

ನವದೆಹಲಿ: ವಿಶ್ವದ ಮಿಲಿಯನ್ ಡಾಲರ್ ಟೂರ್ನಿಗಳಲ್ಲಿ ಒಂದಾದ ಐಪಿಎಲ್ ಆರಂಭಗೊಂಡು ಒಂದು ತಿಂಗಳಾಗಿದ್ದು, ಪ್ರೇಕ್ಷಕರಲ್ಲಿನ ಕುತೂಹಲವನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಹಾಲಿ ಟೂರ್ನಿಯಲ್ಲಿ ಹಲವು ಗಾಯದ ಸಮಸ್ಯೆಯೂ ತಂಡಗಳನ್ನು ಇನ್ನಿಲ್ಲದಂತೆ ಕಾಡುತ್ತಿದ್ದು, ಇದಕ್ಕೆ ಸಂಬಂಧಿಸಿದಂತೆ ಪಂಜಾಬ್ ಕಿಂಗ್ಸ್ ಹೊರತಾಗಿಲ್ಲ. ಗಾಯಕ್ಕೆ ಗುತ್ತಾಗಿರುವ ನಾಯಕ ಶಿಖರ್ ಧವನ್ ಅನುಪಸ್ಥಿತಿಯಲ್ಲಿ ಅಲ್ರೌಂಡರ್ ಸ್ಯಾಮ್ ಕರ್ರನ್ ತಂಡವನ್ನು ಮುನ್ನಡೆಸುತ್ತಿದ್ದು, ಇದಕ್ಕೆ ಸಂಬಂಧಿಸಿದಂತೆ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ವಾಗ್ದಾಳಿ ನಡೆಸಿದ್ದಾರೆ.
ಆಡಿರುವ 8 ಪಂದ್ಯಗಳ ಪೈಕಿ 6ರಲ್ಲಿ ಸೋತು 2ರಲ್ಲಿ ಗೆದ್ದಿರುವ ಪಂಜಾಬ್ ಕಿಂಗ್ಸ್ ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ. ಮುಂದಿನ ಎಲ್ಲಾ ಪಂದ್ಯಗಳು ಪಂಜಾಬ್ ಪಾಲಿಗೆ ನಾಕೌಟ್ ಪಂದ್ಯಗಳಾಗಿದ್ದು, ಒಂದು ವೇಳೆ ಮುಂದಿನ ದಿನಗಳಲ್ಲಿ ಆಡುವ ಎಲ್ಲಾ ಪಂದ್ಯಗಳಲ್ಲಿ ಗೆದ್ದರೆ ಮಾತ್ರ ಪಂಜಾಬ್ ಪ್ಲೇಆಫ್ ಆಸೆಯನ್ನು ಜೀವಂತವಾಗಿರಿಸಿಕೊಳ್ಳಲಿದೆ.
ಇದಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್, ನಾನು ಸ್ಯಾಮ್ ಕರ್ರನ್ನನ್ನು ಬ್ಯಾಟಿಂಗ್ ಅಥವಾ ಬೌಲಿಂಗ್ ಆಲ್ರೌಂಡರ್ ಎಂದು ಪರಿಗಣಿಸುವುದಿಲ್ಲ. ಏಕೆಂದರೆ ಆತ ಏತಕ್ಕೂ ಪ್ರಯೋಜನವಿಲ್ಲದೆ ಇರುವ ಆಟಗಾರ ಎಂದು ಹೇಳಲು ಇಷ್ಟಪಡುತ್ತೇನೆ. ಒಬ್ಬ ಆಟಗಾರ ತನ್ನ ತಂಡವನ್ನು ಬ್ಯಾಟಿಂಗ್ ಅಥವಾ ಬೌಲಿಂಗ್ನಿಂದ ಗೆಲ್ಲಿಸಲು ಪ್ರಯತ್ನಿಸುತ್ತಾನೆ. ಆದರೆ, ಈತ ನಿರೀಕ್ಷಿತ ಮಟ್ಟದಲ್ಲಿ ಪ್ರದರ್ಶನ ನೀಡುತ್ತಿಲ್ಲ ಹೀಗಾಗಿ ನಾನು ಈಗೆ ಮಾತನಾಡಬೇಕಾಗಿ ಬಂತು ಎಂದು ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಸ್ಯಾಮ್ ಕರ್ರನ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಗುಜರಾತ್ ವಿರುದ್ಧದ ಪಂದ್ಯದಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗದ ವೈಫಲ್ಯದಿಂದಾಗಿ ಪಂಜಾಬ್ ಕಿಂಗ್ಸ್ ಸೋಲೊಪ್ಪಿಕೊಂಡಿತ್ತು. ಹಾಲಿ ಟೂರ್ನಿಯಲ್ಲಿ ಡೆಲ್ಲಿ ಮತ್ತು ಗುಜರಾತ್ ಹೊರತುಪಡಿಸಿದರೆ ಪಂಜಾಬ್ ಉಳಿದ ತಂಡಗಳ ವಿರುದ್ಧ ಸೋತಿದೆ. ಈ ವಿಚಾರ ಮಾಜಿ ಆಟಗಾರರ ಕಣ್ಣು ಕೆಂಪಗಾಗಿಸಿದ್ದು, ಪಂಜಾಬ್ ಕಿಂಗ್ಸ್ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ.