

ನವದೆಹಲಿ: ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿಯ ಕಾರಣದಿಂದ ಈ ಬಾರಿಯ ಐಪಿಎಲ್ ಹೆಚ್ಚು ಸುದ್ದಿಯಾಗಿದೆ. ಧೋನಿ ನಿವೃತ್ತಿ ಘೋಷಿಸುತ್ತಾರೆ, ಮುಂದಿನ ವರ್ಷ ಯೆಲ್ಲೋ ಆರ್ಮಿಯಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂದು ಅಭಿಮಾನಿಗಳು ಅಂದಾಜಿಸಿದ್ದಾರೆ. ಹೀಗಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪಂದ್ಯದ ವೇಳೆ ಸಾಕಷ್ಟು ಸಂಖ್ಯೆಯಲ್ಲಿ ಧೋನಿ ಅಭಿಮಾನಿಗಳು ಮೈದಾನಕ್ಕೆ ಆಗಮಿಸುತ್ತಿದ್ದಾರೆ.
ಧೋನಿ ಮುಂದಿನ ವರ್ಷದಿಂದ ಐಪಿಎಲ್ ಆಡುವುದಿಲ್ಲ ಎಂಬ ಚರ್ಚೆಯ ನಡುವೆ, ಟೀಂ ಇಂಡಿಯಾ ಹಾಗೂ ಸಿಎಸ್ಕೆ ತಂಡದ ಮಾಜಿ ಆಟಗಾರ ಸುರೇಶ್ ರೈನಾ ಧೋನಿ ಅಭಿಮಾನಿಗಳಿಗೆ ಸಂತಸ ಉಂಟು ಮಾಡುವಂತಹ ಸಂಗತಿಯೊಂದನ್ನು ಹಂಚಿಕೊಂಡಿದ್ದಾರೆ. ಸಿಎಸ್ಕೆ ಹಾಗೂ ಮುಂಬೈ ಇಂಡಿಯನ್ಸ್ ತಂಡದ ನಡುವಿನ ಪಂದ್ಯದ ಬಳಿಕ ಸಂದರ್ಶನವೊಂದರಲ್ಲಿ ಮಾತನಾಡುತ್ತಾ, ಈ ಬಾರಿ ಸಿಎಸ್ಕೆ ಐಪಿಎಲ್ ಟ್ರೋಫಿ ಗೆದ್ದುಕೊಂಡರೆ ಮುಂದಿನ ಸೀಸನ್ ಆಡುವುದಾಗಿ ಧೋನಿ ಹೇಳಿಕೊಂಡಿದ್ದಾರೆ ಎಂಬುದನ್ನು ರೈನಾ ಬಹಿರಂಗ ಪಡಿಸಿದ್ದಾರೆ.
ಟ್ರೋಫಿ ಗೆದ್ದ ನಂತರ ನಾನು ಇನ್ನೂ ಒಂದು ವರ್ಷ ಐಪಿಎಲ್ ಆಡುತ್ತೇನೆ ಎಂದು ಧೋನಿ ಹೇಳುತ್ತಿದ್ದರು. ಧೋನಿ ಈ ಸೀಸನ್ನಲ್ಲಿ ನಿಜವಾಗಿಯೂ ಉತ್ತಮವಾಗಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಜತೆಗೆ ನಾಯಕತ್ವದ ಕಾರಣದಿಂದ ಅನೇಕರು ಚೆನ್ನೈ ತಂಡದ ಪಂದ್ಯ ನೋಡುವಂತೆ ಮಾಡಿದ್ದಾರೆ. ಪ್ರತಿ ಪಂದ್ಯದ ಮುಕ್ತಾಯದ ಬಳಿಕ 'ಧೋನಿ ಕಿ ಪಾಠ ಶಾಲಾ'(ಧೋನಿ ಮಾಸ್ಟರ್ ಕ್ಲಾಸ್) ಇರುತ್ತದೆ ಎಂದು ರೈನಾ ಹೇಳಿಕೊಂಡಿದ್ದಾರೆ. (ಏಜೆನ್ಸೀಸ್)