ದೇಶ ವಿಭಜನೆಗೆ ಕಾಂಗ್ರೆಸ್, ಜಿನ್ನಾ, ಮೌಂಟ್​ ಬ್ಯಾಟನ್ ಕಾರಣ; NCERT ಹೊಸ ಪಠ್ಯ; ಆ ಪಠ್ಯಕ್ಕೆ ಬೆಂಕಿ ಹಚ್ಚಿ ಎಂದ ಕಾಂಗ್ರೆಸ್| Congress

Pawan Khera
Published on

Congress: ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಮಂಡಳಿ (NCERT) ಶನಿವಾರ ಬಿಡುಗಡೆ ಮಾಡಿರುವ ಹೊಸ ಪಠ್ಯವೊಂದರಲ್ಲಿ ಕಾಂಗ್ರೆಸ್​, ಮೊಹಮ್ಮದ್ ಅಲಿ ಜಿನ್ನಾ ಹಾಗೂ ಆಗಿನ ವೈಸರಾಯ್ ಲಾರ್ಡ್ ಮೌಂಟ್ ಬ್ಯಾಟನ್ ದೇಶ ವಿಭಜನೆಗೆ ಮೂವರು ತಪ್ಪಿತಸ್ಥರು ಎಂದು ಬಣ್ಣಿಸಿದ್ದು, ತೀವ್ರ ರಾಜಕೀಯ ಬಿರುಗಾಳಿ ಎಬ್ಬಿಸಿದೆ. ಇಂತಹ ವಿಕೃತ ಇತಿಹಾಸ ತಿಳಿಸುವ ಪಠ್ಯಕ್ಕೆ ಬೆಂಕಿ ಹಚ್ಚಬೇಕು ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.

ಈ ಕುರಿತು ಮಾತನಾಡಿರುವ ಕಾಂಗ್ರೆಸ್ ನಾಯಕ ಪವನ್ ಖೇರಾ, "1938ರಲ್ಲಿ ಗುಜರಾತ್​ನಲ್ಲಿ ನಡೆದ ಹಿಂದೂ ಮಹಾಸಭಾದ ರಾಷ್ಟ್ರೀಯ ಸಮ್ಮೇಳನದ ಘೋಷಣೆ ಬಗ್ಗೆ NCERT ಪಠ್ಯದಲ್ಲಿ ಉಲ್ಲೇಖಿಸಲಾಗಿದೆಯೇ?, ಅಂದು ಹಿಂದೂಗಳು ಮತ್ತು ಮುಸ್ಲಿಮರು ಒಂದೇ ದೇಶದಲ್ಲಿ ವಾಸಿಸಲು ಸಾಧ್ಯವಿಲ್ಲ ಎಂದು ಹಿಂದೂ ಮಹಾಸಭಾ ಘೋಷಿಸಿತ್ತು. ಹಾಗೆಯೇ 1940ರಲ್ಲಿ ನಡೆದ ಮುಸ್ಲಿಂ ಲೀಗ್ ಅಧಿವೇಶನದಲ್ಲಿ ಜಿನ್ನಾ ಹಿಂದೂ ಮಹಾಸಭಾದ ಸಿದ್ಧಾಂತವನ್ನು ಅಳವಡಿಸಿಕೊಂಡರು. ಇದನ್ನೂ ಆ ಪಠ್ಯದಲ್ಲಿ ಉಲ್ಲೇಖಿಸಲಾಗಿದೆಯೇ? ಎಂದು ವಾಗ್ದಾಳಿ ನಡೆಸಿದರು.

ಇದೆಲ್ಲವನ್ನೂ ಆ ಪಠ್ಯದಲ್ಲಿ ಉಲ್ಲೇಖಿಸದಿದ್ದರೆ ಅಂತಹ ಪಠ್ಯವನ್ನು ಸುಟ್ಟುಹಾಕಿ. ಹಿಂದೂ ಮಹಾಸಭಾ ಮತ್ತು ಮುಸ್ಲಿಂ ಲೀಗ್ ನಡುವಿನ ಸಂಬಂಧದಿಂದಾಗಿ ದೇಶ ವಿಭಜನೆ ಸಂಭವಿಸಿತು. ತಲೆಮಾರುಗಳು ಕಳೆದರು ದೇಶ ಅವರನ್ನು ಕ್ಷಮಿಸುವುದಿಲ್ಲ. 1942ರ ಬಳಿಕ ಬಂಗಾಳ, ಸಿಂಧ್ ಮತ್ತು ವಾಯುವ್ಯ ಗಡಿನಾಡು ಪ್ರಾಂತ್ಯದಲ್ಲಿ (NWFP) ಮಹಾಸಭಾ-ಮುಸ್ಲಿಂ ಲೀಗ್ ಸಮ್ಮಿಶ್ರ ಸರ್ಕಾರಗಳು ವಿಭಜನೆಗೆ ಪ್ರಮುಖ ಕಾರಣವಾದವು ಎಂದು ಹೇಳಿದರು.

ಕಾಂಗ್ರೆಸ್ ಆರೋಪಕ್ಕೆ ಬಿಜೆಪಿ ತಿರುಗೇಟು

ಕಾಂಗ್ರೆಸ್ ಆರೋಪಗಳಿಗೆ ಪ್ರತಿಕ್ರಿಯಿಸಿದ ಬಿಜೆಪಿ ವಕ್ತಾರ ಗೌರವ್ ಭಾಟಿಯಾ, ರಾಹುಲ್ ಗಾಂಧಿಯವರ ತುಷ್ಟೀಕರಣ ರಾಜಕೀಯ ಜಿನ್ನಾ ಅವರ ವಿಭಜಕ ಸಿದ್ಧಾಂತವನ್ನು ಪ್ರತಿಬಿಂಬಿಸುತ್ತದೆ. ಎನ್‌ಸಿಇಆರ್‌ಟಿ ವಿಭಜನೆಯ ಸತ್ಯವನ್ನು ಪಠ್ಯಪುಸ್ತಕಗಳಿಗೆ ತಂದಿದೆ. ರಾಹುಲ್-ಜಿನ್ನಾ ಪಕ್ಷದ ಪಾತ್ರ ಬಹಿರಂಗಗೊಂಡಿರುವುದರಿಂದ ಅವರು ಗಲಿಬಿಲಿಗೊಂಡಿದ್ದಾರೆ" ಎಂದು ತಿರುಗೇಟು ನೀಡಿದ್ದಾರೆ.

NCERT ಪಠ್ಯದಲ್ಲಿರುವುದು ಏನು?

NCERT ಶನಿವಾರ ಎರಡು ಪ್ರತ್ಯೇಕ ಪಠ್ಯಗಳನ್ನು ಪ್ರಕಟಿಸಿದೆ. ಒಂದು 6 ರಿಂದ 8 ನೇ ತರಗತಿಗಳಿಗೆ ಮತ್ತು ಇನ್ನೊಂದು 9 ರಿಂದ 12 ನೇ ತರಗತಿ ವಿದ್ಯಾರ್ಥಿಗಳಿಗೆ ಹೊಸ ಪಠ್ಯ ಪ್ರಕಟಿಸಿದೆ. ಅದರಲ್ಲಿ ದೇಶ ವಿಭಜನಯೆ ಕರಾಳ ದಿನ ಎಂಬ ಪಠ್ಯ ಸೇರಿಸಲಾಗಿದೆ.

ದೇಶ ವಿಭಜಿಸಿದವರು ಎಂಬ ಪಠದ್ಯದಲ್ಲಿ, ಅಂತಿಮವಾಗಿ 1947 ಆಗಸ್ಟ್ 15ರಂದು ಭಾರತ 2 ದೇಶಗಳಾಗಿ ವಿಭಜನೆಯಾಯಿತು. ಇದು ಕೇವಲ ಒಬ್ಬರಿಂದಾಗಿಲ್ಲ. ದೇಶ ವಿಭಜನೆಗೆ ಮೂವರು ಕಾರಣರು, ಒಂದು ಕಾಂಗ್ರೆಸ್, ಎರಡು ಮೊಹಮ್ಮದ್ ಅಲಿ ಜಿನ್ನಾ ಹಾಗೂ ಅಂದಿನ ವೈಸ್​ರಾಯ್ ಲಾರ್ಡ್ ಮೌಂಟ್ ಬ್ಯಾಟನ್ ಕಾರಣ ಎಂದು ವಿವರಿಸಿದೆ. ಜೊತೆಗೆ ಅಂದಿನಿಂದ ಕಾಶ್ಮೀರ ಭಾರತದ ವಿದೇಶಾಂಗ ನೀತಿಗೆ ತೊಡಕಾಗಿ ಪರಿಣಮಿಸಿದೆ ಎಂದು ಹೇಳಿದೆ.

ಜೊತೆಗೆ ತಪ್ಪು ಚಿಂತನೆಯ ಕಾರಣಗಳಿಂದ ದೇಶ ವಿಭಜನೆ ನಡೆಯಿತು. ಹಿಂದುಗಳು ಮತ್ತು ಮುಸ್ಲಿಮರು ಎರಡು ವಿಭಿನ್ನ ಧಾರ್ಮಿಕ ಸಿದ್ಧಾಂತ, ಸಾಮಾಜಿಕ ಆಚರಣೆಗಳು, ಸಾಹಿತ್ಯಗಳಿಗೆ ಸಂಬಂಧಿಸಿದವರಾಗಿದ್ದಾರೆ ಎಂದು 1940ರ ಮುಸ್ಲಿಂ ಲೀಗ್ ಅಧಿವೇಶನದಲ್ಲಿ ಮೊಹಮ್ಮದ್ ಅಲಿ ಜಿನ್ನಾ ಹೇಳಿದ್ದಾರೆ ಎಂದು ಪಠ್ಯದಲ್ಲಿ ಹೇಳಲಾಗಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net