

ಬೆಂಗಳೂರು: ಡಾ. ರಾಜ್ ಕುಟುಂಬದ ಕುಡಿ, ರಾಘವೇಂದ್ರ ರಾಜಕುಮಾರ್ ಮೊಮ್ಮಗ ಯುವ ರಾಜಕುಮಾರ್ ಚಂದನವನಕ್ಕೆ ಪದಾರ್ಪಣೆ ಮಾಡಲಿದ್ದಾರೆ ಎಂಬ ಸುದ್ದಿ ಈ ಹಿಂದೆಯೇ ಹಬ್ಬಿತ್ತು. ಡಾ. ರಾಜ್ ಜನ್ಮದಿನದಂದು ಚಿತ್ರದ ಫಸ್ಟ್ ಲುಕ್ ಸಹ ಬಿಡುಗಡೆ ಆಗಿತ್ತು. ಆದರೆ, ಸಿನಿಮಾ ಶೀರ್ಷಿಕೆ ಏನು ಎಂಬ ಬಗ್ಗೆ ಮಾತ್ರ ಚಿತ್ರತಂಡ ಎಲ್ಲಿಯೂ ರಿವೀಲ್ ಮಾಡಿರಲಿಲ್ಲ. ಇದೀಗ ಆ ಕಾತುರಕ್ಕೆ ತೆರೆಬಿದ್ದಿದೆ.
ಯುವ ರಾಜಕುಮಾರ್ ನಟಿಸುತ್ತಿರುವ ಚಿತ್ರಕ್ಕೆ ‘ಯುವ ರಣಧೀರ ಕಂಠೀರವ‘ ಎಂಬ ಶೀರ್ಷಿಕೆ ಇಡಲಾಗಿದ್ದು, ಲಾಂಚಿಂಗ್ ವಿಡಿಯೋವನ್ನೂ ತಂಡ ಅದ್ದೂರಿಯಾಗಿ ಬಿಡುಗಡೆ ಮಾಡಿಕೊಂಡಿದೆ. ಈ ಹಿಂದೆ ಕೆಜಿಎಫ್ ಚಿತ್ರದಲ್ಲಿ ಸಹಾಯಕರಾಗಿ ಕೆಲಸ ಮಾಡಿದ್ದ ಪುನೀತ್ ರುದ್ರನಾಗ್ ಈ ಸಿನಿಮಾಕ್ಕೆ ನಿರ್ದೇಶನ ಮಾಡುವ ಜವಾಬ್ದಾರಿ ಹೊತ್ತಿದ್ದಾರೆ.
ಫ್ಯಾಂಟಸಿ ಶೈಲಿಯಲ್ಲಿ ಸಿದ್ಧವಾಗಲಿರುವ ಈ ಸಿನಿಮಾ 2020ರ ನಂತರವೇ ಚಿತ್ರೀಕರಣ ಮಾಡಲಿಕೊಳ್ಳಲಿದೆ. ಸದ್ಯ ಯುವ ರಾಜಕುಮಾರ್ ಅವರನ್ನು ಲಾಂಚ್ ಮಾಡುವ ಉದ್ದೇಶದಿಂದ ಬೃಹತ್ ಕಾರ್ಯಕ್ರಮವನ್ನು ಇಡೀ ತಂಡ ಆಯೋಜನೆ ಮಾಡಿತ್ತು. ಅದರಂತೆ 5 ನಿಮಿಷದ ವಿಡಿಯೋ ಪಿಆರ್ಕೆ ಆಡಿಯೋದಲ್ಲಿ ಬಿಡುಗಡೆ ಮಾಡಲಾಗಿದೆ.
ಮಾಸ್ ಅವತಾರದಲ್ಲಿ ಎದುರಾಗಿರುವ ಯುವ, ಖಡಕ್ ಡೈಲಾಗ್ ಹೇಳಿ ವೈರಿಗಳನ್ನು ಸದೆಬಡಿಯುತ್ತಾರೆ. ಈ 5 ನಿಮಿಷದ ಟೀಸರ್ ಅನ್ನು ಮೋಹನ್ ಬಿ. ಕೆರೆಯಲ್ಲಿ ಅದ್ದೂರಿ ಸೆಟ್ ನಿರ್ಮಾಣ ಮಾಡಿ, ಚಿತ್ರೀಕರಿಸಲಾಗಿದೆ. ವಿಎಫ್ಎಕ್ಸ್ನಲ್ಲಿಯೇ ಚಿತ್ರದ ಬಹುಪಾಲು ದೃಶ್ಯಗಳು ಇರಲಿವೆ ಎಂದು ನಿರ್ದೇಶಕರು ಹೇಳಿದ್ದಾರೆ.