ಆಲಿಯಾ ನಾಚಿಕೆ ಇಲ್ದೆ ಪ್ರಶಸ್ತಿ ತಗೊಂಡ್ರು ... ಕಂಗನಾ ಹೊಸ ಆರೋಪ

Kangana - Aaalia
Published on

ಕಂಗನಾ ರಣಾವತ್​ ಯಾಕೋ ಸುಮ್ಮನಾಗುವಂತೆ ಕಾಣುತ್ತಿಲ್ಲ. ಸುಶಾಂತ್​ ಸಿಂಗ ರಜಪೂತ್​ ಆತ್ಮಹತ್ಯೆಯ ನಂತರ ಅವರು ಹಲವು ಸ್ಟಾರ್ ಮಕ್ಕಳ ವಿರುದ್ಧ ತಿರುಗಿ ಬಿದ್ದಿದಿದ್ದಾರೆ ಮತ್ತು ಅವರ ವಿರುದ್ಧ ಹಲವು ಆರೋಪಗಳನ್ನು ಮಾಡುತ್ತಲೇ ಬಂದಿದ್ದಾರೆ.

ಈಗ ಅದು ಇನ್ನಷ್ಟು ಮುಂದುವರೆದಿದೆ. ಈ ಬಾರಿಯೂ ಆಲಿಯಾ ಭಟ್​ ಅವರನ್ನು ಟಾರ್ಗೆಟ್​ ಮಾಡಿರುವ ಕಂಗನಾ, ಆಲಿಯಾ ವಿರುದ್ಧ ನಾಚಿಕೆ ಇಲ್ಲದೆ ಪ್ರಶಸ್ತಿ ಸ್ವೀಕರಿಸಿದರು ಎಂದು ಆರೋಪಿಸಿದ್ದಾರೆ.

ಬಾಲಿವುಡ್​ನ ಪ್ರಶಸ್ತಿ ಸಮಾರಂಭಗಳ ಕುರಿತು ಮಾತನಾಡುವ ಸಂದರ್ಭದಲ್ಲಿ, ಎಷ್ಟೋ ಸಮಾರಂಭಗಳಲ್ಲಿ ಯಾರಿಗೆ ಯಾಕೆ ಪ್ರಶಸ್ತಿ ಕೊಡುತ್ತಾರೆ ಎನ್ನುವುದೇ ಗೊತ್ತಾಗುವುದಿಲ್ಲ. ಎಲ್ಲರನ್ನೂ ಸಂತೋಷಗೊಳಿಸುವುದಕ್ಕೆ ಪ್ರಶಸ್ತಿ ಕೊಡುವ ಪರಿಪಾಠ ಇದೆ. ಆದರೆ, ಪ್ರಶಸ್ತಿ ತೆಗೆದುಕೊಳ್ಳುವವರು, ತಾವು ಅದಕ್ಕೆ ಅರ್ಹರೋ ಇಲ್ಲವೋ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.

'ಕೆಲವು ವರ್ಷಗಳ ಹಿಂದೆ ಪ್ರಶಸ್ತಿ ಪ್ರಧಾನ ಸಮಾರಂಭವೊಂದರಲ್ಲಿ ದೀಪಿಕಾ ತಮಗಿದ್ದ ನಾಮಿನೇಷನ್​ ನಿರಾಕರಿಸಿದ್ದರು. 'ಹ್ಯಾಪಿ ನ್ಯೂ ಇಯರ್​ ' ಚಿತ್ರಕ್ಕೆ ಪ್ರಶಸ್ತಿ ಸಿಕ್ಕ ಸಂದರ್ಭದಲ್ಲಿ, 'ಕ್ವೀನ್​' ಚಿತ್ರದಲ್ಲಿನ ನನ್ನ ನಟನೆಗೆ ಆ ಪ್ರಶಸ್ತಿ ಸಿಗಬೇಕು ಎಂದು ಹೇಳಿದ್ದರು. ಆದರೆ, ಆಲಿಯಾ ನಾಚಿಕೆ ಇಲ್ಲದೆ 'ಗಲ್ಲಿ ಬಾಯ್​' ಚಿತ್ರದಲ್ಲಿನ ತಮ್ಮ ಸಣ್ಣ ಪಾತ್ರಕ್ಕೆ ಪ್ರಶಸ್ತಿ ಸ್ವೀಕರಿಸಿದರು' ಎಂದು ಹೇಳಿಕೊಂಡಿದ್ದಾರೆ.

ಇಷ್ಟಕ್ಕೂ ಕಂಗನಾಗೆ ಯಾಕೆ ಈ ವಿಷಯವಾಗಿ ಬೇಸರ ಎಂದರೆ, ಕಳೆದ ವರ್ಷ ಅವರ 'ಮಣಿಕರ್ಣಿಕಾ' ಚಿತ್ರದಲ್ಲಿನ ಅವರ ಅಭಿನಯಕ್ಕಾಗಿ ಅತ್ಯುತ್ತಮ ನಟಿ ಪ್ರಶಸ್ತಿಗೆ ಅವರನ್ನುಪರಿಗಣಿಸಲಾಗಿತ್ತು. ಆದರೆ, ಅಂತಿಮವಾಗಿ ಆ ಪ್ರಶಸ್ತಿಯು 'ಗಲ್ಲಿ ಬಾಯ್​' ಚಿತ್ರದ ಅಭಿನಯಕ್ಕಾಗಿ ಆಲಿಯಾ ಭಟ್​ ಪಾಲಾಗಿತ್ತು.

ಈ ಬೇಸರವನ್ನು ಇದೀಗ ಕಂಗನಾ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಮೊದಲೇ ಆಲಿಯಾ ಭಟ್​ ಬಗ್ಗೆ ಕಂಗನಾಗೆ ಬೇಸರವಿದೆ. ಆಕೆ ಮಹೇಶ್​ ಭಟ್ ಅವರ ಮಗಳು ಎಂಬುದು ಒಂದು ಕಾರಣವಾದರೆ, ಕರಣ್​ ಜೋಹರ್​ ಆಕೆಯನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದು ಇನ್ನೊಂದು ಕಾರಣ. ಮೂರನೆಯದಾಗಿ ಆಲಿಯಾಗೆ ದೊಡ್ಡ ದೊಡ್ಡ ಚಿತ್ರಗಳಲ್ಲಿ ಅವಕಾಶ ಸಿಗುತ್ತಿರುವ ಬಗ್ಗೆ ಕಂಗನಾಗೆ ಬೇಸರವಿದ್ದು, ಈ ಕುರಿತು ಹಲವು ಬಾರಿ ಅವಕಾಶ ಸಿಕ್ಕಾಗಲೆಲ್ಲಾ ಟಾಂಗ್​ ಕೊಡುತ್ತಲೇ ಬಂದಿದ್ದಾರೆ.

ಈಗ ಸುಶಾಂತ್​ ಸಿಂಗ್​ ಸಾವಿನ ನಂತರ ಬಾಲಿವುಡ್​ನಲ್ಲಿ ಹೆಚ್ಚಾಗಿರುವ ಸ್ವಜನಪಕ್ಷಪಾತದ ಕುರಿತಾದ ಅಭಿಯಾನದಲ್ಲಿ ಕಂಗನಾ ಮಹತ್ವದ ಪಾತ್ರ ವಹಿಸಿದ್ದು, ಅದೇ ಕಾರಣಕ್ಕೆ ಇನ್ನೊಮ್ಮೆ ಆಲಿಯಾಗೆ ಟಾಂಗ್​ ಕೊಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net