

ಬೆಂಗಳೂರು: ಕಾಂಗ್ರೆಸ್ನ ಐದು ಗ್ಯಾರಂಟಿಗಳ ಪೈಕಿ ಒಂದಾಗಿರುವ ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡ್ದಾರರಿಗೆ ಮಾಸಿಕ 10 ಕೆ.ಜಿ. ಅಕ್ಕಿ ನೀಡುವ ಅನ್ನಭಾಗ್ಯ ಯೋಜನೆ ಸಂಬಂಧ ಕೇಂದ್ರ ಹಾಗೂ ರಾಜ್ಯ ಸರ್ಕಾರ ನಡುವಿನ ಸಂಘರ್ಷ ಇನ್ನೂ ನಿಂತಿಲ್ಲ. ಈ ಮಧ್ಯೆ ಯೋಜನೆ ಜಾರಿ ಸಲುವಾಗಿ ಬೇರೆಯದೇ ಒಂದು ನಿರ್ಧಾರಕ್ಕೆ ಬಂದಿರುವ ಸಿಎಂ ಸಿದ್ದರಾಮಯ್ಯ, ರಾಜ್ಯ ಬಿಜೆಪಿ ನಾಯಕರ ನೈಜ ಮುಖ ಇದು ಎಂಬುದಾಗಿ ವಿಷಯವೊಂದನ್ನು ಪ್ರಸ್ತಾಪಿಸಿದ್ದಾರೆ.
ಐದು ಕೆ.ಜಿ. ಅಕ್ಕಿ ಕೊಡಿ, ಉಳಿದ 5 ಕೆ.ಜಿ ಅಕ್ಕಿ ಕೊಡಲು ಆಗದಿದ್ರೆ ಹಣ ಕೊಡಿ ಎಂದು ನಮಗೆ ಬಿಟ್ಟಿ ಉಪದೇಶ ನೀಡುವ ಬಸವರಾಜ ಬೊಮ್ಮಾಯಿ, ಯಡಿಯೂರಪ್ಪ ಮುಂತಾದ ಬಿಜೆಪಿ ನಾಯಕರು ಒಂದು ಬಾರಿಯೂ ಇದು ಬಡವರಿಗಾಗಿ ರೂಪಿಸಿರುವ ಕಾರ್ಯಕ್ರಮ, ಕರ್ನಾಟಕಕ್ಕೆ ಅಕ್ಕಿ ಕೊಡಿ ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿಲ್ಲ. ಇದು ರಾಜ್ಯ ಬಿಜೆಪಿ ನಾಯಕರ ನೈಜ ಮುಖ. ಅವರಿಗೆ ಬಡವರಿಗೆ ಅಕ್ಕಿ ನೀಡುವುದಕ್ಕಿಂತ ಅನ್ನಭಾಗ್ಯ ಕಾರ್ಯಕ್ರಮ ಜಾರಿಯಾಗಬಾರದು ಎಂಬುದರಲ್ಲೇ ಹೆಚ್ಚು ಖುಷಿ ಸಿಗುತ್ತದೆ ಎಂದು ಸಿದ್ದರಾಮಯ್ಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅದಾಗ್ಯೂ ಯೋಜನೆ ಜಾರಿಗೆ ತಂದೇ ತರುವುದಾಗಿ ಹೇಳಿರುವ ಅವರು, ನಾವು ನೀಡಿದ್ದ ವಾಗ್ದಾನದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಸರ್ಕಾರದ ನಡೆ ಪಾರದರ್ಶಕವಾಗಿರಲಿ ಎಂದು ಮುಕ್ತ ಮಾರುಕಟ್ಟೆ ಮೂಲಕ ಟೆಂಡರ್ ಕರೆದು ಅಕ್ಕಿ ಖರೀದಿಸಿ ಮುಂದಿನ ದಿನಗಳಲ್ಲಿ ತಲಾ 10 ಕೆ.ಜಿ ಅಕ್ಕಿಯನ್ನು ವಿತರಿಸುತ್ತೇವೆ ಎಂದಿದ್ದಾರೆ. ಈ ಪ್ರಕ್ರಿಯೆಗೆ ಕೆಲ ಸಮಯ ಬೇಕಿರುವುದರಿಂದ ಜುಲೈ 1ರಿಂದ ಹೆಚ್ಚುವರಿಯಾಗಿ ನೀಡಲು ಉದ್ದೇಶಿಸಿರುವ 5 ಕೆ.ಜಿ ಅಕ್ಕಿ ಬದಲಿಗೆ ತಲಾ 170 ರೂ. ನೀಡುತ್ತೇವೆ ಎಂದಿದ್ದಾರೆ.