

ಬೆಂಗಳೂರು: ಬೆಂಗಳೂರಿನಲ್ಲಿ ಭಾವಿ ದಂಪತಿ ದಾರುಣವಾಗಿ ಸಾವಿಗೀಡಾಗಿದ್ದಾರೆ.
ಅವರಿಬ್ಬರು, ಕೆಲವೇ ದಿನಗಳಲ್ಲಿ ಹಸೆಮಣೆ ಏರಬೇಕಿತ್ತು. ಆದರೆ ಸ್ನಾನಕ್ಕೆ ಜತೆಯಾಗಿ ಹೋಗಿದ್ದ ಯುವಕ-ಯುವತಿ ಬಾತ್ ರೂಮ್ ಒಳಗೇ ಸಾವನ್ನಪ್ಪಿದ್ದಾರೆ. ಅವರಿಬ್ಬರೂ ಕಾರ್ಬನ್ ಮೋನಾಕ್ಸೈಡ್ ಕಾರಣದಿಂದಾಗಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಈ ಘಟನೆ, ಎರಡು ದಿನಗಳ ಬಳಿಕ ತಡವಾಗಿ ಬೆಳಕಿಗೆ ಬಂದಿದೆ. ಮೃತರನ್ನು ಗುಂಡ್ಲುಪೇಟೆ ತಾಲೂಕಿನ ಚಂದ್ರಶೇಖರ್, ಹಾಗೂ ಗೋಕಾಕ್ ತಾಲೂಕಿನ ಸುಧಾರಾಣಿ ಎಂದು ಗುರುತಿಸಲಾಗಿದೆ.
ಹತ್ತನೇ ತಾರೀಕು ಸಂಜೆ ಚಿಕ್ಕಜಾಲದ ತರಬನಹಳ್ಳಿ ಈ ಘಟನೆ ನಡೆದಿದ್ದು ರಾತ್ರಿ 09-10 ಗಂಟೆ ಸುಮಾರಿಗೆ ಸುಮಾರಿಗೆ ಗ್ಯಾಸ್ ಗೀಸರ್ ಆನ್ ಮಾಡಿಕೊಂಡು ಬಾತ್ ರೂಮ್ ಗೆ ಸ್ನಾನಕ್ಕೆಂದು ಇಬ್ಬರೂ ಹೋಗಿದ್ದರು. ಬಾತ್ ರೂಮ್ ನ ಕಿಟಕಿ ಹಾಗೂ ಬಾಗಿಲು ಸಂಪೂರ್ಣವಾಗಿ ಲಾಕ್ ಮಾಡಿ ಇಬ್ಬರು ಸ್ನಾನ ಮಾಡುತ್ತಿದ್ದರು. ಈ ಸಂದರ್ಭ ಬಾತ್ ರೂಂನಲ್ಲಿ ಕಾರ್ಬನ್ ಮೊನಾಕ್ಸೈಡ್ ಸೋರಿಕೆಯಾಗಿದ್ದು ಸ್ನಾನ ಮಾಡುತ್ತಲೇ ಇಬ್ಬರೂ ಪ್ರಜ್ಞೆ ತಪ್ಪಿ ಕುಸಿದು ಬಿದ್ದು ಮೃತಪಟ್ಟಿದ್ದಾರೆ.
ನಂತರ ಬೆಳಗ್ಗೆ ಮಾಲೀಕರು ಅನುಮಾನಗೊಂಡು ಮನೆಯನ್ನು ಪರಿಶೀಲಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಅವರು ತಕ್ಷಣ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಪೊಲೀಸರ ಸಮ್ಮುಖದಲ್ಲಿ ಬಾಗಿಲು ಮುರಿದು ಮೃತದೇಹಗಳನ್ನ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.
ಇದನ್ನೂ ಓದಿ: ಹಸೆಮಣೆ ಏರಿದ ಸಲಿಂಗಿ ಜೋಡಿ: ಫೋಟೋ ನೋಡಿ…
ತರಬನಹಳ್ಳಿಯಲ್ಲಿ ಚಂದ್ರಶೇಖರ್ ಮನೆ ಮಾಡಿಕೊಂಡಿದ್ದ. ಮೊನ್ನೆ ಸಂಜೆ ಸುಧಾರಾಣಿ ಮನೆಗೆ ಬಂದಿದ್ದರು ಎನ್ನಲಾಗಿದೆ. ಇಬ್ಬರೂ ನಂದಿಹಿಲ್ಸ್ ಬಳಿಯ ಗಾಲ್ಪ್ ಹೋಟೆಲ್ ನಲ್ಲಿ ಒಟ್ಟಿಗೆ ಕೆಲಸ ಮಾಡಿಕೊಂಡಿದ್ದು ಮದುವೆಯಾಗಲು ತಯಾರಿ ನಡೆಸುತ್ತಿದ್ದರು. ಆದರೆ ಇದೇ ಸಂದರ್ಭದಲ್ಲಿ ನಡೆಯಬಾರದಾಗಿದ್ದ ದುರಂತ ನಡೆದಿದ್ದು, ಜೋಡಿ ಮದುವೆಗೆ ಮುಂಚೆಯೇ ಮಸಣ ಸೇರಿದೆ.
ಸದ್ಯ ಮೃತದೇಹಗಳನ್ನ ಅಂಬೇಡ್ಕರ್ ಆಸ್ಪತ್ರಗೆ ಶಿಪ್ಟ್ ಮಾಡಿದ್ದು, ನಾಳೆ ಮರಣೋತ್ತರ ಪರೀಕ್ಷೆ ನಡೆಯಲಿದೆ. ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.