ಸ್ನೇಹಿತರಿಂದ ಸ್ನೇಹಿತನಿಗಾಗಿ 'ಯೆಲ್ಲೋ ಗ್ಯಾಂಗ್ಸ್'; ಟ್ರೇಲರ್​ ಬಿಡುಗಡೆ

Yellow Gangs (1)
Published on

ಸ್ನೇಹಿತರು ತಮ್ಮ ಬಳಗದ ಒಬ್ಬರ ಕನಸು ಈಡೇರಿಸುವುದಕ್ಕೆ ಸಿನಿಮಾ ಮಾಡುವುದು ಹೊಸ ವಿಷಯವೇನಲ್ಲ. ಶಿವಮೊಗ್ಗದ ನವೋದಯ ಶಾಲೆಯಲ್ಲಿ ಓದಿರುವ ಸಾಕಷ್ಟು ವಿದ್ಯಾರ್ಥಿಗಳು ಸೇರಿ ಈಗ ಒಂದು ಚಿತ್ರ ಮಾಡಿದ್ದಾರೆ. ಅದೇ 'ಯಲ್ಲೋ ಗ್ಯಾಂಗ್ಸ್​'. ಅದಕ್ಕೆ ಕಾರಣವೂ ಇದೆ. ಏಕೆಂದರೆ, ಈ ಚಿತ್ರದ ನಿರ್ದೇಶಕ ರವೀಂದ್ರ ಓದಿದ್ದು ಅದೇ ಶಾಲೆಯಲ್ಲಿ. ಹಾಗಾಗಿ, ಅವರ ಸ್ನೇಹಿತರೆಲ್ಲ ಸೇರಿ, ಅವರನ್ನು ನಿರ್ದೇಶಕನನ್ನಾಗಿ ಮಾಡಿ, ಚಿತ್ರ ನಿರ್ಮಿಸಿದ್ದಾರೆ.

ವಿಭಿನ್ನ ಸ್ಟುಡಿಯೋಸ್, ವಾಟ್ ನೆಕ್ಸ್ಟ್ ಮೂವೀಸ್ ಹಾಗೂ ಕೀ ಲೈಟ್ಸ್ ಸಂಸ್ಥೆ ಲಾಂಛನದಲ್ಲಿ ನಿರ್ಮಾಣವಾಗಿರುವ 'ಯಲ್ಲೋ ಗ್ಯಾಂಗ್ಸ್​' ಚಿತ್ರವು ಈಗಾಗಲೇ ಮುಗಿದಿದ್ದು, ನ.11ರಂದು ಬಿಡುಗಡೆಯಾಗಲಿದೆ. ದೇವ್​ ದೇವಯ್ಯ, ಅರ್ಚನಾ ಕೊಟ್ಟಿಗೆ ಮುಂತಾದವರು ನಟಿಸಿರುವ ಈ ಚಿತ್ರದ ಟ್ರೇಲರ್​ ಇತ್ತೀಚೆಗಷ್ಟೇ ಬಿಡುಗಡೆಯಾಗಿದೆ. 'ಗುಳ್ಟೂ' ಚಿತ್ರದ ನಾಯಕ ನವೀನ್​ ಶಂಕರ್​, ಈ ಚಿತ್ರದ ಟ್ರೇಲರ್​ ಬಿಡುಗಡೆ ಮಾಡಿದ್ದಾರೆ.

ಈ ಚಿತ್ರದ ಕುರಿತು ಮಾತನಾಡುವ ನಿರ್ದೇಶಕ ರವೀಂದ್ರ ಪರಮೇಶ್ವರಪ್ಪ, 'ಕನ್ನಡದಲ್ಲಿ ಕ್ರೈಮ್ ಥ್ರಿಲ್ಲರ್ ಚಿತ್ರಗಳು ಬಂದಿದೆಯಾದರೂ, ಇದು ಸ್ವಲ್ಪ ಭಿನ್ನ. ನಾಯಕ ದೇವ್ ದೇವಯ್ಯ, ನಾಯಕಿ ಅರ್ಚನಾ ಕೊಟ್ಟಿಗೆ ಸೇರಿದಂತೆ ಹತ್ತೊಂಬತ್ತು ಪ್ರಮುಖ ಪಾತ್ರಗಳು ನಮ್ಮ ಚಿತ್ರದಲ್ಲಿದೆ. ಎಲ್ಲಾ ಪಾತ್ರಗಳ ಮೇಲೂ ನಮ್ಮ ಚಿತ್ರದ ಕಥೆ ಸಾಗುತ್ತದೆ. ಚಿತ್ರದಲ್ಲಿ ಮೂರು ಗ್ಯಾಂಗ್​ಗಳಿದ್ದು, ಅದಕ್ಕೆ ಮೂರು ಜನ ಮುಖ್ಯಸ್ಥರಿರುತ್ತಾರೆ. ಇದರ ಜತೆಗೆ ಯಾವ್ಯಾವುದೋ ಪಾತ್ರಗಳು ಬರುತ್ತವೆ. ಗುರುತು ಪರಿಚಯವಿಲ್ಲದವರೆಲ್ಲ ಸೇರಿ ಏನೇನೋ ಗೊಂದಲಗಳಾಗುತ್ತವೆ. ಪ್ರಮುಖವಾಗಿ ಡ್ರಗ್​ ಮಾಫಿಯಾ ಕುರಿತು ಈ ಚಿತ್ರ ಸಾಗುತ್ತದೆ ಎಂದು ಹೇಳಿದರು.

ಈ ಚಿತ್ರವನ್ನು ನಿರಂಜನ್​ ಮತ್ತು ಸ್ನೇಹಿತರು ನಿರ್ಮಿಸಿದ್ದು, 'ಶಿವಮೊಗ್ಗದ ನವೋದಯ ಶಾಲೆಯಲ್ಲಿ ಓದಿರುವ ಸಾಕಷ್ಟು ವಿದ್ಯಾರ್ಥಿಗಳು ಈ ಚಿತ್ರಕ್ಕೆ ಹಣ ಹೂಡಿದ್ದೇವೆ. ಏಕೆಂದರೆ, ನಿರ್ದೇಶಕ ರವೀಂದ್ರ ನಮ್ಮ ಸಹಪಾಠಿ. ಮೊದಲಿನಿಂದಲೂ ಅವರ ಯೋಚನೆ ವಿಭಿನ್ನವಾಗಿರುವುದರಿಂದ ನಮ್ಮ ಸಂಸ್ಥೆಗೆ ವಿಭಿನ್ನ ಸ್ಟುಡಿಯೋಸ್ ಎಂದು ಹೆಸರಿಟ್ಟಿದ್ದೇವೆ' ಎಂದರು ನಿರಂಜನ್.

ವಿಕ್ರಮ್ ಎಂಬ ಹೆಸರಿನ ಪೊಲೀಸ್​ ಅಧಿಕಾರಿಯಾಗಿ ದೇವ್​ ದೇವಯ್ಯ ನಟಿಸಿದ್ದಾರಂತೆ. ನಾಯಕಿ ಅರ್ಚನಾ ಕೊಟ್ಟಿ ಮಾತನಾಡಿ, 'ನಾನು ನಿರ್ದೇಶಕರನ್ನು ಭೇಟಿಯಾದಾಗ, ಅವರು ಹೇಳಿದ್ದು ಒಂದೇ ಮಾತು. ಈ ಚಿತ್ರದಲ್ಲಿ ಬೇರೆ ಹೆಣ್ಮಕ್ಕಳಿಲ್ಲ. ನೀವೊಬ್ಬರೇ ಇರೋದು. ಆದರೆ, ನೀವು ನಾಯಕಿಯಲ್ಲ ಎಂದು ಸ್ಪಷ್ಟಪಡಿಸಿದರು' ಎಂದರು.

ಸುಜ್ಞಾನ್ ಅವರ ಛಾಯಾಗ್ರಹಣ, ರೋಹಿತ್ ಸೋವರ್ ಅವರ ಸಂಗೀತ ಈ ಚಿತ್ರಕ್ಕಿದೆ. ಇಡೀ ಚಿತ್ರವನ್ನು ಟ್ರಾಲಿ ಬಳಸದೆ, ಕೈಯಲ್ಲಿ ಕ್ಯಾಮೆರಾ ಹಿಡಿದು ಚಿತ್ರಿಸಿರುವುದು ವಿಶೇಷ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net