ಹಾಲಿವುಡ್​ಗೆ ಶ್ರುತಿ ಹಾಸನ್; ‘ದಿ ಐ’ ಎಂಬ ಸೈಕಲಾಜಿಕಲ್ ಥ್ರಿಲ್ಲರ್​ನಲ್ಲಿ ನಟನೆ

Shruthi Hasan
Published on

ಶ್ರುತಿ ಹಾಸನ್​ಗೆ ಅದು ಹೊಸದೇನಲ್ಲ. ಕೆಲವು ವರ್ಷಗಳ ಹಿಂದೆಯೇ ‘ಟ್ರೆಡ್​ಸ್ಟೋನ್’ ಎಂಬ ಅಂತಾರಾಷ್ಟ್ರೀಯ ಟಿವಿ ಸರಣಿಯಲ್ಲಿ ಅವರು ನಟಿಸಿದ್ದರು. ಈಗ ಶ್ರುತಿ, ಹಾಲಿವುಡ್ ಚಿತ್ರವೊಂದಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಡಾಫ್ನೆ ಶಿಮೋನ್ ನಿರ್ದೇಶನದ ‘ದಿ ಐ’ ಎಂಬ ಸೈಕಲಾಜಿಕಲ್ ಥ್ರಿಲ್ಲರ್ ಚಿತ್ರದಲ್ಲಿ ಶ್ರುತಿ ನಟಿಸುತ್ತಿದ್ದಾರೆ.

‘ದಿ ಐ’ ಚಿತ್ರದಲ್ಲಿ ಮಾರ್ಕ್ ರೌಲಿ ನಾಯಕನಾಗಿ ನಟಿಸುತ್ತಿದ್ದು, ಅವರಿಗೆ ನಾಯಕಿಯಾಗಿ ಶ್ರುತಿ ನಟಿಸುತ್ತಿದ್ದಾರಂತೆ. ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ಅವರು, ‘‘ದಿ ಐ’ ಚಿತ್ರದಲ್ಲಿ ನಟಿಸುತ್ತಿರುವುದಕ್ಕೆ ಥ್ರಿಲ್ ಆಗುತ್ತಿದೆ. ಅದೊಂದು ಅದ್ಭುತ ತಂಡ. ಕಥೆ ಹೇಳುವುದು ನನ್ನಿಷ್ಟದ ಕೆಲಸ. ಈ ಚಿತ್ರದ ಮೂಲಕ ಒಂದು ವಿಭಿನ್ನ ಕಥೆಯನ್ನು ಹೇಳುವ ಪ್ರಯತ್ನ ಮಾಡುತ್ತಿದ್ದೇವೆ’ ಎಂದು ಬರೆದುಕೊಂಡಿದ್ದಾರೆ.

ಈ ಚಿತ್ರದಲ್ಲಿ ಶ್ರುತಿ ಒಂದು ನಿಗೂಢ ದ್ವೀಪಕ್ಕೆ ಪ್ರಯಾಣ ಬೆಳೆಸುವ ಮಹಿಳೆಯಾಗಿ ಕಾಣಿಸಿಕೊಳ್ಳುತ್ತಿದ್ದಾರಂತೆ. ತನ್ನ ಗಂಡ ಸತ್ತ ದ್ವೀಪಕ್ಕೆ ಹೋಗುವ ಆಕೆ, ಅಲ್ಲಿ ಆತನ ಸಾವಿನ ರಹಸ್ಯ ತಿಳಿಯುವುದಕ್ಕೆ ಪ್ರಯತ್ನಿಸುತ್ತಾಳೆ. ಆ ನಂತರ ಏನೆಲ್ಲ ಆಗುತ್ತದೆ ಎಂಬುದು ಚಿತ್ರದ ಕಥೆ ಎಂದು ಹೇಳಲಾಗಿದೆ. ಇದಲ್ಲದೆ, ಪ್ರಶಾಂತ್ ನೀಲ್ ನಿರ್ದೇಶನದ ಮತ್ತು ಪ್ರಭಾಸ್ ನಾಯಕನಾಗಿ ಅಭಿನಯಿಸುತ್ತಿರುವ ‘ಸಲಾರ್’ ಚಿತ್ರದಲ್ಲೂ ಶ್ರುತಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಜತೆಗೆ, ನಂದಮೂರಿ ಬಾಲಕೃಷ್ಣ ಅಭಿನಯದ ‘ವೀರ ಸಿಂಹ ರೆಡ್ಡಿ’ ಚಿತ್ರದಲ್ಲೂ ಶ್ರುತಿ ನಾಯಕಿಯಾಗಿದ್ದಾರೆ. -ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net