ಪುತ್ತೂರು ಗ್ರಾಮಾಂತರ: ನರಿಮೊಗರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಂದ್ರಮ್‌ಸಾಗ್ ಎಂಬಲ್ಲಿ ತೋಡಿಗೆ ನಿರ್ಮಿಸಿರುವ ತಡೆಗೋಡೆ ಕಾಮಗಾರಿ ಕಳಪೆಯಾಗಿದೆ ಎಂಬ ಆರೋಪ ನರಿಮೊಗರು ಗ್ರಾಮ ಪಂಚಾಯಿತಿ ಗ್ರಾಮಸಭೆಯಲ್ಲಿ ವ್ಯಕ್ತವಾಯಿತು.
ನರಿಮೊಗರು ಗ್ರಾ.ಪಂ. ಗ್ರಾಮಸಭೆ ನರಿಮೊಗರು ಸಿ.ಎ ಬ್ಯಾಂಕ್ ಸಭಾಭವನದಲ್ಲಿ ಗ್ರಾ.ಪಂ.ಅಧ್ಯಕ್ಷೆ ಹರಿಣಿ ಪಂಜಳ ಅಧ್ಯಕ್ಷತೆಯಲ್ಲಿ ನಡೆಯಿತು. ಪುತ್ತೂರು ಬಿಆರ್‌ಸಿ ಕೇಂದ್ರದ ರತ್ನಕುಮಾರಿ ಪಿ.ಕೆ. ಚರ್ಚಾ ನಿಯಂತ್ರಣಾಧಿಕಾರಿಯಾಗಿ ಸಭೆ ನಡೆಸಿದರು.
ವಿಷಯ ಪ್ರಸ್ತಾಪಿಸಿದ ಗ್ರಾಮಸ್ಥ ರಾಘವೇಂದ್ರ ನಾಯಕ್, ಚಂದ್ರಮ್‌ಸಾಗ್‌ನಲ್ಲಿ ಹೊಸದಾಗಿ ತೋಡಿಗೆ ನಿರ್ಮಿಸಲಾದ ತಡೆಗೋಡೆ ಕುಸಿದು ಬೀಳುವ ಸ್ಥಿತಿಯಲ್ಲಿದೆ. ಇಂತಹ ಕಳಪೆ ಕಾಮಗಾರಿಯ ವಿಚಾರ ಗ್ರಾ.ಪಂ. ಗಮನಕ್ಕೆ ಬಂದಿಲ್ಲವೆ ಎಂದು ಪ್ರಶ್ನಿಸಿದರು. ಉತ್ತರಿಸಿದ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ರವಿಚಂದ್ರ ಯು., ಈ ಬಗ್ಗೆ ಪರಿಶೀಲಿಸಲಾಗುವುದು. ಕಾಮಗಾರಿ ಕಳಪೆ ಎಂದು ಕಂಡು ಬಂದಲ್ಲಿ ನಿರ್ಣಯ ಕೈಗೊಂಡು, ಸಮರ್ಪಕ ರೀತಿಯಲ್ಲಿ ತಡೆಗೋಡೆ ನಿರ್ಮಿಸಲು ಸಂಬಂಧಪಟ್ಟವರಿಗೆ ತಿಳಿಸೋಣ ಎಂದರು.
ಗ್ರಾಮಸ್ಥರ ಆಗ್ರಹ
ನೀರಿನ ಸಂರಕ್ಷಣೆ ವಿಚಾರವಾಗಿ ಗ್ರಾ.ಪಂ. ಕೆಲವೊಂದು ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಬೇಕು. ಅಂತರ್ಜಲಮಟ್ಟ ಬರಿದಾಗುತ್ತಿರುವುದರಿಂದ ಕೊಳವೆಬಾವಿ ಕೊರೆಯಲು ಅವಕಾಶ ನೀಡದೆ ನೀರನ್ನು ಸಂರಕ್ಷಣೆ ಮಾಡುವುದು ಅತ್ಯಗತ್ಯ. ಈ ನಿಟ್ಟಿನಲ್ಲಿ ಗ್ರಾ.ಪಂ. ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಸುಬ್ರಾಯ ಶೆಟ್ಟಿಮಜಲು ಆಗ್ರಹಿಸಿದರು.
ಪದೇಪದೆ ವಿದ್ಯುತ್ ಕಡಿತಗೊಳಿಸುವುದು ಮತ್ತು ಮಾಹಿತಿ ನೀಡದೆ ದಿನಪೂರ್ತಿ ವಿದ್ಯುತ್ ಕಡಿತ ಮಾಡುತ್ತಿರುವುದರಿಂದ ಕೃಷಿಕರಿಗೆ ಭಾರಿ ಸಮಸ್ಯೆಯಾಗುತ್ತಿದ್ದು, ಈ ಬಗ್ಗೆ ಮೆಸ್ಕಾಂ ಗಮನ ಹರಿಸಬೇಕು ಎಂದು ಗ್ರಾಮಸ್ಥ ರವೀಂದ್ರ ರೈ ನೆಕ್ಕಿಲು ಒತ್ತಾಯಿಸಿದರು.
ನರಿಮೊಗರು ವ್ಯಾಪ್ತಿಯಲ್ಲಿ ಬಹುತೇಕ ದಿನಗಳಲ್ಲಿ ವಾಹನ ತಪಾಸಣೆ ನಡೆಸುತ್ತಿರುವ ಸಂಚಾರ ಠಾಣೆಯ ಪೊಲೀಸರು ಪದೇಪದೆ ದಾಖಲೆಗಳನ್ನು ಕೇಳುತ್ತಿರುವುದರಿಂದ ಸರಿಯಾದ ದಾಖಲೆ ಇರುವ ಮಂದಿಗೆ ಸಮಸ್ಯೆಯಾಗುತ್ತಿದೆ ಎಂದು ಗ್ರಾಮಸ್ಥ ದಿನೇಶ್ ದೂರಿದರು. ಸಂಚಾರ ಠಾಣೆಯ ಪೊಲೀಸರು ಅವರ ಕರ್ತವ್ಯ ನಿರ್ವಹಿಸುತ್ತಿದ್ದಾರೆಯೆ ಹೊರತು ಯಾರಿಗೂ ತೊಂದರೆ ಮಾಡುವ ಉದ್ದೇಶದಿಂದ ಅಲ್ಲ ಎಂದು ಎಸ್‌ಐ ಆಂಜನೇಯ ರೆಡ್ಡಿ ಸ್ಪಷ್ಟಪಡಿಸಿದರು.
ಗ್ರಾ.ಪಂ. ಕಾರ್ಯದರ್ಶಿ ಶೇಖ್ ಖಲಂದರ್ ಅಲಿ ವರದಿ ವಾಚಿಸಿದರು. ಗ್ರಾ.ಪಂ. ಉಪಾಧ್ಯಕ್ಷ ಉಮೇಶ್ ಎಂ. ಮತ್ತು ಸದಸ್ಯರು ಉಪಸ್ಥಿತರಿದ್ದರು. ವಿವಿಧ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡಿದ್ದರು.
ಪಾನಮತ್ತರಿಂದ ಕಿರಿಕಿರಿ
ಶಾಂತಿಗೋಡು ಬಳಿ ಕುಮಾರಧಾರಾ ನದಿ ಬದಿಯಲ್ಲಿ ಮದ್ಯ ಬಾಟಲಿಗಳು ರಾಶಿ ಬಿದ್ದಿವೆ. ಇಲ್ಲಿಗೆ ಪ್ರತಿನಿತ್ಯ ಪಾನಮತ್ತರಾಗಿ ಬಂದು ಕಿರಿಕಿರಿ ಮಾಡುತ್ತಿದ್ದು, ಇದರಿಂದಾಗಿ ಇಲ್ಲಿನ ಮಂದಿಗೆ ಸಮಸ್ಯೆಯಾಗುತ್ತಿದೆ. ಈ ಬಗ್ಗೆ ಪೊಲೀಸ್ ಇಲಾಖೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದರು. ಇಂತಹ ಘಟನೆಗಳು ಕಂಡು ಬಂದಲ್ಲಿ 112 ಸಂಖ್ಯೆಗೆ ಕರೆ ಮಾಡಿ ತಿಳಿಸಿ, ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಪುತ್ತೂರು ನಗರಠಾಣೆ ಎಸ್.ಐ. ಆಂಜನೇಯ ರೆಡ್ಡಿ ತಿಳಿಸಿದರು.
