

ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಮಾಡಿಕೊಂಡ ದಿನದಿಂದ ಅವರ ಪರವಾಗಿ ಗಟ್ಟಿಯಾಗಿ ನಿಂತವರು ಕಂಗನಾ ರಣಾವತ್. ಬಾಲಿವುಡ್ನಲ್ಲಿ ನೆಪೋಟಿಸಂ (ಸ್ವಜನಪಕ್ಷಪಾತ) ಹೇಗೆ ಕೆಲಸ ಮಾಡುತ್ತಿದೆ ಮತ್ತು ಸುಶಾಂತ್ ಅದಕ್ಕೆ ಹೇಗೆ ಬಲಿಯಾದರು ಎಂಬುದನ್ನು ಅವರು ಪದೇಪದೇ ಆರೋಪ ಮಾಡುತ್ತಾ ಬಂದಿದ್ದಾರೆ. ಒಂದೊಮ್ಮೆ ತಮ್ಮ ಮಾತುಗಳನ್ನು ಪ್ರೂವ್ ಮಾಡುವುದಕ್ಕೆ ಸಾಧ್ಯವಾಗದಿದ್ದರೆ, ಆಗ ಸರ್ಕಾರ ಕೊಟ್ಟಿರುವ ಪದ್ಮಶ್ರೀ ಪ್ರಶಸ್ತಿಯನ್ನು ವಾಪಸ್ಸು ಮಾಡುವುದಾಗಿ ಅವರು ಹೇಳಿಕೊಂಡಿದ್ದು ಗೊತ್ತೇ ಇದೆ.
ಈಗ ಕಂಗನಾ ಇದೇ ವಿಷಯವಾಗಿ ಇನ್ನಷ್ಟು ಮಾತನಾಡಿದ್ದಾರೆ. ಆದಿತ್ಯ ಮತ್ತು ಕರಣ್ ಇಬ್ಬರೂ ಜತೆಗೂಡಿ, ಸುಶಾಂತ್ ಅವರನ್ನು ಹಾಳು ಮಾಡಿದರು ಎಂದು ಹೇಳಿದ್ದಾರೆ. ಸುಶಾಂತ್ಗೆ ಬಕೆಟ್ ಹಿಡಿಯುವುದಕ್ಕೆ ಬರುತ್ತಿರಲಿಲ್ಲ, ಹಾಗಾಗಿ ಕೊನೆಗೆ ಆತ್ಮಹತ್ಯೆ ಮಾಡಿಕೊಳ್ಳಬೇಕಾಯಿತು ಎಂದು ಸಹ ಹೇಳಿದ್ದಾರೆ.
'ಸುಶಾಂತ್ ಅವರಿಗೆ ಒಂದಿಷ್ಟು ಚಿತ್ರಗಳನ್ನು ಕೊಟ್ಟು ಕಾಂಟ್ರಾಕ್ಟ್ ಸೈನ್ ಮಾಡಿಸಿಕೊಂಡವರು ಆದಿತ್ಯ ಚೋಪ್ರಾ. ಹಾಗೆ ಸೈನ್ ಮಾಡಿದ್ದರಿಂದ, ಬೇರೆ ಚಿತ್ರಗಳಲ್ಲೂ ಸುಶಾಂತ್ಗೆ ಕೆಲಸ ಮಾಡುವುದಕ್ಕೆ ಸಾಧ್ಯವಾಗಲಿಲ್ಲ. ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ 'ರಾಮ್-ಲೀಲಾ' ಮತ್ತು 'ಬಾಜಿರಾವ್ ಮಸ್ತಾನಿ' ಚಿತ್ರದಲ್ಲಿ ಸುಶಾಂತ್ ನಟಿಸಬೇಕಿತ್ತು. ಆದರೆ, ಕಾಂಟ್ರಾಕ್ಟ್ ಇದ್ದುದರಿಂದ ನಟಿಸುವುದಕ್ಕೆ ಸಾಧ್ಯವಾಗಲಿಲ್ಲ. ಕೊನೆಗೆ ಆ ಅವಕಾಶ ರಣವೀರ್ಗೆ ಹೋಯಿತು' ಎಂದಿದ್ದಾರೆ ಕಂಗನಾ.
'ಯಾಕೆ ಸುಶಾಂತ್ಗೆ ಅಂಥದ್ದೊಂದು ಅಂತ್ಯ ಎದುರಾಯಿತು ಎಂದರೆ, ಅವರಿಗೆ ಬಕೆಟ್ ಹಿಡಿಯುವುದಕ್ಕೆ ಬರುವುದಿಲ್ಲ. ಆದೇ ಕಾರಣಕ್ಕೆ ಅವರನ್ನು ಹಾಳು ಮಾಡಿದರು. ಕೊನೆಗೆ ಆದಿತ್ಯ ಚೋಪ್ರಾ ಸಹವಾಸವೇ ಬೇಡ ಎಂದು ದೂರವಿದ್ದ ಸುಶಾಂತ್, 'ಧೋನಿ' ಚಿತ್ರ ಮಾಡಿದರು. ಆ ಚಿತ್ರ ಅವರಿಗೆ ದೊಡ್ಡ ಯಶಸ್ಸು ತಂದುಕೊಟ್ಟಿತು. ಈ ಸಂದರ್ಭದಲ್ಲಿ ಎಂಟ್ರಿ ಕೊಟ್ಟವರು ಆದಿತ್ಯನ ಹಳೆಯ ದೋಸ್ತ್ ಕರಣ್ ಜೋಹರ್. ಅವರು ಸುಶಾಂತ್ ಜತೆಗೆ 'ಡ್ರೈವ್' ಎನ್ನುವ ಸಿನಿಮಾ ಮಾಡುವ ಮೂಲಕ ಇನ್ನಷ್ಟು ಹಾಳು ಮಾಡಿದರು' ಎಂದು ಆರೋಪಿಸಿದ್ದಾರೆ ಕಂಗನಾ.
'ಡ್ರೈವ್' ಚಿತ್ರವನ್ನು ಕರಣ್ ಯಾಕೆ ಬಿಡುಗಡೆ ಮಾಡಲಿಲ್ಲ ಎಂದು ಪ್ರಶ್ನಿಸಿರುವ ಕಂಗನಾ?, 'ಕರಣ್ ಜೋಹರ್ಗೆ ಒಂದು ಸಿನಿಮಾ ಬಿಡುಗಡೆ ಮಾಡುವುದಕ್ಕೆ ಸಾಧ್ಯವಿಲ್ಲವಾ? ಸುಶಾಂತ್ ಅಭಿನಯದಲ್ಲಿ ಒಂದು ಸಿನಿಮಾ ನಿರ್ಮಾಣ ಮಾಡಿ, ಅದನ್ನು ಮೂರು ವರ್ಷ ಬಿಡುಗಡೆ ಮಾಡದೆ, ಸುಶಾಂತ್ ಒಬ್ಬ ಫ್ಲಾಪ್ ಸ್ಟಾರ್ ಎಂದು ಬಿಂಬಿಸಿಬಿಟ್ಟರು ಕರಣ್. ಈ ವಿಷಯದಲ್ಲಿ ನಾನು ಚರ್ಚೆಗೆ ಸಿದ್ಧ. ವಿತರಕರು ಮತ್ತು ನಿರ್ಮಾಪಕರು ಬರಲಿ. ಸುಶಾಂತ್ಗಿದ್ದ ಮಾರುಕಟ್ಟೆಯ ಬಗ್ಗೆ ಎಲ್ಲಿ ಬೇಕಾದರೂ ಮಾತನಾಡುತ್ತೇನೆ' ಎಂದು ಸವಾಲು ಹಾಕಿದ್ದಾರೆ ಕಂಗನಾ.
'ಇದರಿಂದ ಕೊನೆಗೂ 'ಡ್ರೈವ್' ಚಿತ್ರ ಬಿಡುಗಡೆಯಾಗಲೇ ಇಲ್ಲ. ಓಟಿಟಿಯಲ್ಲಿ ಬಿಡುಗಡೆಯಾಗಿ ಮಾಯವಾಗಿ ಹೋಯಿತು. ಅಷ್ಟರಲ್ಲಿ ಸುಶಾಂತ್ ಒಬ್ಬ ಫ್ಲಾಪ್ ನಟ ಎಂದು ಬಿಂಬಿಸಲಾಗಿತ್ತು. ಇದರಿಂದ ಸುಶಾಂತ್ ಅವರ ಕೆರಿಯರ್ಗೆ ಸಾಕಷ್ಟು ಪೆಟ್ಟು ಬಿತ್ತು. ಕೊನೆಗೆ ಬೇಸರದಿಂದ ಸುಶಾಂತ್ ಆತ್ಮಹತ್ಯೆ ಮಾಡಿಕೊಂಡರು. ಬಹಳ ವ್ಯವಸ್ಥಿತವಾಗಿ ಅವರನ್ನು ಮುಗಿಸಲಾಯಿತು' ಎಂದು ಕಂಗನಾ ಹೇಳಿಕೊಂಡಿದ್ದಾರೆ.