ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಕಾರ್ಯಕರ್ತರ ಒತ್ತಾಯ: ಕಾಂಗ್ರೆಸ್​ಗೆ ಕಾಡುತ್ತಿದೆ ಗ್ಯಾರಂಟಿಗಳ ಆತಂಕ

congress
Published on

ಬೆಂಗಳೂರು: ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಕಾಂಗ್ರೆಸ್ ಗ್ಯಾರಂಟಿಗಳ ಆತಂಕ ಶುರುವಾಗಿದೆ. ಗ್ಯಾರಂಟಿಗಳನ್ನು ಅನುಷ್ಠಾನ ಮಾಡದೇ ಚುನಾವಣೆಗೆ ಹೋದರೆ ಹಿನ್ನಡೆಯಾಗುವ ಆತಂಕ ಎದುರಾಗಿದ್ದು, ಎಲ್ಲ ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಿದ ಬಳಿಕ ಸ್ಥಳೀಯ ಸಂಸ್ಥೆ ಚುನಾವಣೆ ನಡೆಸಲು ಕಾಂಗ್ರೆಸ್​ ಚಿಂತನೆ ನಡೆಸುತ್ತಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಸಚಿವ ಸಂಪುಟ ರಚನೆ ಆಗುತ್ತಿದ್ದಂತೆ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಕೈ ಕಾರ್ಯಕರ್ತರು ಒತ್ತಾಯ ಮಾಡುತ್ತಿದ್ದಾರೆ. ಬಿಬಿಎಂಪಿ, ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣಾ ಮಾಡುವಂತೆ ಒತ್ತಾಯಿಸಿದ್ದಾರೆ. 135 ಸ್ಥಾನಗಳನ್ನು ಗೆದ್ದು ಕಾರ್ಯಕರ್ತರು ಹುಮ್ಮಸ್ಸಿನಲ್ಲಿದ್ದಾರೆ, ಇದೇ ಜೋಶ್​ನಲ್ಲಿ ಸ್ಥಳೀಯ ಚುನಾವಣೆಗೆ ಹೋದರೆ ಒಳ್ಳೆಯದು. ಹೆಚ್ಚು ಸ್ಥಾನ ಗೆಲ್ಲಬಹುದು ಎಂಬ ಅಭಿಪ್ರಾಯವನ್ನು ಸ್ಥಳೀಯ ಮುಖಂಡರು ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಆದರೆ ಕಾಂಗ್ರೆಸ್​ ನೇತೃತ್ವದ ಸರ್ಕಾರಕ್ಕೆ ಗ್ಯಾರಂಟಿಗಳ ಆತಂಕ ಕಾಡುತ್ತಿದೆ. ಗ್ಯಾರಂಟಿಗಳ ಅನುಷ್ಠಾನ ಮಾಡಬೇಕಾದರೆ ಕೆಲ‌ ಮಾನದಂಡಗಳು ಹಾಕಬೇಕು. ಮಾನದಂಡಗಳ ಆಧಾರಿತವಾಗಿ ಗ್ಯಾರಂಟಿಗಳ ಜಾರಿ ಆಗುತ್ತವೆ. ಅನುಷ್ಠಾನ ಆಗದೆ ಚುನಾವಣೆ ಮಾಡಲು ಆಗುವುದಿಲ್ಲ.

ಒಂದು ವೇಳೆ ಚುನಾವಣೆಗೆ ಹೋದರೆ ಪಕ್ಷಕ್ಕೆ ಹಿನ್ನಡೆಯಾಗುತ್ತದೆ. ಇದರಿಂದ ಸರ್ಕಾರಕ್ಕೆ ಮುಜುಗರವೂ ಆಗಬಹುದು. ವಿಪಕ್ಷಗಳು ಇದನ್ನೇ ದೊಡ್ಡ ಅಸ್ತ್ರ ಮಾಡಿಕೊಳ್ಳಬಹುದು. ಹಾಗಾಗಿ ಗ್ಯಾರಂಟಿ ಅನುಷ್ಠಾನ ಬಳಿಕವೇ ಬಿಬಿಎಂಪಿ, ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ನಡೆಸುವ ಚಿಂತನೆಯಲ್ಲಿ ಸರ್ಕಾರ ತೊಡಗಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net