ಉರಿಸಬೇಡ ಬಡವನ ಹೃದಯ..! ‘ಗರಡಿ’ ಚಿತ್ರದ ಮೂರನೇ ಹಾಡು ಬಿಡುಗಡೆ

Garadi_152
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ಯೋಗರಾಜ್ ಭಟ್ ನಿರ್ದೇಶಿಸುತ್ತಿರುವ ದೇಸೀ ಕಲೆ ಕುಸ್ತಿ ಕುರಿತ ಸಿನಿಮಾ ‘ಗರಡಿ’. ಈಗಾಗಲೇ ಚಿತ್ರದ ಎರಡು ಹಾಡುಗಳು ಬಿಡುಗಡೆಯಾಗಿದ್ದು, ಇತ್ತೀಚೆಗಷ್ಟೆ ಚಿತ್ರತಂಡ ಮೂರನೇ ಸಾಂಗ್ ರಿಲೀಸ್ ಮಾಡಿದೆ. ‘ದಯಮಾಡಿ ಉರಿಸಬೇಡ ಬಡವನ ಹೃದಯ’ ಎಂದು ಸಾಗುವ ಈ ಹಾಡಿಗೆ ಖುದ್ದು ಯೋಗರಾಜ್ ಭಟ್ ಸಾಹಿತ್ಯ ಬರೆದಿದ್ದು, ವಿ. ಹರಿಕೃಷ್ಣ ಸಂಗೀತದಲ್ಲಿ ವಿಜಯ್ ಪ್ರಕಾಶ್ ಧ್ವನಿಯಾಗಿದ್ದಾರೆ. ಹಾಡಿನ ಬಗ್ಗೆ ಯೋಗರಾಜ್ ಭಟ್, ‘ಎರಡನೇ ಲಾಕ್‌ಡೌನ್ ಸಮಯದಲ್ಲೇ ಈ ಹಾಡು ಬರೆದಿದ್ದೆ. ಬಾದಾಮಿ, ಬೆಂಗಳೂರು ಸೇರಿ ಹಲವೆಡೆ ಈ ಹಾಡಿನ ಚಿತ್ರೀಕರಣ ಮಾಡಿದ್ದೇವೆ. ಹಾಡಿನ ಮೊದಲ ಸಾಲೇ ಎಲ್ಲರ ಮನಸ್ಸಿಗೆ ಉತ್ತರಿವಾಗುತ್ತದೆ’ ಎಂದರು.

ನಿರ್ಮಾಪಕ, ನಟ ಬಿ.ಸಿ. ಪಾಟೀಲ್, ‘ಈ ಹಾಡು ಕೇಳಿ ನನಗೆ ‘ಮುಂಗಾರು ಮಳೆ’ ಚಿತ್ರದ ‘ಅನಿಸುತಿದೆ ಯಾಕೋ ಇಂದು’ ಸಾಂಗ್ ನೆನಪಾಯಿತು. ಈ ಸಾಂಗ್ ಅಷ್ಟು ಚೆನ್ನಾಗಿ ಮೂಡಿಬಂದಿದೆ. ನವೆಂಬರ್ 1ರಂದು ರಾಣೆಬೆನ್ನೂರಿನಲ್ಲಿ ಅದ್ದೂರಿ ಟ್ರೇಲರ್ ಬಿಡುಗಡೆ ಸಮಾರಂಭ ನಡೆಯಲಿದೆ. ನಟ ದರ್ಶನ್ ಕಾರ್ಯಕ್ರಮಕ್ಕೆ ಬರಲಿದ್ದಾರೆ. ನ. 10ರಂದು ಸಿನಿಮಾ ರಿಲೀಸ್’ ಎಂದು ಮಾಹಿತಿ ನೀಡಿದರು.

ನಾಯಕ ಯಶಸ್ ಸೂರ್ಯ, ‘ಈ ಹಾಡಿಗಾಗಿ ನಾನು ಸಾಕಷ್ಟು ಶ್ರಮಪಟ್ಟಿದ್ದೇನೆ. ಇದನ್ನು ನನಗಾಗಿಯೇ ಬರೆದಂತಿದೆ. ದರ್ಶನ್ ಸರ್ ಕೂಡ ಈ ಸಾಂಗ್ ಕೇಳಿ ಇಷ್ಟಪಟ್ಟಿದ್ದರು’ ಎಂದರು. ಯಶಸ್ ಸೂರ್ಯಗೆ ಚಿತ್ರದಲ್ಲಿ ಸೋನಲ್ ಮೊಂತೇರೊ ನಾಯಕಿಯಾಗಿದ್ದು, ಬಿ.ಸಿ.ಪಾಟೀಲ್, ನಿಶ್ವಿಕಾ ನಾಯ್ಡು, ಧರ್ಮಣ್ಣ, ರವಿಶಂಕರ್, ಪೃಥ್ವಿ ಶಾಮನೂರು ಪ್ರಮುಖ ತಾರಾಗಣದಲ್ಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net