"ಸಾಕ್ಷಿ".... ವಿಜಯವಾಣಿ ಕಥಾ ಸ್ಪರ್ಧೆಯಲ್ಲಿ ತೀರ್ಪುಗಾರರ ಮೆಚ್ಚುಗೆ ಪಡೆದ ಕಥೆ..! Vijayavani Deepavali Story Contest

Vijayavani Deepavali Story Contest
"ಸಾಕ್ಷಿ".... ವಿಜಯವಾಣಿ ಕಥಾ ಸ್ಪರ್ಧೆಯಲ್ಲಿ ತೀರ್ಪುಗಾರರ ಮೆಚ್ಚುಗೆ ಪಡೆದ ಕಥೆ..!
Published on: 

ಅಕ್ಟೋಬರ್ ಕೊನೆಯ ಮಳೆ. ಯಲ್ಲಾಪುರದಲ್ಲಿ ಮಳೆ ಅಂದರೆ ಕೇವಲ ನೀರಲ್ಲ, ಒಂದು ಋತುವಿನ ಕೊನೆಯ ಹಠ. ಬೆಳಗ್ಗೆ ಸೂರ್ಯ ಬಂದಂತೆ ಕಾಣುತ್ತದೆ, ಮಧ್ಯಾಹ್ನ ಮೋಡ ಕವಿಯುತ್ತದೆ, ಸಂಜೆ ಮತ್ತೆ ಇಡೀ ಊರನ್ನು ತೊಳೆದುಬಿಡುತ್ತದೆ. ಮಳೆ ನಿಂತ ಮೇಲೆ ಬೆಟ್ಟಗಳನ್ನು ಮಂಜು ನುಂಗಿಬಿಡುತ್ತದೆ. ಆ ಮಂಜು ಕೇವಲ ಬಿಳಿಯ ಪರದೆಯಲ್ಲ, ಅದು ಕಾಡಿನ ಉಸಿರು!

ಅಂಥದ್ದೇ ಒಂದು ದಿನ ಅರಬೈಲ್ ಘಾಟಿನ ತಿರುವುಗಳಲ್ಲಿ ಆ ಉಸಿರು ದಟ್ಟವಾಗಿ ಇಳಿಯುತ್ತಿತ್ತು. ತೊಯ್ದ ಮಣ್ಣಿನ ಸುವಾಸನೆ, ಅಡಿಕೆ ಸಿಂಗಾರದ ಹಸಿ ಪರಿಮಳ, ಕೊಳೆತ ಎಲೆಯ ಕಹಿ ವಾಸನೆ ಮೂರೂ ಬೆರೆತು ಇಡೀ ಘಾಟ್ ಒಂದೇ ಜೀವಿಯಂತೆ ಭಾಸವಾಗುತ್ತಿತ್ತು. ರಸ್ತೆಯ ಎರಡೂ ಬದಿ ದಟ್ಟ ಕಾಡು. ಮರದ ತುದಿಯಿಂದ ಹನಿ ಜಾರಿ ಬೀಳುವ ಸದ್ದು, ಆ ಸದ್ದಿನ ನಡುವೆ ಇದ್ದಕ್ಕಿದ್ದಂತೆ ಬಂದು ಮತ್ತೆ ಮೌನದಲ್ಲಿ ಕರಗುವ ರಾತ್ರಿ ಹುಳದ ಕೂಗು. ಪೂರ್ತಿ ಘಾಟ್ ಆಲಿಸಿದರೆ, ಎಲ್ಲೋ ದೂರದಲ್ಲಿ ಸುಣಜೋಗು ಕಣಿವೆಯ ಹಳ್ಳ ಹರಿಯುವ ಸದ್ದೂ ಕೇಳಿದಂತೆ ಆಗುತ್ತಿತ್ತು.

ರಾತ್ರಿ ಹನ್ನೊಂದು ಗಂಟೆ. ಆ ಮೌನವನ್ನು ಸೀಳಿ ಪೊಲೀಸ್ ಜೀಪಿನ ಸೈರನ್ ಕೇಳಿಸಿತು. ಶಿರಲೆ ಕ್ರಾಸ್ ದಾಟಿ ಎರಡನೇ ತಿರುವಿನ ಬಳಿ ಜೀಪ್ ನಿಂತಿತು. ಇನ್​ಸ್ಪೆಕ್ಟರ್ ಸಮರ್ಥ್ ಇಳಿದ. ರೈನ್ ಕೋಟಿನ ಟೋಪಿಯನ್ನು ಬಿಗಿಯಾಗಿ ಎಳೆದುಕೊಂಡು ಟಾರ್ಚ್ ಬೆಳಕನ್ನು ಮುಂದಕ್ಕೆ ಹಾಯಿಸಿದ. ಕಂದಕದ ಅಂಚಿನಲ್ಲಿ ಕಪ್ಪು ಸ್ಕಾರ್ಪಿಯೋ ಒಂದು ವಕ್ರವಾಗಿ ನಿಂತಿತ್ತು. ಅದರ ಮುಂಭಾಗ ರಸ್ತೆ ಬದಿಯ ದೊಡ್ಡ ಕಲ್ಲಿಗೆ ತಾಗಿತ್ತು. ಟೈರ್ ಗುರುತು ನೋಡಿದರೆ ಚಾಲಕ ಕೊನೆಯ ಕ್ಷಣದಲ್ಲಿ ಬ್ರೇಕ್ ಹಾಕಿ ತಪ್ಪಿಸಲು ನೋಡಿದ್ದಾನೆ. ಇನ್ನೂ ಅರ್ಧ ಅಡಿ ಮುಂದೆ ಹೋಗಿದ್ದರೆ ಕಾರು ನೇರವಾಗಿ ನೂರಾರು ಅಡಿ ಆಳದ ಕಂದಕಕ್ಕೆ ಉರುಳುತ್ತಿತ್ತು.

Also Read
"ಮಾಯಾವಿ ಪೇಂಟಿಂಗ್".... ವಿಜಯವಾಣಿ ಕಥಾ ಸ್ಪರ್ಧೆಯಲ್ಲಿ ತೀರ್ಪುಗಾರರ ಮೆಚ್ಚುಗೆ ಪಡೆದ ಕಥೆ..! Vijayavani Deepavali Story Contest
Vijayavani Deepavali Story Contest

ಸಮರ್ಥ್ ನಿಧಾನವಾಗಿ ಬಾಗಿಲು ತೆರೆದ. ಒಳಗೆ ತಣ್ಣನೆಯ ಗಾಳಿ ಮತ್ತು ಹೆಪ್ಪುಗಟ್ಟಿದ ರಕ್ತದ ಮುಸುಕು ವಾಸನೆ ಹೊರಬಂತು. ಡ್ರೖೆವಿಂಗ್ ಸೀಟಿಗೆ ವಾಲಿಕೊಂಡಿದ್ದ ವ್ಯಕ್ತಿಯ ಮುಖದ ಮೇಲೆ ಟಾರ್ಚ್ ಬೆಳಕು ಬಿದ್ದಾಗ ಸಮರ್ಥ್ ಒಂದು ಕ್ಷಣ ನಿಂತುಬಿಟ್ಟ.

ಸುಬ್ರಾಯ ಹೆಗಡೆ!

ಯಲ್ಲಾಪುರದ ದೊಡ್ಡ ಅಡಿಕೆ ಬೆಳೆಗಾರ. ಊರಿನಲ್ಲಿ ಹಣವಂತ, ಗುಣವಂತ. ಆದರೆ ಖಡಕ್ ಮಾತುಗಾರ, ನ್ಯಾಯದ ಪರವಾಗಿ ನಿಲ್ಲುವವನು ಎಂದೇ ಹೆಸರಾಗಿದ್ದವ. ಸ್ನೇಹಿತನ ವಿಷಯದಲ್ಲಿ ಜೀವವನ್ನೂ ಕೊಡುವವನು ಎಂದು ಜನ ಹೇಳುತ್ತಿದ್ದರು.

ಮೊದಲ ನೋಟಕ್ಕೆ ಇದು ಅಪಘಾತದಂತೆ ಕಾಣುತ್ತಿತ್ತು. ಸೀಟ್ ಬೆಲ್ಟ್ ಹಾಕಿಕೊಂಡಿದ್ದ ದೇಹ, ಒಡೆದ ಗಾಜು, ಡಿಕ್ಕಿಯಾದ ಮುಂಭಾಗ. ಆದರೆ ಸಮರ್ಥ್​ಗೆ ಮೃತದೇಹಗಳು ಸುಳ್ಳು ಹೇಳುವುದಿಲ್ಲ ಎಂದು ಗೊತ್ತಿತ್ತು. ಅವುಗಳನ್ನು ಓದಲು ಬರಬೇಕು ಅಷ್ಟೇ. ಅವನು ಹತ್ತಿರ ಹೋಗಿ ನೋಡಿದ. ಸುಬ್ರಾಯನ ಕುತ್ತಿಗೆ ಸುತ್ತ ತೆಳ್ಳನೆಯ, ಕೆಂಪು, ಅರ್ಧ ಚಂದ್ರಾಕೃತಿಯ ಗುರುತುಗಳಿದ್ದವು. ಅದು ಸೀಟ್ ಬೆಲ್ಟ್ನ ಗುರುತಾಗಿರಲಿಲ್ಲ. ಅಂಗಿಯ ಕಾಲರ್ ಒಳಮುಖವಾಗಿ ಮಡಚಿಕೊಂಡಿತ್ತು, ಯಾರೋ ಹಿಂದಿನಿಂದ ಎಳೆದಂತೆ. ಬಲಗೈ ಬೆರಳ ತುದಿಯಲ್ಲಿ ಉಗುರಿನಿಂದ ಗೀರಿದಾಗ ಉಳಿಯುವ ಸಣ್ಣ, ಬಿಳಿ ಗಾಯ.

ಸಮರ್ಥ್ ಟಾರ್ಚ್ ಬೆಳಕನ್ನು ಕುತ್ತಿಗೆ ಮೇಲೆ ಸ್ಥಿರವಾಗಿ ಹರಿಸಿ ಹೇಳಿದ, ‘ಇದು ಅಪಘಾತ ಅಲ್ಲ. ಯಾರೋ ಉಸಿರುಗಟ್ಟಿಸಿ ಕೊಂದಿದ್ದಾರೆ. ಆಮೇಲೆ ಕಾರನ್ನು ತಳ್ಳಿ ಅಪಘಾತದಂತೆ ಮಾಡಿದ್ದಾರೆ.’

ಅವನ ದನಿಯಲ್ಲಿದ್ದ ಖಚಿತತೆಗೆ ಜೊತೆಗಿದ್ದ ಕಾನ್​ಸ್ಟೆಬಲ್ ಒಂದು ಕ್ಷಣ ಬೆರಗಾದ.

Also Read
"ಪೂತನೀ"... ವಿಜಯವಾಣಿ ಕಥಾ ಸ್ಪರ್ಧೆಯಲ್ಲಿ ತೀರ್ಪುಗಾರರ ಮೆಚ್ಚುಗೆ ಪಡೆದ ಕಥೆ..! Vijayavani Deepavali Story Contest
Vijayavani Deepavali Story Contest

ಒಂದೂವರೆ ಗಂಟೆ ನಂತರ ಕಾರವಾರದಿಂದ ಜಿಲ್ಲಾ ವಿಧಿವಿಜ್ಞಾನ ತಜ್ಞೆ ಡಾ. ಕಾವ್ಯಾ ಬಂದಳು. ಸಣ್ಣಗೆ, ಚುರುಕಾಗಿ ಇರುವ ಅವಳನ್ನು ನೋಡಿದರೆ ಸಾಕ್ಷ್ಯದ ಬಗ್ಗೆ ಅವಳಿಗೆ ಇರುವ ಪ್ರೀತಿ ಗೊತ್ತಾಗುತ್ತಿತ್ತು. ಬಂದವಳೇ ಕೈಗವಸು ಹಾಕಿಕೊಂಡು ತನ್ನ ಕೆಲಸ ಶುರು ಮಾಡಿದಳು. ಬಾಗಿಲಿನ ಹಿಡಿ, ಸ್ಟಿಯರಿಂಗ್, ಗೇರ್, ರಾಡ್, ಸೀಟ್ ಬೆಲ್ಟ್, ಲಾಕ್, ಡ್ಯಾಶ್ ಬೋರ್ಡ್- ಪ್ರತಿಯೊಂದನ್ನೂ ಪೌಡರ್ ಹಾಕಿ ನೋಡಿದಳು. ಎಲ್ಲವನ್ನೂ ಯಾರೋ ಬಟ್ಟೆಯಿಂದ ಎಚ್ಚರಿಕೆಯಿಂದ ಒರೆಸಿದ್ದರು. ಯಾವುದೇ ಬೆರಳಚ್ಚು ಇರಲಿಲ್ಲ.

‘ತುಂಬಾ ಎಚ್ಚರಿಕೆಯ ಕೆಲಸ. ಅಥವಾ ತುಂಬಾ ಪರಿಚಿತನ ಕೆಲಸ’ ಎಂದ ಸಮರ್ಥ್.

ಕಾವ್ಯಾ ಏನೂ ಹೇಳದೆ ಟಾರ್ಚ್ ಬೆಳಕನ್ನು ಚಾಲಕನ ಪಕ್ಕದ ಕಿಟಕಿಯ ಗಾಜಿನ ಮೇಲೆ ಹಾಯಿಸಿದಳು. ಮಳೆ ಹನಿಗಳು ಗಾಜಿನ ಮೇಲೆ ಜಾರುತ್ತಿದ್ದವು. ಆ ಹನಿಗಳ ನಡುವೆ, ಒಳಭಾಗದಲ್ಲಿ, ಕಪ್ಪು ಚುಕ್ಕೆಯೊಂದು ಅಂಟಿಕೊಂಡಿತ್ತು. ಹತ್ತಿರ ಹೋಗಿ ಕಣ್ಣು ಕಿರಿದು ಮಾಡಿ ನೋಡಿದಾಗ ಅದು ಸತ್ತ ಸೊಳ್ಳೆಯೊಂದು ಅಪ್ಪಚ್ಚಿಯಾಗಿ, ಅದರ ತೆಳ್ಳನೆಯ ಕಾಲುಗಳು ಗಾಜಿಗೆ ಅಂಟಿಕೊಂಡಿದ್ದವು. ಹೊಟ್ಟೆಯ ಕೆಳಗೆ ಒಣಗಿದ ಕುಂಕುಮದ ಚುಕ್ಕೆಯಷ್ಟು ಚಿಕ್ಕ ರಕ್ತದ ಕಲೆ ಹರಡಿತ್ತು. ಮಳೆಯಲ್ಲಿ ಆಶ್ರಯಕ್ಕೆಂದು ಕಾರಿನೊಳಗೆ ಬಂದಿರಬೇಕು. ಇಲ್ಲಿ ಸತ್ತುಬಿದ್ದಿದೆ!

ಕಾವ್ಯಾ ಸುಮ್ಮನೆ ಟ್ವೀಜರ್​ನಿಂದ ಅತ್ಯಂತ ಎಚ್ಚರಿಕೆಯಿಂದ ಅದನ್ನು ತೆಗೆದು ಒಂದು ಸಣ್ಣ ಪ್ಲಾಸ್ಟಿಕ್ ಚೀಲಕ್ಕೆ ಹಾಕಿಕೊಂಡಳು. ಜೊತೆಗೇ ಸುಬ್ರಾಯನ ಉಗುರಿನ ಕೆಳಗಿನ ಅಂಗಾಂಶ, ಸೀಟಿನ ಬಟ್ಟೆಯ ಮೇಲೆ ಕಾಣುತ್ತಿದ್ದ ಸೂಕ್ಷ್ಮ ಬೆವರಿನ ಕಣಗಳನ್ನೂ ಕಲೆಕ್ಟ್ ಮಾಡಿಕೊಂಡಳು.

‘ಇದೂ ಇರಲಿ’ ಎಂದು ಚೀಲವನ್ನು ಜೇಬಿಗೆ ಹಾಕುತ್ತಾ, ‘ಉಳಿದದ್ದರ ಜೊತೆ ಇದಕ್ಕೂ ತನ್ನದೇನಾದರೂ ಕಥೆ ಇರಬಹುದು’

ಸಮರ್ಥ್ ಆ ಕ್ಷಣದಲ್ಲಿ ಅದಕ್ಕೆ ಹೆಚ್ಚು ಬೆಲೆ ಕೊಡಲಿಲ್ಲ. ದೊಡ್ಡ ಪ್ರಕರಣದಲ್ಲಿ ಸಣ್ಣ ಸೊಳ್ಳೆ ಯಾರಿಗೆ ಬೇಕು?

***

ಸುಬ್ರಾಯನ ಸಾವಿನ ಸುದ್ದಿ ಯಲ್ಲಾಪುರದಲ್ಲಿ ಬೇಡ್ತಿ ಹೊಳೆಯ ಪ್ರವಾಹದಂತೆ ಹರಡಿತು. ಮರುದಿನ ಬೆಳಗ್ಗೆ ಠಾಣೆ ಮುಂದೆ ದೊಡ್ಡ ಗುಂಪು. ಅಡಿಕೆ ಮಂಡಿಯ ವ್ಯಾಪಾರಿಗಳು, ತೋಟದ ಕಾರ್ವಿುಕರು, ಸಂಬಂಧಿಕರು, ಪಂಚಾಯಿತಿ ಮುಖಂಡರು. ಪ್ರತಿಯೊಬ್ಬನ ಬಾಯಲ್ಲೂ ಒಂದೊಂದು ಕಥೆ. ಸುಬ್ರಾಯನಿಗೆ ಶತ್ರುಗಳಿರಲಿಲ್ಲ, ಆದರೆ ವ್ಯಾಪಾರದಲ್ಲಿ ಹೊಟ್ಟೆಕಿಚ್ಚು ಇತ್ತು ಎಂದು ಕೆಲವರು ಮಾತನಾಡುತ್ತಿದ್ದರು. ಇನ್ನೂ ಕೆಲವರು ಅಕ್ರಮ ಮರ ಸಾಗಣೆಯ ಬಗ್ಗೆ ಅವನು ಬಾಯಿ ಬಿಡುತ್ತಿದ್ದ ಎಂದು ಗುಸುಗುಸು ಮಾತನಾಡುತ್ತಿದ್ದರು. ಆದರೆ ಆ ಎಲ್ಲಾ ಕಥೆಯ ಮಧ್ಯೆ ಸಮರ್ಥ್​ಗೆ ಮತ್ತೆ ಮತ್ತೆ ಕೇಳಿ ಬಂದ ಒಂದೇ ಹೆಸರು ರಮೇಶ!

ರಮೇಶನನ್ನು ಠಾಣೆಗೆ ಕರೆಸಿದಾಗ ಅವನು ಅಳುವ ಮುಖದಲ್ಲೇ ಬಂದ. ಅವನ ಕೈಯಲ್ಲಿ ಹಳೆಯ, ಗಾಜು ಒಡೆದ, ತುಕ್ಕು ಹಿಡಿದ ಟೈಟಾನ್ ಗಡಿಯಾರ. ಸಮರ್ಥ್ ಗೆ ಆ ಗಡಿಯಾರದ ಕಥೆ ಗೊತ್ತಿತ್ತು. ಹತ್ತು ವರ್ಷದ ಹಿಂದೆ ರಮೇಶನಿಗೆ ಮೊದಲ ಬಾರಿಗೆ ಅಡಿಕೆ ವ್ಯಾಪಾರದಲ್ಲಿ ಲಾಭ ಬಂದಾಗ ಸುಬ್ರಾಯನೇ ಖುದ್ದಾಗಿ ಶಿರಸಿಗೆ ಹೋಗಿ ತಂದುಕೊಟ್ಟ ಗಡಿಯಾರ ಅದು. ರಮೇಶ ಅದನ್ನು ಇಂದಿಗೂ ಕೈಯಿಂದ ತೆಗೆದಿರಲಿಲ್ಲ.

‘ನಿನ್ನೆ ಸಂಜೆ ಏಳೂವರೆಗೆ ಸುಬ್ರಾಯನನ್ನು ನೋಡಿದ್ದೆ ಸಾರ್. ಬಸ್ ಸ್ಟಾ್ಯಂಡ್ ಹತ್ತಿರ. ಆಮೇಲೆ ನಾನು ನೇರವಾಗಿ ತೋಟದ ಮನೆಗೆ ಹೋದೆ, ರಾತ್ರಿ ಹೊರಗೆ ಬಂದಿಲ್ಲ’ ಎಂದ ರಮೇಶ.

ಸಮರ್ಥ್ ಅವನನ್ನು ನೋಡುತ್ತಲೇ ಕೇಳಿದ, ‘ನೀನು ಮತ್ತು ಸುಬ್ರಾಯ ಎಷ್ಟು ವರ್ಷದ ಸ್ನೇಹಿತರು?’

‘ಸ್ನೇಹಿತರಲ್ಲ ಸಾರ್... ಅವನು ನನ್ನ ತಮ್ಮನಂತಿದ್ದ. ನಾವು ಒಂದೇ ಕೆರೆಯಲ್ಲಿ ಈಜು ಕಲಿತವರು. ನನಗೆ ನೀರಿನ ಭಯ ಇತ್ತು, ಮುಳುಗುತ್ತಿದ್ದಾಗ ಕೈ ಹಿಡಿದು ಮೇಲೆಳೆದವನು ಅವನೇ. ಹೈಸ್ಕೂಲ್​ಗೆ ಚಕ್ಕರ್ ಹಾಕಿ ಒಟ್ಟಿಗೆ ಆನೆಹೊಂಡಕ್ಕೆ ಕ್ರಿಕೆಟ್ ಆಡಲು ಹೋಗುತ್ತಿದ್ದೆವು.’

‘ಅಂತಹ ತಮ್ಮನ ಜೊತೆ ಜಗಳವಾಗಿತ್ತಂತೆ?’

ರಮೇಶನ ಮುಖ ಒಮ್ಮೆಗೇ ಗಟ್ಟಿಯಾಯಿತು.

‘ಯಾರೋ ತಪ್ಪು ಮಾಹಿತಿ ಕೊಟ್ಟಿದ್ದಾರೆ ಸಾರ್.’

‘ನಾನು ಮಾಹಿತಿ ಕೇಳಲಿಲ್ಲ, ಪ್ರಶ್ನೆ ಕೇಳಿದೆ.’

ತುಸು ಹೊತ್ತು ಸುಮ್ಮನಿದ್ದು ಅವನು ಹೇಳಿದ, ‘ಬಿಸಿನೆಸ್​ನಲ್ಲಿ ಮಾತಿನ ಚಕಮಕಿ ಆಗಿತ್ತು.

‘ಯಾವ ಬಿಸಿನೆಸ್?’

‘ಅಡಿಕೆ... ಅಡಿಕೆ ವ್ಯಾಪಾರ.’

ಸಮರ್ಥ್ ಕೆಲ ಕ್ಷಣ ಅವನ ಕಣ್ಣನ್ನೇ ನೋಡಿ ಸುಮ್ಮನೆ ಬಿಟ್ಟ. ರಮೇಶನ ಸುಳ್ಳು ತುಂಬಾ ದುರ್ಬಲವಾಗಿತ್ತು.

ಆದರೆ ತನಿಖೆ ಬೇರೆ ದಿಕ್ಕಿನಲ್ಲಿ ಸಾಗಿತ್ತು. ಸುಬ್ರಾಯನ ಮನೆಯಲ್ಲಿ ಸಿಕ್ಕ ಒಂದು ಹಳೆಯ ಡೈರಿಯಲ್ಲಿ ಕೆಲವು ವಾಹನಗಳ ನಂಬರ್​ಗಳ ಪಟ್ಟಿ ಇತ್ತು, ಮೊಬೈಲ್ ಗ್ಯಾಲರಿಯಲ್ಲಿ ಕಾಡಿನೊಳಗೆ ರಾತ್ರಿ ಹೊತ್ತು ಟಾರ್ಚ್ ಬೆಳಕಿನಲ್ಲಿ ತೆಗೆದ ಕೆಲವು ಮಸಕು ಫೋಟೋಗಳಿದ್ದವು, ಒಂದು ನೋಟ್ ಬುಕ್​ನಲ್ಲಿ ಅಡಿಕೆ ಲೆಕ್ಕದ ನಡುವೆ ಬರೆದಿಟ್ಟ ಹಣದ ಲೆಕ್ಕವಿತ್ತು. ಒಂದೊಂದೇ ಚೂರು ಕೂಡಿ ನೋಡಿದಾಗ ಅದು ಅಡಿಕೆ ವ್ಯಾಪಾರವಾಗಿರಲಿಲ್ಲ. ಕಳೆದ ಆರು ತಿಂಗಳಿನಿಂದ ಯಲ್ಲಾಪುರದ ಕಾಡಂಚಿನಲ್ಲಿ ರಾತ್ರಿ ಹೊತ್ತು ನಡೆಯುತ್ತಿದ್ದ ಅಕ್ರಮ ಶ್ರೀಗಂಧ ಮತ್ತು ತೇಗದ ಮರ ಸಾಗಣೆಯ ಜಾಲದ ಜಾತಕವಾಗಿತ್ತು. ಆ ಜಾಲದ ಒಂದು ತೆಳ್ಳನೆಯ ಎಳೆ ರಮೇಶನ ತೋಟದ ಹಿಂದಿನ ಹಾದಿಯವರೆಗೆ ಬಂದು ನಿಂತಿತ್ತು. ಸುಬ್ರಾಯ ಆ ದಾಖಲೆಗಳನ್ನು ಪೊಲೀಸರಿಗೆ ಕೊಡಲು ತಯಾರಿ ನಡೆಸಿದ್ದ. ಅದು ಹೊರಬಂದಿದ್ದರೆ ರಮೇಶ ಮಾತ್ರವಲ್ಲ, ಅವನ ಹಿಂದೆ ನಿಂತಿದ್ದ ಇನ್ನೂ ಇಬ್ಬರು ದೊಡ್ಡ ವ್ಯಾಪಾರಿಗಳ ಬದುಕು ತಲೆಕೆಳಗಾಗುತ್ತಿತ್ತು.

Also Read
ವಿಜಯವಾಣಿ ದೀಪಾವಳಿ ಕಥಾ ಸ್ಪರ್ಧೆ: ಪ್ರಥಮ ಬಹುಮಾನ ಪಡೆದ "ಗಂಟೆ ಹತ್ತು" ಕಥೆ! Vijayavani Deepavali Story Contest
Vijayavani Deepavali Story Contest

ಅದೇ ಮೋಟಿವ್. ಆದರೆ ಸಮರ್ಥ್​ಗೆ ಮೋಟಿವ್​ಗಿಂತ ಮುಖ್ಯವಾದ ಪ್ರಶ್ನೆ ಇತ್ತು- ‘ಕೊಲೆ ನಡೆದ ರಾತ್ರಿ ರಮೇಶ ನಿಜವಾಗಿಯೂ ತೋಟದ ಮನೆಯಲ್ಲೇ ಇದ್ದನಾ?’

ಮೊಬೈಲ್ ಟವರ್ ದಾಖಲೆ ಬೇರೆ ಕಥೆ ಹೇಳುತ್ತಿತ್ತು. ರಾತ್ರಿ 8.15ರ ಸುಮಾರಿಗೆ ಅವನ ಫೋನ್ ಅರಬೈಲ್ ಘಾಟಿನ ಅದೇ ಟವರ್ ವ್ಯಾಪ್ತಿಯಲ್ಲಿತ್ತು. ‘ಫೋನ್ ಆ ರಾತ್ರಿ ನನ್ನ ಬಳಿ ಇರಲಿಲ್ಲ ಸಾರ್, ತೋಟದ ಮನೆಯಲ್ಲೇ ಬಿಟ್ಟಿದ್ದೆ’ ಎಂದು ರಮೇಶ ಹೇಳಿದ. ಅದು ಇನ್ನೊಂದು ಸುಳ್ಳು ಎಂದು ಸಮರ್ಥ್​ಗೆ ಗೊತ್ತಿತ್ತು. ಆದರೂ ಅವನು ಬಂಧಿಸಲಿಲ್ಲ. ನ್ಯಾಯಾಲಯದಲ್ಲಿ ನಿಲ್ಲುವಂತಹ ಕೊನೆಯ ಕೊಂಡಿ ಇನ್ನೂ ಅವನ ಬಳಿ ಇರಲಿಲ್ಲ.

ಅದು ಬಂದದ್ದು ಮೂರನೇ ದಿನ ಕಾವ್ಯಾಳಿಂದ.

‘ಸಮರ್ಥ್, ಆ ಸೊಳ್ಳೆಯ ವರದಿ ಬಂದಿದೆ.’

ಸಮರ್ಥ್ ತಕ್ಷಣ ಎದ್ದು ನಿಂತ. ‘ಏನಿದೆ?’

‘ಸೊಳ್ಳೆ ಇತ್ತೀಚೆಗೆ ರಕ್ತ ಹೀರಿದೆ. ಅದರ ಹೊಟ್ಟೆಯಲ್ಲಿದ್ದ ರಕ್ತ ಮನುಷ್ಯನದು, ಆದರೆ ಸುಬ್ರಾಯನ ಮಾದರಿಗೆ ಹೊಂದಿಕೆಯಾಗುವುದಿಲ್ಲ. ಮತ್ತು ಒಂದು ಮುಖ್ಯ ವಿಷಯ - ರಕ್ತ ಇನ್ನೂ ಜೀರ್ಣ ಆಗುವ ಹಂತಕ್ಕೆ ಹೋಗಿಲ್ಲ. ಸೊಳ್ಳೆಯ ಹೊಟ್ಟೆಯಲ್ಲಿ ಮಾನವ ರಕ್ತ ಹನ್ನೆರಡು ಗಂಟೆಗಿಂತ ಹೆಚ್ಚು ಉಳಿದರೆ ಡಿಎನ್​ಎ ಕರಗಲು ಶುರುವಾಗುತ್ತದೆ. ಇದರಲ್ಲಿರುವ ರಕ್ತ ತಾಜಾ, ಕೆಲವೇ ಗಂಟೆಗಳ ಹಿಂದಷ್ಟೇ ಹೀರಿದ್ದು. ಅಂದರೆ ಅದು ಕಾರಿನೊಳಗೆ ಇದ್ದಾಗಲೇ, ಅಂದರೆ ಕೊಲೆಯ ಸಮಯದಲ್ಲೇ ಹೀರಿದ್ದು ಆಗುವ ಸಾಧ್ಯತೆ ತುಂಬಾ ಹೆಚ್ಚು. ಆ ರಕ್ತದಿಂದ ನಮಗೆ ಪೂರ್ತಿ ಡಿಎನ್​ಎ ಪೊ›ಫೈಲ್ ಸಿಕ್ಕಿದೆ.’

ಸಮರ್ಥ್ ಕೆಲ ಕ್ಷಣ ಸುಮ್ಮನಿದ್ದ. ‘ಯಾರದ್ದು?’

‘ಪರೀಕ್ಷಿಸಿದ್ದೇವೆ. ಹೊಂದಾಣಿಕೆ- ರಮೇಶ!’

ಅವನ ಕೈಯಲ್ಲಿದ್ದ ಫೈಲ್ ನಿಧಾನವಾಗಿ ಕೆಳಗಿಳಿಯಿತು. ಆದರೂ ಸಮರ್ಥ್ ತಕ್ಷಣ ಬಂಧಿಸಲಿಲ್ಲ. ‘ಸೊಳ್ಳೆ ಮಾತ್ರ ಸಾಕಾಗುವುದಿಲ್ಲ ಕಾವ್ಯಾ. ಕೋರ್ಟಿನಲ್ಲಿ ವಕೀಲ ಕೇಳುತ್ತಾನೆ - ಸೊಳ್ಳೆ ಹಿಂದಿನ ದಿನ ಕಚ್ಚಿರಬಹುದು, ಕಾರನ್ನು ರಮೇಶ ಮೊದಲೇ ಬಳಸಿರಬಹುದು ಎಂದು. ವಿಜ್ಞಾನದಲ್ಲಿ ಅನುಮಾನಕ್ಕೆ ಜಾಗವಿಲ್ಲ.’

ಅದೇ ರಾತ್ರಿ ಇನ್ನೆರಡು ರಿಪೋರ್ಟ್ಸ್ ಬಂದವು. ಸುಬ್ರಾಯನ ಉಗುರಿನ ಕೆಳಗಿದ್ದ ಜೈವಿಕ ಮಾದರಿ- ಅದು ಗೀರಿದಾಗ ಸಿಕ್ಕ ಚರ್ಮದ ಸಣ್ಣ ತುಂಡು- ರಮೇಶನಿಗೆ ಹೊಂದಿಕೆಯಾಯಿತು. ಕಾರಿನ ಸೀಟಿನ ಬಟ್ಟೆಯಲ್ಲಿ ಸಿಕ್ಕಿದ್ದ ಸೂಕ್ಷ್ಮ ಬೆವರಿನ ಕಣವೂ ಅದೇ ಡಿಎನ್​ಎಗೆ ಹೊಂದಿಕೊಂಡಿತು. ಶಿರಲೆ ಕ್ರಾಸ್​ನ ಸಿಸಿಟಿವಿಯಲ್ಲಿ ರಮೇಶನ ಬೈಕ್ ಸುಬ್ರಾಯನ ಕಾರು ಹೋಗುವುದಕ್ಕಿಂತ ನಾಲ್ಕೇ ನಿಮಿಷ ಮೊದಲು ಅದೇ ದಾರಿಯಲ್ಲಿ ಹೋಗಿದ್ದು ದಾಖಲಾಗಿತ್ತು. ಈಗ ಸೊಳ್ಳೆ ಒಂಟಿಯಾಗಿರಲಿಲ್ಲ. ಅದು ಉಳಿದ ಸಾಕ್ಷಿಗಳ ನಡುವೆ ಮೌನವಾಗಿ ನಿಂತಿದ್ದ ಒಂದು ಗಟ್ಟಿಯಾದ ಕೊಂಡಿಯಾಗಿತ್ತು.

***

ಮರುದಿನ ಬೆಳಗ್ಗೆ ರಮೇಶನನ್ನು ಮತ್ತೆ ಠಾಣೆಗೆ ಕರೆಸಲಾಯಿತು. ಅವನು ಒಳಗೆ ಬಂದಾಗ ಸಮರ್ಥ್ ಮೇಜಿನ ಮೇಲೆ ಯಾವ ಕಡತವೂ ಇಟ್ಟಿರಲಿಲ್ಲ, ಯಾವ ಫೋಟೋವೂ ಇರಲಿಲ್ಲ. ಕಿಟಕಿಯ ಹೊರಗೆ ನೋಡುತ್ತಾ ಕುಳಿತಿದ್ದ. ಹೊರಗೆ ಮಳೆ ಸುರಿಯುತ್ತಿತ್ತು.

‘ಚಹಾ ಬೇಕಾ?’ ಎಂದ.

ರಮೇಶ ತಲೆ ಅಲ್ಲಾಡಿಸಿದ. ಸಮರ್ಥ್ ಒಂದು ಸಿಗರೇಟ್ ಹೊತ್ತಿಸಿದ, ಹೊಗೆ ನಿಧಾನವಾಗಿ ಮೇಲಕ್ಕೆ ಏರಿತು.

‘ರಮೇಶಾ, ಆ ರಾತ್ರಿ ಕಾರಿನಲ್ಲಿ ಏನಾದರೂ ತೊಂದರೆ ಆಯಿತಾ?’

‘ಇಲ್ಲ.’

‘ಕಿಟಕಿ ತೆರೆದಿತ್ತಾ?’

‘ಇಲ್ಲ ಸಾರ್, ಮಳೆ ಇತ್ತು.’

‘ಕಾರಿನೊಳಗೆ ಏನಾದರೂ ಕಚ್ಚಿತಾ? ಇರುವೆ, ಜೇಡ...’

ರಮೇಶ ತಕ್ಷಣ, ಯೋಚಿಸದೆ, ದನಿ ಸ್ವಲ್ಪ ಎತ್ತರಿಸಿ ಹೇಳಿದ, ‘ಅಲ್ಲಿ ಸೊಳ್ಳೆ ಇರಲಿಲ್ಲ!’

ಕೋಣೆಯಲ್ಲಿ ಒಂದು ಕ್ಷಣ ಮೌನ ಆವರಿಸಿತು. ಗೋಡೆಯ ಗಡಿಯಾರದ ಟಿಕ್ ಶಬ್ದ ಮಾತ್ರ. ಸಮರ್ಥ್ ನಿಧಾನವಾಗಿ ಅವನತ್ತ ತಿರುಗಿದ. ಇಲ್ಲಿಯವರೆಗೆ ಸಮರ್ಥ್ ಸೊಳ್ಳೆಯ ಮಾತನ್ನೇ ಎತ್ತಿರಲಿಲ್ಲ.

Also Read
ವಿಜಯವಾಣಿ ದೀಪಾವಳಿ ಕಥಾ ಸ್ಪರ್ಧೆ: ದ್ವಿತೀಯ ಬಹುಮಾನ ಪಡೆದ "ಹೋಟೆಲ್​ ಹನಿಬೇರ್​" ಕಥೆ! Vijayavani Deepavali Story Contest
Vijayavani Deepavali Story Contest

‘ನಾನು ಸೊಳ್ಳೆಯ ಮಾತು ಹೇಳಿದ್ದೆನಾ?’

ರಮೇಶನ ಮುಖ ಬೆಳ್ಳಗಾಯಿತು. ಬಲಗೈ ಬೆರಳುಗಳು ಒಂದಕ್ಕೊಂದು ಒತ್ತಿಕೊಳ್ಳತೊಡಗಿದವು. ಹಣೆಯ ಮೇಲೆ ಬೆವರ ಹನಿ ಜಾರಿ ಕೆನ್ನೆಯ ಮೇಲೆ ನಿಂತಿತು. ಅವನು ಅದನ್ನು ಒರೆಸಿಕೊಳ್ಳಲಿಲ್ಲ.

ಸಮರ್ಥ್ ಎದ್ದು ಅವನ ಎದುರಿಗೆ ಬಂದು ಕುಳಿತ. ದನಿ ತಗ್ಗಿಸಿ ಹೇಳಿದ, ‘ನೀನು ಸುಬ್ರಾಯನ ಕುತ್ತಿಗೆ ಹಿಡಿದಾಗ ಅದು ನಿನ್ನ ಕೈ ಮೇಲೆ ಕುಳಿತಿತ್ತು. ಕಚ್ಚಿತು. ನೀನು ಸಿಟ್ಟಿನಲ್ಲಿ ಅದನ್ನು ಬಡಿದು ಗಾಜಿಗೆ ಹೊಡೆದೆ. ಅದರ ಹೊಟ್ಟೆ ಒಡೆದು ರಕ್ತ ಗಾಜಿನ ಮೇಲೆ ಚೆಲ್ಲಿತು. ನಿನಗೆ ಆ ಕ್ಷಣದಲ್ಲಿ ಅದು ಗೊತ್ತಾಗಲಿಲ್ಲ.’

ರಮೇಶ ಏನೂ ಹೇಳಲಿಲ್ಲ.

‘ಅದು ನಿನ್ನನ್ನು ನೆನಪಿಟ್ಟುಕೊಂಡಿರಲಿಲ್ಲ ರಮೇಶಾ. ಆದರೆ ನೀನು ಅದರಲ್ಲಿ ಬಿಟ್ಟುಬಂದಿದ್ದು ಮಾತ್ರ ನಿನ್ನ ಗುರುತು!’

‘ಸೊಳ್ಳೆ ಯಾರನ್ನೂ ನೆನಪಿಟ್ಟುಕೊಳ್ಳುವುದಿಲ್ಲ,’ ಎಂದು ರಮೇಶ ಒಣಗಿದ ದನಿಯಲ್ಲಿ ಹೇಳಿದ.

‘ಹೌದು,’ ಎಂದ ಸಮರ್ಥ್, ‘ಆದರೆ ರಕ್ತ ಸುಳ್ಳು ಹೇಳುವುದಿಲ್ಲ!’

ಬಹಳ ಹೊತ್ತು ಯಾರೂ ಮಾತನಾಡಲಿಲ್ಲ. ಆಮೇಲೆ ಸಮರ್ಥ್ ಫೈಲ್ ತೆರೆದ.

‘ಸೊಳ್ಳೆಯ ಹೊಟ್ಟೆಯಲ್ಲಿನ ರಕ್ತ ನಿನ್ನದು. ಸುಬ್ರಾಯನ ಉಗುರಿನ ಕೆಳಗಿನ ಚರ್ಮ ನಿನ್ನದು. ಸೀಟಿನ ಮೇಲಿನ ಬೆವರು ನಿನ್ನದು. ನಿನ್ನ ಬೈಕ್ ಆ ರಾತ್ರಿ ಅಲ್ಲೇ ಇತ್ತು. ನೀನು ಮಾತ್ರ ಬೇರೆ ಕಥೆ ಹೇಳುತ್ತಿದ್ದೀಯ!’

ರಮೇಶ ಕುರ್ಚಿಯಲ್ಲಿ ಕುಸಿದು ಕುಳಿತ. ‘ನಾನು ಅವನನ್ನು ಕೊಲ್ಲಬೇಕೆಂದಿರಲಿಲ್ಲ...’

‘ಏನಕ್ಕಾಗಿ ಹೋಗಿದ್ದೆ?’

‘ದಾಖಲೆಗಳಿಗಾಗಿ. ಅವನು ಪೊಲೀಸರಿಗೆ ಕೊಡುತ್ತೇನೆ ಎಂದಿದ್ದ. ಅವನು ಕೊಟ್ಟಿದ್ದರೆ ನಾವೆಲ್ಲ ಮುಗಿದುಹೋಗುತ್ತಿದ್ದೆವು.’

‘ಅದ್ಕಾಗೇ ಕೊಂದ್ಯಾ?’

‘ಅವನು ನನ್ನನ್ನು ನಾಶ ಮಾಡುತ್ತಿದ್ದ!’ ಆ ಮಾತು ಹೊರಬಂದ ಕೂಡಲೇ ರಮೇಶ ತನ್ನದೇ ದನಿಗೆ ಹೆದರಿದಂತೆ ಸುಮ್ಮನಾದ.

ಸ್ವಲ್ಪ ಹೊತ್ತಿನ ನಂತರ ಅವನು ನಿಧಾನವಾಗಿ ಹೇಳಿದ, ‘ನಾವು ಚಿಕ್ಕವರಿದ್ದಾಗ ಅವನು ನನಗೆ ಈಜು ಕಲಿಸಿದ್ದ. ನನಗೆ ನೀರಿನ ಭಯ ಇತ್ತು. ಮುಳುಗುತ್ತಿದ್ದಾಗ ಕೈ ಹಿಡಿದು ಮೇಲೆಳೆದವನು ಅವನೇ. ಆ ರಾತ್ರಿ ನಾನು ಅವನ ಕುತ್ತಿಗೆ ಹಿಡಿದಾಗ ಅವನು ನನ್ನನ್ನು ನೋಡಿದ. ಒಂದೇ ಒಂದು ಮಾತು ಹೇಳಿದ... ರಮೇಶಾ... ನೀನಾ?’

ಗಡಿಯಾರ ಟಿಕ್ ಎನ್ನುತ್ತಿತ್ತು.

‘ಅವನು ಆ ಮಾತು ಹೇಳಿದ ಮೇಲೆ ನನ್ನ ಕೈ ಸಡಿಲವಾಗಬೇಕಿತ್ತು. ಆದರೆ ಆಗಲಿಲ್ಲ. ಅವನ ಕೊನೆಯ ಉಸಿರು ನನ್ನ ಮುಖಕ್ಕೆ ತಾಗಿತ್ತು ಸಾರ್. ಆ ಕ್ಷಣದಿಂದ ಕಣ್ಣು ಮುಚ್ಚಿದರೆ ಅವನೇ ಕಾಣುತ್ತಾನೆ. ಮಳೆ ಬಂದರೂ ಅವನ ಉಸಿರೇ ಕೇಳುತ್ತಿದೆ.’

ಸಮರ್ಥ್ ಅವನತ್ತ ನೋಡಿದ. ಅವನ ಮುಖದಲ್ಲಿ ಗೆಲುವಿನ ಸಂತೋಷ ಇರಲಿಲ್ಲ. ಒಬ್ಬ ಕೊಲೆಗಾರ ಸಿಕ್ಕಿದ್ದ, ಆದರೆ ಅದೇ ಕ್ಷಣದಲ್ಲಿ ಒಬ್ಬ ವ್ಯಕ್ತಿ ತನ್ನ ಕೈಯಿಂದ ಬಾಲ್ಯದ ಗೆಳೆಯನನ್ನು ಕೊಂದ ದುರಂತವೂ ಅವನ ಎದುರಿಗಿತ್ತು.

Also Read
ವಿಜಯವಾಣಿ ದೀಪಾವಳಿ ಕಥಾ ಸ್ಪರ್ಧೆ: ತೃತೀಯ ಬಹುಮಾನ ಪಡೆದ 'ಸತ್ತವನ ಬೆನ್ನು ಹತ್ತಿ​' ಕಥೆ! Vijayavani Deepavali Story Contest
Vijayavani Deepavali Story Contest

ಹೊರಗೆ ಮಳೆ ತುಸು ಕಡಿಮೆಯಾಗಿತ್ತು. ಮಂಜು ನಿಧಾನವಾಗಿ ಮೇಲಕ್ಕೆ ಸರಿಯುತ್ತಿತ್ತು. ಕಾಡಿನ ಎಲೆಗಳ ಮೇಲೆ ನೀರಿನ ಹನಿ ಇನ್ನೂ ತೂಗುತ್ತಿತ್ತು, ಭಾರ ತಡೆಯಲಾಗದೆ ಕೆಲವು ಹನಿ ಕೆಳಗೆ ಬೀಳುತ್ತಿದ್ದವು.

ಮನುಷ್ಯ ತನ್ನ ಅಪರಾಧ ಮುಚ್ಚಿಹಾಕಲು ಎಷ್ಟೇ ದೊಡ್ಡ ಸಂಚು ಹೆಣೆಯಬಹುದು. ಕಾರನ್ನು ಒರೆಸಬಹುದು, ಅಪಘಾತದಂತೆ ಮಾಡಬಹುದು, ಸುಳ್ಳು ಹೇಳಬಹುದು. ಆದರೆ ಅವನ ಲೆಕ್ಕಕ್ಕೆ ಸಿಗದ ಏನೋ ಒಂದು ಅಂಶ ಖಂಡಿತವಾಗಿಯೂ ಪ್ರಕೃತಿಯಲ್ಲಿ ಯಾವಾಗಲೂ ಉಳಿದಿರುತ್ತದೆ. ಒಂದು ಹೆಜ್ಜೆ ಗುರುತು, ಒಂದು ಹನಿ ರಕ್ತ ಅಥವಾ ಮಳೆಯ ರಾತ್ರಿ ಆಶ್ರಯಕ್ಕೆಂದು ಕಾರಿನೊಳಗೆ ಬಂದ ಒಂದು ಸೊಳ್ಳೆ!

ಸುಬ್ರಾಯನ ಫೈಲ್ ಮುಚ್ಚುವಾಗ ಸಮರ್ಥ್ ಆ ಸೊಳ್ಳೆಯ ಫೋಟೋವನ್ನು ಕೊನೆಯ ಬಾರಿ ನೋಡಿದ. ಅದಕ್ಕೆ ಸ್ನೇಹ ಗೊತ್ತಿರಲಿಲ್ಲ, ದ್ವೇಷ ಗೊತ್ತಿರಲಿಲ್ಲ, ಹಣದ ಬೆಲೆ ಗೊತ್ತಿರಲಿಲ್ಲ. ಅದು ಸುಮ್ಮನೆ ರಕ್ತ ಹೀರಿತ್ತು.

ಆದರೆ ಆ ರಕ್ತದಲ್ಲಿ ರಮೇಶನ ಗುರುತು ಉಳಿದಿತ್ತು.

ಅರಬೈಲ್ ಘಾಟಿನ ಆ ರಾತ್ರಿ ಕೊಲೆಗಾರನ ವಿರುದ್ಧ ಸಾಕ್ಷಿ ಹೇಳಿದ್ದು ಯಾವ ಮನುಷ್ಯನೂ ಅಲ್ಲ.

ಒಂದು ಸತ್ತ ಸೊಳ್ಳೆ!