

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಪಾಲಿಕೆಯ ಕಾಂಗ್ರೆಸ್ ಸದಸ್ಯ ನಿರಂಜನ್ ಹಿರೇಮಠ್ ಅವರ ಪುತ್ರಿ, ಬಿವಿಬಿ ಕಾಲೇಜು ವಿದ್ಯಾರ್ಥಿನಿ ನೇಹಾ ಕೊಲೆ ಪ್ರಕರಣ ದಿನ ಕಳೆದಂತೆ ರಾಜಕೀಯ ಸ್ವರೂಪ ಪಡೆದುಕೊಳ್ಳುತ್ತಿದ್ದು, ಘಟನೆಗೆ ಸಂಬಂಧಿಸಿದಂತೆ ಯುವತಿಯ ತಂದೆಗೆ ಸಿಎಂ ಸಿದ್ದರಾಮಯ್ಯ ಫೋನ್ ಮಾಡಿ ಕ್ಷಮೆಯಾಚಿಸಿದ್ದಾರೆ.
ರಾಜ್ಯ ಸರ್ಕಾರದ ಪರವಾಗಿ ಕಾನೂನು ಸಚಿವ ಎಚ್.ಕೆ. ಪಾಟೀಲ್ ನೇಹಾ ತಂದೆ ನಿರಂಜನ್ ಅವರನ್ನು ಭೇಟಿ ಮಾಡಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು. ನೇಹಾ ಕೊಲೆ ಪ್ರಕರಣನ್ನು ಸಿಐಡಿ ತನಿಖೆಗೆ ಒಪ್ಪಿಸಿದ್ದನ್ನು ಮತ್ತು ತ್ವರಿತ ವಿಚಾರಣೆಗಾಗಿ ವಿಶೇಷ ನ್ಯಾಯಾಲಯ ಸ್ಥಾಪಿಸುವ ನಿರ್ಣಯವನ್ನು ಅಂಗೀಕರಿಸಿರುವುದಾಗಿ ಕುಟುಂಬಸ್ಥರಿಗೆ ತಿಳಿಸಿದರು.
ಬಳಿಕ ಕುಟುಂಬದವರೊಂದಿಗೆ ಮಾತನಾಡುತ್ತ ಸಿಎಂ ಸಿದ್ದರಾಮಯ್ಯ ಕರೆ ಮಾಡಿದ ಸಚಿವ ಎಚ್.ಕೆ. ಪಾಟೀಲ್, ತಮ್ಮಿಬ್ಬರ ನಡುವೆ ಮಾತುಕತೆಯ ಪ್ರಕಾರ ನೇಹಾ ಕೊಲೆ ಪ್ರಕರಣದಲ್ಲಿ ಸರ್ಕಾರ ತೆಗೆದುಕೊಂಡಿರುವ ಎಲ್ಲ ಕ್ರಮಗಳನ್ನು ತಿಳಿಸಿದ್ದಾಗಿ ಹೇಳಿ ನಿಮ್ಮೊಂದಿಗೆ ನಿರಂಜನ್ ಮಾತಾಡುತ್ತಾರೆ ಅಂತ ತಮ್ಮ ಫೋನನ್ನು ಣೇಹಾ ತಂದೆಗೆ ಕೊಟ್ಟರು.
ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಮಾತನಾಡಿದ ನಿರಂಜನ್ ಹಿರೇಮಠ್, ನೇಹಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯನ್ನು ಸಿಐಡಿಗೆ ಒಪ್ಪಿಸಿದ್ದು ಮತ್ತು ತ್ವರಿತ ವಿಚಾರಣೆಗಾಗಿ ವಿಶೇಷ ನ್ಯಾಯಾಲಯ ಸ್ಥಾಪಿಸುವ ನಿರ್ಣಯವನ್ನು ಅಂಗೀಕರಿಸಿದ್ದಕ್ಕೆ ಮುಖ್ಯಮಂತ್ರಿ ಅವರಿಗೆ ಧನ್ಯವಾದ ತಿಳಿಸಿದರು. ಕೊನೆಯಲ್ಲಿ ನಿರಂಜನ್ ವೆರ ಸಾರಿ ಎಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಕ್ಷಮೆಯಾಚಿಸಿದ್ದಾರೆ.