ಕನ್ಯತ್ವ ಕಳೆದುಕೊಳ್ಳುವುದು ಯುವತಿಯ ಆಯ್ಕೆಯೇ ಹೊರತು ಒತ್ತಡ ಅಲ್ಲ!; ಊರ್ವಶಿ ರೌಟೇಲಾ

cover-1517572621
Published on

ಬಾಲಿವುಡ್​ನಲ್ಲಿ ಕಳೆದ ಕೆಲ ದಿನಗಳಿಂದ ವರ್ಜಿನಿಟಿ ಬಗ್ಗೆ ದೊಡ್ಡ ಚರ್ಚೆ ಆಗುತ್ತಿದೆ. ಅದಕ್ಕೆ ಕಾರಣವಾಗಿದ್ದು ನಟಿ ಊರ್ವಶಿ ರೌಟೇಲಾ. ಹೌದು, ಇತ್ತೀಚೆಗಷ್ಟೇ ಊರ್ವಶಿ ನಟನೆಯ ‘ವರ್ಜಿನಿಟಿ ಭಾನುಪ್ರಿಯಾ’ ಸಿನಿಮಾ ಓಟಿಟಿ ವೇದಿಕೆಯಲ್ಲಿ ತೆರೆಕಂಡಿತ್ತು. ಆ ಸಿನಿಮಾದ ಕಥಾ ವಸ್ತುವೇ ಕನ್ಯತ್ವ! ಹಾಗಾಗಿ ಆ ಚಿತ್ರದ ಬಗ್ಗೆ ಟಾಕ್ಸ್ ಶುರುವಾಗಿದ್ದು, ಸ್ವತಃ ಊರ್ವಶಿ ಸಿನಿಮಾದ ಬಗ್ಗೆ ಸಂದರ್ಶನ ನೀಡಿದ್ದಾರೆ. ಚಿತ್ರದಲ್ಲಿ ಹೇಳಿದ ಕಥೆಯ ಬಗ್ಗೆ ಮನವರಿಕೆ ಮಾಡಿಕೊಡುತ್ತಿದ್ದಾರೆ. ಹೀಗಿರುವಾಗಲೇ ‘ಕನ್ಯತ್ವ ಕಳೆದುಕೊಳ್ಳುವುದು ಕಾಪಾಡಿಕೊಳ್ಳುವುದು ಆಯ್ಕೆಯೇ ಹೊರತು, ಒತ್ತಡ ಅಲ್ಲ’ ಎಂದೂ ಹೇಳಿದ್ದಾರೆ.

‘ಭಾರತ ಸಂಪ್ರದಾಯಬದ್ಧ ರಾಷ್ಟ್ರ. ಇಲ್ಲಿ ಕಾಮಕ್ಕೆ ವಿಶೇಷವಾದ ಪ್ರಾಧಾನ್ಯತೆ ಇದೆ. ದೇಶದ ಅನೇಕ ದೇವಾಲಯಗಳಲ್ಲಿ ಕಾಮಪ್ರಚೋದಕ ಶಿಲ್ಪಕಲೆಗಳಿವೆ. ಮತ್ತೊಂದೆಡೆ ಸ್ತ್ರೀ ಕನ್ಯತ್ವದ ಬಗ್ಗೆ ಒಂದಷ್ಟು ಕಟ್ಟುಪಾಡುಗಳಿಗೆ ಅಂಟಿಕೊಂಡಿದ್ದೇವೆ. ಅದಕ್ಕೆ ಧಾರ್ಮಿಕ ಮತ್ತು ಸಂಪ್ರದಾಯ ವಿಧಾನಗಳನ್ನು ಜೋಡಿಸಿದ್ದೇವೆ. ಯುವತಿಯ ಕ್ಯಾರೆಕ್ಟರ್​ ತಿಳಿದುಕೊಳ್ಳಬೇಕೆಂದರೆ ಮೊದಲು ಕನ್ಯತ್ವವನ್ನೇ ಮಾನದಂಡ ಮಾಡಲಾಗಿದೆ. ಅಷ್ಟೇ ಅಲ್ಲ ಮದುವೆಗೂ ಮುಂಚೆ ಕನ್ಯತ್ವ ಪರೀಕ್ಷೆ ಮಾಡುವ ಕೆಟ್ಟ ಸಂಪ್ರದಾಯವೂ ಈಗಲೂ ಚಾಲ್ತಿಯಲ್ಲಿದೆ. ನಿಜಕ್ಕೂ ಇದು ಕೆಟ್ಟದ್ದು’ ಎಂದಿದ್ದಾರೆ ಊರ್ವಶಿ.

ಇದರ ಜತೆಗೆ ಕನ್ಯತ್ವದ ಬಗ್ಗೆ ಈಗಿನ ಜನ ಏನೆಲ್ಲ ವಿಚಾರ ಮಾಡುತ್ತಿದ್ದಾರೆ ಎಂಬ ಬಗ್ಗೆಯೂ ಊರ್ವಶಿ ಮಾತನಾಡಿದ್ದಾರೆ. ‘ವರ್ಜಿನಿಟಿ ಬಗ್ಗೆ ಡಬಲ್​ ಸ್ಟ್ಯಾಂಡರ್ಡ್ ಭಾವ ಇದೆ. ಕನ್ಯತ್ವ ಕಳೆದುಕೊಂಡರೆ ಯುವತಿಯರನ್ನು ಕಳಂಕಿತರೆಂಬ ದೃಷ್ಟಿಯಲ್ಲಿ ನೋಡಲಾಗುತ್ತಿದೆ. ಖುಷಿಯ ವಿಚಾರ ಏನೆಂದರೆ ಈಗ ಕಾಲಮಾನ ಬದಲಾಗುತ್ತಿದೆ. ಯುವಕರ ಮನಸ್ಥಿತಿಯೂ ಬದಲಾಗಿದೆ. ತಾನು ಹೆಂಡತಿಯಾಗುವವಳು ಕನ್ಯೆಯಾಗಿಯೇ ಇರಬೇಕೆಂದು ಯಾರೂ ಡಿಮಾಂಡ್​ ಮಾಡುತ್ತಿಲ್ಲ. ಅದೇ ರೀತಿ ಕನ್ಯತ್ವ ಕಳೆದುಕೊಂಡ ಹುಡುಗಿಯನ್ನು ಸಮಾಜ ಮತ್ತು ಕುಟುಂಬ ನೋಡುವ ದೃಷ್ಟಿಕೋನವೂ ಬದಲಾಗಬೇಕು. ಎಲ್ಲಕ್ಕಿಂತ ಹೆಚ್ಚಾಗಿ ಕನ್ಯತ್ವ ಕಳೆದುಕೊಳ್ಳುವುದು, ಕಾಪಾಡಿಕೊಳ್ಳುವುದು ಆಯ್ಕೆಯೇ ಹೊರತು ಒತ್ತಡ ಅಲ್ಲ!' ಎಂದಿದ್ದಾರೆ ಊರ್ವಶಿ.

ಅಂದಹಾಗೆ, ವರ್ಜಿನಿಟಿ ಭಾನುಪ್ರಿಯಾ ಸಿನಿಮಾ ಬಿಡುಗಡೆಯಾಗಿದ್ದು, ನೆಗೆಟಿವ್​ ಕಮೆಂಟ್​ಗಳು ಹೆಚ್ಚೆಚ್ಚು ಬರುತ್ತಿರುವ ಹಿನ್ನೆಲೆಯಲ್ಲಿ, ಸಿನಿಮಾದಲ್ಲಿ ಹೇಳಲಾದ ವಿಚಾರವನ್ನು ನೇರವಾಗಿ ಹೇಳಿಕೊಂಡಿದ್ದಾರೆ ಊರ್ವಶಿ. ಸಿನಿಮಾ ವಿಚಾರಕ್ಕೆ ಬರುವುದಾದರೆ ಕನ್ನಡದಲ್ಲಿಯೂ ಐರಾವತ ಸಿನಿಮಾದಲ್ಲಿ ನಟಿಸಿದ್ದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net