

ನವದೆಹಲಿ: ದೇಶದಲ್ಲಿ ಸಿಎನ್ಜಿ ಗ್ಯಾಸ್ ದರ ಏರಿಕೆಯಾಗಿದ್ದು, ಕೆಜಿಗೆ 2 ರೂ.ನಂತೆ ಹೆಚ್ಚಾಗಿದೆ. ಶೀಘ್ರದಲ್ಲೇ ವಿಧಾನಸಭಾ ಚುನಾವಣೆ ನಡೆಯಲಿರುವ ಹಿನ್ನಲೆ ದೆಹಲಿಯಲ್ಲಿ ಬೆಲೆ ಏರಿಸಿಲ್ಲ. ಆದರೆ, ದೆಹಲಿಯ ನೆರೆಯ ನಗರಗಳಾದ ನೋಯ್ಡಾ, ಗ್ರೇಟರ್ ನೋಯ್ಡಾ, ಘಾಜಿಯಾಬಾದ್ ಮತ್ತು ಗುರುಗ್ರಾಮ್ನಲ್ಲಿ ದರವನ್ನು ಹೆಚ್ಚಿಸಲಾಗಿದೆ. ಮುಂಬೈ ಮತ್ತು ದೇಶದ ಇತರ ನಗರಗಳಲ್ಲಿ ಸಿಎನ್ಜಿ ಬೆಲೆಯನ್ನು ಏರಿಸಿರುವ (CNG Price) ಕಂಪನಿಗಳು, ದಿಢೀರ್ ಏರಿಕೆ ಹಿಂದಿರುವ ಕಾರಣವನ್ನು ಇನ್ನೂ ಸ್ಪಷ್ಟಪಡಿಸಿಲ್ಲ.
ಕಳೆದ ಎರಡು ತಿಂಗಳಿನಿಂದ ಸಿಎನ್ಜಿ ಬೆಲೆಯಲ್ಲಿ ಯಾವುದೇ ಬದಲಾವಣೆ ಇರಲಿಲ್ಲ. ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ಬೆಲೆ ಏರಿಕೆ ಜಾರಿಗೆ ಬಂದಿದೆ. ಇದರೊಂದಿಗೆ ಮುಂಬೈನಲ್ಲಿ ಸಿಎನ್ಜಿ ದರ ಕೆಜಿಗೆ 77 ರೂ.ಗೆ ಏರಿಕೆಗೊಂಡಿದೆ. ಪ್ರಸ್ತುತ ದೆಹಲಿಯ ನೆರೆಯ ನಗರಗಳಾದ ನೋಯ್ಡಾ, ಗ್ರೇಟರ್ ನೋಯ್ಡಾ ಮತ್ತು ಗಾಜಿಯಾಬಾದ್ನಲ್ಲಿ ಹೊಸ ಬೆಲೆಯು 81.70 ರೂ.ಗೆ ಬಂದು ನಿಂತಿದೆ.
ಹರಿಯಾಣದ ಗುರುಗ್ರಾಮ್ನಲ್ಲಿ ಸಿಎನ್ಜಿ ಪ್ರತಿ ಕೆಜಿಗೆ 82.12 ರೂ.ಗೆ ಏರಿಕೆಯಾಗಿದೆ. ಆದರೆ. ದೆಹಲಿಯಲ್ಲಿ ಈ ಹಿಂದಿದ್ದ 75.09 ರೂ.ನಲ್ಲಿ ಯಾವುದೇ ಬದಲಾವಣೆ ಆಗಿಲ್ಲ ಎಂಬುದು ಗಮನಾರ್ಹ. ಫೆಬ್ರವರಿಯಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯ ನಂತರ ದೆಹಲಿಯಲ್ಲಿ ಸಿಎನ್ಜಿ ಬೆಲೆಗಳು ಏರಿಕೆಯಾಗುವ ಸಾಧ್ಯತೆಗಳಿವೆ ಎಂದು ವರದಿ ಉಲ್ಲೇಖಿಸಿದೆ,(ಏಜೆನ್ಸೀಸ್).