ಕರೊನಾ ವಿರುದ್ಧ ಹೋರಾಟಕ್ಕಾಗಿ 362 ಕೋಟಿ ರೂ. ಸಂಗ್ರಹಿಸಿದ ಶತಾಯುಷಿಗೆ ನೈಟ್​ಹುಡ್​ ಗೌರವ

Tom moore3
Published on

ಕರೊನಾ ಸೋಂಕಿಗೆ ಒಳಗಾಗದಿರಲು 60 ವರ್ಷ ಮೇಲ್ಪಟ್ಟವರು ಮನೆಯಿಂದ ಹೊರಗೆ ಬರುವಂತೆಯೇ ಇಲ್ಲ. ಅಂಥದ್ದರಲ್ಲಿ ಶತಾಯುಷಿಯೊಬ್ಬರು ಕರೊನಾ ವಿರುದ್ಧ ಹೋರಾಟದಲ್ಲಿ ಏನು ಮಾಡಬಹುದು?

ಯುನೈಟೆಡ್​ ಕಿಂಗ್​ಡಂನ ಬ್ರೆಡ್​ಫೋರ್ಡ್​ಶೈರ್​ನ ನಿವಾಸಿಯಾಗಿರುವ ಕರ್ನಲ್ ಟಾಮ್​ ಮೂರ್​ ಸಾಹಸಗಾಥೆ ನಿಜಕ್ಕೂ ಅಚ್ಚರಿ ಮೂಡಿಸುವಂಥದ್ದು. ಎರಡನೇ ವಿಶ್ವಯುದ್ಧದ ಪಾಲ್ಗೊಂಡ ಯೋಧರೂ ಆಗಿರುವ ಮೂರ್​, ಕರೊನಾ ವಿರುದ್ಧದ ಹೋರಾಟಕ್ಕಾಗಿ ಬರೋಬ್ಬರಿ 39 ಮಿಲಿಯನ್​ ಪೌಂಡ್​ (ಅಂದಾಜು 362 ಕೋಟಿ ರೂ.) ಸಂಗ್ರಹಿಸಿದ್ದಾರೆ ಎಂದರೆ ನಂಬಲೇಬೇಕು. ಅದೂ ಕೂಡ ಮನೆಯಲ್ಲಿಯೇ ಇದ್ದುಕೊಂಡು ಎಂಬುದು ಇನ್ನಷ್ಟು ವಿಶೇಷ.

ಜಗತ್ತು ಕರೊನಾ ಸಂಕಷ್ಟದಲ್ಲಿರುವಾಗ ತಾನು ಏನಾದರೂ ಸಹಾಯ ಮಾಡಬೇಕೆಂದು ಇಚ್ಛಿಸಿದ ಮೂರ್​ ನಿಧಿ ಸಂಗ್ರಹಕ್ಕೆ ಮುಂದಾದರು. ಅದಕ್ಕಾಗಿ ಏನಾದರೂ ಮಾಡಬೇಕಲ್ಲ. ಮನೆಯಿಂದ ಹೊರ ಹೋಗುವಂತಿಲ್ಲ. ಕೆಲ ದಿನಗಳಲ್ಲಿ ಅವರ ನೂರನೇ ಹುಟ್ಟುಹಬ್ಬವಿತ್ತು. ಹೀಗಾಗಿ ಮನೆಯ ಉದ್ಯಾನದಲ್ಲೇ ಚಕ್ರಗಳಿರುವ ಊರುಗೋಲು ಹಿಡಿದು (ಜಿಮ್ಮರ್​ಫ್ರೇಮ್​) ನೂರು ಸುತ್ತು ಹಾಕಲು ನಿರ್ಧರಿಸಿದರು. ಈ ವಯಸ್ಸಿನಲ್ಲಿ ಇಂಥದ್ದೊಂದು ಸಾಹಸಕ್ಕೆ ಮುಂದಾದ ನಿವೃತ್ತ ಯೋಧನ ಕರೆಗೆ ಇಡೀ ಜಗತ್ತು ಸ್ಪಂದಿಸಿತು. ಎಲ್ಲೆಡೆಯಿಂದ ನೆರವಿನ ಮಹಾಪೂರವೇ ಹರಿದು ಬಂತು.

ಆರಂಭದಲ್ಲಿ ಒಂದೆರಡು ಮಿಲಿಯನ್​ ಪೌಂಡ್​ ಸಂಗ್ರಹವಾಗಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ, ಅಚ್ಚರಿ ಎಂಬಂತೆ 32 ಮಿಲಿಯನ್​ ಪೌಂಡ್​ಗೂ ಹೆಚ್ಚು ನೆರವು ಆನ್​ಲೈನ್​ ಮೂಲಕ ಸಂಗ್ರಹವಾಯಿತು. ನೂರನೇ ಸುತ್ತು ಪೂರ್ಣಗೊಳಿಸುವ ದಿನ ಯೋಧರು ಹಾಜರಿದ್ದು, ಗೌರವ ಸಲ್ಲಿಸಿದರು. ಇತ್ತೀಚೆಗಷ್ಟೇ ನೂರನೇ ವರ್ಷದ ಹುಟ್ಟುಹಬ್ಬದ ಸಂದರ್ಭದಲ್ಲಿ ಮತ್ತೆ ಏಳು ಮಿಲಿಯನ್​ ಪೌಂಡ್​ ಸಂಗ್ರಹವಾಯಿತು. ಅದನ್ನೂ ಕೂಡ ರಾಷ್ಟ್ರೀಯ ಆರೋಗ್ಯ ಸೇವೆಗೆ ಒಪ್ಪಿಸಿದ್ದಾರೆ ಮೂರ್​. ನೂರನೇ ಬರ್ತ್​ಡೇ ಬಂದ ಕಾರ್ಡ್​ಗಳ ಸಂಖ್ಯೆಯೇ1.40 ಲಕ್ಷ. ಇದಲ್ಲದೇ, ಸಾವಿರಾರು ಉಡುಗೊರೆಗಳನ್ನು ಜನರು ಪ್ರೀತಿಯಿಂದ ಕಳುಹಿಸಿದ್ದಾರೆ. ಇಂಗ್ಲೆಂಡ್​ ಕ್ರಿಕೆಟ್​ ಸಂಸ್ಥೆ ಮೂರ್​ಗೆ ಗೌರವ ಸದಸ್ಯತ್ವವನ್ನೂ ನೀಡಿದೆ.

ಟಾಮ್​ ಅವರ ಸಾಹಸವನ್ನು ಗೌರವಿಸಿ ಸೇನೆ ಅವರನ್ನು ಕ್ಯಾಪ್ಟನ್​ ಹುದ್ದೆಯಿಂದ ಗೌರವ ಕರ್ನಲ್​ ಪದವಿಗೆ ಬಡ್ತಿ ನೀಡಿತು. ಮೂರ್​ ಅವರನ್ನು ಪ್ರಧಾನಿ ಬೊರಿಸ್ ಜಾನ್​ಸನ್​ ' ದೇಶದ ಅಮೂಲ್ಯ ನಿಧಿ' ಎಂದು ಕರೆದು ಪತ್ರ ಬರೆದಿದ್ದಾರೆ.

ಇದೀಗ, ಟಾಮ್​ ಮೂರ್​ಗೆ ದೇಶದ ಅತ್ಯುನ್ನತ ಗೌರವವೂ ಒಲಿದು ಬಂದಿದೆ. ಇಂಗ್ಲೆಂಡ್​ನ ರಾಣಿ ನೈಟ್​ಹುಡ್​ ಪದವಿ ನೀಡಿ ಸನ್ಮಾನಿಸಲು ನಿರ್ಧರಿಸಿದ್ದಾರೆ. ಜನರಲ್ಲಿ ಅರಿವು ಮೂಡಿಸಿ ಕರೊನಾ ವಿರುದ್ಧ ಹೋರಾಟಕ್ಕೆ ಸಜ್ಜಾಗುವಂತೆ ಮಾಡುವಲ್ಲಿ ಟಾಮ್​ ಮೂರ್​ ಪಾತ್ರ ಹಿರಿದು ಎಂದು ಇಡೀ ದೇಶವೇ ಶತಾಯುಷಿಯನ್ನು ಕೊಂಡಾಡುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net