

ನವದೆಹಲಿ: ದುಬೈನಲ್ಲಿ ನಡೆಯುತ್ತಿರುವ ಎರಡು ದಿನಗಳ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಮೊದಲ ದಿನದ ಅಂತ್ಯಕ್ಕೆ ಭಾರತೀಯ ಆಟಗಾರರಾದ ರಿಷಭ್ ಪಂತ್ ಮತ್ತು ಶ್ರೇಯಸ್ ಅಯ್ಯರ್ ದುಬಾರಿ ಮೊತ್ತಕ್ಕೆ ಖರೀದಿಯಾದರೆ, ವಿದೇಶಿ ಆಟಗಾರರು ಸಾಧಾರಣ ಮೊತ್ತಕ್ಕೆ ಆಯಾ ತಂಡದ ಪಾಲಾದರು. ಇನ್ನು ಎರಡನೇ ದಿನಕ್ಕೆ ಕಾಲಿಟ್ಟಿರುವ ಬಿಡ್ಡಿಂಗ್ ಪ್ರಕ್ರಿಯೆಯ ಆರಂಭದಲ್ಲಿ ನಿರೀಕ್ಷಿತ ಆಟಗಾರರಾದ ಫಾಫ್ ಡು ಪ್ಲೆಸಿಸ್, ಅಜಿಂಕ್ಯಾ ರಹಾನೆ ಸೇರಿದಂತೆ ಕೆಲವರು ಅನ್ಸೋಲ್ಡ್ ಆಗಿ ಹೊರನಡೆದಿದ್ದಾರೆ. ಎರಡನೇ ದಿನದ ಬಿಡ್ಡಿಂಗ್ನಲ್ಲಿಯೂ ತನ್ನ ಕಿಲಾಡಿತನ ಪ್ರದರ್ಶಿಸುತ್ತಿರುವ ಚೆನ್ನೈ ಸೂಪರ್ ಕಿಂಗ್ಸ್ (CSK), ಆಲ್ರೌಂಡರ್ ಆಟಗಾರ ಸ್ಯಾಮ್ ಕರನ್ರನ್ನು ಕೇವಲ 2.40 ಕೋಟಿ ರೂ.ಗೆ ಖರೀದಿ ಮಾಡಿ, ಇತರೆ ಫ್ರಾಂಚೈಸಿಗಳಿಗೆ ತಮ್ಮ ಬುದ್ಧಿವಂತಿಕೆಯನ್ನು ಪರಿಚಯಿಸಿದೆ.
ನಿನ್ನೆಯ ಆಕ್ಷನ್ನಲ್ಲಿ ಯಜುವೇಂದ್ರ ಚಹಲ್, ಮೊಹಮ್ಮದ್ ಸಿರಾಜ್, ಕನ್ನಡಿಗ ಕೆ.ಎಲ್. ರಾಹುಲ್ ಸೇರಿದಂತೆ ತಂಡಕ್ಕೆ ಬೇಕಿದ್ದ ಆಟಗಾರರನ್ನೇ ಹರಾಜಿನಲ್ಲಿ ಕೈಬಿಟ್ಟ ಆರ್ಸಿಬಿ ಮ್ಯಾನೇಜ್ಮೆಂಟ್ ವಿರುದ್ಧ ಕಿಡಿಕಾರಿದ್ದ ಫ್ರಾಂಚೈಸಿಯ ಅಭಿಮಾನಿಗಳು, ನಿಮ್ಮ ಲೆಕ್ಕಾಚಾರವೇನಿದೆ? ಹೀಗ್ಯಾಕೆ ಮಾಡುತ್ತಿದ್ದೀರಿ? ಎಂದು ಜಾಲತಾಣಗಳಲ್ಲಿ ಭಾರೀ ಅಸಮಾಧಾನ ಹೊರಹಾಕಿದ್ದರು. ರಾಹುಲ್ಗೆ ಹೆಚ್ಚುವರಿ ಬಿಡ್ ಮಾಡಿ, ಖರೀದಿ ಮಾಡಬೇಕಿದ್ದ ಆರ್ಸಿಬಿ, ಅವರನ್ನು ತಮ್ಮ ಲೆಕ್ಕಾಚಾರದಿಂದಲೇ ಕೈಬಿಟ್ಟಿದ್ದು, ಅನೇಕರ ಟೀಕೆಗೆ ಕಾರಣವಾಯಿತು. ಒಂದೆಡೆ ಈ ವಿಷಯ ಮುನ್ನೆಲೆಗೆ ಬಂದರೆ, ಆಟಗಾರರನ್ನು ಅತೀ ಕಡಿಮೆ ಬಜೆಟ್ಗೆ ಖರೀದಿ ಮಾಡುವಲ್ಲಿ ಸಿಎಸ್ಕೆ ಅತ್ಯಂತ ಯಶಸ್ವಿಯಾಗಿ ಹೊರಹೊಮ್ಮಿದ್ದು ನೋಡುಗರ ಗಮನಸೆಳೆಯಿತು.
ಈ ವಿಷಯವನ್ನು ಹೋಲಿಸಿ ಮಾತನಾಡಿದ ಅನೇಕರು, ಕೇವಲ 10 ಕೋಟಿ ರೂ. ಹಣದಲ್ಲಿ ಮೊದಲ ದಿನದ ಅಂತ್ಯಕ್ಕೆ ಸಿಎಸ್ಕೆ ಆರು ಪ್ರತಿಭಾವಂತ ಆಟಗಾರರನ್ನೇ ತನ್ನ ತಂಡಕ್ಕೆ ಖರೀದಿ ಮಾಡಿದ್ದನ್ನು ಕಂಡು ಉಳಿದ ಫ್ರಾಂಚೈಸಿಗಳು ಅವರನ್ನು ನೋಡಿ ಕಲಿಯಬೇಕು ಎಂದು ಸಲಹೆ ನೀಡಿದ್ದಾರೆ. ಇದು ಸಿಎಸ್ಕೆ ಫ್ರಾಂಚೈಸಿಯ ಅಭಿಮಾನಿಗಳನ್ನು ಮಾತ್ರವಲ್ಲದೇ ಬೇರೆ ತಂಡಗಳ ಕ್ರಿಕೆಟ್ ಫ್ಯಾನ್ಸ್ಗಳ ಗಮನವನ್ನು ಸೆಳೆದಿತು. ಆರ್ಸಿಬಿ ಮ್ಯಾನೇಜ್ಮೆಂಟ್ ಸೇರಿದಂತೆ ಉಳಿದ 8 ತಂಡಗಳು ಖರೀದಿ ಮಾಡಿದ ರೀತಿ ಅಂತಹ ಮೋಡಿ ಮಾಡದಿದ್ದರೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಖರೀದಿಯ ಲೆಕ್ಕಾಚಾರ ಹಲವರ ಹುಬ್ಬೇರಿಸಿತು. ತಮಗಿರುವ ಬೃಹತ್ ಗಾತ್ರದ ಬಜೆಟ್ ಮಧ್ಯೆಯೂ ಕಡಿಮೆ ಹಣ ವ್ಯಯಿಸಿ, ಯುವ ಹಾಗೂ ಉತ್ತಮ ಆಟಗಾರರನ್ನು ತಮ್ಮ ತೆಕ್ಕೆಗೆ ಸೇರಿಸಿಕೊಂಡಿದ್ದು ಬಹುತೇಕರಿಗೆ ಅಚ್ಚರಿಯಾಯಿತು.
ಐಪಿಎಲ್ ಹರಾಜಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮ್ಯಾನೇಜ್ಮೆಂಟ್ ಆಯ್ಕೆಯ ಪ್ರಕ್ರಿಯೆ ಹಾಗೂ ಲೆಕ್ಕಾಚಾರದ ಖರೀದಿಯನ್ನು ನೆಟ್ಟಿಗರು ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚಿ ಮಾತನಾಡಿದ್ದಾರೆ. ಪ್ರಸ್ತುತ ಸಿಎಸ್ಕೆ ಖರೀದಿ ಮಾಡಿರುವ ಆಟಗಾರರ ಪಟ್ಟಿ ಈ ಕೆಳಕಂಡಂತಿದೆ ಗಮನಿಸಿ.
1. ಡೆವೊನ್ ಕಾನ್ವೇ – 6.25 ಕೋಟಿ ರೂ.
2. ರಾಹುಲ್ ತ್ರಿಪಾಠಿ – 3.4 ಕೋಟಿ ರೂ.
3. ರಚಿನ್ ರವೀಂದ್ರ – 4 ಕೋಟಿ ರೂ.
4. ರವಿಚಂದ್ರನ್ ಅಶ್ವಿನ್ – 9.75 ಕೋಟಿ ರೂ.
5. ಖಲೀಲ್ ಅಹಮದ್ – 4.80 ಕೋಟಿ ರೂ.
6. ನೂರ್ ಅಹಮದ್ – 10 ಕೋಟಿ ರೂ.
7. ಸ್ಯಾಮ್ ಕರನ್ - 2.40 ಕೋಟಿ ರೂ.
8. ವಿಜಯ್ ಶಂಕರ್ - 1.2 ಕೋಟಿ ರೂ.
ಉಳಿಸಿಕೊಂಡಿರುವ ಆಟಗಾರರ ಪಟ್ಟಿ: ರುತುರಾಜ್ ಗಾಯಕ್ವಾಡ್, ಮತೀಶಾ ಪತಿರಾನ, ಶಿವಂ ದುಬೆ, ರವೀಂದ್ರ ಜಡೇಜಾ ಮತ್ತು ಎಂ.ಎಸ್. ಧೋನಿ.
ರಿಲೀಸ್ ಆದ ಆಟಗಾರರ ಪಟ್ಟಿ: ಮೊಯಿನ್ ಅಲಿ, ದೀಪಕ್ ಚಾಹರ್, ತುಷಾರ್ ದೇಶಪಾಂಡೆ, ರಾಜವರ್ಧನ್ ಹಂಗರ್ಗೇಕರ್, ಅಜಯ್ ಮಂಡಲ್, ಮುಖೇಶ್ ಚೌಧರಿ, ಅಜಿಂಕ್ಯ ರಹಾನೆ, ಶೇಕ್ ರಶೀದ್, ಮಿಚೆಲ್ ಸ್ಯಾಂಟ್ನರ್, ಸಮರ್ಜೀತ್ ಸಿಂಗ್, ನಿಶಾಂತ್ ಸಿಂಧು, ಪ್ರಶಾಂತ್ ಸೋಲಂಕಿ, ಮಹೇಶ್ ಶರಚ್‌ಉಲ್ ತೀಕ್ಷಣ, ಡೇರಿಲ್ ಮಿಚೆಲ್, ಸಮೀರ್ ರಿಜ್ವಿ, ಮುಸ್ತಾಫಿಜುರ್ ರೆಹಮಾನ್, ರಿಚರ್ಡ್ ಗ್ಲೀಸನ್, ಅವನೀಶ್ ರಾವ್ ಅರವೆಲ್ಲಿ, ಡೆವೊನ್ ಕಾನ್ವೇ.