

ತಾಪ್ಸಿ ಮತ್ತು ಸ್ವರಾ ಭಾಸ್ಕರ್ ಇಬ್ಬರೂ ಬಿಗ್ರೇಡ್ ನಟಿಯರು ...
ಹಾಗಂತ ಕಂಗನಾ ರಣಾವತ್ ಇತ್ತೀಚಿನ ಸಂದರ್ಶನವೊಂದರಲ್ಲಿ ಹೇಳಿದ್ದೇ ಹೇಳಿದ್ದು, ಈ ಬಗ್ಗೆ ಬಾಲಿವುಡ್ನಲ್ಲಿ ಸಾಕಷ್ಟು ಚರ್ಚೆಗಳಾಗುತ್ತಿವೆ. ಇವೆಲ್ಲವನ್ನೂ ದೂರದಿಂದ ನೋಡುತ್ತಿದ್ದ ತಾಪ್ಸಿ, ಕಂಗನಾ ಆರೋಪಗಳಿಗೆಲ್ಲಾ ಇದೀಗ ಪ್ರತ್ಯುತ್ತರ ನೀಡಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, 'ಕರಣ್ ಜೋಹರ್ ಮುಂತಾದವರ ಜತೆಗೆ ನನ್ನ ಹೆಸರನ್ನು ಕಂಗನಾ ಯಾಕೆ ತಳುಕು ಹಾಕುತ್ತಿದ್ದಾರೋ ಗೊತ್ತಿಲ್ಲ. ಕರಣ್ ಅಥವಾ ಬಾಲಿವುಡ್ನ ದೊಡ್ಡ ಗ್ಯಾಂಗ್ ನಿರ್ಮಿಸುತ್ತಿರುವ ಯಾವುದೇ ಚಿತ್ರದಲ್ಲೂ ನಾನು ನಟಿಸುತ್ತಿಲ್ಲ. ಅಷ್ಟೇ ಅಲ್ಲ, ಕರಣ್ ನನಗೆ ಇಷ್ಟ ಅಂತ ಎಲ್ಲೂ ಹೇಳಿಲ್ಲ. ಹಾಗೆಯೇ ಅವರನ್ನು ದ್ವೇಷಿಸುತ್ತೇನೆ ಎಂದು ಸಹ ಮಾತಾಡಿಲ್ಲ. ನಾನು ಯಾರನ್ನೋ ದ್ವೇಷಿಸುತ್ತಿಲ್ಲ ಎಂದರೆ, ನಾನು ಅವರನ್ನು ಇಷ್ಟಪಡುತ್ತೀನಿ ಎಂಬ ಅರ್ಥ ಕಲ್ಪಿಸುವುದು ಸರಿಯಲ್ಲ. ಇಷ್ಟಕ್ಕೂ ನನಗೆ ಕರಣ್ ಹೆಚ್ಚು ಪರಿಚಯವಿಲ್ಲ, ಹಾಯ್, ಹೆಲೋ, ಥ್ಯಾಂಕ್ ಯೂ ಮಿಗಿಲಾಗಿ ಮಾತುಕಥೆ ನಡೆದಿಲ್ಲ' ಎನ್ನುತ್ತಾರೆ ತಾಪ್ಸಿ.
ಬೇರೆಯವರ ಸಾವಿನ ವಿಷಯದಲ್ಲಿ ತಾನು ಆಟ ಆಡುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಅವರು. 'ಎಲ್ಲರಿಗೂ ಅವರದ್ದೇ ಆದ ಸಮಸ್ಯೆಗಳಿರುತ್ತವೆ. ಹಾಗಂತ ಯಾರದೋ ಸಾವನ್ನು ಮುಂದಿಟ್ಟುಕೊಂಡು ಬಾಯಿಗೆ ಬಂದ ಹಾಗೆ ಮಾತನಾಡುವುದು, ಚಿತ್ರರಂಗದ ಬಗ್ಗೆ ಲೇವಡಿ ಮಾಡುವುದು ಸರಿಯಲ್ಲ. ನಾನು ಯಾವತ್ತೂ ಚಿತ್ರರಂಗದ ಬಗ್ಗೆ ಲೇವಡಿ ಮಾಡುವುದಿಲ್ಲ. ಏಕೆಂದರೆ, ನನಗೆ ಅನ್ನ ಮತ್ತು ಗುರುತು ಕೊಟ್ಟಿದ್ದು ಇದೇ ಚಿತ್ರರಂಗ. ನನಗೂ ಹಲವು ಸಮಸ್ಯೆಗಳಾಗಿವೆ. ನಾನು ಸಹ ಈ ಹಂತಕ್ಕೆ ಬರುವುದಕ್ಕೆ ಸಾಕಷ್ಟು ಹೋರಾಟ ಮಾಡಿದ್ದೇನೆ. ಹಾಗಂತ ನಾನು ಅದನ್ನೇ ದೊಡ್ಡದು ಮಾಡುವುದಿಲ್ಲ. ಪಾಸಿಟಿವ್ ಆಗಿ ಎಲ್ಲವನ್ನೂ ತೆಗೆದುಕೊಳ್ಳುತ್ತೇನೆ' ಎನ್ನುತ್ತಾರೆ ತಾಪ್ಸಿ.
ತಾನು ಸಹ ಹಲವು ಚಿತ್ರಗಳನ್ನು ಕಳೆದುಕೊಂಡಿದ್ದಾಗಿ ಹೇಳಿರುವ ತಾಪ್ಸಿ, 'ಎಷ್ಟೋ ಚಿತ್ರಗಳಿಂದ ನನ್ನನ್ನೂ ಕಿತ್ತೆಸೆಯಲಾಗಿದೆ. ಸ್ಟಾರ್ ಮಕ್ಕಳು ನನ್ನ ಅವಕಾ ಕಿತ್ತುಕೊಂಡಿದ್ದಾರೆ. ಇದೆಲ್ಲಾ ಚಿತ್ರರಂಗದಲ್ಲಿ ಬಹಳ ಸಹಜ. ಆದರೆ, ಕಂಗನಾ ಮತ್ತು ಆಕೆಯ ಸಹೋದರಿ ನನ್ನನ್ನು ಟಾರ್ಗೆಟ್ ಮಾಡುತ್ತಿದ್ದಾರೋ ಗೊತ್ತಿಲ್ಲ. ನನ್ನ ಬಗ್ಗೆ ಯಾಕೆ ಆರೋಪ ಹೊರಿಸುತ್ತಿದ್ದಾರೋ ಗೊತ್ತಿಲ್ಲ. ಇದು ಸಹ ಒಂಥರಾ ಕಿರುಕುಳವೇ. ನಾನು ಕಂಗನಾ ಅವರ ಕೆಲವು ಮಾತುಗಳನ್ನು ಒಪ್ಪುವುದಿಲ್ಲ ಎಂದ ಮಾತ್ರಕ್ಕೆ ಈ ರೀತಿ ಮಾಡುವುದು ಸರಿಯಲ್ಲ' ಎಂದು ಹೇಳಿಕೊಂಡಿದ್ದಾರೆ ತಾಪ್ಸಿ.
ಇನ್ನು ತನಗೆ ಕೆಲಸ ಇಲ್ಲ ಎಂದು ಕಂಗನಾ ಹೇಳಿರುವುದರ ಬಗ್ಗೆ ಸಿಟ್ಟಾಗಿರುವ ತಾಪ್ಸಿ, 'ನನಗೆ ಕೆಲಸ ಇಲ್ಲ ಅಂತ ಯಾರು ಹೇಳಿದ್ದು? ಪ್ರತೀ ವರ್ಷ ಮೂರ್ನಾಲ್ಕು ಸಿನಿಮಾಗಳಲ್ಲಿ ನಟಿಸುತ್ತಿದ್ದೇನೆ. ಸದ್ಯಕ್ಕೆ ಐದು ಚಿತ್ರಗಳು ನನ್ನ ಕೈಯಲ್ಲಿವೆ. ನಾನು ಬೇಕಿದ್ದರೆ ಇನ್ನಷ್ಟು ಚಿತ್ರಗಳನ್ನು ಒಪ್ಪಬಹುದಿತ್ತು. ಆದರೆ, ನನಗೆ ಆ ವೇಗ ಇಷ್ಟವಿಲ್ಲ. ನಿಧಾನಕ್ಕೆ ನನಗಿಷ್ಟವಾದ ಚಿತ್ರಗಳನ್ನು ಮಾತ್ರ ಒಪ್ಪಿಕೊಳ್ಳುತ್ತಿದ್ದೇನೆ. ' ಎಂದಿದ್ದಾರೆ ತಾಪ್ಸಿ.