ಪಶ್ಚಿಮ ಬಂಗಾಳದಲ್ಲಿ ಪ್ರಧಾನಿ ಮೋದಿ ಗುಡುಗು; ಟಿಎಂಸಿ ಸರ್ಕಾರ ಅಭಿವೃದ್ಧಿಯ ಶತ್ರು ಎಂದು ಟೀಕೆ ! | Narendra Modi

Narendra Modi
Published on

Narendra Modi: ಇತ್ತೀಚೆಗೆ ಲೋಕಸಭೆಯಲ್ಲಿ ಮಂಡನೆಯಾಗಿರುವ ಹೊಸ ಶಾಸನಕ್ಕೆ ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿದ್ದು, ಇದಕ್ಕೆ ತೀರುಗೇಟು ನೀಡಿರುವ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ (ಆಗಸ್ಟ್​ 22) ತೀವ್ರ ವಾಗ್ದಾಳಿ ನಡೆಸಿದರು.

ಕೋಲ್ಕತ್ತಾದಲ್ಲಿ ಆಯೋಜಿಸಿದ್ದ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಅಪರಾಧ ಎಸಗಿರುವವರು ಅಧಿಕಾರದಲ್ಲಿರಬಾರದು ಜೈಲಿನಲ್ಲಿರಬೇಕೆಂದು ಹೇಳಿದರು. ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡ ಪ್ರಧಾನಿ, ರಾಜ್ಯದಲ್ಲಿ ಬಿಜೆಪಿಯ ಬೆಳವಣಿಗೆಯನ್ನು ತಡೆಯುವುದೇ ಟಿಎಂಸಿಯ ಉದ್ದೇಶ ಎಂದರು. ಈ ಸರ್ಕಾರ ಅಭಿವೃದ್ಧಿಯ ಶತ್ರುವಾಗಿದ್ದು, ಮುಂದಿನ ವರ್ಷದ ನಡೆಯಲಿರುವ ಚುನಾವಣೆಯಲ್ಲಿ ಬಿಜೆಪಿಯನ್ನು ಆಯ್ಕೆ ಮಾಡುವ ಮೂಲಕ ಬದಲಾವಣೆ ತರುವಂತೆ ರಾಜ್ಯದ ಜನರಿಗೆ ಮನವಿ ಮಾಡಿದರು.

ಇದಕ್ಕೂ ಮೊದಲು, ಪ್ರಧಾನಿ ಮೋದಿ ಬಂಗಾಳದಲ್ಲಿ ಅನೇಕ ಅಭಿವೃದ್ಧಿ ಅಭಿಯಾನದ ಭಾಗವಾಗಿ ಮೂರು ಹೊಸ ಕೋಲ್ಕತ್ತಾ ಮೆಟ್ರೋ ಮಾರ್ಗಗಳನ್ನು ಉದ್ಘಾಟಿಸಿದರು - ನೊಪಾರ - ಜೈ ಹಿಂದ್ ಬಿಮನ್ಬಂದರ್, ಸೀಲ್ಡಾ - ಎಸ್ಪ್ಲನೇಡ್ ಮತ್ತು ಬೆಲೆಘಾಟ.

ಟಿಎಂಸಿ ಸಚಿವರ ಪ್ರಕರಣ ಉಲ್ಲೇಖಿಸಿದ ಪ್ರಧಾನಿ

ಜೈಲಿನ ಒಳಗಿನಿಂದ ಅಧಿಕಾರ ನಡೆಸುತ್ತಿರುವವರು ನಾಚಿಕೆಯಿಲ್ಲದವರು ಎಂದ ಪ್ರಧಾನಿ, ಶಿಕ್ಷಕರ ನೇಮಕಾತಿ ಹಗರಣದಲ್ಲಿ ಟಿಎಂಸಿ ಸಚಿವರು ಇನ್ನೂ ಜೈಲಿನಲ್ಲಿದ್ದಾರೆ, ಆದರೂ ತಮ್ಮ ಹುದ್ದೆಯನ್ನು ತ್ಯಜಿಸಲು ಸಿದ್ಧರಿಲ್ಲ ಎಂದು ಶಾಲಾ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಜೈಲಿನಲ್ಲಿರುವ ಬಂಗಾಳ ತಿದ್ದುಪಡಿ ಸೇವೆಗಳ ಸಚಿವ ಚಂದ್ರನಾಥ್ ಸಿನ್ಹಾ ಅವರನ್ನು ಪರೋಕ್ಷವಾಗಿ ಉಲ್ಲೇಖಿಸುತ್ತಾ ಪ್ರಧಾನಿ ಮೋದಿ ಹೇಳಿದರು ಎಂದು ವರದಿಯಾಗಿದೆ.

ಕಾನೂನು ಮತ್ತು ಸುವ್ಯವಸ್ಥೆ ಹಳಿತಪ್ಪಿದೆ

ಆರ್‌ಜಿ ಕರ್ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಸೇರಿದಂತೆ ಹಿಂಸಾತ್ಮಕ ದಾಳಿಗಳಿಗೆ ಮಹಿಳೆಯರು ಬಲಿಯಾದ ಇತ್ತೀಚಿನ ಪ್ರಕರಣಗಳನ್ನು ಪ್ರಧಾನಿ ಉಲ್ಲೇಖಿಸುತ್ತಾ, ಬಂಗಾಳದ ಕಾನೂನು ಮತ್ತು ಸುವ್ಯವಸ್ಥೆಯ ಬಗ್ಗೆ ಮಮತಾ ಬ್ಯಾನರ್ಜಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ರಾಜ್ಯದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯಗಳು ಹೆಚ್ಚಿವೆ. ಅಪರಾಧ ಮತ್ತು ಭ್ರಷ್ಟಾಚಾರವು ಟಿಎಂಸಿ ಸರ್ಕಾರದ ಗುರುತಾಗಿದೆ. ರಾಜ್ಯದಲ್ಲಿ ಟಿಎಂಸಿ ಅಧಿಕಾರದಲ್ಲಿರುವವರೆಗೆ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯಲು ಸಾಧ್ಯವಿಲ್ಲ, ಟಿಎಂಸಿಯನ್ನು ಅಧಿಕಾರದಿಂದ ಕೆಳಗಿಳಿಸಿದ ನಂತರ ನಿಜವಾದ ಬದಲಾವಣೆ ಬರುತ್ತದೆ ಎಂದರು.

ಕಡಿಮೆ ಅನುದಾನದ ಟೀಕೆ ತಿರಸ್ಕರಿಸಿದ ಪ್ರಧಾನಿ

ಕೇಂದ್ರದಿಂದ ರಾಜ್ಯಕ್ಕೆ ಕಡಿಮೆ ಅನುದಾನ ದೊರೆಯುತ್ತಿದೆ ಎಂಬ ಹೇಳಿಕೆಯನ್ನು ತಿರಸ್ಕರಿಸಿದ ಪ್ರಧಾನಿ ಮೋದಿ, ರೈಲ್ವೆ ಯೋಜನೆಗಳಂತೆ ರಸ್ತೆ ಸಂಪರ್ಕಕ್ಕಾಗಿ ನಾವು ಬಂಗಾಳಕ್ಕೆ ಯುಪಿಎಗಿಂತ ಮೂರು ಪಟ್ಟು ಹೆಚ್ಚು ಹಣವನ್ನು ನೀಡಿದ್ದೇವೆ. ಆದರೆ ರಾಜ್ಯದಲ್ಲಿ ಅಭಿವೃದ್ಧಿ ಯೋಜನೆಗಳ ಮುಂದೆ ದೊಡ್ಡ ಅಡಚಣೆಯಿದೆ. ನಾವು ರಾಜ್ಯ ಸರ್ಕಾರಕ್ಕೆ ಕಳುಹಿಸುವ ಹೆಚ್ಚಿನ ಹಣವನ್ನು ರಾಜ್ಯದಲ್ಲಿ ಲೂಟಿ ಮಾಡಲಾಗುತ್ತದೆ. ಆ ಹಣವು ನಿಮ್ಮನ್ನು ತಲುಪುವುದಿಲ್ಲ. ಆ ಹಣವನ್ನು ಟಿಎಂಸಿ ಕಾರ್ಯಕರ್ತರಿಗೆ ಖರ್ಚು ಮಾಡಲಾಗುತ್ತದೆ. ಅದಕ್ಕಾಗಿಯೇ ಬಂಗಾಳ ಬಡವರ ಉನ್ನತಿಗಾಗಿ ಕೆಲಸ ಮಾಡುವಲ್ಲಿ ಹಿಂದುಳಿದಿದೆ ಎಂದು ಆರೋಪಿಸಿದರು.

ಹೊಸ ಶಾಸನ

ಕನಿಷ್ಠ ಐದು ವರ್ಷಗಳ ಜೈಲು ಶಿಕ್ಷೆಗೆ ಒಳಪಡುವ ಆರೋಪದಡಿಯಲ್ಲಿ 30 ದಿನಗಳನ್ನು ಜೈಲಿನಲ್ಲಿ ಕಳೆದ ಪ್ರಧಾನಿ, ಮುಖ್ಯಮಂತ್ರಿಗಳು ಮತ್ತು ಸಚಿವರನ್ನು ತೆಗೆದುಹಾಕಲು ಅನುವು ಮಾಡಿಕೊಡುವ ಸಂವಿಧಾನ (130 ನೇ ತಿದ್ದುಪಡಿ) ಮಸೂದೆ, ಕೇಂದ್ರ ಪ್ರದೇಶಗಳ ಸರ್ಕಾರ (ತಿದ್ದುಪಡಿ) ಮಸೂದೆ ಮತ್ತು ಜಮ್ಮು ಮತ್ತು ಕಾಶ್ಮೀರ ಮರುಸಂಘಟನೆ (ತಿದ್ದುಪಡಿ) ಮಸೂದೆಯನ್ನು ಕೇಂದ್ರ ಗರಹ ಸಚಿವ ಅಮಿತ್​ ಷಾ ಇತ್ತೀಚೆಗೆ ಮಂಡಿಸಿದ್ದರು.(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net