

ಮುಂಬೈ: ದೇಶದಲ್ಲಿ ಕರೊನಾ ಸೋಂಕಿತರ ಸಂಖ್ಯೆ ಒಂದು ಲಕ್ಷ ದಾಟಿದೆ. ಅದರಲ್ಲಿ ಮಹಾರಾಷ್ಟ್ರದ ಪಾಲು ಶೇ.35ಕ್ಕೂ ಅಧಿಕ ಅಂದರೆ 35,000ಕ್ಕೂ ಅಧಿಕ ರೋಗಿಗಳು ಮಹಾರಾಷ್ಟ್ರದಲ್ಲಿಯೇ ಇದ್ದಾರೆ. ಅದರಲ್ಲೂ ಮುಖ್ಯವಾಗಿ ಮುಂಬೈವೊಂದರಲ್ಲಿಯೇ ಕೋವಿಡ್ ಪೀಡಿತರ ಸಂಖ್ಯೆ 21 ಸಾವಿರಕ್ಕೂ ಹೆಚ್ಚು.
ಇದಲ್ಲದೇ, ಮುಂಬೈನಿಂದ ತೆರಳುತ್ತಿರುವ ವಲಸೆ ಕಾರ್ಮಿಕರು ಆಯಾ ರಾಜ್ಯಗಳಲ್ಲಿ ಸೋಂಕು ಹರಡಲು ಕಾರಣವಾಗುತ್ತಿದ್ದಾರೆ. ಕರ್ನಾಟಕದಲ್ಲೂ ಮುಂಬೈ ನಂಟಿನಿಂದ ಹಬ್ಬುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಹೀಗಾಗಿ ಕರೊನಾ ಜನ್ಮಸ್ಥಳವಾದ ಚೀನಾದ ವುಹಾನ್ಗೆ ಮುಂಬೈಯನ್ನು ಹೋಲಿಸಲಾಗುತ್ತಿದೆ.
ಇದೆಲ್ಲ ಒಂದು ಕಡೆಯಾದರೆ, ಕರೊನಾ ಸಮಯದಲ್ಲಿ ಮಹಾನಗರದ ರಕ್ಷಣೆಗೆ ನಿಯೋಜಿತರಾದ ಪೊಲೀಸರಲ್ಲಿ ಭಾರಿ ಪ್ರಮಾಣದಲ್ಲಿ ಸೋಂಕು ಹಬ್ಬುತ್ತಿದೆ. ಅಂದಾಜು ಒಂದೂವರೆ ಸಾವಿರಕ್ಕೂ ಅಧಿಕ ಪೊಲೀಸರು ಸೋಂಕಿಗೆ ತುತ್ತಾಗಿದ್ದಾರೆ. ಮುಂಬೈವೊಂದರಲ್ಲಿಯೇ 8 ಪೊಲೀಸರು ಕರೊನಾಗೆ ಬಲಿಯಾಗಿದ್ದರೆ, ರಾಜ್ಯದಲ್ಲಿ ಕೋವಿಡ್ನಿಂದಾಗಿ ಮೃತಪಟ್ಟ ಪೊಲೀಸರು 11. ಮೂರು ದಿನಗಳ ಹಿಂದಷ್ಟೇ ಎಎಸ್ಐವೊಬ್ಬರು ಮೃತಪಟ್ಟಿದ್ದಾರೆ. ಇಡೀ ಕರ್ನಾಟಕದಲ್ಲಿ ಕಂಡುಬಂದಿರುವ ಸೋಂಕಿತರ ಸಂಖ್ಯೆಗಿಂತಲೂ ಮುಂಬೈ ಪೊಲೀಸರಲ್ಲಿ ಕಂಡುಬಂದಿರುವ ಸಂಖ್ಯೆಯೇ ಹೆಚ್ಚು.
ಸದ್ಯ 50ಕ್ಕಿಂತ ಹೆಚ್ಚು ವಯಸ್ಸಾದ ಪೊಲೀಸರನ್ನು ಸಾರ್ವಜನಿಕ ಸ್ಥಳಗಳಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗುತ್ತಿಲ್ಲ. ದೀರ್ಘಕಾಲದ ಕಾಯಿಲೆಯಿಂದ ಬಳಲುತ್ತಿರುವವರಿಗೆ ರಜೆ ಮೇಲೆ ಕಳುಹಿಸಲಾಗುತ್ತಿದೆ.
ಈ ಎಲ್ಲ ಕಾರಣದಿಂದಾಗಿ ಮುಂಬೈನಲ್ಲಿ ಪೊಲೀಸ್ ಸಿಬ್ಬಮದಿ ಕರತೆ ಉಂಟಾಗಿದೆ. ಆದ್ದರಿಂದ ಕೇದ್ರೀಯ ಪಡೆಗಳ ಪೊಲೀಸರನ್ನು ಸರ್ಕಾರ ಕರೆಯಿಸಿಕೊಂಡಿದೆ.
ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ ಹಾಗೂ ಕೇಂದ್ರೀಯ ಮೀಸಲು ಪೊಲೀಸ್ ಪಡೆಯ ಐದು ತುಕಡಿಗಳು ಸದ್ಯ ಮುಂಬೈನಲ್ಲಿ ಬೀಡುಬಿಟ್ಟಿದ್ದು, ರಕ್ಷಣಾ ಕಾರ್ಯದಲ್ಲಿ ತೊಡಗಿಕೊಂಡಿವೆ. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಇನ್ನಷ್ಟು ಕೇಂದ್ರೀಯ ಪಡೆಗಳನ್ನು ಕರೆಯಿಸಿಕೊಳ್ಳಲು ಮಹಾರಾಷ್ಟ್ರ ಸರ್ಕಾರ ನಿರ್ಧರಿಸಿದೆ.