

ಇಡೀ ಜಗತ್ತು ಕರೊನಾದ ಕಪಿಮುಷ್ಠಿಯಲ್ಲಿ ಸಿಲುಕಿದೆ. ಹಲವು ದೇಶಗಳಲ್ಲಿ ಕಟ್ಟುನಿಟ್ಟಿನ ಲಾಕ್ಡೌನ್ ಇಲ್ಲ. ಭಾರತ ಸೇರಿ ಹಲವೆಡೆ ನಿರ್ಬಂಧಗಳನ್ನು ಸಡಿಸಲಿಸಲಾಗಿದೆ. ಸ್ಥಳೀಯವಾಗಿಯೇ ಈ ಬಗ್ಗೆ ನಿರ್ಧಾರ ಕೈಗೊಂಡು ಜನರಿಗೆ ತಿರುಗಾಡಲು ಅವಕಾಶ ಕಲ್ಪಿಸುತ್ತಿವೆ.
ಅಂತೆಯೇ, ಲಾಕ್ಡೌನ್ನಿಂದ ಮನೆಯಲ್ಲಿದ್ದು ಬೋರ್ ಆಗಿದ್ದರಿಂದ ಅಮೆರಿಕದ ವರ್ಜಿನಿಯಾ ರಾಜ್ಯದ ಕ್ಯಾರೊಲಿನ್ ಕೌಂಟಿಯ ಕುಟುಂಬವೊಂದು ಕಳೆದ ಶನಿವಾರ ಸುತ್ತಾಟಕ್ಕೆಂದು ತೆರಳಿದೆ. ಪಿಕ್ಅಪ್ ವಾಹನದಲ್ಲಿ ಡೇವಿಡ್ ಪತ್ನಿ ಎಮಿಲಿ ಕರೆದುಕೊಂಡು ಹೋಗುತ್ತಿದ್ದಾಗ ರಸ್ತೆಯಲ್ಲಿ ಬ್ಯಾಗ್ ಬಿದ್ದಿರುವುದು ಕಂಡಿದೆ. ವಾಹನ ನಿಲ್ಲಿಸಿದ ಡೇವಿಡ್ ಅದನ್ನು ಎತ್ತಿಕೊಂಡಿದ್ದಾರೆ. ಕೊಂಚ ದೂರದಲ್ಲಿ ಇನ್ನೊಂದು ಬ್ಯಾಗ್ ಕಂಡು ಬಂದಿದೆ. ಅದನ್ನು ಕೂಡ ವಾಹನಕ್ಕೆ ಹಾಕಿಕೊಂಡಿದ್ದಾರೆ. ಆ ಕ್ಷಣದಲ್ಲಿ ಅದರಲ್ಲೇನಿದೆ ಎಂಬ ಬಗ್ಗೆ ಅವರು ಚಿಂತೆ ಮಾಡಿರಲಿಲ್ಲ.
ಕೊಂಚ ಹೊತ್ತು ಸುತ್ತಾಡಿದ ಬಳಿಕ ಇಬ್ಬರೂ ಮನೆಗೆ ಮರಳಿದ್ದಾರೆ. ವಾಹನದ ಹಿಂದೆ ಬ್ಯಾಗ್ ಇಟ್ಟಿದ್ದು ನೆನಪಿಗೆ ಬಂದು ಅದರಲ್ಲೇನಿದೆ ಎಂದು ನೋಡಿದಾಗ ಅಚ್ಚರಿ ಕಾದಿತ್ತು. ಎರಡೂ ಬ್ಯಾಗ್ನಲ್ಲೂ ನೋಟುಗಳಿದ್ದವು. ಪ್ಲಾಸ್ಟಿಕ್ ಚೀಲಗಳಲ್ಲಿ ನೋಟಿನ ಕಂತೆಗಳನ್ನು ಕಟ್ಟಿ ಇಡಲಾಗಿತ್ತು.
ಕೂಡಲೇ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಪೊಲೀಸರು ಮನೆಗೆ ಬಂದು ಲೆಕ್ಕ ಹಾಕಿದಾಗ ಬರೋಬ್ಬರಿ ಒಂದು ಮಿಲಿಯನ್ ಡಾಲರ್ ನಷ್ಟಿತ್ತು. ಅಂದರೆ 75 ಲಕ್ಷ ರೂ.ಗಳಿಗೂ ಹೆಚ್ಚು ಮೊತ್ತ ಅದರಲ್ಲಿತ್ತು.
ಸದ್ಯ ಪೊಲೀಸರು ಹಣ ಯಾರಿಗೆ ಸೇರಿದ್ದು ಎಂಬುದನ್ನು ಪತ್ತೆ ಹಚ್ಚುತ್ತಿದ್ದಾರೆ. ಯಾರೇ ಆಗಿರಲಿ ದಂಪತಿಗೆ ಬಹುಮಾನ ಕೊಡುತ್ತಾರೆ ಎನ್ನುವುದಂತೂ ಪಕ್ಕಾ. ಜತೆಗೆ ಈ ದಂಪತಿ ಹಣವನ್ನು ಪೊಲೀಸರಿಗೆ ಒಪ್ಪಿಸಿ ಪ್ರಾಮಾಣಿಕತೆ ಮೆರೆದಿರುವುದು ಇತರರಿಗೂ ಮಾದರಿಯಾಗಿದೆ ಎಂದು ಅಧಿಕಾರಿಗಳು ಶ್ಲಾಘಿಸಿದ್ದಾರೆ.