ಕುಕ್ಕೆ ದೇವಳದಲ್ಲಿ ಮಲೆಕುಡಿಯ ಸಮುದಾಯಕ್ಕೆ ಅವಕಾಶ

Sub_Malekudiya community
Published on

ಸುಬ್ರಹ್ಮಣ್ಯ: ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯಲ್ಲಿ ಮಲೆಕುಡಿಯ ಸಮುದಾಯದವರನ್ನು ಪರಿಗಣಿಸಬೇಕು ಎಂದು ಮಲೆಕುಡಿಯರ ಸಂಘ ಸುಬ್ರಹ್ಮಣ್ಯ ವಲಯ ವತಿಯಿಂದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಕಾರ್ಯನಿರ್ವಹಣಾಧಿರಿಗಳಿಗೆ ಮನವಿ ಸಲ್ಲಿಸಲಾಯಿತು.

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಹಾಗೂ ಮಲೆಕುಡಿಯ ಜನಾಂಗದವರಿಗೂ ಅವಿನಾಭಾವ ಸಂಬಂಧವಿದೆ. ಜಾತ್ರಾ ಮಹೋತ್ಸವದಲ್ಲಿ ಮೂಲ ಮೃತ್ತಿಕೆ ಮಲೆಕುಡಿಯ ಸಮುದಾಯವರಿಗೆ ಮೊದಲು ಕೊಡುವ ಸಂಪ್ರದಾಯವಿದೆ. ಈ ಹಿಂದಿನ ಸಂಪ್ರದಾಯದಂತೆ ಸಮಿತಿಯಲ್ಲಿ ಮಲೆಕುಡಿಯ ಜನಾಂಗದವರಿಗೆ ಸದಸ್ಯ ಸ್ಥಾನ ನೀಡಬೇಕು. ಆದರೆ ಹೊಸ ಸಮಿತಿಯಲ್ಲಿ ಸಮುದಾಯದ ಮಂದಿಯ ಹೆಸರು ಕೈಬಿಡಲಾಗಿದೆ ಎಂಬ ಮಾಹಿತಿ ಇದೆ. ಸರ್ಕಾರ ಈ ಬಗ್ಗೆ ಮತ್ತೊಮ್ಮೆ ಪರಿಶೀಲನೆ ನಡೆಸಿ, ಮಲೆಕುಡಿಯ ಸಮುದಾಯದವರ ಹೆಸರನ್ನು ಸೇರ್ಪಡೆ ಮಾಡಿ ಪಟ್ಟಿ ಅಂತಿಮಗೊಳಿಸಿ ಹೊಸ ಸಮಿತಿ ಘೋಷಿಸಬೇಕು. ಇಲ್ಲವೇ ನಮ್ಮ ಸಮುದಾಯದ ಮೂಲ ಕೆಲಸಗಳಾದ ರಥ ಕಟ್ಟುವ ಕೆಲಸ ಸೇರಿದಂತೆ ಎಲ್ಲ್ಲ ದೇವರ ಕೆಲಸಗಳನ್ನು ನಿಲ್ಲಿಸಿ ಪ್ರತಿಭಟಿಸಲಾಗುವುದು ಎಂದು ಮನವಿಯಲ್ಲಿ ಎಚ್ಚರಿಸಲಾಗಿದೆ.

ದೇವಸ್ಥಾನದ ಇಒ ಅರವಿಂದ ಅಯ್ಯಪ್ಪ ಸುತಗುಂಡಿ ಮನವಿ ಸ್ವೀಕರಿಸಿದರು. ಮಲೆಕುಡಿಯ ಸಂಘದ ಸುಬ್ರಹ್ಮಣ್ಯ ವಲಯ ಸಮಿತಿ ಅಧ್ಯಕ್ಷ ಬೆಳ್ಯಪ್ಪ ಎಂ.ಕೆ.ಸುಬ್ರಹ್ಮಣ್ಯ, ಉದಯ್ ಕುಮಾರ್ ಏನೆಕಲ್ಲು, ವಾಸುದೇವ, ನಾಗೇಶ್ ಎ.ವಿ, ಸುಬ್ರಹ್ಮಣ್ಯ, ಪ್ರಸಾದ್, ಧನುಷ್, ಜಗದೀಶ್, ನಂದರಾಜ್ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net