ಇಂದು ಅನ್ನಭಾಗ್ಯ ಯೋಜನೆಯಡಿ ಹಣ ವರ್ಗಾವಣೆಗೆ ಚಾಲನೆ...

Annabhagya
Published on

ಬೆಂಗಳೂರು: ಇಂದು ಸರ್ಕಾರದ ಮೂರನೇ ಗ್ಯಾರಂಟಿ ಯೋಜನೆ ಆರಂಭಗೊಳ್ಳಲಿದ್ದು ಬಿಪಿಎಲ್ ಹಾಗೂ ಅಂತ್ಯೋದಯಪಡಿತರ ದಾರರಿಗೆ ಅನ್ನಭಾಗ್ಯ ಯೋಜನೆಯ ಹಣ ವರ್ಗಾವಣೆ ಆಗಲಿದೆ.

ಚುನಾವಣಾ ಪೂರ್ವದಲ್ಲಿ ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ಪ್ರತಿ ಮನೆಗೂ 10 ಕೆ.ಜಿ. ಅಕ್ಕಿ ಉಚಿತವಾಗಿ ನೀಡಲಾಗುವುದು ಎನ್ನಲಾಗಿತ್ತು. ನಂತರ ಬಿಪಿಎಲ್ ಪಡಿತರದಾರರಿಗೆ ‍‍10ಕೆಜಿ ಅಕ್ಕಿ ಗ್ಯಾರಂಟಿ ಕಾಂಗ್ರೆಸ್​ ಘೋಷಿಸಿತ್ತು.

ಇದೀಗ ಐದು ಕೆಜಿ ಅಕ್ಕಿ ಜತೆಗೆ ಉಳಿದ 5 ಕೆ.ಜಿ ಅಕ್ಕಿ ಬದಲಿಗೆ 170 ರೂ. ಹಣವನ್ನು ನೇರವಾಗಿ ಫಲಾನುಭವಿಗಳ ಖಾತೆಗೆ ವರ್ಗಾವಣೆ ಆಗಲಿದ್ದು ಇಂದು ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕೃತ ಚಾಲನೆ ನೀಡಲಿದ್ದಾರೆ.

ಇಂದು ಸಂಜೆ ವಿಧಾನ ಸೌಧದ ಸಮ್ಮೇಳನ ಸಭಾಂಗಣದಲ್ಲಿ ಯೋಜನೆಗೆ ಚಾಲನೆ ಸಿಗಲಿದ್ದು ಡಿಬಿಟಿ ಮೂಲಕ ಬಿಪಿಎಲ್ ಕುಟುಂಬದ ಪ್ರತಿ ವ್ಯಕ್ತಿಗೆ 170 ರೂ.ನಂತೆ ಹಣ, ಕುಟುಂಬದ ಮುಖ್ಯಸ್ಥನ ಖಾತೆಗೆ ನೇರವಾಗಿ ವರ್ಗಾವಣೆ ಆಗಲಿದೆ. ಈ ಗ್ಯಾರಂಟಿ ಯೋಜನೆಗೆ ಒಟ್ಟು 1,28,16,253 ಮಂದಿ ಫಲಾನುಭವಿಗಳಿದ್ದು ಈ ಪೈಕಿ ಶೇಕಡಾ 82% ಮಂದಿ ತಕ್ಷಣ ಯೋಜನೆ ಪಡೆಯಲು ಅರ್ಹರಾಗಿದ್ದಾರೆ ಎನ್ನಲಾಗಿದೆ. ಅದಲ್ಲದೇ. ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡಿದ್ದರೆ ಮಾತ್ರವೇ ಹಣ ವರ್ಗಾವಣೆ ಆಗುವುದಾಗಿ ಹೇಳಲಾಗಿದೆ.

ಸದ್ಯ 1.2 ಕೋಟಿ ಮಂದಿ ಬ್ಯಾಂಕ್ ಖಾತೆ ಹಾಗೂ ಆಧಾರ್ ಲಿಂಕ್ ಮಾಡಿಸಿದ್ದು ಇನ್ನು ಉಳಿದ 22 ಲಕ್ಷ ಕಾರ್ಡ್​ದಾರರು ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡಿದ ಬಳಿಕವೇ ಹಣ ವರ್ಗಾವಣೆ ನಡೆಯಲಿದೆ.

ಯಾರಿಗೆ ಸಿಗುತ್ತೆ ಹಣ?

  1. ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬ ಸದಸ್ಯರಿಗೆ.
  2. ನಾಲ್ಕಕ್ಕಿಂತ ಹೆಚ್ಚು ಜನರಿರೋ ಅಂತ್ಯೋದಯ ಕಾರ್ಡ್ ಹೊಂದಿರೋ ಕುಟುಂಬಗಳಿಗೆ.

ಯಾರಿಗೆ ಸಿಗೋದಿಲ್ಲ ?

  1. ಎಪಿಎಲ್ ಕಾರ್ಡ್ ಹೊಂದಿರುವವರಿಗೆ ಹಣ ಭಾಗ್ಯ ಇಲ್ಲ
  2. 3ಕ್ಕಿಂತ ಕಮ್ಮಿ ಜನರಿರೋ ಅಂತ್ಯೋದಯ ಕಾರ್ಡ್ ದಾರರಿಗೆ
  3. ಕಳೆದ 3 ತಿಂಗಳಿನಿಂದ ಪಡಿತರ ಪಡೆಯದ ಕುಟುಂಬಗಳಿಗೆ
  4. ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡದೇ ಇರುವವರು, ಮತ್ತು ಸಕ್ರೀಯ ಬ್ಯಾಂಕ್ ಖಾತೆ ಹೊಂದಿರದವರಿಗೆ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net