

ನ್ಯೂಯಾರ್ಕ್: ಬೇಬಿ ಪೌಡರ್ನಲ್ಲಿ ಕ್ಯಾನ್ಸರ್ಗೆ ಕಾರಣವಾಗುವ ಅಸ್ಬೆಸ್ಟಾಸ್ (ಕಲ್ನಾರು) ಅಂಶಗಳಿವೆ ಎಂಬ ಕಾರಣಕ್ಕಾಗಿ ಕಾನೂನು ವಿಚಾರಣೆ ಎದುರಿಸುತ್ತಿರುವ ಹಾಗೂ 43,305 ಕೋಟಿ ರೂ. ದಂಡಕ್ಕೂ ಗುರಿಯಾಗಿರುವ ಜಾನ್ಸನ್ ಆ್ಯಂಡ್ ಜಾನ್ಸನ್ ಕಂಪನಿ ಅಮೆರಿಕ ಹಾಗೂ ಕೆನಡಾದಲ್ಲಿ ಮಾರಾಟ ಸ್ಥಗಿತಗೊಳಿಸಿರುವುದಾಗಿ ಘೋಷಿಸಿದೆ.
ಕಂಪನಿ ವಿರುದ್ಧ 19 ಸಾವಿರ ಪ್ರಕರಣಗಳು ದಾಖಲಾಗಿದ್ದು, ವಿವಿಧ ಕೋರ್ಟ್ಗಳಲ್ಲಿ ವಿಚಾರಣೆ ನಡೆಯುತ್ತಿದೆ. ಕಂಪನಿ ಉತ್ಪನ್ನದ ಸುರಕ್ಷತೆ ಬಗ್ಗೆ ಸುಳ್ಳು ಮಾಹಿತಿ ಹಬ್ಬಿದೆ. ಈ ಕಾರಣದಿಂದಾಗಿ ಬೇಬಿ ಪೌಡರ್ಗೆ ಬೇಡಿಕೆ ಕಡಿಮೆಯಾಗಿದ್ದು, ಮಾರುಕಟ್ಟೆಯಲ್ಲಿರುವ ಬೇಬಿ ಪೌಡರ್ಅನ್ನು ಹಿಂಪಡೆಯಲಾಗುತ್ತಿದೆ. ಆದರೆ, ದಶಕಗಳ ವೈಜ್ಪಾನಿಕ ಸಂಶೋಧನೆಗಳ ಅಧ್ಯಯನದಿಂದಾಗಿ ಬೇಬಿ ಪೌಡರ್ನ ಸುರಕ್ಷತೆ ವಿಚಾರದಲ್ಲಿ ಈಗಲೂ ತನ್ನ ನಿಲುವಿಗೆ ಬದ್ಧವಾಗಿರುವುದಾಗಿ ಕಂಪನಿ ತಿಳಿಸಿದೆ.
ಬೇಬಿ ಪೌಡರ್ನಲ್ಲಿ ಕಲ್ನಾರಿನ ಅಂಶವಿದ್ದು, ಕಾನ್ಸರ್ಗೆ ಕಾರಣವಾಗುತ್ತಿದೆ ಎಂದು ಗ್ರಾಹಕರು ಹಾಗೂ ಕ್ಯಾನ್ಸರ್ಗೆ ಬಲಿಯಾದವರ ಕುಟುಂಬದವರು 19,000ಕ್ಕೂ ಅಧಿಕ ದಾವೆಗಳನ್ನು ಕಂಪನಿ ವಿರುದ್ಧ ಹೂಡಿದ್ದಾರೆ. ನ್ಯೂಜೆರ್ಸಿ ಜಿಲ್ಲಾ ಕೋರ್ಟ್ವೊಂದರಲ್ಲಿ ಸಾವಿರಾರು ಪ್ರಕರಣಗಳ ವಿಚಾರಣೆ ಬಾಕಿಯಿದೆ.
ಕಲ್ನಾರು ಕ್ಯಾನ್ಸರ್ಗೆ ಕಾರಣ ಎಂದು ಹಲವು ದೇಶಗಳಲ್ಲಿ ಇದರ ಬಳಕೆ ನಿಷೇಧಿಸಲಾಗಿದೆ. ಆದರೆ, ಜಾನ್ಸನ್ ಆ್ಯಂಡ್ ಜಾನ್ಸನ್ ಕಂಪನಿ ತಯಾರಿಸುವ ಬೇಬಿ ಪೌಡರ್ನಲ್ಲಿ ಕಲ್ನಾರಿನ ಅಂಶವಿದೆ. ಇದರಿಂದ ತನಗೆ ಕ್ಯಾನ್ಸರ್ ತಗುಲಿದೆ ಎಂದು 1999ರಲ್ಲಿ ಡಾರ್ಲೆನ್ ಕಾಕರ್ ಎಂಬ ಮಹಿಳೆ ಕಂಪನಿ ವಿರುದ್ಧ ಪ್ರಕರಣ ದಾಖಲಿಸಿದ್ದಳು. ಕಂಪನಿ ಆಂತರಿಕ ವರದಿಯನ್ನು ಬಹಿರಂಗಪಡಿಸಬೇಕೆಂಬ ವಾದದಲ್ಲಿ ಅವಳಿಗೆ ಸೋಲಾಗಿತ್ತು. ಕಾಕರ್ 2009ರಲ್ಲಿ ಕಲ್ನಾರಿನಿಂದ ಉಂಟಾಗುವ ಮೆಸೊಥೆಲಿಯೋಮಾ ಎಂಬ ಕ್ಯಾನ್ಸರ್ನಿಂದ ಮೃತಪಟ್ಟಿದ್ದಳು. ಬಳಿಕ ಕಂಪನಿ ವಿರುದ್ಧ ಹೋರಾಟ ಬಳಿಕವೂ ಮುಂದುವರಿದಿತ್ತು.
ಬೇಬಿ ಪೌಡರ್ನಲ್ಲಿ ಕಲ್ನಾರಿನ ಅಂಶವಿದೆ ಎಂಬುದು ದಶಕಗಳಿಂದಲೂ ಕಂಪನಿಗೆ ತಿಳಿದಿದೆ ಎಂದು 2018ರಲ್ಲಿ ರಾಯ್ಟರ್ಸ್ ಸುದ್ದಿ ಸಂಸ್ಥೆ ತನಿಖಾ ವರದಿ ಪ್ರಕಟಿಸಿದ ಬಳಿಕ ಸಂಸ್ಥೆಗೆ ಭಾರಿ ಹಿನ್ನಡೆಯುಂಟಾಗಿತ್ತು. ಒಂದೇ ದಿನದಲ್ಲಿ ಕಂಪನಿ ಷೇರು ಮೌಲ್ಯ ಪಾತಾಳಕ್ಕೆ ಕುಸಿದು 3 ಲಕ್ಷ ಕೋಟಿ ರೂ.ಗೂ ಅಧಿಕ ನಷ್ಟ ಸಂಭವಿಸಿತ್ತು.
ಬೇಬಿ ಪೌಡರ್ ಜಾನ್ಸನ್ ಆ್ಯಂಡ್ ಜಾನ್ಸನ್ನ ಪ್ರಮುಖ ಉತ್ಪನ್ನವಾಗಿದೆ. ಇದರ ಕಚ್ಚಾ ವಸ್ತು ಹಾಗೂ ಅಂತಿಮ ಉತ್ಪನ್ನದಲ್ಲಿ ಸಣ್ಣ ಪ್ರಮಾಣದಲ್ಲಿ ಕ್ಯಾನ್ಸರ್ಕಾರಕ ಕಲ್ನಾರಿನ ಅಂಶವಿರುವುದು 1971ರಿಂದ 2000ರ ವರೆಗಿನ ಕಂಪನಿಯ ಆಂತರಿಕ ವರದಿಗಳಲ್ಲಿ ದಾಖಲಾಗಿತ್ತು ಎಂದು ರಾಯ್ಟರ್ಸ್ ಬಯಲಿಗೆಳೆದಿತ್ತು.
ಅಮೆರಿಕ ಸಂಸತ್ ಸಮಿತಿ ಕೂಡ 14 ತಿಂಗಳ ಕಾಲ ತನಿಖೆ ನಡೆಸಿ ವರದಿ ಸಲ್ಲಿಸಿತ್ತು. ಕಂಪನಿ ಬೇಬಿ ಪೌಡರ್ನ ಮಾರಾಟ ಸ್ಥಗಿತ ಮಾಡಿರುವುದು ಸಮಿತಿ ನಡೆಸಿದ ತನಿಖೆಗೆ ಸಂದ ಜಯವಾಗಿದೆ ಎಂದು ಸಮಿತಿಯ ನೇತೃತ್ವ ವಹಿಸಿದ್ದ ರಾಜಾ ಕೃಷ್ಣಮೂರ್ತಿ ಹೇಳಿದ್ದಾರೆ. ಇದಲ್ಲದೇ, ದಾವೆ ಹೂಡಿರುವ ಹಲವು ಗ್ರಾಹಕರೂ ಕೂಡ ಸಂತಸ ವ್ಯಕ್ತಪಡಿಸಿದ್ದಾರೆ.
1894ರಿಂದಲೂ ಕಂಪನಿ ಬೇಬಿ ಪೌಡರ್ ತಯಾರಿಸುತ್ತಿದೆ. ಸದ್ಯ ಅಮೆರಿಕದಲ್ಲಿ ಇದರ ಮಾರುಕಟ್ಟೆ ಪಾಲು ಶೇ.0.5ಗೆ ಇಳಿದಿದೆ. ಆದರೆ, ಕಾನೂನು ಹೋರಾಟವನ್ನು ಮುಂದುವರಿಸುವುದಾಛಗಿ ಕಂಪನಿ ಹೇಳಿದೆ.