More

    ಮೋದಿ ಬಲ ಬಿಜೆಪಿ ಸಬಲ ಕಾಂಗ್ರೆಸ್ ದುರ್ಬಲ: ಕೈ ಬಗ್ಗೆ ಜನರಿಗೆ ಗ್ಯಾರಂಟಿ ಇಲ್ಲ ಎಂದ ಸಿಎಂ ಬೊಮ್ಮಾಯಿ

    ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಮುನ್ನಡೆಸುತ್ತಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ರಾಜ್ಯಾದ್ಯಂತ ಬಿರುಸಿನ ಪ್ರಚಾರದಲ್ಲಿ ತೊಡಗಿದ್ದಾರೆ. ಬಿಜೆಪಿಯನ್ನು ಪುನಃ ಅಧಿಕಾರಕ್ಕೆ ತರುವ ಸಂಕಲ್ಪದೊಂದಿಗೆ ಪಕ್ಷವನ್ನು ಮುನ್ನಡೆಸುತ್ತಿದ್ದಾರೆ. ‘ವಿಜಯವಾಣಿ’ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ರಾಜ್ಯ ಸರ್ಕಾರದ ಆಡಳಿತ, ಒಳ ಮೀಸಲಾತಿ, ಬಹಿರಂಗವಾಗುತ್ತಿರುವ ಸಮೀಕ್ಷೆಗಳು, ಭ್ರಷ್ಟಾಚಾರ ಆರೋಪಗಳ ಕುರಿತು ಉತ್ತರ ನೀಡಿದ್ದಾರೆ.

    | ಪ್ರಕಾಶ ಎಸ್. ಶೇಟ್/ ಸಂತೋಷ ವೈದ್ಯ ಹುಬ್ಬಳ್ಳಿ

    * ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದ ಮೂಲೆ ಮೂಲೆ ಸುತ್ತಾಡುತ್ತಿದ್ದೀರಿ, ಜನರ ನಾಡಿಮಿಡಿತ ಹೇಗಿದೆ?

    ರಾಜ್ಯದಲ್ಲಿ ಬಿಜೆಪಿ ಪರ ಅಲೆ ಇದೆ. ಈ ಬಾರಿ ಪೂರ್ಣ ಬಹುಮತದೊಂದಿಗೆ ಸರ್ಕಾರ ರಚನೆ ಮಾಡಲು ಬಿಜೆಪಿಗೆ ಅವಕಾಶ ಮಾಡಿಕೊಡಬೇಕೆಂದು ಜನರು ಸ್ಪಷ್ಟವಾಗಿ ಅಭಿವ್ಯಕ್ತ ಪಡಿಸುತ್ತಿದ್ದಾರೆ. ಎಲ್ಲ ವರ್ಗದ ಜನರ ಸಂಪೂರ್ಣ ಬೆಂಬಲ, ವಿಶ್ವಾಸ ಗಳಿಸುವಲ್ಲಿ ನಾವು ಯಶಸ್ವಿಯಾಗಿದ್ದೇವೆ.

    * ವಿರೋಧ ಪಕ್ಷಗಳು, ಮುಖ್ಯವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಭ್ರಷ್ಟಾಚಾರದ ವಿಷಯದಲ್ಲಿ ನಿಮ್ಮನ್ನೇ ಯಾಕೆ ಟಾರ್ಗೆಟ್ ಮಾಡುತ್ತಿದ್ದಾರೆ?

    ಮುಖ್ಯಮಂತ್ರಿಯಾಗಿ ಈ ಚುನಾವಣೆಯನ್ನು ನಾನೇ ಲೀಡ್ ಮಾಡುತ್ತಿದ್ದೇನೆ. ನಾನು ಸಿದ್ದರಾಮಯ್ಯ ಸರ್ಕಾರದ ಭ್ರಷ್ಟಾಚಾರವನ್ನು ಎಳೆ ಎಳೆಯಾಗಿ ಸದನದಲ್ಲಿ ಬಿಚ್ಚಿಟ್ಟಿದ್ದೇನೆ. ಹಾಗಾಗಿ ಕಳೆದ ಒಂದೂವರೆ ವರ್ಷದಿಂದ ಬಿಜೆಪಿ ಸರ್ಕಾರಕ್ಕೆ ಕಪ್ಪು ಮಸಿ ಹಚ್ಚುವ ಕೆಲಸವನ್ನು ಅವರು ಮಾಡುತ್ತಿದ್ದಾರೆ. ಭ್ರಷ್ಟಾಚಾರದ ಆರೋಪ ಮಾಡುತ್ತಿರುವ ಕಾಂಗ್ರೆಸ್ ಕೈಗೇ ಕಪ್ಪು ಮಸಿ ಬಳಿದಿದೆ. ಕಾಂಗ್ರೆಸ್ ಭ್ರಷ್ಟಾಚಾರದ ಗಂಗೋತ್ರಿ ಎಂಬುದು ಜನರಿಗೆ ಗೊತ್ತಿದೆ.

    * ಬಿಜೆಪಿ ಸರ್ಕಾರದ ವಿರುದ್ಧ 40 ಪರ್ಸೆಂಟ್ ಕಮಿಷನ್, ಇತ್ಯಾದಿ ಭ್ರಷ್ಟಾಚಾರದ ಆರೋಪಗಳು ಜೋರಾಗಿ ಸದ್ದು ಮಾಡುತ್ತಿದೆಯಲ್ಲ?

    ನಾನು ಸಿಎಂ ಆಗುವುದಕ್ಕಿಂತ ಮುಂಚೆಯೇ 40 ಪರ್ಸೆಂಟ್ ಕಮಿಷನ್ ಆರೋಪವಿತ್ತು. ಸಿಎಂ ಆದ ಮೇಲೆ ಆರೋಪ ಮಾಡಿದ ಗುತ್ತಿಗೆದಾರರ ಸಂಘದ ಅಧ್ಯಕ್ಷರನ್ನು ಕರೆಯಿಸಿ ಒಂದಾದರೂ ದೂರು ಕೊಡಿ ಎಂದು ಕೇಳಿದೆ. ಆದರೆ, ಅವರು ಒಂದೂ ದೂರು ಕೊಟ್ಟಿಲ್ಲ. ಮುನಿರತ್ನ ಅವರ ಮಾನನಷ್ಟ ಪ್ರಕರಣದಲ್ಲಿ ಕೋರ್ಟ್ ಸಹ ಸಾಕ್ಷಿ ಕೊಡಿ ಎಂದು ಹೇಳಿತ್ತು. ಇನ್ನೊಬ್ಬ ಗುತ್ತಿಗೆದಾರ ಕಾಮಗಾರಿಯ ಬಿಲ್ ಪಾವತಿಗೆ 40 ಪರ್ಸೆಂಟ್ ಲಂಚ ಕೊಟ್ಟಿದ್ದೇನೆ ಎಂದು ಹೇಳಿದ. ನಾವು ಈ ಬಗ್ಗೆ ತನಿಖೆ ಮಾಡಿದಾಗ ಆರೋಪ ಮಾಡಿದ ಗುತ್ತಿಗೆದಾರ ಆ ಕಾಮಗಾರಿಯೇ ಮಾಡಿರಲಿಲ್ಲ, 8 ವರ್ಷಗಳಿಂದ ಗುತ್ತಿಗೆ ಕೆಲಸವನ್ನೇ ಮಾಡಿಲ್ಲ ಎಂದು ತಿಳಿದುಬಂದಿತು. ಇದೆಲ್ಲ ಕಾಂಗ್ರೆಸ್ ಮಾಡಿದ ಸೃಷ್ಟಿ.

    * ಮೀಸಲಾತಿಯಂಥ ಕ್ಲಿಷ್ಟಕರ ವಿಷಯದಲ್ಲಿ ನಿರ್ಧಾರಗಳನ್ನು ಕೈಗೊಳ್ಳಲು ಹೇಗೆ ಸಾಧ್ಯವಾದವು?

    ಪರಿಶಿಷ್ಟರು ಎಲ್ಲಿಯವರೆಗೆ ಮುಖ್ಯವಾಹಿನಿಗೆ ಬರುವುದಿಲ್ಲವೋ ಅಲ್ಲಿಯವರೆಗೆ ಅವರಿಗೆ ಸಾಮಾಜಿಕ ಗೌರವ ಸಿಗುವುದಿಲ್ಲ. ಜನಸಂಖ್ಯೆಯ ಆಧಾರದ ಮೇಲೆ ಮೀಸಲಾತಿ ಪರಿಷ್ಕರಣೆಗೆ ಒಳಪಡಬೇಕು ಎಂದು ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ಅವರೇ ಹೇಳಿದ್ದಾರೆ. ಪರಿಶಿಷ್ಟರಿಗೆ ನ್ಯಾಯ ಕೊಡಿಸಬೇಕು ಎಂದು ಎಲ್ಲರೊಂದಿಗೆ ಚರ್ಚೆ ಮಾಡಿ, ವಿಪಕ್ಷ, ಎಲ್ಲ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪರಿಶಿಷ್ಟರ ಮೀಸಲಾತಿಯನ್ನು ಹೆಚ್ಚಿಸುವ ನಿರ್ಣಯ ಕೈಗೊಂಡೆವು. 9ನೇ ಶೆಡ್ಯೂಲ್​ನಲ್ಲಿ ಸೇರ್ಪಡೆ ಮಾಡಲು ಏನು ಬೇಕು ಎಲ್ಲವನ್ನು ಮಾಡಿ ಶಿಫಾರಸ್ಸು ಮಾಡಿದ್ದೇವೆ. ಇದು ಬಿಜೆಪಿ ಸರ್ಕಾರದ ದಿಟ್ಟನಿಲುವಿನಿಂದ ಸಾಧ್ಯವಾಯಿತು.

    * ಪಿಎಸ್​ಐ ನೇಮಕಾತಿ ಹಗರಣವು ಕಾಂಗ್ರೆಸ್ಸಿಗೆ ಅಸ್ತ್ರವಾಗಿದೆಯಲ್ಲ?

    ಪಿಎಸ್​ಐ ನೇಮಕಾತಿಯಲ್ಲಿ ಕಿಂಗ್​ಪಿನ್ ಕಾಂಗ್ರೆಸ್. ಪಾಟೀಲ ಎಂಬಾತ ಈ ಹಿಂದೆ ಕಾನ್​ಸ್ಟೆಬಲ್ ಹುದ್ದೆಗಳ ನೇಮಕಾತಿಯಲ್ಲೂ ಅಕ್ರಮ ಮಾಡಿದ್ದ. ಇಂದಿನ ಪಿಎಸ್​ಐ ನೇಮಕಾತಿಯಲ್ಲೂ ಅವನದ್ದೇ ಕೈವಾಡವಿದೆ. ಕಾನ್​ಸ್ಟೆಬಲ್ ಹುದ್ದೆಗಳ ನೇಮಕಾತಿ ಅಕ್ರಮದಲ್ಲಿ ಕಾಂಗ್ರೆಸ್ ಅಂದಿನ ಡಿಐಜಿ ವಿರುದ್ಧ ಎಫ್​ಐಆರ್ ಮಾಡಿದ್ದರೂ ಅವರು ನಿವೃತ್ತಿಯಾಗುವವರೆಗೂ ತನಿಖೆ ಮಾಡಿರಲಿಲ್ಲ. ನಾವು ಎಡಿಜಿಪಿಯನ್ನು ಜೈಲಿಗೆ ಕಳುಹಿಸಿದ್ದೇವೆ. ಕಾಂಗ್ರೆಸ್ ಪಕ್ಷ ಭ್ರಷ್ಟಾಚಾರ, ಹಗರಣ ಮಾಡುವುದರ ಜತೆ ಮುಚ್ಚಿ ಹಾಕುವ ಕೆಲಸವನ್ನು ಸುಲಭವಾಗಿ ಮಾಡಿದೆ. ಲೋಕಾಯುಕ್ತ ಸಂಸ್ಥೆಯಲ್ಲಿ ಕಾಂಗ್ರೆಸ್ ವಿರುದ್ಧ 60 ಪ್ರಕರಣಗಳಿದ್ದವು. ಅವನ್ನೆಲ್ಲ ಮುಚ್ಚಿ ಹಾಕಲು ಎಸಿಬಿ (ಭ್ರಷ್ಟಾಚಾರ ನಿಗ್ರಹ ದಳ) ರಚನೆ ಮಾಡಿ ಲೋಕಾಯುಕ್ತವನ್ನು ದುರ್ಬಲಗೊಳಿಸಿದರು. ಎಸಿಬಿಯ ನಿಯಂತ್ರಣ ಮುಖ್ಯಮಂತ್ರಿಯ ಅಧೀನದಲ್ಲಿದ್ದು, 60 ಪ್ರಕರಣಗಳ ಕುರಿತು ಸಿದ್ದರಾಮಯ್ಯ ತನಿಖೆಯೇ ಮಾಡಲಿಲ್ಲ.

    * ಒಳ ಮೀಸಲಾತಿ ವಿಷಯದಲ್ಲಿ ನೀವು ತೆಗೆದುಕೊಂಡ ನಿರ್ಧಾರವು ಕೆಲ ಸಮುದಾಯಗಳ ಅಸಮಾಧಾನಕ್ಕೆ ಕಾರಣವಾಗಿದ್ದವು. ಅವು ಸರಿ ಹೋಗಿವೆಯೇ?

    ಕಾಂಗ್ರೆಸ್ಸಿಗರು ತಪ್ಪು ತಿಳಿವಳಿಕೆ ನೀಡಿದ್ದರಿಂದ ಬಂಜಾರ ಸಮುದಾಯದವರು ಅಸಮಾಧಾನ ವ್ಯಕ್ತಪಡಿಸಿದ್ದರು. ಅವರ ಜನಸಂಖ್ಯೆಗಿಂತ ಅಧಿಕ ಪ್ರಮಾಣದಲ್ಲಿ ಮೀಸಲಾತಿ ಇದೆ ಎಂದು ನಾವು ತಿಳಿವಳಿಕೆ ನೀಡಿದ ಮೇಲೆ ಅವರು ಸಮಾಧಾನಗೊಂಡಿದ್ದಾರೆ. ಅವರನ್ನು ಎಸ್​ಸಿ ಪಟ್ಟಿಯಿಂದ ಹೊರಗೆ ಹಾಕುತ್ತಾರೆ ಎಂಬ ಆತಂಕವಿತ್ತು. ಆದಿ ದ್ರಾವಿಡ, ಆದಿ ಕರ್ನಾಟಕ, ಬಂಜಾರ, ಭೋವಿ, ಕೊರಚ, ಕೊರಮ ಇವರು ಮೂಲ ಪರಿಶಿಷ್ಟರಾಗಿದ್ದು, ಯಾವುದೇ ಕಾರಣಕ್ಕೂ ಅವರನ್ನು ಪರಿಶಿಷ್ಟರ ಪಟ್ಟಿಯಿಂದ ತೆಗೆಯುವ ಪ್ರಶ್ನೆಯೇ ಇಲ್ಲ ಎಂದು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದೇವೆ.

    * ಲಿಂಗಾಯತ, ಒಕ್ಕಲಿಗರಿಗೆ ಶೇ.2 ಮೀಸಲಾತಿ ನೀಡಿದ್ದು ಅಪಸ್ವರಕ್ಕೆ ಕಾರಣವಾಗಿದ್ದವು?

    ಹಿಂದುಳಿದ ವರ್ಗಗಳ ಆಯೋಗವು ಒಂದೂವರೆ ವರ್ಷ ರಾಜ್ಯದ ಎಲ್ಲ ಜಿಲ್ಲೆಗಳಿಗೆ ಪ್ರವಾಸ ಮಾಡಿ ಅಧ್ಯಯನ ನಡೆಸಿ ಸಲ್ಲಿಸಿದ ಮಧ್ಯಂತರ ವರದಿಯ ಆಧಾರದ ಮೇಲೆ ಲಿಂಗಾಯತರು ಹಾಗೂ ಒಕ್ಕಲಿಗರಿಗೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ತಲಾ ಶೇ.2 ಮೀಸಲಾತಿ ಕಲ್ಪಿಸಿದ್ದೇವೆ. ಇಲ್ಲಿ ಯಾರಿಗೂ ಅನ್ಯಾಯವಾಗದಂತೆ ಸಾಮಾಜಿಕ ನ್ಯಾಯ ಕೊಡಲು ಕ್ರಮ ಕೈಗೊಂಡಿದ್ದೇವೆ. ಹಲವಾರು ವರ್ಷಗಳಿಂದ ಓಲೈಕೆ ರಾಜಕಾರಣ ಮಾಡಿಕೊಂಡು ಬಂದಿರುವ ಕಾಂಗ್ರೆಸ್ಸಿನಿಂದ ಇದು ಸಾಧ್ಯವಿಲ್ಲ. ಅವರು ಮೊಸರಿನಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದ್ದಾರೆ.

    * ಅಧಿಕಾರಕ್ಕೆ ಬಂದರೆ ಪರಿಶಿಷ್ಟರ ಮೀಸಲಾತಿ ಹೆಚ್ಚಿಗೆ ಮಾಡುತ್ತೇವೆ ಎಂದು ಕಾಂಗ್ರೆಸ್ ಹೇಳುತ್ತಿದೆಯಲ್ಲ?

    ಪರಿಶಿಷ್ಟರ ಮೀಸಲಾತಿ ಹೆಚ್ಚಳವನ್ನು ಕಾಂಗ್ರೆಸ್ಸಿಗರು ಮೊದಲು ಒಪ್ಪಿಕೊಂಡರು. ಈಗ ಒಮ್ಮೆಲೇ ನಾವು ಅಧಿಕಾರಕ್ಕೆ ಬಂದರೆ ಮತ್ತಷ್ಟು ಹೆಚ್ಚಿಗೆ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ. ಹೆಚ್ಚಿಗೆ ಮಾಡುತ್ತೇವೆ ಎನ್ನುವುದು ಅವರ ಚುನಾವಣೆ ಸ್ಟಂಟ್. ಜನರನ್ನು ಮೋಸ ಮಾಡುವ ತಂತ್ರ. ಮೋಸ ಮಾಡುವುದರಲ್ಲಿ ಅವರು ಉತ್ತುಂಗಕ್ಕೆ ತಲುಪಿದ್ದಾರೆ. ಪರಿಶಿಷ್ಟರ ಮೀಸಲಾತಿಯನ್ನು ಇನ್ನೂ ಹೆಚ್ಚಿಗೆ ಮಾಡಲು ಸಾಧ್ಯವಿಲ್ಲ ಎಂಬುದು ಅವರಿಗೂ ಗೊತ್ತಿದೆ.

    * ಅಧಿಕಾರಕ್ಕೆ ಬಂದರೆ ರಾಷ್ಟ್ರೀಯ ಶಿಕ್ಷಣ ನೀತಿ (ಎನ್​ಇಪಿ) ರದ್ದು ಪಡಿಸುತ್ತೇವೆ ಎಂದು ಕಾಂಗ್ರೆಸ್ ಹೇಳುತ್ತಿದೆ. ಇದು ಸಾಧ್ಯವೇ?

    ಕಾಂಗ್ರೆಸ್ಸಿಗೂ ಪ್ರಗತಿಗೂ ಸಂಬಂಧವಿಲ್ಲ. ಕಸ್ತೂರಿ ರಂಗನ್ ಮೂರು ವರ್ಷಗಳ ಕಾಲ ಅಧ್ಯಯನ ಮಾಡಿ ಎಲ್ಲ ರಾಜ್ಯಗಳ ಒಪ್ಪಿಗೆ ಪಡೆದು ಎನ್​ಇಪಿ ರೂಪಿಸಿದ್ದಾರೆ. ಕಾಂಗ್ರೆಸ್ಸಿನವರು ವಿರೋಧಕ್ಕಾಗಿ ವಿರೋಧ ಮಾಡುತ್ತಿದ್ದಾರೆ. ಮೋದಿಯವರು ಮಾಡಿದ್ದೆಲ್ಲವನ್ನು ವಿರೋಧ ಮಾಡಬೇಕು ಎಂಬುದು ಅವರ ಧೋರಣೆಯಾಗಿದೆ. ಎನ್​ಇಪಿಯಲ್ಲಿ ಏನು ತಪ್ಪಿದೆ ಎಂಬುದನ್ನು ಕಾಂಗ್ರೆಸ್ ಸ್ಪಷ್ಟಪಡಿಸಬೇಕು.

    * ಮೋದಿ ಅವರು ದೊಡ್ಡ ಪ್ರಮಾಣದಲ್ಲಿ ಪ್ರಚಾರ ಕೈಗೊಂಡಿದ್ದಾರಲ್ಲ?

    ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ಅವರ ಪ್ರಚಾರ ಕಾರ್ಯಕ್ರಮ ಬಹಳ ದೊಡ್ಡ ಬದಲಾವಣೆಯನ್ನು ತರಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ಜನರು ಹೊರಗಡೆ ಬಂದು ಹಕ್ಕು ಚಲಾಯಿಸುವುದರಿಂದ ಮತದಾನದ ಪ್ರಮಾಣ ಹೆಚ್ಚಳವಾಗಲಿದೆ. ಇದರಿಂದ ಬಿಜೆಪಿಗೆ ಖಂಡಿತವಾಗಿಯೂ ಅನುಕೂಲವಾಗಲಿದೆ.

    * ಬಜರಂಗ ದಳ ಸಂಘಟನೆಯನ್ನು ನಿಷೇಧ ಮಾಡುತ್ತೇವೆ ಎಂದು ಹೇಳುವ ಕಾಂಗ್ರೆಸ್ಸಿನ ಉದ್ದೇಶ ಏನಿರಬಹುದು?

    ಮುಸ್ಲಿಮರಿಗೆ ಕಾಂಗ್ರೆಸ್​ನ ಮೇಲೆ ಭ್ರಮನಿರಸನವಾಗಿದೆ. ಆ ಜಾಗವನ್ನು ಎಸ್​ಡಿಪಿಐ ತುಂಬುತ್ತಿದೆ. ಪಿಎಫ್​ಐ ನಿಷೇಧದ ಬಳಿಕ ಅದರ ರಾಜಕೀಯ ಅಂಗವೇ ಎಸ್​ಡಿಪಿಐ ಆಗಿದೆ. ನಿಷೇಧ ಮಾಡಿದಾಗ ಪಿಎಫ್​ಐ ಪರವಾಗಿ ಕಾಂಗ್ರೆಸ್ ನಿಂತಿಲ್ಲ ಎಂಬುದು ಅವರ ಅಸಮಾಧಾನಕ್ಕೆ ಕಾರಣವಾಗಿದೆ. ಹೀಗಾಗಿ ಈ ಚುನಾವಣೆಯಲ್ಲಿ ಕಾಂಗ್ರೆಸ್​ನ ಅಲ್ಪಸಂಖ್ಯಾತರ ಮತಗಳು ಕಿತ್ತುಕೊಂಡು ಹೋಗುತ್ತದೆ. ಈ ಕಾರಣಕ್ಕೆ ಬಜರಂಗ ದಳ ನಿಷೇಧ ಅಸ್ತ್ರವನ್ನು ಪ್ರಯೋಗಿಸಿದ್ದಾರೆ.

    * ಮಾಜಿ ಸಿಎಂ ಜಗದೀಶ ಶೆಟ್ಟರ್, ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಕಾಂಗ್ರೆಸ್ ಸೇರ್ಪಡೆಯಾದ ಮೇಲೆ ಲಿಂಗಾಯತರು ಬಿಜೆಪಿಯಿಂದ ದೂರವಾಗಿದ್ದಾರೆಯೇ?

    ಲಿಂಗಾಯತರು ತಮಗೆ ಮತ ಹಾಕುವುದಿಲ್ಲ ಎಂಬುದು ಕಾಂಗ್ರೆಸ್ಸಿನ ಮಾನಸಿಕ ಸ್ಥಿತಿಯಾಗಿದೆ. 2018ರಲ್ಲಿ ಸಮಾಜವನ್ನೇ ಒಡೆಯಲು ಹೋಗಿ ಅವರು ಜನರಿಂದ ತಿರಸ್ಕರಿಸಲ್ಪಟ್ಟರು. ಲಿಂಗಾಯತ ಸಿಎಂಗಳು ಭ್ರಷ್ಟರು ಎಂದು ಆರೋಪ ಮಾಡಿದರು. ನನ್ನ ಮೇಲೆಯೂ ಆರೋಪ ಮಾಡಿದ್ರು. ಯಾವ ಪಕ್ಷ ಲಿಂಗಾಯತ ಸಮಾಜವನ್ನು ಒಡೆಯಲು ಪ್ರಯತ್ನ ಮಾಡಿದಾಗ ತೀವ್ರವಾಗಿ ವಿರೋಧ ಮಾಡಿದ್ದ ಜಗದೀಶ ಶೆಟ್ಟರ್, ಲಕ್ಷ್ಮಣ ಸವದಿ ಇದೀಗ ಅದೇ ಪಕ್ಷವನ್ನು ಸೇರಿರುವುದಕ್ಕೆ ನನಗೆ ದುಃಖವಿದೆ. ಬಿಜೆಪಿ ಕೇಡರ್ ಬೇಸ್ ಪಾರ್ಟಿ. ಒಂದಿಬ್ಬರು ಪಕ್ಷ ಬಿಟ್ಟರೆ ಯಾವುದೇ ಪರಿಣಾಮ ಆಗುವುದಿಲ್ಲ. ಇವೆರಡೂ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸುತ್ತಾರೆ. ಶೆಟ್ಟರ್, ಸವದಿ ಸೋಲು ನಿಶ್ಚಿತ.

    * ಕಾಂಗ್ರೆಸ್​ನ ಗ್ಯಾರಂಟಿ ಕಾರ್ಡ್ ಮತವಾಗಿ ಪರಿವರ್ತನೆ ಆಗಲಿದೆಯೇ?

    ಕಾಂಗ್ರೆಸ್ ಬಗ್ಗೆ ಜನರಿಗೆ ಗ್ಯಾರಂಟಿ ಇಲ್ಲ. ಜನರಲ್ಲಿ ವಿಶ್ವಾಸ ಮೂಡಲಿ ಎಂದು ಕಾರ್ಡ್ ಕೊಟ್ಟಿದ್ದಾರೆ. ಅವರ ಪ್ರಣಾಳಿಕೆ ನೋಡಿದರೆ ಗ್ಯಾರಂಟಿಗಳನ್ನು ಈಡೇರಿಸಲು 6 ಲಕ್ಷ ಕೋಟಿ ರೂ. ಹಣ ಬೇಕು. ಇಷ್ಟೊಂದು ಹಣವನ್ನು ಎಲ್ಲಿಂದ ತರುತ್ತಾರೆ? ರಾಜ್ಯ ಹಾಳಾಗಿ ಹೋಗಲಿ, ಜನ ಹಾಳಾಗಿ ಹೋಗಲಿ, ಅವರಿಗೆ ಸಂಬಂಧವಿಲ್ಲ. ಹೇಗಾದರೂ ಮಾಡಿ ಅಧಿಕಾರಕ್ಕೆ ಬರಬೇಕು ಎಂಬುದು ಕಾಂಗ್ರೆಸ್ ನಿಲುವಾಗಿದೆ. ಕರ್ನಾಟಕದಲ್ಲಿ ಸೋಲಿನೊಂದಿಗೆ ದೇಶದಲ್ಲಿ ಕಾಂಗ್ರೆಸ್ಸಿನ ಸಂಪೂರ್ಣ ಅವಸಾನವಾಗಲಿದೆ.

    * ಸಮೀಕ್ಷೆಗಳ ಬಗ್ಗೆ ನಿಮ್ಮ ವಿಶ್ಲೇಷಣೆ?

    ಚುನಾವಣೆಗಿಂತ 3 ಅಥವಾ 6 ತಿಂಗಳ ಮುಂಚಿನ ಸಮೀಕ್ಷೆಗಳು ಜನರ ನಿಜವಾದ ಮನಸ್ಥಿತಿ ಅಲ್ಲ. ಸುಮ್ಮಸುಮ್ಮನೆ ಕೇಳಿದರೆ ಯಾರೂ ತಮ್ಮ ಮನಸ್ಸಿನ ಮಾತು ಹೇಳುವುದಿಲ್ಲ. ಯಾರಿಗೆ ಮತ ಹಾಕುತ್ತೇವೆ ಎಂದು ಸಹಜವಾಗಿ ಯಾರೂ ಗುಟ್ಟು ಬಿಟ್ಟು ಕೊಡುವುದಿಲ್ಲ. ಮತದಾನದ ದಿನ ಹತ್ತಿರ ಬಂದಾಗ ಅಭಿವ್ಯಕ್ತವಾಗುವ ಜನರ ಭಾವನೆಯೇ ಬಹಳ ಮುಖ್ಯವಾಗುತ್ತದೆ. ನಮ್ಮ ಜನ ಪರ ಕಾರ್ಯಕ್ರಮ, ಪ್ರಧಾನಿ ಮೋದಿ ಅವರ ನಾಯಕತ್ವ ಕಾರಣದಿಂದ ಬಿಜೆಪಿ ಈ ಬಾರಿ ಸ್ವಂತ ಬಲದಿಂದ ಅಧಿಕಾರಕ್ಕೆ ಬರಲಿದೆ. ಅದರಲ್ಲಿ ಯಾವುದೇ ಸಂಶಯ ಬೇಡ.

    ಬಿಜೆಪಿಗೆ ಪೂರ್ಣ ಜನಾದೇಶ: ಸಿಎಂ ಬಸವರಾಜ ಬೊಮ್ಮಾಯಿ ವಿಶ್ವಾಸ

    ಒಂದೇ ಜಿಲ್ಲೆಯಲ್ಲಿ 3 ವರ್ಷವಿದ್ದ ಪೊಲೀಸರ ವರ್ಗ; ಚುನಾವಣಾ ಕರ್ತವ್ಯ ನಿಯೋಜನೆಗೆ ಮಾರ್ಗಸೂಚಿ

    ಯಾರ್ಯಾರಿಗೆ ಒಲಿಯಲಿದೆ ಸಿಂಹಾಸನ?: ದೇವೇಗೌಡರ ಕೋಟೆ ಭೇದಿಸಲು ಕೈ-ಕಮಲ ಯತ್ನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts