ಗೋಹತ್ಯೆ ನಿಷೇಧ ಕಾಯ್ದೆ ಬಗ್ಗೆ ಮೋದಿ ಸಹೋದರ ಹೇಳಿದ್ದೇನು ಗೊತ್ತಾ?

modi brother
Published on

ತುಮಕೂರು: ಹಿಂದು ಸಂಸ್ಕೃತಿಯಲ್ಲಿ ಗೋವಿಗೆ ತಾಯಿ ಸ್ಥಾನ ನೀಡಲಾಗಿದೆ. ಆ ಮೂಲಕ ಪುಣ್ಯಕೋಟಿಯಲ್ಲಿ ಕೋಟ್ಯಾನುಕೋಟಿ ದೇವರನ್ನು ಕಾಣುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಸಹೋದರ ಪ್ರಹ್ಲಾದ್ ದಾಮೋದರ ದಾಸ್ ಮೋದಿ ಹೇಳಿದರು.

ನಗರದ ಗೆದ್ಲಹಳ್ಳಿ ರಸ್ತೆಯಲ್ಲಿರುವ ಶ್ರೀಮಾತಾ ವೈಷ್ಣೋದೇವಿ ದೇವಸ್ಥಾನದ ವತಿಯಿಂದ ಇಂದು ಆಯೋಜಿಸಿದ್ದ ನವದೇವಿ ದೇವಸ್ಥಾನ ಪ್ರತಿಷ್ಠಾ ಮತ್ತು ಪ್ರಾಣ ಪ್ರತಿಷ್ಠಾಪನೆ ಮಹೋತ್ಸವದಲ್ಲಿ ಭಾಗವಹಿಸಿ ಮಾತನಾಡಿದ ಮೋದಿ ಅವರು, ಗೋವು ಕೇವಲ ಪ್ರಾಣಿಯಲ್ಲ. ಕರ್ನಾಟಕ ಸರ್ಕಾರವು ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತರುವ ಮೂಲಕ ನಮ್ಮ ಸಂಸ್ಕೃತಿಯಲ್ಲಿ ಗೋವಿಗೆ ತಾಯಿ ಸ್ಥಾನ ಇದೆ ಎಂಬುದನ್ನು ನಿರೂಪಿಸಿದೆ ಎಂದರು.

ಗೋಹತ್ಯೆ ಪ್ರತಿಬಂಧಕ ಕಾನೂನಿಗೆ ಅಂಗೀಕಾರ ಪಡೆದಿರುವ ಸಿಎಂ ಯಡಿಯೂರಪ್ಪ ಹಾಗೂ ಅವರ ಸಚಿವ ಸಂಪುಟದ ಸಹೋದ್ಯೋಗಿಗಳಿಗೆ ಧನ್ಯವಾದ ತಿಳಿಸುತ್ತೇನೆ. ಈ ಕಾನೂನು ಕೇವಲ ಧರ್ಮದ ವಿರುದ್ಧ ಆಗಲೀ, ಜಾತಿಯ ವಿರುದ್ಧವಾಗಲೀ ಅಲ್ಲ. ಇದು ದೇಶದ ಸಂಸ್ಕೃತಿಯನ್ನು ಎತ್ತಿ ಹಿಡಿಯುವಂತಹ ಕಾನೂನಾಗಿದೆ ಎಂದು ತಿಳಿಸಿದರು.

ದೇಶದಲ್ಲಿ ಮಹಾವೀರ, ಬುದ್ಧ ಹಾಗೂ ಗಾಂಧೀಜಿಯವರ ಚಿಂತನೆಗಳನ್ನು ನಾವು ಅರಿಯಬೇಕಿದೆ. ಅಹಿಂಸಾ ಪರಮೋಧರ್ಮ ಎಂಬ ಘೋಷವಾಕ್ಯವನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net