

Narendra Modi: ಇತ್ತೀಚಿನ ಕೇಂದ್ರ ಸರ್ಕಾರದ ಹೊಸ ಮಸೂದೆಗಳನ್ನು ಸಮರ್ಥಿಸಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ, ಪ್ರಮುಖ ಹುದ್ದೆಗಳನ್ನು ಹೊಂದಿರುವವರು ಜೈಲಿನಿಂದ ಆದೇಶ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.
ಶುಕ್ರವಾರ (ಆಗಸ್ಟ್ 22) ಬಿಹಾರದಲ್ಲಿ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿ ಮತ್ತು ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಪ್ರಧಾನಿ, ಈ ಹಿಂದೆ ಆಡಳಿತ ನಡೆಸಿದ ಆರ್ಜೆಡಿ ತನ್ನ ಪಕ್ಷದ ಚಿಹ್ನೆಯನ್ನು ದೀಪವಾಗಿಟ್ಟುಕೊಂಡು ರಾಜ್ಯವನ್ನು ಕತ್ತಲೆಯತ್ತ ಕೊಂಡೊಯ್ದಿದೆ ಎಂದರು.
ಒಬ್ಬ ಸರ್ಕಾರಿ ನೌಕರ 50 ಗಂಟೆಗಳ ಕಾಲ ಜೈಲಿನಲ್ಲಿದ್ದರೆ, ಅವನು ಕೆಲಸವನ್ನು ಕಳೆದುಕೊಳ್ಳುತ್ತಾನೆ, ಅದು ಚಾಲಕ, ಗುಮಾಸ್ತ ಅಥವಾ ಪ್ಯೂನ್ ಯಾರೇ ಆಗಿರಬಹುದು. ಆದರೆ ಒಬ್ಬ ಪ್ರಧಾನ ಮಂತ್ರಿ, ಮುಖ್ಯಮಂತ್ರಿ, ಸಚಿವರು ಜೈಲಿನಿಂದಲೂ ಆಡಳಿತ ನಡೆಸುವುದು, ಜೈಲಿನಿಂದ ಆದೇಶಗಳನ್ನು ನೀಡುವುದನ್ನು ಈಗಾಗಲೇ ನಾವೂ ನೋಡಿದ್ದು, ಆ ರೀತಿಯ ಮನೋಭಾವವನ್ನು ಹೊಂದಿದರೆ ಭ್ರಷ್ಟಾಚಾರದ ವಿರುದ್ಧ ಹೊರಾಡಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ಕಳಂಕಿತ ಸಚಿವರು ತಮ್ಮ ಹುದ್ದೆಗಳಲ್ಲಿ ಮುಂದುವರಿಯಬೇಕೇ ಎಂದು ಪ್ರಶ್ನಸಿದ ಮೋದಿ, ಜನರು ತಮ್ಮ ನಾಯಕರೆನಿಸಿಕೊಂಡವರು ನೈತಿಕ ಸಮಗ್ರತೆಯನ್ನು ಎತ್ತಿಹಿಡಿಯಬೇಕೆಂದು ಭಯಸುತ್ತಾರೆ ಎಂದು ತಿಳಿಸಿದರು. ಎನ್ಡಿಎ ಸರ್ಕಾರ ಭ್ರಷ್ಟಾಚಾರದ ವಿರುದ್ಧ ಹೊಸ ಕಾನೂನನ್ನು ತಂದಿದ್ದು, ಪ್ರಧಾನ ಮಂತ್ರಿಯೂ ಅದರ ವ್ಯಾಪ್ತಿಗೆ ಬರುತ್ತಾರೆ ಎಂದರು.
ಪ್ರಧಾನಿ ಮೋದಿ ಬಕ್ಸಾರ್ನಲ್ಲಿ 6,880 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ 660 ಮೆಗಾವ್ಯಾಟ್ ಉಷ್ಣ ವಿದ್ಯುತ್ ಸ್ಥಾವರ ಸೇರಿದಂತೆ ಹಲವಾರು ಪ್ರಮುಖ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದರು.
ಗಯಾ ಜಿ ಮತ್ತು ದೆಹಲಿ ನಡುವಿನ ಅಮೃತ ಭಾರತ ಎಕ್ಸ್ಪ್ರೆಸ್ ಮತ್ತು ಉತ್ತರ ಬಿಹಾರದ ವೈಶಾಲಿಯನ್ನು ಜಾರ್ಖಂಡ್ನ ಕೊಡೆರ್ಮಾಗೆ ಸಂಪರ್ಕಿಸುವ ಬೌದ್ಧ ಸರ್ಕ್ಯೂಟ್ ರೈಲಿಗೆ ಹಸಿರು ನಿಶಾನೆ ತೋರಿದರು. ಪ್ರಧಾನಮಂತ್ರಿ ಆವಾಸ್ ಯೋಜನೆ (ಗ್ರಾಮೀಣ)ಯ 12,000 ಫಲಾನುಭವಿಗಳಿಗೆ ಸಾಂಕೇತಿಕ ಗೃಹ ಪ್ರವೇಶ ಸಮಾರಂಭದಲ್ಲಿಯೂ ಅವರು ಭಾಗವಹಿಸಿದರು.
ಮುಜಫರ್ಪುರದಲ್ಲಿ ಹೋಮಿ ಭಾಭಾ ಕ್ಯಾನ್ಸರ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರವನ್ನು ಮತ್ತು ನಮಾಮಿ ಗಂಗೆ ಕಾರ್ಯಕ್ರಮದಡಿಯಲ್ಲಿ ಮುಂಗೇರ್ನಲ್ಲಿ 520 ಕೋಟಿ ರೂ. ವೆಚ್ಚದ ಒಳಚರಂಡಿ ಸಂಸ್ಕರಣಾ ಘಟಕವನ್ನು ಉದ್ಘಾಟಿಸಿದರು. ಹೆಚ್ಚುವರಿಯಾಗಿ, ಅವರು ಸುಮಾರು 1,260 ಕೋಟಿ ರೂ. ಮೌಲ್ಯದ ನಗರ ಮೂಲಸೌಕರ್ಯ ಯೋಜನೆಗಳಿಗೆ ಚಾಲನೆ ನೀಡಿದರು.
ಸುಮಾರು 1,900 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ರಾಷ್ಟ್ರೀಯ ಹೆದ್ದಾರಿ 31 ರ ನಾಲ್ಕು ಪಥಗಳ ಭಕ್ತಿಯಾರ್ಪುರ್-ಮೊಕಾಮಾ ವಿಭಾಗವನ್ನು ಹಾಗೂ ರಾಷ್ಟ್ರೀಯ ಹೆದ್ದಾರಿ 120 ರ ಬಿಕ್ರಮ್ಗಂಜ್-ಡುಮ್ರಾನ್ ವಿಭಾಗವನ್ನು ಪ್ರಧಾನಿ ಮೋದಿ ಉದ್ಘಾಟಿಸಿದರು.
ಪಾಟ್ನಾ ಜಿಲ್ಲೆಯ ಮೊಕಾಮಾಗೆ ಪ್ರಯಾಣಿಸಿ 8.15 ಕಿ.ಮೀ ಉದ್ದದ ಆಂಟಾ-ಸಿಮಾರಿಯಾ ಸೇತುವೆಯನ್ನು ಉದ್ಘಾಟಿಸಲಿದ್ದಾರೆ, ಇದು ಗಂಗಾ ನದಿಯ ಮೇಲೆ ಮೊಕಾಮಾವನ್ನು ಬೇಗುಸರಾಯ್ಗೆ ಸಂಪರ್ಕಿಸುವ 1.86 ಕಿ.ಮೀ ಆರು ಪಥದ ವಿಭಾಗವನ್ನು ಒಳಗೊಂಡಿದೆ. ಹೊಸ ಸೇತುವೆಯನ್ನು ಹಳೆಯ ರಾಜೇಂದ್ರ ಸೇತುವಿನ ಪಕ್ಕದಲ್ಲಿ ನಿರ್ಮಿಸಲಾಗಿದ್ದು, ಉತ್ತರ ಮತ್ತು ದಕ್ಷಿಣ ಬಿಹಾರದ ನಡುವೆ ಪ್ರಯಾಣಿಸುವ ಭಾರೀ ವಾಹನಗಳಿಗೆ 100 ಕಿ.ಮೀ.ವರೆಗಿನ ಮಾರ್ಗಗಳನ್ನು ಕಡಿತಗೊಳಿಸುವ ನಿರೀಕ್ಷೆಯಿದೆ.(ಏಜೆನ್ಸೀಸ್)