

Firing: ಹರಿಯಾಣದ ಗುರುಗ್ರಾಮ್ನ ಸೆಕ್ಟರ್-56ನಲ್ಲಿರುವ ವಿವಾದಾತ್ಮಕ ಯುಟ್ಯೂಬರ್ ಮತ್ತು ಓಟಿಟಿ ಹಿಂದಿ ಬಿಗ್ ಬಾಸ್ ವಿಜೇತ ಎಲ್ವಿಶ್ ಯಾದವ್ ನಿವಾಸದ ಮೇಲೆ ಇಂದು ಬೆಳಗ್ಗೆ 5.30ರ ಸುಮಾರಿಗೆ ಬೈಕ್‌ನಲ್ಲಿ ಬಂದ ಮೂವರು ದುಷ್ಕರ್ಮಿಗಳು 25-30 ಸುತ್ತು ಗುಂಡು ಹಾರಿಸಿ ಪರಾರಿಯಾಗಿದ್ದಾರೆ ಎಂದು ವರದಿಯಾಗಿದೆ.
ಗುಂಡಿನ ದಾಳಿಯ ಸಮಯದಲ್ಲಿ ಎಲ್ವಿಶ್ ಯಾದವ್ ಮನೆಯಲ್ಲಿ ಇರಲಿಲ್ಲ ಎನ್ನಲಾಗಿದೆ. ಯಾವುದೋ ಕೆಲಸದ ನಿಮಿತ್ತ ಹರಿಯಾಣದ ಹೊರಗೆ ಹೋಗಿದ್ದರು. ಮನೆಯ ನೆಲ ಮಹಡಿ ಮತ್ತು ಮೊದಲ ಮಹಡಿಯನ್ನು ಗುರಿಯಾಗಿಸಿಕೊಂಡು ಗುಂಡಿನ ದಾಳಿ ನಡೆದಿದೆ. ಎಲ್ವಿಸ್ ಕುಟುಂವ ಎರಡನೇ ಮತ್ತು ಮೂರನೇ ಮಹಡಿಯಲ್ಲಿ ವಾಸಿಸುತ್ತಿದೆ. ಮನೆಯ ಉಸ್ತುವಾರಿ ಮತ್ತು ಕೆಲವು ಕುಟುಂಬಸ್ಥರು ಒಳಗಿದ್ದರು, ದಾಳಿಯಲ್ಲಿ ಯಾರಿಗೂ ಗಾಯಗಳಾಗಿಲ್ಲ. ಘಟನೆ ಬಗ್ಗೆ ಇನ್ನೂ ಯಾವುದೇ ದೂರು ದಾಖಲಿಸಿಲ್ಲ. ಇಂತಹ ದಾಳಿಯನ್ನು ಸುಲಿಗೆ ಮಾಡಲು ಹೆದರಿಸುವ ತಂತ್ರ ಎನ್ನಲಾಗುತ್ತಿದೆ.
ಗುಂಡಿನ ದಾಳಿ ಬಗ್ಗೆ ಮಾತನಾಡಿರುವ ಎಲ್ವಿಶ್ ತಂದೆ ರಾಮಾವತಾರ್ ಯಾದವ್, ತಮ್ಮ ಮಗನಿಗೆ ಈ ಮುನ್ನ ಯಾವುದೇ ಬೆದರಿಕೆ ಬಂದಿಲ್ಲ. ಪೊಲೀಸರು ಇಲ್ಲಿದ್ದಾರೆ. ಗುಂಡು ಹಾರಿಸಿದಾಗ ನಾನು ಮಲಗಿದ್ದೆ. ಸುಮಾರು 25-30 ಗುಂಡು ಹಾರಿಸಲಾಗಿದೆ. ಸಿಸಿಟಿವಿಯಲ್ಲಿ ಬೈಕ್‌ನಲ್ಲಿ ಮೂವರು ಪುರುಷರು ಕಾಣಿಸಿಕೊಂಡಿದ್ದಾರೆ, ಆದರೆ ಇಬ್ಬರು ಗೇಟ್‌ನಲ್ಲಿ ನಿಂತು ಗುಂಡು ಹಾರಿಸುವುದು ಕಂಡಿದೆ" ಎಂದು ತಿಳಿಸಿದರು.
ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದು, ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ. ಹತ್ತಿರದ ಪ್ರದೇಶಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಸಹ ಸ್ಕ್ಯಾನ್ ಮಾಡಲಾಗುತ್ತಿದೆ. ಕಾನೂನು ಕ್ರಮ ಕೈಗೊಳ್ಳಲಾಗಿದ್ದು, ಕುಟುಂಬ ದೂರು ನೀಡಿದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.
ಎಲ್ವಿಶ್ ಯಾದವ್ ಕೇವಲ ಯುಟ್ಯೂಬರ್ ಅಷ್ಟೇ ಅಲ್ಲದೇ, ರಾಜಕೀಯ ನಾಯಕರ ಪ್ರಭಾವಿಗಳ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ. ಕಳೆದ ವರ್ಷ ಹಾವಿನ ವಿಷವನ್ನು ಮಾದಕ ವಸ್ತುವಾಗಿ ಬಳಸಿದ ರೇವ್ ಪಾರ್ಟಿ ಆಯೋಜಿಸಿದ್ದ ಆರೋಪದ ಮೇಲೆ ಅವರನ್ನು ಬಂಧಿಸಲಾಗಿತ್ತು. ಬಳಿಕ ಜಾರಿ ನಿರ್ದೇಶನಾಲಯವು ಅವರ ವಿರುದ್ಧ ಪಿಎಂಎಲ್ಎ ಅಡಿ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಿತ್ತು. (ಏಜೆನ್ಸೀಸ್)