More

    ಅನ್ನಭಾಗ್ಯಕ್ಕೆ ಅಕ್ಕಿ ಹೆಚ್ಚುವರಿ: ಜಿಲ್ಲೆಯಲ್ಲಿ ಪ್ರತಿ ತಿಂಗಳು 40 ಸಾವಿರ ಕ್ವಿಂಟಾಲ್ ಅಗತ್ಯ

    ಹೀರಾನಾಯ್ಕ ಟಿ. ಬಳ್ಳಾರಿ
    ಕಾಂಗ್ರೆಸ್‌ನ ಗ್ಯಾರಂಟಿ ಸ್ಕೀಂ ಗಳಲ್ಲಿ ಮಹತ್ವಾಕಾಂಕ್ಷೆ ಯೋಜನೆಯಾದ ಅನ್ನಭಾಗ್ಯ ಯೋಜನೆ ಜಾರಿಗೊಳಿಸಲು ಸರ್ಕಾರ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆ. ಪಡಿತರ ಚೀಟಿ ಹೊಂದಿರುವ ಪ್ರತಿ ಸದಸ್ಯರಿಗೆ 10 ಕೆಜಿಯಂತೆ ಅಕ್ಕಿ ನೀಡುವುದಾಗಿ ಘೋಷಣೆ ಮಾಡಲಾಗಿದ್ದು, ಇದರಿಂದಾಗಿ ಬಳ್ಳಾರಿ ಜಿಲ್ಲೆಯಲ್ಲಿ ಪ್ರತಿ ತಿಂಗಳು 40 ಸಾವಿರ ಕ್ವಿಂಟಾಲ್ ಅಕ್ಕಿ ಹೆಚ್ಚುವರಿಯಾಗಿ ಬೇಕಾಗುತ್ತದೆ.

    10 ಕೆಜಿ ವಿತರಣೆ ಮಾಡಿದಲ್ಲಿ 1.01 ಲಕ್ಷ ಕ್ವಿಂಟಾಲ್ ಅಕ್ಕಿ ಬೇಕಾಗುತ್ತದೆ

    ಪ್ರಸಕ್ತ ಜಿಲ್ಲೆಯಲ್ಲಿ ಅಂತ್ಯೋದಯ ಕಾರ್ಡ್ ಹೊಂದಿರುವವರಿಗೆ ಪ್ರತಿ ಕಾರ್ಡ್‌ಗೆ 35 ಕೆಜಿ ಅಕ್ಕಿ ಹಾಗೂ ಬಿಪಿಎಲ್ ಕಾರ್ಡ್‌ದಾರರಿಗೆ ಪ್ರತಿ ಸದಸ್ಯರಿಗೆ 6 ಕೆಜಿಯಂತೆ ಅಕ್ಕಿ ವಿತರಣೆ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ 3 ಲಕ್ಷ ಅಂತ್ಯೋದಯ ಹಾಗೂ ಬಿಪಿಎಲ್ ಪಡಿತರ ಚೀಟಿ ಇವೆ. 10.14 ಲಕ್ಷ ಜನರಿಗೆ ತಲಾ 10 ಕೆಜಿಯಂತೆ ಅಕ್ಕಿ ವಿತರಣೆ ಮಾಡಿದಲ್ಲಿ 1.01 ಲಕ್ಷ ಕ್ವಿಂಟಾಲ್ ಅಕ್ಕಿ ಬೇಕಾಗುತ್ತದೆ. ಈಗಾಗಲೇ ಬಿಪಿಎಲ್ ಕಾರ್ಡ್ ಹೊಂದಿರುವ ಪ್ರತಿ ಸದಸ್ಯರಿಗೆ 6 ಕೆಜಿಯಂತೆ ವಿತರಣೆ ಮಾಡಲಾಗುತ್ತಿದ್ದು, ಪ್ರತಿ ತಿಂಗಳು 60,847 ಕ್ವಿಂಟಾಲ್ ಅಕ್ಕಿ ವಿತರಣೆ ಮಾಡಲಾಗುತ್ತಿದೆ. ಅಂತ್ಯೋದಯ ಕಾರ್ಡ್‌ಗೆ 35 ಕೆಜಿಯಂತೆ ನೀಡಲಾಗುತ್ತಿದ್ದು, ಅದಕ್ಕೆ 9,118 ಕ್ವಿಂಟಾಲ್ ಅಕ್ಕಿ ವಿತರಣೆ ಮಾಡಲಾಗುತ್ತಿದೆ. ಇದರಿಂದ ಪ್ರತಿ ತಿಂಗಳು 40,564 ಕ್ವಿಂಟಾಲ್ ಅಕ್ಕಿ ಹೆಚ್ಚುವರಿಯಾಗಿ ಜಿಲ್ಲೆಗೆ ಅಗತ್ಯವಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಮಾಹಿತಿ ನೀಡಿದೆ.

    ಇದನ್ನೂ ಓದಿ: ರಾಜ್ಯದಲ್ಲಿ ಅಕ್ಕಿ ಲಭ್ಯವಿದ್ದರೆ ಟೆಂಡರ್ ಮುಖೇನ ಖರೀದಿ: ಸಿಎಂ ಸಿದ್ದರಾಮಯ್ಯ


    ಒಂದೆಡೆ ಅಕ್ಕಿಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ನಡುವೆ ಜಟಾಪಟಿ ಶುರುವಾಗಿದ್ದು, ರಾಜ್ಯದಲ್ಲಿ ಅಕ್ಕಿ ಕೊರತೆಯಿಂದ ಅನ್ನಭಾಗ್ಯ ಯೋಜನೆ ಜಾರಿಗೆ ವಿಳಂಬವಾಗಿದ್ದು, ಕೇಂದ್ರದಿಂದ ನೀಡುವ 5 ಕೆಜಿ ಅಕ್ಕಿ ಜತೆಗೆ ರಾಜ್ಯ ಸರ್ಕಾರದಿಂದ 5 ಕೆಜಿ ಅಕ್ಕಿಯ ಹಣವನ್ನು ಫಲಾನುಭವಿಗಳ ಖಾತೆಗೆ ನೀಡಲು ಚಿಂತನೆ ನಡೆದಿದೆ. ಇನ್ನು ಜುಲೈ ತಿಂಗಳಲ್ಲಿಯೂ ಅನ್ನಭಾಗ್ಯ ಯೋಜನೆ ಜಾರಿಗೆ ಕಷ್ಟವಾಗಿದ್ದು, ಹೆಚ್ಚುವರಿ ಅಕ್ಕಿ ಹಂಚಿಕೆ ಮಾಡುವುದು ಕಷ್ಟವಾಗಿದೆ.

    ಹೊಸ ಕಾರ್ಡ್‌ಗೆ ಹೆಚ್ಚಿದ ಬೇಡಿಕೆ

    ಕಾಂಗ್ರೆಸ್‌ನ ಗ್ಯಾರಂಟಿ ಸ್ಕೀಂಗಳಿಂದಾಗಿ ಹೊಸ ಬಿಪಿಎಲ್ ಕಾರ್ಡ್ ಪಡೆಯುವವರ ಸಂಖ್ಯೆ ಹೆಚ್ಚಾಗಿದ್ದು, ಅದಕ್ಕಾಗಿ ಅರ್ಜಿ ಸಲ್ಲಿಸುತ್ತಿದ್ದಾರೆ. 2018-19ರಲ್ಲಿ ಹೊಸ ಪಡಿತರ ಚೀಟಿಗೆ 14,043 ಜನರು ಅರ್ಜಿ ಸಲ್ಲಿಸಿದ್ದರು. ಅದರಂತೆ 2019-20ರಲ್ಲಿ 8,860, 2020-21ರಲ್ಲಿ 21,579, ಪ್ರಸಕ್ತ ಸಾಲಿನಲ್ಲಿ 44,482 ಜನರು ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಅದರಲ್ಲಿ 35,537 ಅರ್ಜಿಗಳು ವಿಲೇವಾರಿಯಾಗಿದ್ದು, ಇನ್ನುಳಿದ 8945 ಅರ್ಜಿಗಳು ಬಾಕಿ ಉಳಿದಿವೆ. ಬಳ್ಳಾರಿ ತಾಲೂಕಿನಲ್ಲಿ (21,574)ಅತಿಹೆಚ್ಚು ಅರ್ಜಿ ಸಲ್ಲಿಸಲಾಗಿದೆ. ಕಂಪ್ಲಿಯಲ್ಲಿ (964) ಅತಿ ಕಡಿಮೆ ಅರ್ಜಿ ಸಲ್ಲಿಸಿದ್ದಾರೆ.

    ಜಿಲ್ಲೆಯಲ್ಲಿ 10.40 ಲಕ್ಷ ಫಲಾನುಭವಿಗಳು

    ಜಿಲ್ಲೆಯಲ್ಲಿ ಅಂತ್ಯೋದಯ ಕಾರ್ಡ್ ಹೊಂದಿರುವ 26,053 ಹಾಗೂ ಬಡತನ ರೇಖೆಯಿಂದ ಕಡಿಮೆ ಇರುವ 10.14 ಲಕ್ಷ ಫಲಾನುಭವಿಗಳು ಅನ್ನಭಾಗ್ಯ ಯೋಜನೆಯ ಪ್ರಯೋಜನ ಪಡೆದುಕೊಳ್ಳಲಿದ್ದಾರೆ. ಜಿಲ್ಲೆಯಲ್ಲಿ ಅಂತ್ಯೋದಯ 26,061 ಮತ್ತು 2,74,312 ಬಿಪಿಎಲ್ ಪಡಿತರ ಚೀಟಿ ಇವೆ. ಅನ್ನಭಾಗ್ಯ ಯೋಜನೆ ಪಡೆಯುವಲ್ಲಿ ಬಳ್ಳಾರಿ ತಾಲೂಕು ಮೊದಲನೇ ಸ್ಥಾನ ಪಡೆದರೆ, ಕುರುಗೋಡು ಕೊನೇ ಸ್ಥಾನದಲ್ಲಿದೆ.


    ಜಿಲ್ಲೆಯಲ್ಲಿ ಅಂತ್ಯೋದಯ ಹಾಗೂ ಬಿಎಲ್‌ಎಲ್ ಸೇರಿ ಒಟ್ಟು 3 ಲಕ್ಷ ಪಡಿತರ ಚೀಟಿ ವಿತರಣೆ ಮಾಡಲಾಗಿದೆ. ಪ್ರತಿ ತಿಂಗಳು ಸರಾಸರಿ 70 ಸಾವಿರ ಕ್ವಿಂಟಾಲ್ ಅಕ್ಕಿ ವಿತರಿಸಲಾಗುತ್ತಿದೆ. ಅನ್ನಭಾಗ್ಯ ಯೋಜನೆಯಡಿ ಅಕ್ಕಿ ವಿತರಿಸಿದಲ್ಲಿ 40 ಸಾವಿರ ಕ್ವಿಂಟಾಲ್ ಹೆಚ್ಚುವರಿಯಾಗಿ ಬೇಕಾಗುತ್ತದೆ. ಸರ್ಕಾರದ ನಿರ್ದೇಶನದಂತೆ ಕ್ರಮ ಕೈಗೊಳ್ಳಲಾಗುವುದು.
    ಮಹಮದ್ ಖೈಜರ್,ಜಿಲ್ಲಾ ಜಂಟಿ ನಿರ್ದೇಶಕ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts