

ಮಾಧವಪುರ ರೈಲ್ವೆ ನಿಲ್ದಾಣಕ್ಕೆ ರೈಲು ಬಂದು ನಿಂತಾಗ ಸಮಯ ಸಂಜೆ ಏಳು ಗಂಟೆ. ಮಾಧವಪುರ ದಟ್ಟ ಕರಡೆಕಾಡಿನ ತಪ್ಪಲಿನಲ್ಲಿರುವ ಒಂದು ಪುಟ್ಟ ಹಳ್ಳಿ. ವಿಸ್ತಾರವಾಗಿ ಹರಡಿಕೊಂಡ ಕರಡೆಕಾಡು ಕರಡಿಗಳ ಒಂದು ತಾಣ, ಆ ಕಾರಣದೊಂದಲೇ ಅದಕ್ಕೇ ಕರಡೆಕಾಡು ಎಂಬ ಹೆಸರು ಬಂದಿರಬೇಕು.
ಟ್ರೇನ್ ನಿಲ್ಲುತ್ತಿದ್ದಂತೆ ಆರು ತಿಂಗಳ ಗರ್ಭಿಣಿ ಮಾಲತಿ ಅವಸರದಿಂದ ತನ್ನ ಭಾರವಾದ ಎರಡೆರಡು ಬ್ಯಾಗ್ಗಳನ್ನು ಹೊತ್ತು ಬೋಗಿಯ ಬಾಗಿಲಿನತ್ತ ಬರಲು ಕಷ್ಟಪಡುತ್ತಿದ್ದಾಗ ಆಕೆಯ ಸ್ಥಿತಿಯನ್ನು ಕಂಡ ಒಬ್ಬ ಅಪರಿಚಿತ ಪ್ರಯಾಣಿಕ ಮಾಲತಿಯ ಎಲ್ಲ ಬ್ಯಾಗುಗಳನ್ನು ತಂದು ಹೊರಕ್ಕೆ ಇಟ್ಟ.
ಆಗ ಮಾಲತಿ ಥ್ಯಾಂಕ್ಸ್ ಅನ್ನುವಂತೆ ಆತನತ್ತ ನೋಡಿ ಮುಗುಳು ನಕ್ಕಳು.
ಮಾಲತಿ ಟ್ರೇನ್ನಿಂದ ಇಳಿಯುತ್ತಿದ್ದಂತೆ, ಟ್ರೇನ್ ವಿಕಾರವಾಗಿ ವಿಷಲ್ ಹಾಕುತ್ತ ಮುಂದೆ ಸಾಗಿ ದಟ್ಟ ಅರಣ್ಯ ಗರ್ಭದಲ್ಲಿ ಅಡಗಿಹೋಯಿತು.. ಮತ್ತೆ ನಿಲ್ದಾಣದ ತುಂಬ ಗಾಢ ಮೌನ..
ಒಂಟಿಯಾಗಿ ನಿಂತ ಮಾಲತಿ ತನ್ನ ಹೊಟ್ಟೆಯ ಮೇಲೆ ಕೈಹೊತ್ತು ಕೊಂಚ ಆತಂಕದಿಂದ ಸುತ್ತಲೂ ನೋಡುತ್ತಿದ್ದಳು.
ಅಷ್ಟರಲ್ಲಿ ಸ್ಟೇಶನ್ ಹೊರಗಡೆ ಒಂದು ಜೀಪ್ ಬಂದು ನಿಂತಿತು.
ಜೀಪಿನಿಂದ ಮಧ್ಯವಯಸ್ಸಿನ ಒಬ್ಬ ವ್ಯಕ್ತಿ ಅವಸರದಿಂದ ಇಳಿದು ಬಂದರು. ಒಂಟಿಯಾಗಿ ನಿಂತ ಮಾಲತಿಯತ್ತ ನೋಡಿ ಕೈಬೀಸಿದರು..
ಬಂದ ವ್ಯಕ್ತಿ ರಾವಬಹದ್ದೂರ್ ಎಂದು ಗುರುತಿಸಿ ಅವರತ್ತ ಮಾಲತಿ ಕೈಮಾಡಿದಳು. ರಾವಬಹದ್ದೂರ್ ಮಾಲತಿಯತ್ತ ಬಂದು ನಿಂತರು. ಜೀಪ್ ಚಾಲಕ ಮಾಲತಿಯ ಎಲ್ಲ ಲಗೇಜ್ಗಳನ್ನು ಹೊತ್ತು ತಂದು ಜೀಪಿಗೆ ಹಾಕಿದ.
ರಾವಬಹದ್ದೂರ್ ಊರಿನ ಪ್ರತಿಷ್ಠಿತ ವ್ಯಕ್ತಿ. ಮಾಧವಪುರ ಪಂಚಾಯಿತಿಯ ಮಾಜಿ ಅಧ್ಯಕ್ಷರೂ ಕೂಡ. ಮಾಲತಿಯ ಪತಿ ಆನಂದನ ದೊಡ್ಡಪ್ಪ.
ರಾವಬಹದ್ದೂರ್ ಮಾಲತಿಯ ಮೊಗವನ್ನು ಮತ್ತೊಂದು ಬಾರಿ ತೀಕ್ಷ್ಣವಾಗಿ ದಿಟ್ಟಿಸಿ,
‘ಮಾಲತಿ ಈ ಪರಿಸ್ಥಿತಿಯಲ್ಲಿ ದೂರದ ಅಮೆರಿಕದಿಂದ ಮೂರು ದಿನ ಸತತ ಪ್ರಯಾಣ ಮಾಡಿ ಇಲ್ಲಿಗೆ ಬರುವ ಅನಿವಾರ್ಯತೆ ಇರಲಿಲ್ಲ..’
ಆಗ ಮಾಲತಿ ತನ್ನ ಸೋತ ಮುಖದಿಂದ ರಾವಬಹದ್ದೂರ್ ಅವರನ್ನು ಒಂದು ಬಾರಿ ದಿಟ್ಟಿಸಿ ವಿಷಾದದ ನಗೆ ನಕ್ಕು,
‘ದೊಡ್ಡಪ್ಪ, ನನ್ನ ಗಂಡ ಆನಂದ ತಿಂಗಳಿನಿಂದ ಇದೇ ಮಾಧವಪುರದಲ್ಲಿ ನಾಪತ್ತೆ ಆಗಿದ್ದಾರೆ. ಅವನ ಜೊತೆ ಬಂದ ಇಬ್ಬರು ಕೆಲಸಗಾರರು ಇದೇ ಕಾಡಿನಲ್ಲಿ ಹೆಣವಾಗಿ ಸಿಕ್ಕಿದ್ದಾರೆ.. ಇಲ್ಲಿಯ ಪೊಲೀಸರು ನನ್ನ ಗಂಡನನ್ನು ಹುಡುಕುವ ನೆಪ ಮಾತ್ರ ಮಾಡುತ್ತಿದ್ದಾರೆ. ನಾನು ಏನಂತ ತಿಳಿಬೇಕು ಹೇಳಿ?.. ಸಂಕಟವಾಗುತ್ತೆ ದೊಡ್ಡಪ್ಪ..!’
ಮಾಲತಿ ನೋವಿನಿಂದ ಸಣ್ಣಗೆ ಅರಚಿದಳು.
‘ಮಾಲತಿ, ನಾನು ಆನಂದನಿಗೆ ಎಷ್ಟೋಂದು ಸಾರಿ ಬಡಕೊಂಡು ಹೇಳಿದೆ.. ಜನರು ಓಡಾಡಲು ಭಯಪಡುವ ಕರಡೆಕಾಡಿನ ಮಧ್ಯದಲ್ಲಿರುವ ಆ ಹಾಳು ಬಿದ್ದ ಅರಮನೆಯಲ್ಲಿ ಹೋಟೆಲ್ ಉದ್ಯೋಗ ಮಾಡುವುದು ಬೇಡ ಅಂತ.. ಆ ಬಂಗಲೆ ನಿಮಗೆ ಹಿರಿಯರಿಂದ ಬಳುವಳಿಯಾಗಿ ಬಂದ ಆಸ್ತಿ ನಿಜ.. ಆದರೆ ಈಗ ಅದು ಮೊದಲಿನಂತಿಲ್ಲ., ಅದು ಕಂಡು ಕೇಳರಿಯದ ಕ್ರೂರ ಕಾಡು ಪ್ರಾಣಿಗಳ ತಾಣವಾಗಿ ಹೋಗಿದೆ..’
ರಾವಬಹದ್ದೂರ್ ಕಳಕಳಿಯಿಂದ ಹೇಳಿದರು. ಜೀಪು ಮುಂದೆ ಸಾಗಿತು..
***
ಆನಂದ ಮತ್ತು ಆತನ ಮಡದಿ ಮಾಲತಿ ಅಮೆರಿಕದಲ್ಲಿ ಸಾಫ್ಟ್ವೇರ್ ಇಂಜಿನಿಯರ್ಸ್.. ಈಗ ಅಮೆರಿಕದ ಬದುಕು ಬೇಸರವಾಗಿ ತನ್ನ ತಂದೆ ನಡೆಸಿಕೊಂಡು ಬಂದಿದ್ದ ಹನಿಬೇರ್ ಹೆಸರಿನ ಹೋಟೆಲ್ ಉದ್ಯೋಗವನ್ನು ಮುನ್ನಡೆಸಿಕೊಂಡು ಹೋಗಲು ನಿರ್ಧರಿಸಿದ ಆನಂದ್. ಕೈಯಲ್ಲಿ ಸಾಕಷ್ಟು ಡಾಲರ್ ದುಡ್ಡು ಇದೆ.. ಮಾಧವಪುರದ ಕಾಡಿನ ಮಧ್ಯದಲ್ಲಿರುವ ತಮ್ಮ ಪಾಳುಬಿದ್ದ ಹೋಟೆಲನ್ನು ಅಭಿವೃದ್ಧಿಪಡಿಸಿ ಒಂದು ಸುಂದರ ರೆಸಾರ್ಟ್ ಅಥವಾ ಹೋಂ ಸ್ಟೇ ಮಾಡುವುದು ಆನಂದನ ಕನಸಾಗಿತ್ತು.
ಆನಂದ ಇಂಜಿನಿಯರಿಂಗ್ ಡಿಗ್ರಿ ಮುಗಿಸಿ ಅಮೆರಿಕಕ್ಕೆ ಹಾರಿಬಿಟ್ಟ.. ಅದಾಗಿ ಕೆಲವೇ ತಿಂಗಳಲ್ಲಿ ಅಪ್ಪ ತೀರಿಹೋದರು. ಆಗ ಇದೇ ಹನಿಬೇರ್ ಹೋಟೆಲನ್ನು ಆನಂದನ ದೊಡ್ಡಪ್ಪ ರಾವಬಹದ್ದೂರ್ ಕೆಲವರ್ಷ ನಡೆಸಿದರಾದರೂ ಮುಂದೆ ಅವರಿಂದ ನಡೆಸಲಾಗದೇ ಮುಚ್ಚಿಬಿಟ್ಟರು.. ಅದು ಈಗ ಪಾಳುಬಿದ್ದ ಬಂಗಲೆಯಾಗಿ ಉಳಿದುಬಿಟ್ಟಿತು. ಆನಂದ ಅಮೆರಿಕಾದಲ್ಲಿ ಮಾಲತಿಯನ್ನು ಮದುವೆಯಾಗಿ ಅಲ್ಲಿಯೇ ಇಪ್ಪತ್ತು ವರ್ಷಗಳ ಕಾಲ ಉಳಿದುಬಿಟ್ಟ..
ದಟ್ಟ ಅರಣ್ಯದಲ್ಲಿದ್ದ ಹಿರಿಯರಿಂದ ಬಂದ ಈ ಕಟ್ಟಡ ಸಹಜ ಸೃಷ್ಟಿ ಸೌಂದರ್ಯದಿಂದ ಕೂಡಿತ್ತು. ಹಸಿರು ಬೆಟ್ಟದ ಮೇಲೆ ದೂರದಿಂದ ಬೆಳ್ಳಿ ಗೆರೆಗಳಂತೆ ಹೊಳೆಯುವ ನೀರ್ ಝುರಿಗಳು.. ಹತ್ತಿರಕ್ಕೆ ಬಂದು ಹಾದು ಹೋಗುವ ಮೇಘಗಳು.. ಅಲ್ಲಿ ಒಮ್ಮೆ ಬಂದವರನ್ನು ಮತ್ತೊಮ್ಮೆ ಮಗದೊಮ್ಮೆ ಬರುವಂತೆ ಪ್ರೇರೇಪಿಸುತ್ತಿತ್ತು..
ಹೋಟೆಲ್ ದುರಸ್ತಿ ಕಾರ್ಯ ಮೂರು ದಿನಗಳಿಂದ ಭರದಿಂದಲೇ ಸಾಗಿತ್ತು.. ಆನಂದ ನಿತ್ಯ ಸಂಜೆವರೆಗೂ ಅಲ್ಲಿದ್ದು ತನ್ನ ಜೀಪ್ ಏರಿ ಮಾಧವಪುರದ ಗೆಸ್ಟ್ಹೌಸ್ಗೆ ಬರುತ್ತಿದ್ದ. ಆದರೆ ಕೆಲಸಗಾರರು ಮಾತ್ರ ಅಲ್ಲಿಯೇ ತಂಗುತ್ತಿದ್ದರು.
ಅಂದು ಸಂಜೆ ಆನಂದ ಅಲ್ಲಿಯೇ ಕೆಲಸಗಾರರೊಂದಿಗೆ ಊಟ ಮಾಡಿ ಜೀಪ್ ಏರಿ ಹೊರಡುತ್ತಿದ್ದಂತೆ ಗಗನ ಒಮ್ಮೆ ಗುಡುಗಿ ರಭಸದ ಮಳೆ ಸುರಿಯಲಾರಂಭಿಸಿತು. ಸುರಿಯುವ ಮಳೆಯಲ್ಲಿಯೇ ಬಂದು ತನ್ನ ಗೆಸ್ಟ್ಹೌಸ್ ಸೇರಿಕೊಂಡ.. ತುಂಬಾ ಆಯಾಸಗೊಂಡಿದ್ದ.
ಬೆಡ್ಗೆ ಬೀಳುತ್ತಿದ್ದಂತೆ ಗಾಢ ನಿದ್ರೆ ಆವರಿಸಿತು..
ಬೆಳಗ್ಗೆ ಎದ್ದಾಗ ಸಮಯ ಒಂಭತ್ತು ಗಂಟೆ. ಎದ್ದು ಅವಸರದಿಂದ ರೆಡಿಯಾಗಿ ಮತ್ತೆ ಹೋಟೆಲಿನತ್ತ ಹೊರಟ. ರಾತ್ರಿ ಇಡೀ ಸುರಿದ ಮಳೆಯಿಂದ ಮಣ್ಣಿನ ರಸ್ತೆ ಪೂರ್ತಿ ಹದಗೆಟ್ಟುಹೋಗಿತ್ತು. ಹೋಟೆಲ್ ತಲುಪಲು ಹೆಚ್ಚು ಸಮಯ ಹಿಡಿಯಿತು.
ಆನಂದ ಹೋಟೆಲ್ ತಲುಪುತ್ತಿದ್ದಂತೆ ಯಾಕೋ ಭಯ ಆತನ ಎದೆಯನ್ನು ತುಂಬಲಾರಂಭಿಸಿತು.. ಹೊಟೇಲಿನ ಮುಖ್ಯದ್ವಾರ ತೆರೆದೇ ಇತ್ತು. ಅಲ್ಲಿದ್ದ ವಸ್ತುಗಳು ಅಸ್ತವ್ಯಸ್ತವಾಗಿದ್ದವು.. ಎಲ್ಲೆಲ್ಲೂ ರಕ್ತ ಚೆಲ್ಲಾಡಿತ್ತು.. ಆನಂದ ಗಾಬರಿಯಾದ. ಇಲ್ಲಿ ಏನೋ ನಡೆದಿದೆ.. ಒಂದೊಂದೇ ಹೆಜ್ಜೆಗಳನ್ನಿಡುತ್ತ ಮೊದಲನೇ ಕೊಠಡಿಯ ಮುಂದೆ ಬಂದು ನಿಂತ.. ಒಳಗಡೆ ಕೆಲಸಗಾರ ಕೃಷ್ಣ ರಕ್ತದ ಮಡುವಿನಲ್ಲಿ ವಿಕಾರವಾಗಿ ಕಣ್ಣು ತೆರೆದು ಶವವಾಗಿ ಬಿದ್ದಿದ್ದ.. ಆತನ ದೇಹದ ತುಂಬ ಕ್ರೂರ ಕಾಡು ಕರಡಿ ದಾಳಿ ಮಾಡಿದ ಬಲವಾದ ಉಗುರಿನ ಗುರುತುಗಳು ಆಳವಾಗಿ ಮೂಡಿದ್ದವು. ಆನಂದ ಭಯದಿಂದ ಗಡ ಗಡ ನಡುಗಿ ಸುತ್ತಲೂ ನೋಡಿದ..
‘ಮತ್ತೊಬ್ಬ ಕೆಲಸಗಾರ ಸಂತೋಷ ಎಲ್ಲಿ..!!? ’
ಎಂದು ಹುಚ್ಚನಂತೆ ಅರಚುತ್ತ ಹೊರಕ್ಕೆ ಓಡಿ ಬಂದ. ಹೊರಗಡೆ ಒಂದು ಮರದ ಬುಡದಲ್ಲಿ ಸಂತೋಷನ ಶವ ಬಿದ್ದಿತ್ತು.. ಆಗ ಆನಂದನಿಗೆ ಏನು ಮಾಡಬೇಕು ತಿಳಿಯಲಿಲ್ಲ.. ಕೂಡಲೇ ದೊಡ್ಡಪ್ಪ ರಾವಬಹದ್ದೂರ್ ಅವರಿಗೆ ಫೋನ್ ಮಾಡಿ ನಡುಗುವ ಧ್ವನಿಯಲ್ಲಿಯೇ ಎಲ್ಲವನ್ನೂ ವಿವರಿಸಿದ.
ರಾವಬಹದ್ದೂರ್ ತಡ ಮಾಡಲಿಲ್ಲ. ಹತ್ತೇ ನಿಮಿಷದಲ್ಲಿ ಪೊಲೀಸ್ ಜೀಪಿನೊಂದಿಗೆ ಅಲ್ಲಿಗೆ ಬಂದರು..
ಏರಿಯಾ ಇನ್ಸ್ಪೆಕ್ಟರ್ ಲಾಲ್ ಮತ್ತು ರಾವಬಹದ್ದೂರ್ ಅಲ್ಲಿಯ ಸ್ಥಿತಿಯನ್ನು ಕಂಡು ಗರಬಡಿದವರಂತೆ ನಿಂತುಬಿಟ್ಟರು..
ಇನ್ಸ್ಪೆಕ್ಟರ್ ಲಾಲ್ ತಮ್ಮ ಇನ್ವೆಸ್ಟಿಗೇಶನ್ ಶುರು ಮಾಡಿದರು.. ಎಲ್ಲವೂ ಅಯೋಮಯ.. ಸೂಕ್ಷ್ಮವಾಗಿ ಪರೀಕ್ಷಿಸಿದಾಗ ಸತ್ತ ಕೆಲಸಗಾರನ ದೇಹದ ಮೇಲೆ ಮೂಡಿದ ಉಗುರಿನ ಗುರುತುಗಳು ಗೋಡೆಯ ಮೇಲೂ ಮೂಡಿದ್ದವು.. ಕೆಲಸಗಾರನ ದೇಹದ ಮೇಲಿನ ಗಾಯಗಳನ್ನು ನೋಡಿದರೆ ಕ್ರೂರ ಕರಡಿ ಘೊರವಾಗಿ ಆಕ್ರಮಣ ಮಾಡಿದಂತೆ ತಿಳಿಯುತ್ತಿತ್ತು..
ಇನ್ಸ್ಪೆಕ್ಟರ್ ಲಾಲ್ ಮೇಲಕ್ಕೆದ್ದು ಹೋಟೆಲಿನ ಪ್ರತಿಯೊಂದು ರೂಮುಗಳನ್ನು ಸೂಕ್ಷ್ಮವಾಗಿ ಪರೀಕ್ಷಿಸಲು ಮುಂದಾದರು. ಅಲ್ಲೇ ನಿಂತಿದ್ದ ರಾವಬಹದ್ದೂರ್ ಅವರನ್ನು ಹಿಂಬಾಲಿಸಿದರು.
ಕೆಳಗಡೆ ಇಳಿದು ಮುಂದೆ ಹೋದರೆ ಅಲ್ಲಿ ಒಂದು ವಿಶಾಲವಾದ ಹಾಲ್. ಅಲ್ಲಿ ಹಳೆಯ ಧೂಳು ಮುಸುಕಿದ ಟೇಬಲ್ ಕುರ್ಚಿಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು..
ಹಾಗೆಯೇ ಮೆಟ್ಟಲು ಏರಿ ಮೇಲಕ್ಕೆ ಹೋದರೆ ಎದುರಿಗೆ ಗಾಜಿನ ಕಿಟಕಿಗಳನ್ನು ಹೊಂದಿದ ಒಂದು ವಿಶಾಲವಾದ ರಿಸೆಪ್ಷನ್ ಹಾಲ್..!
ಮೇಲಿಂದ ಆನಂದ ಕೆಳಗಡೆ ಮೊಬೈಲ್ನಲ್ಲಿ ಮಾತಾಡುತ್ತ ನಿಂತಿದ್ದು ಸ್ಪಷ್ಟವಾಗಿ ಕಾಣುತ್ತಿತ್ತು.
ಅಲ್ಲಿಂದ ಮುಂದೆ ಡಬಲ್ ಮತ್ತು ಸಿಂಗಲ್ ರೂಮುಗಳಿದ್ದವು.. ಇನ್ಸ್ಪೆಕ್ಟರ್ ಲಾಲ್ ಒಂದೊಂದೇ ರೂಮುಗಳನ್ನು ಇಣುಕುತ್ತ ನೋಡುತ್ತ ನಡೆದರು. ಎಲ್ಲ ರೂಮುಗಳು ಧೂಳುಮಯವಾಗಿದ್ದವು..
ಸಂಜೆ ಕಳೆಯುತ್ತ ಬಂತು.. ಇನ್ಸ್ಪೆಕ್ಟರ್ ಇನ್ನು ಹೊರಡಲು ಸಿದ್ಧರಾದರು.. ತಮ್ಮ ಪಿಸಿಗೆ ಸನ್ನೆ ಮಾಡಿ ಹೊರಗಡೆ ಮೊಬೈಲ್ನಲ್ಲಿ ಮಾತಾಡುತ್ತ ನಿಂತಿದ್ದ ಆನಂದನನ್ನು ಕರೆಯಲು ಹೇಳಿದರು..
ಆನಂದ ಭಯದಿಂದ ಈಗ ಪೂರ್ತಿ ಅಪ್ಸೆಟ್ ಆಗಿದ್ದ.. ಮುಂದೆ ಏನು ಮಾಡಬೇಕು ಎಂದು ತಿಳಿಯದೇ ಹುಚ್ಚನಂತೆ ಎಲ್ಲರ ಮೇಲೆ ಅರಚಾಡುತ್ತಿದ್ದ.. ಆತನ ಹೋಟೆಲ್ ಉದ್ದಿಮೆಯ ಆಸೆ ನುಚ್ಚುನೂರಾಗಿ ಹೋಗಿತ್ತು.
ಅಷ್ಟರಲ್ಲಿ ಆನಂದನನ್ನು ಕರೆಯಲು ಹೋಗಿದ್ದ ಪಿಸಿ ಗಾಬರಿಯಿಂದ ಅರಚುತ್ತ ಓಡಿಬಂದ.
‘ಸರ್, ಆನಂದ ಎಲ್ಲೂ ಕಾಣುತ್ತಿಲ್ಲ..!!’
ಎಲ್ಲರೂ ಹೊರಕ್ಕೆ ಓಡಿ ಬಂದು ಆತಂಕದಿಂದ ಆನಂದನನ್ನು ಹುಡುಕಲಾರಂಭಿಸಿದರು.. ಆನಂದ ಮಾತ್ರ ಕಾಣಲಿಲ್ಲ..
ಆದರೆ ಒಂದು ಮರದ ಕೆಳಗೆ ಆನಂದ ಮೆಟ್ಟಿದ್ದ ಒಂದು ಬೂಟು ಬಿದ್ದಿತ್ತು..
‘ಹೌದು ಇದು ಆನಂದನ ಬೂಟ್..!! ಮತ್ತೆ ಆನಂದ ಎಲ್ಲಿಗೆ ಹೋದ.!?’
ಮುಂದೆ ಅರಸುತ್ತ ಹೋದಂತೆ ಆನಂದನ ಮೊಬೈಲ್ ದೊರಕಿತು.. ಆದರೆ ಆನಂದ ಸಿಗಲಿಲ್ಲ.. ಹುಡುಕಿ ಹುಡುಕಿ ಸುಸ್ತಾಗಿ ಹೋದರು. ಕತ್ತಲಾಗುತ್ತ ಬಂತು. ಎಲ್ಲರೂ ಊರಿನತ್ತ ನಡೆದರು..
ಬೆಳಗ್ಗೆ ಎದ್ದು ಮತ್ತೆ ಆನಂದನಿಗಾಗಿ ಹುಡುಕಾಟ ಶುರುವಾಯಿತು. ಸಂಜೆವರೆಗೂ ಹುಡುಕಿ ಸುಸ್ತಾಗಿ ಮನೆಗೆ ಹೋದರು.. ಆದರೆ ಆನಂದ ಸಿಗಲಿಲ್ಲ.
ಆನಂದ ಎಲ್ಲಿಗೆ ಹೋದ.!? ಅನ್ನುವದೇ ಒಂದು ಯಕ್ಷ ಪ್ರಶ್ನೆಯಾಗಿ ಉಳಿದಿತ್ತು.
ಈಗ ಆನಂದನ ಹೆಂಡತಿ ಮಾಲತಿ ಒಂದು ತಿಂಗಳ ನಂತರ ಅಮೆರಿಕಾದಿಂದ ಗಂಡನನ್ನು ಅರಸುತ್ತ ಮಾಧವಪುರಕ್ಕೆ ಬಂದಿದ್ದಳು.
ಮಾಲತಿ ಇದೇ ಮೊದಲ ಬಾರಿ ಮಾಧವಪುರಕ್ಕೆ ಬಂದಿದ್ದು. ಆನಂದನಂತೂ ತಂದೆ ಸತ್ತ ನಂತರ ಮಾಧವಪುರದ ಸಂಬಂಧವನ್ನೇ ಕಡಿಮೆ ಮಾಡಿಕೊಂಡಿದ್ದ. ಹಾಗೆ ಯಾರಿಗೂ ತಿಳಿಸದೇ ಅಮೆರಿಕಾದಲ್ಲಿ ಮಾಲತಿಯನ್ನು ಮದುವೆ ಆಗಿದ್ದ. ಮದುವೆ ನಂತರ ಆನಂದ ಯಾವತ್ತೂ ಮಾಧವಪುರಕ್ಕೆ ಬರಲಿಲ್ಲ.. ಹಾಗೆ ರಾವಬಹದ್ದೂರ್ ಮಾಲತಿಯನ್ನು ನೋಡುವುದು ಇದೇ ಮೊದಲ ಬಾರಿ..
ಜೀಪ್ ರಾವಬಹದ್ದೂರ್ ಅವರ ಗೆಸ್ಟ್ ಹೌಸ್ ಮುಂದೆ ಬಂದು ನಿಂತಿತು..
‘ನೋಡಮ್ಮಾ ಮಾಲತಿ, ಇದು ನಮ್ಮದೇ ಗೆಸ್ಟ್ ಹೌಸ್. ನೀನು ಯಾವುದೇ ಸಂಕೋಚಪಡದೇ ನಿಶ್ಚಿಂತೆಯಿಂದ ಇರಬಹುದು.. ಹಾಗೇ ಈತ ರಾಮಣ್ಣ., ಕೆಲಸದಾಳು. ನಿನಗೆ ರಾತ್ರಿ ಊಟ ತಂದು ಕೊಡುತ್ತಾನೆ. ಈತ ಇಲ್ಲೇ ನಿನ್ನ ಸಹಾಯಕ್ಕೆ ಇರುತ್ತಾನೆ. ಹಾಗೇನಾದರೂ ತೊಂದರೆಯಾದರೆ ನನಗೆ ಫೋನ್ ಮಾಡಲು ಸಂಕೋಚಪಡಬೇಡ...’
ರಾವಬಹದ್ದೂರ್ ಹೊರಡಲು ಸಿದ್ಧರಾದರು..
‘ದೊಡ್ಡಪ್ಪ, ಮತ್ತೆ ನಾಳೆ ಎಸ್ಪಿ ಅವರನ್ನು ಭೇಟಿ ಆಗಬೇಕು..’
ಮಾಲತಿ ಅನುಮಾನಿಸುತ್ತ ಹೇಳಿದಳು.
‘ಆಯ್ತು, ನಾಳೆ ಬೆಳಗ್ಗೆ ಹತ್ತು ಗಂಟೆಗೆ ರೆಡಿಯಾಗಿರು, ನಾನು ಬರುತ್ತೇನೆ, ಹೋಗೋಣ..’
ರಾವಬಹದ್ದೂರ್ ಅಲ್ಲಿಂದ ಹೊರಟರು.
***
ಮರುದಿನ ರಾವಬಹದ್ದೂರ್ ಸರಿಯಾಗಿ ಹತ್ತು ಗಂಟೆಗೆ ಬಂದರು. ಮಾಲತಿ ರಾವಬಹದ್ದೂರ್ ಅವರ ಜೀಪ್ ಏರಿ ಎಸ್ಪಿ ಕಚೇರಿಯ ಕಡೆಗೆ ಸಾಗಿದರು.
ಯಾವುದೋ ಫೈಲಿನಲ್ಲಿ ಮುಳುಗಿದ್ದ ಎಸ್ಪಿ ಸಾಹೇಬರು ರಾವಬಹದ್ದೂರ್ ಚೇಂಬರ್ನಲ್ಲಿ ಅಡಿ ಇಡುತ್ತಿದ್ದಂತೆ ಆದರದಿಂದ ಬರಮಾಡಿಕೊಂಡರು.
‘ಎಸ್ಪಿ ಸಾಹೇಬರೇ, ಈಕೆ ಮಾಲತಿ ಅಂತ. ನಿನ್ನೆ ತಾನೆ ಅಮೆರಿಕಾದಿಂದ ಬಂದಿದ್ದಾಳೆ.. ಕಾಣೆಯಾದ ಆನಂದನ ಹೆಂಡತಿ..’
ಮಾಲತಿ ಎಸ್ಪಿ ಸಾಹೇಬರಿಗೆ ಕೈಮುಗಿದು ಕುರ್ಚಿಯಲ್ಲಿ ಕುಳಿತಳು.
‘ಸಾರಿ ಮೇಡಂ.. ಆನಂದನನ್ನು ಹುಡುಕುವ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದೇವೆ...’
‘ಸರ್, ನನ್ನ ಗಂಡ ಕಾಣೆಯಾಗಿ ಇಂದಿಗೆ ಒಂದು ತಿಂಗಳು ಕಳೆಯಿತು.. ಆದರೂ ಪತ್ತೆ ಆಗಲಿಲ್ಲ. ನನಗೆ ತುಂಬಾ ಭಯವಾಗುತ್ತಿದೆ. ಆನಂದ ಜೀವಂತವಾಗಿ ಬಂದರೆ ಸಾಕು. ನಮಗೆ ಯಾವ ಹೋಟೆಲ್ ಬಿಜಿನೆಸ್ಸೂ ಬೇಡ, ನಾವು ಅಮೆರಿಕಾಕ್ಕೆ ವಾಪಸ್ ಹೋಗುತ್ತೇವೆ..’
‘ಮೇಡಂ, ಅಷ್ಟೊಂದು ಅಪ್ಸೆಟ್ ಆಗಬೇಡಿ. ಆನಂದ ಎಲ್ಲೇ ಇರಲಿ, ನಾವು ಅವರನ್ನು ಹುಡುಕಿ ತರುತ್ತೇವೆ.. ಡೋಂಟ್ ವರಿ, ಹಾಗೇ ನಮ್ಮ ಮಾಧವಪುರದಲ್ಲಿ ಡ್ರಗ್ಸ್ ದಂಧೆ ಅವ್ಯಾಹತವಾಗಿ ನಡೆದಿದೆಯಂತೆ.. ಮಾತ್ರವಲ್ಲ ಅದರ ಲಿಂಕ್ ಹೊರದೇಶಕ್ಕೆ ಹರಡಿದೆ ಅಂತ ನಮಗೆ ಮಾಹಿತಿ ಬಂದಿದೆ. ನಾವು ಆನಂದ ಕಾಣೆಯಾದ ಕೇಸ್ ಈ ಡ್ರಗ್ ಮಾಫಿಯಾಗೆ ಜೋಡಿಸಿ ನೋಡುತ್ತಿದ್ದೇವೆ...’
ಎಸ್ಪಿ ಸಾಹೇಬರು ಕಣ್ಣುಗಳನ್ನು ತೀಕ್ಷ ್ಣಮಾಡಿ ಹೇಳಿದರು.
‘ಏನು ಈ ಮಾಧವಪುರದಲ್ಲಿ ಡ್ರಗ್ಸ್ ಧಂದೆಯೇ..!?’
ಮಾಲತಿ ಆಶ್ಚರ್ಯ ವ್ಯಕ್ತಪಡಿಸುತ್ತ ಕೇಳಿದಳು.
‘ಅಷ್ಟೇ ಅಲ್ಲ ಮೇಡಂ.., ಒಬ್ಬ ಮಹಿಳಾ ಡ್ರಗ್ ಪೆಡ್ಲರ್ ವಿದೇಶದಿಂದ ನಮ್ಮ ಮಾಧವಪುರಕ್ಕೆ ಬರುತ್ತಿದ್ದಾಳೆ ಅಂತ ಮಾಹಿತಿ ಬಂದಿದೆ...’
ಎಸ್ಪಿ ಸಾಹೇಬರು ಆತಂಕದಿಂದ ನುಡಿದರು.
‘ಸರ್ ನನ್ನ ಪರಿಸ್ಥಿತಿ ನೋಡಿ., ನಾನು ಈಗ ಆರು ತಿಂಗಳ ಬಸುರಿ., ಈ ಸಮಯದಲ್ಲಿ ಗಂಡ ನನ್ನ ಜೊತೆಗಿಲ್ಲ.. ಅವರಿಗಾಗಿ ಅಮೆರಿಕಾದಿಂದ ಮೂರು ದಿನಗಳ ಸತತ ಪ್ರಯಾಣ ಮಾಡಿ ಕಷ್ಟಪಟ್ಟು ಬಂದಿದ್ದೇನೆ.. ತುಂಬಾ ಭಯವಾಗುತ್ತೆ ಸರ್..’
ಮಾಲತಿ ಒತ್ತಿಬರುತ್ತಿದ್ದ ಕಣ್ಣೀರನ್ನು ತನ್ನ ಕರವಸ್ತ್ರದಿಂದ ತಡೆಯುತ್ತ ನುಡಿದಳು.
‘ಮೇಡಂ ಅಳಬೇಡಿ.., ನಿಮ್ಮ ಗಂಡನನ್ನು ಹುಡುಕುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ..’
ರಾವಬಹದ್ದೂರ್ ಮತ್ತು ಮಾಲತಿ ಎಸ್ಪಿ ಅವರ ಚೇಂಬರಿನಿಂದ ಎದ್ದು ಹೊರಕ್ಕೆ ಬಂದರು.
ದಿನಗಳು ಉರುಳಿದವು, ಆನಂದ ಪತ್ತೆ ಆಗಲಿಲ್ಲ.. ಆತಂಕ ಹೆಚ್ಚಾಗುತ್ತ ಹೋಯಿತು..
ಆದರೆ ಅಮೆರಿಕಾದಿಂದ ಬಂದ ಮಾಲತಿಯ ವ್ಯವಹಾರಗಳು ದಿನದಿಂದ ದಿನಕ್ಕೆ ಬದಲಾಗಲಾರಂಭಿಸಿದವು.
ಆರು ತಿಂಗಳ ಬಸುರಿಯಾದರೂ ಮನೆ ಮುಂದೆ ಇದ್ದ ಆನಂದನ ಜೀಪ್ ಏರಿ ಎಲ್ಲಿಗೋ ಹೋಗುತ್ತಿದ್ದಳು.. ರಾತ್ರಿ ಲೇಟಾಗಿ ಮನೆಗೆ ಬರುತ್ತಿದ್ದಳು..
ರಾವಬಹದ್ದೂರ್ ಅವರಿಗೆ ಮಾಲತಿಯ ಮೇಲೆ ಅನುಮಾನ ಶುರುವಾಯಿತು.. ಆಗ ಕೆಲಸದಾಳು ರಾಮಣ್ಣನಿಗೆ ಮಾಲತಿಯ ಮೇಲೆ ಒಂದು ಕಣ್ಣು ಇಡಲು ಹೇಳಿದರು.
‘ಧಣಿ, ಆಕೆ ಆಗಾಗ ಸಿಗರೇಟ್ ಸೇದುತ್ತಾಳೆ. ರಾತ್ರಿ ಹೊತ್ತು ಹೇಳದೇ ಕೇಳದೇ ಒಬ್ಬಳೇ ಎಲ್ಲಿಗೋ ಹೋಗುತ್ತಾಳೆ. ಆಕೆಯನ್ನು ಭೇಟಿ ಮಾಡಲು ಕೆಲ ವಿದೇಶಿ ವ್ಯಕ್ತಿಗಳೂ ಬರುತ್ತಾರೆ...’
ಎಂದು ಕೆಲಸದಾಳು ರಾಮಣ್ಣ ಹೇಳಿದಾಗ ಮಾಲತಿಯ ಮೇಲೆ ರಾವಬಹದ್ದೂರ್ ಅವರ ಸಂಶಯ ದಟ್ಟವಾಯಿತು.
ಅಂದು ರಾತ್ರಿ ಮಾಲತಿ ಒಬ್ಬ ಅಪರಿಚಿತ ವಿದೇಶಿ ವ್ಯಕ್ತಿಯ ಜೊತೆ ಗೆಸ್ಟ್ ಹೌಸ್ನಿಂದ ಹೊರ ಬಂದು ಜೀಪ್ ಏರಿ ಹೊರಡುತ್ತಿದ್ದಂತೆ ರಾವಬಹದ್ದೂರ್ ತಮ್ಮ ಬಳಿ ಇರುವ ಡುಪ್ಲಿಕೇಟ್ ಬೀಗದ ಕೈಯಿಂದ ಆಕೆಯ ಗೆಸ್ಟ್ ಹೌಸ್ನ ಬಾಗಿಲು ತೆರೆದರು. ರಾಮಣ್ಣನಿಗೆ ಬಾಗಿಲ ಬಳಿ ಕಾವಲಿರಲು ಹೇಳಿ ತಾವು ಒಳಕ್ಕೆ ಹೊಕ್ಕರು..
ಒಳಗಡೆ ಎಲ್ಲ ವಸ್ತುಗಳು ಅಸ್ತವ್ಯಸ್ತವಾಗಿ ಹರಡಿದ್ದವು.. ಅರ್ಧಂಬರ್ಧ ಸೇದಿ ಎಸೆದ ವಿದೇಶಿ ಸಿಗರೇಟ್ ತುಂಡುಗಳ ರಾಶಿ! ನಶೆ ಬಾಟಲ್ಗಳು... ರಾವಬಹದ್ದೂರ್ ಎಲ್ಲವನ್ನೂ ನೋಡಿ ಗಾಬರಿಯಾದರು..
ಬೆಡ್ ರೂಮ್ ಕಡೆಗೆ ಹೋದರು, ಅಲ್ಲಿ ಮಾಲತಿ ತಂದ ಎರಡು ಬ್ಯಾಗುಗಳು ಬಾಯಿ ತೆರೆದು ಬಿದ್ದಿದ್ದವು. ಬ್ಯಾಗ್ ತುಂಬ ಸಣ್ಣ ಸಣ್ಣ ಪೌಚ್ಗಳು.. ರಾವಬಹದ್ದೂರ್ ವಾಸನೆ ನೋಡಿದರು.. ಖಾತ್ರಿ ಆಯಿತು ಅವು ನಶೆ ಏರಿಸುವ ಪೌಚ್ಗಳು ಅಂತ.. ಮತ್ತೆ ಬ್ಯಾಗ್ಗಳನ್ನು ತಡಕಾಡಿದರು.. ಎರಡು ರಿವ್ವಾಲರ್ಗಳು ಕಂಡವು..!!
ಅಂದರೆ ನಮ್ಮ ಆನಂದನ ಹೆಂಡತಿ ಒಬ್ಬ ಡ್ರಗ್ ಪೆಡ್ಲರ್..!! ಅಂದರೆ ಪೊಲೀಸರು ಹುಡುಕುತ್ತಿರುವ ವಿದೇಶದಿಂದ ಬಂದ ಡ್ರಗ್ ಪೆಡ್ಲರ್ ಈಕೆನಾ..!!?
ರಾವಬಹದ್ದೂರ್ ಅಡಿಯಿಂದ ಮುಡಿಯವರೆಗೆ ಬೆವೆತುಹೋದರು..
ಸುರಿಯುತ್ತಿರುವ ಬೆವರನ್ನು ಕರವಸ್ತ್ರದಿಂದ ತೀಡುತ್ತ ಮೇಲಕ್ಕೇಳುತ್ತಿದ್ದಂತೆ ರಾವಬಹದ್ದೂರ್ ಅವರ ಕತ್ತಿಗೆ ಯಾರೋ ರಿವಾಲ್ವರ್ನಿಂದ ತಿವಿದಂತೆ ಭಾಸವಾಯಿತು.. ತಿರುಗಿ ನೋಡಿದರು. ಮಾಲತಿ ವಿಚಿತ್ರವಾಗಿ ನಗುತ್ತ ಬಾಯಲ್ಲಿದ್ದ ಸಿಗರೇಟ್ ಹೊಗೆಯನ್ನು ರಾವಬಹದ್ದೂರ್ ಮುಖಕ್ಕೆ ಗಾಢವಾಗಿ ಬಿಡುತ್ತ,
‘ಯಾಕೆ ದೊಡ್ಡಪ್ಪ, ಭಯವಾಯಿತಾ..!!? ನಾನು ನಿಮ್ಮ ಸೊಸೆ.., ಆನಂದನ ಹೆಂಡತಿ ಮಾಲತಿ..! ಪೊಲೀಸರು ಹುಡುಕುತ್ತಿರುವ ಆ ವಿದೇಶಿ ನಶಾರಾಣಿ ನಾನೇ..!! ಮಾಧವಪುರಲ್ಲಿ ನಡೆಯುವ ಡ್ರಗ್ಸ್ ವ್ಯಾಪಾರಿಗಳ ಜೊತೆ ಸಂಪರ್ಕ ಬೆಳೆಸಲು ಬಂದವಳು..’
ಅಷ್ಟರಲ್ಲಿ ರಾವಬಹದ್ದೂರ್ ಮಾಲತಿಯ ಬ್ಯಾಗ್ನಲ್ಲಿರುವ ರಿವಾಲ್ವರ್ ತೆಗೆದು ಮಾಲತಿಯ ಮುಂದೆ ಹಿಡಿದರು..
‘ದೊಡ್ಡಪ್ಪ ಅದು ನನ್ನ ರಿವಾಲ್ವರ್.. ಅದರಲ್ಲಿ ಗುಂಡುಗಳಿಲ್ಲ.. ವ್ಯರ್ಥ ಪ್ರಯತ್ನ ಮಾಡಬೇಡಿ...’
ನಸುನಗುತ್ತ ರಾವಬಹದ್ದೂರ್ ಕೈಯಲ್ಲಿದ್ದ ರಿವಾಲ್ವರ್ಅನ್ನು ಕಿತ್ತುಕೊಂಡಳು..
‘ಥೂ ನೀನು ಹೆಣ್ಣೇ ಅಲ್ಲ. ರಾಕ್ಷಸಿ., ಮಾಲತಿ.. ದಯವಿಟ್ಟು ನನ್ನ ಮಾತು ಕೇಳು. ಈ ನಶೆ ದಂಧೆಯನ್ನು ಬಿಟ್ಟುಬಿಡು.. ಈ ನಶೆಯ ಬಲೆಯಲ್ಲಿ ಸಿಕ್ಕು ಎಷ್ಟೋ ಯುವಕ ಯುವತಿಯರು ತಮ್ಮ ಬದುಕನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ., ಬೇಡ., ದೇಶದ ಯುವಕರು ಹಾಳಾದರೆ ದೇಶ ಹಾಳಾದಂತೆ.. ದಯವಿಟ್ಟು ದೇಶದ್ರೋಹದ ಕೆಲಸ ಮಾಡಬೇಡ..’
ರಾವಬಹದ್ದೂರ್ ಕಳಕಳಿಯಿಂದ ಕೇಳಿಕೊಂಡರು.
‘ದೊಡ್ಡಪ್ಪ., ದೊಡ್ಡಪ್ಪ., ನಶಾದಂಧೆೆಯನ್ನು ನಾನು ಬಿಡಬಹುದು, ಆದರೆ ಅದು ನನ್ನ ಬಿಡುವುದಿಲ್ಲ.. ಈ ನಶಾ ಸಾಮ್ರಾಜ್ಯದಲ್ಲಿ ನಾನು ಮುಳುಗಿಹೋಗಿದ್ದೇನೆ. ಈಗ ಪೊಲೀಸರು ನನ್ನನ್ನು ಹುಡುಕುತ್ತಲೇ ಇದ್ದಾರೆ...’
ನಶಾರಾಣಿ ಮಾಲತಿ ಸಿಗರೇಟ್ ಹಚ್ಚುತ್ತ ಹೇಳಿದಳು.
‘ನೋಡು ಮಾಲತಿ, ಈಗ ನೀನು ಪೊಲೀಸರಿಗೆ ಶರಣಾಗು. ನನಗೆ ದೊಡ್ಡ ದೊಡ್ಡ ಅಧಿಕಾರಿಗಳ ಪರಿಚಯವಿದೆ.. ನಿನ್ನ ಶಿಕ್ಷೆಯನ್ನು ಕಡಿಮೆ ಮಾಡಲು ಪ್ರಯತ್ನ ಮಾಡುತ್ತೇನೆ..’
‘ದೊಡ್ಡಪ್ಪ, ಈ ಮಾಧವಪುರದಲ್ಲಿ ಅಡಗಿ ಕುಳಿತಿರುವ ಡ್ರಗ್ಸ್ ವ್ಯಾಪಾರಿಗಳ ಪರಿಚಯ ನನಗೆ ನೀನು ಮಾಡಿಸಬೇಕು. ದೇಶ-ವಿದೇಶದ ಜಾಲಕ್ಕೆ ಮಾಧವಪುರದ ಡ್ರಗ್ ದಂಧೆ ಲಿಂಕ್ ಆಗಬೇಕು. ಇದು ನಮ್ಮ ಗುರಿ..’
ಮಾಲತಿ ರಿವಾಲ್ವರ್ಅನ್ನು ರಾವಬಹದ್ದೂರ್ ಹಣೆಗೆ ಇಟ್ಟು ಕೇಳಿದಳು..
ರಾವಬಹದ್ದೂರ್ ಬೆಚ್ಚಿ ಬೆವರಿದರು..
‘ಮಾಲತಿ ದಯವಿಟ್ಟು ಕ್ಷಮಿಸು, ನಾನು ಒಬ್ಬ ಸಾಮಾನ್ಯ ಜನಸೇವಕ ಮಾತ್ರ, ನನಗೆ ಇದೆಲ್ಲ ಗೊತ್ತಿಲ್ಲ..’
‘ನನಗೆ ಗೊತ್ತು ದೊಡ್ಡಪ್ಪ., ನಿನಗೆ ಎಲ್ಲ ಗೊತ್ತು ಅಂತ.. ಈಗ ಹೆಚ್ಚಿಗೆ ಮಾತು ಬೇಡ, ನಿಮ್ಮೂರಿನ ಡ್ರಗ್ ಪೆಡ್ಲರ್ಗಳ ಪರಿಚಯ ನನಗೆ ಮಾಡಿಸು., ಇಲ್ಲವೇ ಸಾಯಲು ಸಿದ್ಧನಾಗು, ಈ ವಿಷಯ ಪೊಲೀಸರಿಗೆ ತಲುಪುವ ಮೊದಲೇ ನಾನು ಡೀಲ್ ಮುಗಿಸಿ ವಿದೇಶಕ್ಕೆ ಹಾರಬೇಕು., ದೊಡ್ಡಪ್ಪ, ಈ ಡ್ರಗ್ಸ್ ವ್ಯಾಪಾರದಲ್ಲಿ ಬರುವ ಹಣದಿಂದ ನೀನು ಈ ಮಾಧವಪುರವನ್ನೇ ಕೊಳ್ಳಬಹುದು ಗೊತ್ತಾ..!!’
ಮಾಲತಿ ತನ್ನ ಕೈಯಲ್ಲಿದ್ದ ರಿವಾಲ್ವರ್ನಿಂದ ರಾವಬಹದ್ದೂರ್ ಅವರನ್ನು ತಿವಿಯುತ್ತ ನುಡಿದಳು..
ಅಷ್ಟರಲ್ಲಿ ಯಾರೋ ಹಿಂದಿನಿಂದ ಮಾಲತಿಯ ತಲೆಗೆ ಬಲವಾಗಿ ಹೊಡೆದರು.
ಮಾಲತಿ ‘ಅಯ್ಯೋ’ ಅಂತ ನರಳುತ್ತ ನೆಲಕ್ಕೆ ಉರುಳಿದಳು.
ಮಾಲತಿ ಕಣ್ಣು ಬಿಟ್ಟಾಗ ಯಾವುದೋ ಕತ್ತಲೆಯ ಕೊಠಡಿಯಲ್ಲಿದ್ದಳು.
ತಲೆ ಭಾರವಾಗಿತ್ತು.. ಆಕೆಯ ಕೈಯನ್ನು ಹಿಂದಿನಿಂದ ಬಿಗಿಯಾಗಿ ಕಟ್ಟಲಾಗಿತ್ತು.
ಎಲ್ಲೆಲ್ಲೂ ಗಾಢ ಕತ್ತಲು. ಪಕ್ಕದಲ್ಲಿ ಯಾರೋ ನೋವಿನಿಂದ ನರಳುವ ಆರ್ತ ಧ್ವನಿ ಕೇಳುತ್ತಿತ್ತು.
ಸಣ್ಣಗೆ ಬೂಟಿನ ಸದ್ದು ಕೇಳಲಾರಂಭಿಸಿತು.. ಆ ಸದ್ದು ಕ್ಷಣದಿಂದ ಕ್ಷಣಕ್ಕೆ ದಟ್ಟವಾಗುತ್ತ ಬಂದು ಯಾವುದೋ ಅಸ್ಪಷ್ಟ ಆಕಾರ ಮಾಲತಿಯ ಮುಂದೆ ಬಂದು ನಿಂತಿತು..
‘ನೀನು ಕೇವಲ ಅಮಲು ಪುಡಿ ಪೌಚ್ ಮಾರುವ ನಶಾರಾಣಿ. ಆದರೆ ನಾನು ಡ್ರಗ್ಸ್ ವ್ಯಾಪಾರದ ಜೊತೆ ವಿದೇಶಕ್ಕೆ ಯುವತಿಯರನ್ನು ಮಾರಾಟ ಮಾಡುವ ಡೆಡ್ಲಿ ಕ್ರಿಮಿನಲ್..!! ಲಕ್ಷಾಂತರ ಅಲ್ಲ ಕೋಟ್ಯಂತರ ದುಡ್ಡು ಮಾಡಿದ್ದೇನೆ ಕಣಮ್ಮಾ..!! ನನ್ನ ಲಿಂಕ್ ದೂರ ದೂರ ದೇಶದ ಜೊತೆ ಇದೆ.. ಈಗಾಗಲೇ ನನ್ನ ಬಂಧನದಲ್ಲಿರುವ ನಾಲ್ಕು ಜನ ಹುಡುಗಿಯರು ವಿದೇಶಕ್ಕೆ ಹಾರಲು ಸಿದ್ಧರಾಗಿದ್ದಾರೆ., ಆದರೆ ಐದು ಜನ ಹುಡುಗಿಯರ ಬೇಡಿಕೆ ಇತ್ತು. ಈಗ ನೀನು ಸಿಕ್ಕೆ., ನಿನ್ನನ್ನೂ ಸೇರಿಸಿ ವಿದೇಶಕ್ಕೆ ಮಾರಾಟ ಮಾಡುತ್ತೇನೆ..’
ಒಮ್ಮೆಲೆ ಝುಗ್ಗೆಂದು ಬೆಳಕಾಯಿತು. ಎದುರಿಗೆ ಕೈಯಲ್ಲಿ ಸಿರಿಂಜ್ ಹಿಡಿದ ಒಬ್ಬ ವ್ಯಕ್ತಿ ನಿಂತಿದ್ದ.
‘ದೊಡ್ಡಪ್ಪ ನೀವಾ..!?’
ಮಾಲತಿ ಹುಚ್ಚಿಯಂತೆ ಅರಚಿದಳು.
‘ಹೌದು ಮಗಳೇ ನಾನೇ.. ಈ ಊರ ಹೊರಗಡೆ ಇರುವ ಆನಂದನ ಈ ಪಾಳು ಹೋಟೆಲ್ ನನ್ನ ರಹಸ್ಯ ತಾಣ.. ಇಲ್ಲಿಂದಲೇ ನನ್ನ ಡ್ರಗ್ ಮತ್ತು ಯುವತಿಯರ ವ್ಯಾಪಾರ ನಡೆಯುತ್ತದೆ.. ಈ ಹೋಟೆಲ್ನ ಹತ್ತಿರ ಬಂದವರನ್ನು ನಾನು ಕೈಗೆ ಕಾಡು ಕರಡಿಯ ಉಗುರುಗಳನ್ನು ಧರಿಸಿ ಕೊಂದು ಭಯ ಹುಟ್ಟಿಸುತ್ತಿದ್ದೆ.. ಆದರೆ ಅಮೆರಿಕಾದಿಂದ ಬಂದ ಆನಂದ ಈ ಪಾಳು ಹೊಟೇಲನ್ನು ನವೀಕರಿಸಿ ಒಂದು ರೆಸಾರ್ಟ್ ಮಾಡುವುದಾಗಿ ಬಂದ. ನನ್ನ ಈ ವ್ಯಾಪಾರಕ್ಕೆ ಅಡ್ಡಿಯಾಗಿ ಬಂದ ಆತನ ಕೆಲಸಗಾರರನ್ನು ಮೊದಲು ನಾನು ಮುಗಿಸಿದೆ. ಎರಡು ಕೊಲೆಗಳನ್ನು ನೋಡಿಯೂ ಆನಂದ ತನ್ನ ನಿರ್ಧಾರ ಬದಲಿಸಲಿಲ್ಲ.. ಆದರೆ ಆತ ನನ್ನ ತಮ್ಮನ ಮಗ.. ಯಾಕೋ ಕೊಲ್ಲಲು ಮನಸ್ಸಾಗಲಿಲ್ಲ.. ಆತನನ್ನು ಅಪಹರಿಸಿ ನಿನ್ನ ಪಕ್ಕದಲ್ಲಿಯೇ ಕೂಡಿಹಾಕಿದ್ದೇನೆ.. ಹೂಂ ಈ ಒಂದು ಇಂಜೆಕ್ಷನ್ ಚುಚ್ಚಿದರೆ ನಿನಗೆ ಗಾಢ ನಿದ್ರೆ ಬರುತ್ತೆ, ಹಾಗೇ ನೀನು ಕಣ್ಣು ಬಿಟ್ಟಾಗ ವಿದೇಶಕ್ಕೆ ಡೀಲ್ ಆಗಿರುತ್ತಿಯಾ..! ಹೂಂ.. ಗುಡ್ ಬೈ ಮಗಳೇ..’
ಆಗ ಮಾಲತಿ ರೋಷದಿಂದ ಮೇಲಕ್ಕೆದ್ದು ತನ್ನ ಆರು ತಿಂಗಳ ಬಸುರಿನ ಹೊಟ್ಟೆಯ ಚೀಲದಲ್ಲಿ ಅಡಗಿಸಿ ಇಟ್ಟಿದ್ದ ರಿವಾಲ್ವರ್ ಹೊರಕ್ಕೆ ತೆಗೆದು,
‘ಮಿಸ್ಟರ್ ರಾವಬಹದ್ದೂರ್ ಹ್ಯಾಂಡ್ಸ್ ಅಪ್..!! ನೀವು ತಿಳಿದಂತೆ ನಾನು ಆರು ತಿಂಗಳ ಬಸುರಿ ಅಲ್ಲ.., ವಿದೇಶದಿಂದ ಹಾರಿ ಬಂದ ಆನಂದನ ಹೆಂಡತಿಯೂ ಅಲ್ಲ. ನಿನ್ನ ಅರೆಸ್ಟ್ ಮಾಡಲು ಬಂದ ಸಿಐಡಿ ಇನ್ಸ್ಪೆಕ್ಟರ್ ಶ್ವೇತಾ..!! ಇನ್ನು ನಿನ್ನ ಆಟ ಮುಗಿಯಿತು ಕಣೋ..’
ಸಿಐಡಿ ಇನ್ಸ್ಪೆಕ್ಟರ್ ಶ್ವೇತಾ ಮುಂದೆ ಬಂದಳು.
ಅಷ್ಟರಲ್ಲಿ ಹಿಂದಿನಿಂದ ಯಾರೋ ಶ್ವೇತಾಳ ಮೇಲೆ ಬಲವಾಗಿ ದಾಳಿ ಮಾಡಿದರು.
ಶ್ವೇತಾ ಹಿಡಿದಿದ್ದ ರಿವಾಲ್ವರ್ ಕೈಯಿಂದ ಜಾರಿಹೋಯಿತು.
‘ನನ್ನ ಹಿಡಿಯಲು ಬಂದ ಸಿಐಡಿ ಇನ್ಸ್ಪೆಕ್ಟರ್ ಶ್ವೇತಾ.. ನೀನು ಜೀವಂತವಾಗಿ ಹೊರಗೆ ಹೋದರೆ ತಾನೇ ನನ್ನ ಅರೆಸ್ಟ್ ಮಾಡುವುದು.., ನಿನಗೆ ನಿದ್ದೆ ಇಂಜೆಕ್ಷನ್ ಕೊಟ್ಟು ವಿದೇಶಕ್ಕೆ ರವಾನೆ ಮಾಡುತ್ತೇನೆ. ಹಾಗೆಯೇ ಈ ಆನಂದನನ್ನು ಇದೇ ವಿಷಪೂರಿತ ಕಾಡು ಕರಡಿಯ ಉಗುರಿನಿಂದ ಪರಚಿ ಮೇಲಕ್ಕೆ ಕಳಿಸುತ್ತೇನೆ..’
ರಾವಬಹದ್ದೂರ್ ವಿಕಾರವಾಗಿ ನಗುತ್ತ ಒಂದೊಂದೇ ಅಡಿ ಮುಂದಿಡುತ್ತ ಬರಲಾರಂಭಿಸಿದರು.
‘ಮಿಸ್ಟರ್ ರಾವಬಹದ್ದೂರ್.. ನೀನು ಈವರೆಗೂ ಮಾತಾಡಿದ ಸಂಭಾಷಣೆ ನನ್ನ ಹೊಟ್ಟೆಯಲ್ಲಿ ಅಡಗಿಸಿ ಇಟ್ಟಿದ್ದ ವೈರ್ಲೆಸ್ ಮೂಲಕ ಎಲ್ಲವೂ ನನ್ನ ಹೆಡ್ಕ್ವಾರ್ಟರ್ಸ್ಗೆ ತಲುಪಿ ಆಗಿದೆ. ನಿನ್ನ ಮೇಲೆ ನಮಗೆ ಸಂಶಯವಿತ್ತು. ಆದರೆ ಸಾಕ್ಷಿಗಳು ಇರಲಿಲ್ಲ.. ಇನ್ನೇನು ಕೆಲವೇ ಕ್ಷಣಗಳಲ್ಲಿ ಪೊಲೀಸ್ ಜೀಪ್ ನಿನ್ನ ಅರೆಸ್ಟ್ ಮಾಡಲು ಬರುತ್ತೆ...’
ಅನ್ನುತ್ತಿದ್ದಂತೆ ಹೊರಗಡೆ ಪೊಲೀಸ್ ಜೀಪ್ನ ಸೈರನ್ಗಳು ಕೇಳಲಾರಂಭಿಸಿದವು.