

ಚೆನ್ನೈ: ಆಘಾತಕಾರಿ ಘಟನೆ ಒಂದರಲ್ಲಿ ಖ್ಯಾತ ತಮಿಳು ನಟ, ನಿರ್ದೇಶಕ, ಡಬ್ಬಿಂಗ್ ಕಲಾವಿದ ಬೋಸ್ ವೆಂಕಟ್ ಅವರ ಸಹೋದರ-ಸಹೋದರಿಯು ಒಂದೇ ದಿನ ವಿಧಿಯಾಟಕ್ಕೆ ಬಲಿಯಾಗಿದ್ದಾರೆ.
ಬೋಸ್ ವೆಂಕಟ್ ಅವರ ಸಹೋದರಿ ವಲರ್ಮತಿ ಗುಣಸೇಖರನ್ ಅವರು ಜೂನ್ 23ರ ಮುಂಜಾನೆ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ವಿಚಾರ ತಿಳಿದು ಕುಟುಂಬಸ್ಥರು ಚೆನ್ನೈಗೆ ದೌಡಾಯಿಸಿದ್ದು, ಈ ವೇಳೆ ಮತ್ತೊಂದು ಘಟನೆ ನಡೆದಿದೆ.
ಪುದುಕೊಟ್ಟೈ ಜಿಲ್ಲೆಯ ಅರಂತಂಗಿ ಬ್ಲಾಕ್ನ ಪಾಂಡಿಪತಿರಂ ಗ್ರಾಮದ ನಿವಾಸಿಯಾಗಿರುವ ಬೋಸ್ ವೆಂಕಟ್ ಅವರ ಸಹೋದರ ರಂಗನಾಥನ್ ಅವರ ಸಹೋದರಿಯ ಮೃತದೇಹವನ್ನು ನೋಡಿದ ಕೂಡಲೇ ಕುಸಿದು ಬಿದ್ದಿದ್ದು, ಹೃದಯಾಘಾತದಿಂದ ಸ್ಥಳದಲ್ಲೇ ಪ್ರಾಣಬಿಟ್ಟಿದ್ದಾರೆ.
ಈ ಕುರಿತು ನಟ ಬೋಸ್ ವೆಂಕಟ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದು, ತಮ್ಮ ಸಹೋದರ-ಸಹೋದರಿ ಒಂದೇ ದಿನ ಇಹಲೋಕ ತ್ಯಜಿಸಿದ್ದಾಗಿ ತಿಳಿಸಿದ್ದಾರೆ. ನೆಟ್ಟಿಗರು ನಟನ ಕುಟುಂಬದಲ್ಲಾದ ನಷ್ಟದ ಕುರಿತು ಸಂತಾಪ ಸೂಚಿಸಿದ್ದಾರೆ.