

ದೆಹಲಿ: ಒಂದಲ್ಲ ಒಂದು ಕಾರಣದಿಂದ ಸದ್ದು ಮಾಡುತ್ತಿರುವ ದಿ ಕೇರಳ ಸ್ಟೋರಿ ಚಿತ್ರ ಗಲ್ಲಾ ಪೆಟ್ಟಿಗೆಯಲ್ಲಿ ಸದ್ದು ಮಾಡುತ್ತಿದೆ. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲೂ ಸಾಕಷ್ಟು ಪರ-ವಿರೋಧ ಚರ್ಚೆಗಳು ನಡೆಯತ್ತಿವೆ. ದಿನದಿಂದ ದಿನಕ್ಕೆ ರಾಜಕೀಯ ಸ್ವರೂಪವನ್ನು ಪಡೆಯುತ್ತಿರುವ ಈ ಚಿತ್ರದ ನಿರ್ಮಾಪಕರ ವಿರುದ್ದ ಎನ್ಸಿಪಿ ನಾಯಕರೊಬ್ಬರು ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ.
ಎನ್ಸಿಪಿಯ ನಾಯಕ ಜಿತೇಂದ್ರ ಅವ್ಹಾದ್, ದಿ ಕೇರಳ ಸ್ಟೋರಿ ಚಿತ್ರವನ್ನು ನಿರ್ಮಿಸಿದ್ದಕ್ಕಾಗಿ ನಿರ್ಮಾಪಕನಿಗೆ ಸಾರ್ವಜನಿಕವಾಗಿ ಗಲ್ಲು ಶಿಕ್ಷೆಯನ್ನು ವಿಧಿಸಬೇಕು. ಇದು ಕೇರಳ ಮತ್ತು ಮಹಿಳೆಯರಿಗೆ ಅಗೌರವ ತೋರುವ ಚಿತ್ರವಾಗಿದ್ದು, 32 ಸಾವಿರ ಮಹಿಳೆಯರು ಎಂಬ ಈ ಕಾಲ್ಪನಿಕ ಚಿತ್ರವನ್ನು ನಿರ್ಮಿಸಿದ ನಿರ್ಮಾಪಕರು ಯಾರೇ ಆಗಿರಲಿ ಅವರನ್ನು ನೇಣಿಗೇರಿಸಬೇಕು ಎಂದಿದ್ದಾರೆ.
ಈ ಚಿತ್ರದ ಕುರಿತು ಹಲವಾರು ನಾಯಕರು ಈಗಾಗಲೇ ಮಾತನಾಡಿದ್ದು, ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಸರ್ಕಾರವು ಪಶ್ಚಿಮ ಬಂಗಾಳಲ್ಲಿ ಅಶಾಂತಿಯನ್ನು ಉಂಟು ಮಾಡಬಹುದು ಎಂಬ ಕಾರಣ ನೀಡಿ ಚಿತ್ರವನ್ನು ನಿಷೇಧಿಸಿದೆ ಹಾಗೂ ನಿಷೇಧವನ್ನು ಉಲ್ಲಂಘಿಸುವ ಚಿತ್ರಮಂದಿರದ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದಿದ್ದರು.
ಇದಲ್ಲದೆ, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಚಿತ್ರದ ನಿರ್ಮಾಪಕರ ವಿರುದ್ಧ ವಾಗ್ದಾಳಿ ನಡೆಸಿ, ಇದು ಸಂಘ ಪರಿವಾರದ ಪ್ರಚಾರ ಎಂದು ಆರೋಪಿಸಿದ್ದರು. ಈ ನಡುವೆ ಮಧ್ಯಪ್ರದೇಶ ಮತ್ತು ಉತ್ತರಪ್ರದೇಶದಲ್ಲಿ ಚಿತ್ರಕ್ಕೆ ತೆರಿಗೆ ವಿನಾಯಿತಿಯನ್ನು ಘೋಷಿಸಿಲಾಗಿದೆ.(ಏಜೆನ್ಸೀಸ್)