ಚಾಮರಾಜನಗರ ಆಕ್ಸಿಜನ್​ ದುರಂತ ತನಿಖೆ ಮಾಡುತ್ತೇವೆ: ಸಿಎಂ ಸಿದ್ದರಾಮಯ್ಯ

CM-Siddaramaiah
Published on

ಬೆಂಗಳೂರು: ಚಾಮರಾಜನಗರ ಆಕ್ಸಿಜನ್​ ದುರಂತ ಸೇರಿದಂತೆ ಬಿಜೆಪಿ ಸರ್ಕಾರದ ಎಲ್ಲಾ ಅಕ್ರಮಗಳ ಸೂಕ್ತ ತನಿಖೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ಧಾರೆ.

ಈ ಕುರಿತು ಟ್ವೀಟ್​ ಮಾಡಿರುವ ಸಿಎಂ ಸಿದ್ದರಾಮಯ್ಯ ಚಾಮರಾಜನಗರದಲ್ಲಿ ಕೋವಿಡ್ ಸಂದರ್ಭದಲ್ಲಿ ಆಕ್ಷಿಜನ್ ಕೊರತೆಯಿಂದ ಉಂಟಾಗಿದ್ದ ದುರಂತ ಪ್ರಕರಣದ ಮರುತನಿಖೆಯನ್ನು ಕೈಗೊಳ್ಳಲಾಗುವುದು. ಅಂದಿನ ಆರೋಗ್ಯ ಸಚಿವ ಡಾ. ಸುಧಾಕರ್ ಅವರು ಅಲ್ಲಿ ಸತ್ತಿರುವುದು ಇಬ್ಬರೇ ಎಂದಿದ್ದರು. ಆದರೆ, ಸತ್ತವರ ಸಂಖ್ಯೆ ಮೂವತ್ತಕ್ಕೂ ಹೆಚ್ಚಿತ್ತು. ಈ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಿ ಮೃತರ ಕುಟುಂಬಗಳಿಗೆ ನ್ಯಾಯ ಕೊಡಿಸುತ್ತೇವೆ ಎಂದಿದ್ದಾರೆ.

ಹಿಂದಿನ ಸರ್ಕಾರಗಳ ಪ್ರಮುಖ ಹಗರಣಗಳಾದ 4 ವೈದ್ಯಕೀಯ ಕಾಲೇಜು ನಿರ್ಮಾಣದಲ್ಲಿ ಅವ್ಯವಹಾರ, 40% ಕಮಿಷನ್, ಕೊರೊನಾ ಸಂದರ್ಭದಲ್ಲಿ ವೈದ್ಯಕೀಯ ಸಾಮಗ್ರಿಗಳ ಖರೀದಿಯಲ್ಲಿ ಅವ್ಯವಹಾರ, ನೀರಾವರಿ ಕಾಮಗಾರಿಗಳಲ್ಲಿ ಅವ್ಯವಹಾರ, ಪಿಎಸ್ಐ ನೇಮಕಾತಿ ಹಗರಣ ಹಾಗೂ ಬಿಟ್ ಕಾಯಿನ್ ಹಗರಣದ ಬಗ್ಗೆ ಸೂಕ್ತ ತನಿಖೆ ನಡೆಸಲಾಗುವುದು.

ಕೇಂದ್ರ ಸರ್ಕಾರದ ಷಡ್ಯಂತ್ರ

ಕೊಟ್ಟ ಮಾತಿನಂತೆ ಒಂದು ಗ್ಯಾರಂಟಿಯನ್ನು ಈಗಾಗಲೇ ಜಾರಿ ಮಾಡಿದ್ದೇವೆ. ಜುಲೈ ಒಂದರಿಂದ ಗೃಹಜ್ಯೋತಿ ಯೋಜನೆಯನ್ನು ಜಾರಿಗೆ ತರುತ್ತೇವೆ. ಗೃಹಲಕ್ಷ್ಮೀ ಯೋಜನೆಯನ್ನು ಆಗಸ್ಟ್ 15 ರ ನಂತರ ಜಾರಿ ಮಾಡಲಾಗುವುದು. ಈ ಸಂಬಂಧ ಈಗಾಗಲೇ ಅರ್ಜಿ ಕರೆದಿದ್ದು, ಅರ್ಜಿಗಳು ಸ್ವೀಕಾರವಾಗುತ್ತಿವೆ. ಅರ್ಜಿ ಪ್ರಕ್ರಿಯೆ ಪೂರ್ಣಗೊಂಡ ನಂತರ ಯೋಜನೆಯನ್ನು ಜಾರಿಗೆ ಕೊಡಲಾಗುವುದು.

ಅನ್ನಭಾಗ್ಯ ಕಾರ್ಯಕ್ರಮಕ್ಕೆ 5 ಕೆಜಿ ಅಕ್ಕಿ ನೀಡುತ್ತಿದ್ದೇವೆ. ಒಟ್ಟು 10 ಕೆಜಿ ಅಕ್ಕಿ ನೀಡುವುದಾಗಿ ಹೇಳಿದ್ದೆವು. 2.29 ಲಕ್ಷ ಮೆ.ಟನ್ ಅಕ್ಕಿ ಅಗತ್ಯವಿದೆ. ಅಷ್ಟು ಅಕ್ಕಿ ನಮಗೆ ದೊರೆಯುತ್ತಿಲ್ಲ. ಕೇಂದ್ರ ಸರ್ಕಾರದ ಅಧೀನದ ಎಫ್.ಸಿ.ಐ ಮೊದಲಿಗೆ ಅಕ್ಕಿ ನೀಡುವುದಾಗಿ ಒಪ್ಪಿ ನಂತರ ಕೊಡಲಾಗುವುದಿಲ್ಲ ಎಂದು ಪತ್ರ ಬರೆದಿದ್ದಾರೆ. ಅಕ್ಕಿಯ ದಾಸ್ತಾನು ಇದ್ದರೂ ಕೊಡುತ್ತಿಲ್ಲ. ಈ ಬಗ್ಗೆ ಆಹಾರ ಇಲಾಖೆ ಮೂಲಕ ಹೇಳಿ ಬರೆಸಿದ್ದಾರೆ. ಇದು ಕೇಂದ್ರ ಬಿಜೆಪಿ ಸರ್ಕಾರದ ಷಡ್ಯಂತ್ರ ಎಂದು ಕಿಡಿಕಾರಿದ್ಧಾರೆ.

ಕೇಳಿ ಘೋಷಣೆ ಮಾಡಬೇಕಿತ್ತೇ

ನವದೆಹಲಿಗೆ ಭೇಟಿ ನೀಡಿದಾಗ ಎಫ್.ಸಿ.ಐ ನವರು ಅಕ್ಕಿ ನೀಡಲು ನಿರಾಕರಿಸಿರುವ ವಿಚಾರವನ್ನು ಕೇಂದ್ರ ಗೃಹಸಚಿವ ಅಮಿತ್​ ಶಾ ಅವರ ಗಮನಕ್ಕೆ ತಂದಿದ್ದೇನೆ. ಕೇಂದ್ರದಿಂದ ಬಡವರ ಮೇಲೆ ಗದಾ ಪ್ರಹಾರ ಮಾಡಲಾಗಿದೆ. ಅನ್ನಭಾಗ್ಯವನ್ನು ನಾವು ಘೋಷಣೆ ಮಾಡುವ ಮುನ್ನ ಯಡಿಯೂರಪ್ಪ, ಆರ್. ಅಶೋಕ್ ಹಾಗೂ ಬಸವರಾಜ ಬೊಮ್ಮಾಯಿ ಅವರನ್ನು ಕೇಳಿ ಘೋಷಣೆ ಮಾಡಬೇಕಿತ್ತೇ ಎಂದು ಪ್ರಶ್ನಿಸಿದ್ದಾರೆ.

ಬಿಜೆಪಿ ಬಡವರ ವಿರೋಧಿ ಪಕ್ಷ. ಅಕ್ಕಿ ಪಡೆಯಲು ನಮ್ಮ ಪ್ರಯತ್ನ ಜಾರಿಯಲ್ಲಿದೆ. ನ್ಯಾಫೆಡ್, ಕೇಂದ್ರೀಯ ಭಂಡಾರ, ಎನ್.ಸಿ.ಸಿ.ಎಫ್ ಅವರೊಂದಿಗೆ ಮಾತುಕತೆ ನಡೆಯುತ್ತಿದ್ದು, ನಾಳೆ ಸಚಿವ ಸಂಪುಟದಲ್ಲಿ ಚರ್ಚೆ ಮಾಡಿ ತೀರ್ಮಾನ ಮಾಡಲಾಗುತ್ತದೆ. ಎಲ್ಲಿಯೂ ಅಗತ್ಯವಿರುಷ್ಟು ಅಕ್ಕಿ ದೊರೆಯುತ್ತಿಲ್ಲ. ಅಕ್ಕಿ ದೊರೆತ ತಕ್ಷಣದಿಂದಲೇ ಅನ್ನಭಾಗ್ಯ ಜಾರಿಗೆ ತರಲಾಗುವುದು.

ಜಾರಿ ಮಾಡುವುದು ನಿಶ್ಚಿತ

2022-23 ನೇ ಸಾಲಿನಲ್ಲಿ ಯುವ ನಿಧಿ ಕಾರ್ಯಕ್ರಮದಡಿ ನಿರುದ್ಯೋಗಿ ಪದವೀಧರರು, ಡಿಪ್ಲೊಮಾ ಮಾಡಿದವರಿಗೆ 6 ತಿಂಗಳೊಳಗೆ ಕೆಲಸ ದೊರೆಯದೇ ಹೋದರೆ, ಪದವೀಧರರಿಗೆ 3 ಸಾವಿರ ಹಾಗೂ ಡಿಪ್ಲೊಮಾ ಮಾಡಿದವರಿಗೆ 1500 ರೂ.ಗಳನ್ನು 24 ತಿಂಗಳು ನೀಡಲಾಗುವುದು.

2.50 ಲಕ್ಷ ಖಾಲಿ ಹುದ್ದೆಗಳನ್ನು ಒಂದೇ ಸಲಕ್ಕೆ ಭರ್ತಿ ಮಾಡಲಾಗುವುದಿಲ್ಲ. ಹಂತ ಹಂತವಾಗಿ ಭರ್ತಿ ಮಾಡಲಾಗುವುದು. ಐದು ಗ್ಯಾರೆಂಟಿಗಳನ್ನು ಈಡೇರಿಸಲು ವಾರ್ಷಿಕವಾಗಿ 59,000 ಕೋಟಿ ರೂ. ಬೇಕಿದೆ. ಈ ಹಣವನ್ನು ಖರ್ಚು ಮಾಡಲು ನಾವು ಸಿದ್ಧರಿದ್ದು ನಮ್ಮ ಐದೂ ಗ್ಯಾರೆಂಟಿಗಳನ್ನು ಜಾರಿ ಮಾಡುವುದು ನಿಶ್ಚಿತ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್​ ಮಾಡಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net