನಟಿಸುವುದು ಅಧಿಕೃತವಾಗಿದ್ದು, ಸ್ವತಃ ಚಿತ್ರತಂಡವೇ ಈ ಸುದ್ದಿಯನ್ನು ಭಾನುವಾರವಷ್ಟೇ ಹೊರಹಾಕಿತ್ತು. ಹೀಗಿರುವಾಗ ಈ ಚಿತ್ರಕ್ಕೆ ನಟಿ ದೀಪಿಕಾ ಪಡೆದ ಸಂಭಾವನೆ ಎಷ್ಟಿರಬಹುದು?
ನಿಜಕ್ಕೂ ಈ ಪ್ರಶ್ನೆ ಅಚ್ಚರಿ ಮೂಡಿಸುತ್ತದೆ. ಬಾಲಿವುಡ್ನಲ್ಲಿಯೇ ಸೆಟಲ್ ಆಗಿರುವ ಕನ್ನಡತಿ ದೀಪಿಕಾ ಪಡುಕೋಣೆ, ಸದ್ಯ ಟಾಪ್ ನಟಿಯರ ಪಟ್ಟಿಯಲ್ಲಿ ಟಾಪ್ನಲ್ಲಿಯೇ ಇದ್ದಾರೆ. ನಟನೆ, ನಿರ್ಮಾಣ, ಜಾಹೀರಾತು ಹೀಗೆ ಬಂದಿಲ್ಲೊಂದು ಕ್ಷೇತ್ರದಲ್ಲಿ ಪಾರಮ್ಯ ಮೆರೆಯುತ್ತಿದ್ದಾರೆ. ಅವರ ಸಂಭಾವನೆಯೂ ಹತ್ತಾರು ಕೋಟಿ ಲೆಕ್ಕದಲ್ಲಿಯೇ ಇದೆ ಎಂಬುದು ಎಲ್ಲಿರಿಗೂ ಗೊತ್ತು ಇದೀಗ, ಮೊದಲ ಟಾಲಿವುಡ್ ಚಿತ್ರಕ್ಕೆ ಅವರು ಪಡೆಯುತ್ತಿರುವ ಸಂಭಾವನೆ ಬಗ್ಗೆ ಟಾಲಿವುಡ್ನಿಂದ ಅಂಕಿ ಅಂಶವೊಂದು ಹೊರಬಿದ್ದಿದೆ.
ನಾಗ್ ಅಶ್ವಿನ್ ನಿರ್ದೇಶನದ ಈ ಚಿತ್ರಕ್ಕೆ ದೀಪಿಕಾ ಬರೋಬ್ಬರಿ 30 ಕೋಟಿ ಸಂಭಾವನೆ ಪಡೆಯುತ್ತಿದ್ದಾರಂತೆ. ಟಾಲಿವುಡ್ನಲ್ಲಿ ಈ ಸುದ್ದಿ ಹರಿದಾಡುತ್ತಿದ್ದಂತೆ, ಎಲ್ಲರೂ ಬಾಯಿ ಮೇಲೆ ಬೆರಳಿಟ್ಟುಕೊಂಡಿದ್ದಾರೆ. ಆದರೆ, ಈ ಬಗ್ಗೆ ಚಿತ್ರತಂಡ ಮಾಹಿತಿ ಬಿಟ್ಟುಕೊಟ್ಟಿಲ್ಲ. ಇನ್ನು ಕೆಲವರು ಇಂಥಹ ತಲಬುಡವಿಲ್ಲದ ಸುದ್ದಿಗಳನ್ನು ನಂಬಬೇಡಿ ಅಂತಲೂ ಹೇಳಿಕೊಂಡಿದ್ದಾರೆ. ಏನೇ ಆಗಲಿ, ದೀಪಿಕಾ ಸ್ಟಾರ್ಗಿರಿಗೆ ಇಷ್ಟೊಂದು ಮೊತ್ತ ಕೊಡಬಹುದು ಎಂಬ ಮಾತುಗಳೂ ಚರ್ಚೆಯಲ್ಲಿವೆ.
ಅಂದಹಾಗೆ ಈ ಬಿಗ್ ಸಿನಿಮಾವನ್ನು ವೈಜಯಂತಿ ಸಿನಿಮಾಸ್ ಸಂಸ್ಥೆ ನಿರ್ಮಾಣ ಮಾಡಲಿದ್ದು, ದಕ್ಷಿಣ ಭಾರತದ ಖ್ಯಾತ ಚಿತ್ರ ನಿರ್ಮಾಣ ಸಂಸ್ಥೆಯಲ್ಲಿ ಇದೂ ಒಂದಾಗಿದೆ. ಇದೇ ಸಂಸ್ಥೆ 50ನೇ ವಾರ್ಷಿಕೋತ್ಸವದ ಸಂಭ್ರಮದಲ್ಲಿದೆ. ಆ ಸಂಭ್ರಮಕ್ಕೆ ಈ ಸಿನಿಮಾ ಘೋಷಣೆ ಮಾಡಿದ್ದು, ದೀಪಿಕಾ ಅವರನ್ನು ಕರೆತಂದಿದೆ. ಮಹಾನಟಿ ಸಿನಿಮಾ ನಿರ್ದೇಶನ ಮಾಡಿದ್ದ ನಿದೇಶಕ ನಾಗ್ ಅಶ್ವಿನ್ ಈ ಪ್ರಾಜೆಕ್ಟ್ ಕೈಗೆತ್ತಿಕೊಂಡಿದ್ದಾರೆ. (ಏಜೆನ್ಸೀಸ್)