ದೇಶಕ್ಕೆ 25 ಸಾವಿರ ಕೋಟಿ ರೂ. ಉಳಿತಾಯ

Crude Oil
Published on

ನವದೆಹಲಿ: ಅಗ್ಗದ ದರದಲ್ಲಿ ಖರೀದಿಸಿದ ತೈಲವನ್ನು ಭವಿಷ್ಯದ ಬಳಕೆಗಾಗಿ ಹಡಗುಗಳಲ್ಲಿ ಸಂಗ್ರಹ ಮಾಡುವುದರಿಂದ 25 ಸಾವಿರ ಕೋಟಿ ರೂಪಾಯಿ ಉಳಿತಾಯ ಮಾಡಬಹುದೆಂದು ಕೇಂದ್ರ ಸರ್ಕಾರ ಅಭಿಪ್ರಾಯಪಟ್ಟಿದೆ. ಕಚ್ಚಾತೈಲ ಆಮದಿನಲ್ಲಿ ಆಗುವ ಹೆಚ್ಚುವರಿ ವೆಚ್ಚ ತಡೆದು ಅದನ್ನು ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಅಗತ್ಯವಾದ ಸಾರ್ವಜನಿಕ ಕಲ್ಯಾಣ ಕ್ರಮಗಳಿಗೆ ಬಳಸಬಹುದೆಂಬುದು ಸರ್ಕಾರದ ಚಿಂತನೆಯಾಗಿದೆ.

ಭಾರತದ ತೈಲ ಕಂಪನಿಗಳು ಈಗಾಗಲೇ ಕಡಿಮೆ ಬೆಲೆಗೆ ಸುಮಾರು 70 ಲಕ್ಷ ಟನ್ ತೈಲ ಆಮದು ಮಾಡಿಕೊಂಡಿವೆ. ನಮ್ಮ ಬೇಡಿಕೆಯ ಸುಮಾರು ಶೇ. 20 ಸಂಗ್ರಹವಾಗಿದೆ. ಇದು ತೈಲ ಆಮದು ವೆಚ್ಚದಲ್ಲಿ ಕಡಿತಕ್ಕೆ ನೆರವಾಗಿದ್ದು ಕಲ್ಯಾಣ ಕಾರ್ಯಕ್ರಮಗಳಿಗೆ ಹೆಚ್ಚು ಹಣವನ್ನು ಖರ್ಚು ಮಾಡಲು ಇದರಿಂದ ನೆರವಾಗುತ್ತದೆ ಎಂದು ತೈಲ ಸಚಿವ ಧಮೇಂದ್ರ ಪ್ರಧಾನ್ ಹೇಳಿದ್ದಾರೆ. ಫೆಬ್ರವರಿಯಲ್ಲಿ ತೈಲ ಬೆಲೆ ಕುಸಿಯಲು ಆರಂಭವಾದ ನಂತರ, ಮಾರ್ಚ್​ನಲ್ಲಿ ಪೆಟ್ರೋಲಿಯಂ ಸಚಿವಾಲಯ ಕಚ್ಚಾತೈಲ ಖರೀದಿಗೆ 3,184 ಕೋಟಿ ರೂಪಾಯಿ ಒದಗಿಸುವಂತೆ ಕೇಂದ್ರ ವನ್ನು ಕೋರಿತ್ತು. ಇದು 2020-21ನೇ ಸಾಲಿನ ಬಜೆಟ್​ನಲ್ಲಿ ಒದಗಿಸಿದ 690 ಕೋಟಿ ರೂಪಾಯಿ ಮೇಲಿನ ಹೆಚ್ಚುವರಿ ಬೇಡಿಕೆಯಾಗಿತ್ತು. ದಾಸ್ತಾನು ಸಾಮರ್ಥ್ಯ ತುಂಬಲು ಈ ಖರೀದಿ ಅಗತ್ಯವಾಗಿತ್ತು.

ಚರ್ಚೆ: ಸೌದಿ ಅರೇಬಿಯಾ ಮತ್ತು ಅರಬ್ ಸಂಯುಕ್ತ ಸಂಸ್ಥಾನದ (ಯುಎಇ) ತೈಲ ಸಚಿವರೊಂದಿಗೆ ರ್ಚಚಿಸಿದ ಸಚಿವ ಪ್ರಧಾನ್, ಹೆಚ್ಚುವರಿ ತೈಲ ಖರೀದಿ ಬಗ್ಗೆ ಮಾತುಕತೆ ನಡೆಸಿದ್ದಾರೆ. ಈ ಚರ್ಚೆಯ ಫಲವಾಗಿ 70 ಲಕ್ಷ ಟನ್​ಗಿಂತ ಹೆಚ್ಚಿನ ಕಚ್ಚಾ ತೈಲ ಖರೀದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಇದರಿಂದಾಗಿ ಸರ್ಕಾರಿ ತೈಲಾಗಾರಗಳು ವ್ಯಾಪಕ ಪ್ರಮಾಣದಲ್ಲಿ ಕಾರ್ಯಾಚರಣೆ ಮುಂದೂಡುವುದನ್ನು ನಿವಾರಿಸಿದಂತಾಗಿದೆ. ತೈಲ ಉತ್ಪಾದನೆ ದೇಶಗಳ (ಒಪೆಕ್) ಜೊತೆಗಿನ ಸಂಬಂಧ ಹದಗೆಡುವುದನ್ನು ತಡೆಯಲು ಕೂಡ ನೆರವಾಗಿದೆ. ತಲಾ ಬ್ಯಾರಲ್​ಗೆ 21 ಡಾಲರ್​ಗಿಂತ ಸ್ವಲ್ಪ ಹೆಚ್ಚು ಬೆಲೆಗೆ ತೈಲ ಖರೀದಿಸಲು ಮಾಡಿಕೊಂಡ ಒಡಂಬಡಿಕೆಯಿಂದ ಸುಮಾರು 5,000 ಕೋಟಿ ರೂಪಾಯಿ ಉಳಿತಾಯವಾಗಬಹುದು ಎಂಬುದು ಸರ್ಕಾರದ ನಿರೀಕ್ಷೆ. ಜನವರಿಯಲ್ಲಿ ಬ್ಯಾರೆಲ್ ಬೆಲೆ ಸುಮಾರು 65 ಡಾಲರ್ ಇತ್ತು. ಇದಲ್ಲದೆ, ಸರ್ಕಾರಿ ತೈಲಾಗಾರಗಳು ಕೂಡ ಮಾರ್ಚ್-ಏಪ್ರಿಲ್ ದರದಲ್ಲಿ 80 ಲಕ್ಷ ಟನ್ ತೈಲ ಖರೀದಿಸಿದ್ದವು. ಈ ಖರೀದಿಯಿಂದ ದಾಸ್ತಾನಿನ ಜನವರಿ ಬೆಲೆಗಳಿಗೆ ಹೋಲಿಸಿದರೆ 20,000 ಕೋಟಿ ಉಳಿತಾಯ ಆಗುತ್ತದೆ. ಹೀಗಾಗಿ, ಅಗ್ಗದ ದರದಲ್ಲಿ ತೈಲ ಖರೀದಿಸಿದ್ದರಿಂದ ಒಟ್ಟು ಸುಮಾರು 25,000 ಕೋಟಿ ರೂಪಾಯಿ ಉಳಿತಾಯ ಆಗಲಿದೆ ಎಂಬುದು ಸರ್ಕಾರದ ಲೆಕ್ಕಾಚಾರ.

ಲಾಕ್​ಡೌನ್ ಪರಿಣಾಮ: ಕರೊನಾ ಹಾವಳಿಯ ಹಿನ್ನೆಲೆಯಲ್ಲಿ ಮಾರ್ಚ್ 25ರಿಂದ ಹೇರಿದ ಲಾಕ್​ಡೌನ್ ಹಿನ್ನೆಲೆಯಲ್ಲಿ ಬಹುತೇಕ ಇಡೀ ದೇಶದ ಚಟುವಟಿಕೆಗಳು ಸ್ಥಗಿತಗೊಂಡಿದ್ದರಿಂದ ಪೆಟ್ರೋಲಿಯಂ ಉತ್ಪನ್ನಗಳ ಬೇಡಿಕೆ ಶೇಕಡಾ 70 ಕುಸಿಯಿತು. ತೈಲಾಗಾರಗಳು ಕಾರ್ಯಾಚರಣೆ ಮಟ್ಟವನ್ನು ತಗ್ಗಿಸಬೇಕಾಯಿತು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net