

Dale Steyn: ಮಾ.23ರಂದು ನಡೆದ ಐಪಿಎಲ್ನ ಎರಡನೇ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಎದುರು ಸನ್ರೈಸರ್ಸ್ ಹೈದರಾಬಾದ್ ಭರ್ಜರಿ ಜಯ ಸಾಧಿಸಿತು. ಕಳೆದ ಬಾರಿ ಐಪಿಎಲ್ ಆವೃತ್ತಿಯಲ್ಲಿ ತನ್ನದೇ ಅತಿ ಹೆಚ್ಚು ರನ್ಗಳ ದಾಖಲೆಯನ್ನು ಮುರಿದಿದ್ದ ಸನ್ರೈಸರ್ಸ್ ಹೈದರಾಬಾದ್, 2025ರ ಐಪಿಎಲ್ನ ಪಂದ್ಯದಲ್ಲಿ ಮತ್ತೊಮ್ಮೆ ತನ್ನದೇ ದಾಖಲೆಯನ್ನು ಮುರಿಯುವ ಅವಕಾಶವನ್ನು ಕೇವಲ ಎರಡೇ ಎರಡು ರನ್ಗಳಿಂದ ಕಳೆದುಕೊಂಡಿತು.
ಕಳೆದ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಎದುರು 287 ರನ್ ದಾಖಲಿಸಿದ ಎಸ್ಆರ್ಎಚ್, ಈ ಮೂಲಕ ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಮೊತ್ತ ಕಲೆಹಾಕಿದ ತಂಡ ಎಂಬ ಪಟ್ಟಿಗೆ ಸೇರಿಕೊಂಡಿತು. ಅದೇ ವರ್ಷ ಹಲವು ದಾಖಲೆಗಳನ್ನು ಬರೆದ ಕಾವ್ಯ ಮಾರನ್ ಮಾಲೀಕತ್ವದ ಸನ್ರೈಸರ್ಸ್ ಹೈದರಾಬಾದ್, ಈ ವರ್ಷವೂ ಬೌಂಡರಿ, ಸಿಕ್ಸರ್ಗಳ ಸುರಿಮಳೆ, ಬೃಹತ್ ಮೊತ್ತ ಗಳಿಸುವತ್ತ ದಾಪುಗಾಲಿಟ್ಟಿದೆ. ಆರಂಭಿಕ ಪಂದ್ಯಲ್ಲೇ ತಂಡದ ಪರ ಇಶಾನ್ ಕಿಶನ್ಸ್ಫೋಟಕ ಬ್ಯಾಟಿಂಗ್ ನಡೆಸಿ ಅಜೇಯ ಶತಕ ಬಾರಿಸಿದರು.
ಅಭಿಷೇಕ್ ಶರ್ಮ, ಇಶಾನ್ ಕಿಶನ್, ಟ್ರಾವಿಸ್ ಹೆಡ್, ಕ್ಲಾಸೆನ್ ಸೇರಿದಂತೆ ಬಲಿಷ್ಠ ಬ್ಯಾಟಿಂಗ್ ಹಾಗೂ ಬೌಲಿಂಗ್ ಲೈನ್ ಹೊಂದಿರುವ ಎಸ್ಆರ್ಎಚ್, ಮುಂಬರುವ ಐಪಿಎಲ್ ಪಂದ್ಯಗಳಲ್ಲಿ ಭರ್ಜರಿ ದಾಖಲೆಗಳನ್ನು ನಿರ್ಮಿಸುವ ಸಾಧ್ಯತೆಗಳು ಹೆಚ್ಚಿವೆ ಎಂಬ ಮಾತುಗಳು ಅಭಿಮಾನಿಗಳಿಂದ ಕೇಳಿಬಂದಿವೆ. ಇದೆಲ್ಲದರ ನಡುವೆ ದಕ್ಷಿಣ ಆಫ್ರಿಕಾದ ಮಾಜಿ ವೇಗಿ ಡೇಲ್ ಸ್ಟೇನ್ ಮಾತನಾಡಿ, ಈ ಬಾರಿಯ ಆವೃತ್ತಿಯಲ್ಲಿ ಎಸ್ಆರ್ಎಚ್ 300 ರನ್ ಗಡಿದಾಟಲಿದೆ ಎಂದು ಭವಿಷ್ಯ ನುಡಿದಿದ್ದಾರೆ.
"ಏಪ್ರಿಲ್ 17ರಂದು ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡವು ಬರೋಬ್ಬರಿ 300 ರನ್ ಕಲೆಹಾಕುವ ಮೂಲಕ ಐಪಿಎಲ್ ಇತಿಹಾಸದಲ್ಲಿ ಬೃಹತ್ ಮೊತ್ತ ಗಳಿಸಿದ ತಂಡವಾಗಿ ಹೊರಹೊಮ್ಮಲಿದೆ. ಈ ದಾಖಲೆಯನ್ನು ಮೈದಾನದಲ್ಲೇ ನಾನು ನೋಡುವ ಸಾಧ್ಯತೆಗಳು ಸಹ ಇವೆ" ಎಂದು ಹೇಳಿದ್ದಾರೆ. ಸ್ಟೇನ್ ಹೇಳಿಕೆ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಹಲವರು ಹಲವು ರೀತಿಯಲ್ಲಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ,(ಏಜೆನ್ಸೀಸ್).