FIRST LOOK| ಅತಿ ಚೆಂದದ ಹೂ ಗೊಂಚಲು, ಕಿಟಕಿಯಾಚೆ ಕಂಡ ಹಾಗಿದೆ...

collage (14)
Published on

ಬೆಂಗಳೂರು: ನಿರೂಪಕಿ, ನಟಿ ಈಗ ನಿರ್ದೇಶಕಿಯಾಗಿರುವ ಶೀತಲ್​ ಶೆಟ್ಟಿ ಖುಷಿಯ ಅಲೆಯಲ್ಲಿ ತೇಲುತ್ತಿದ್ದಾರೆ. ಅವರ ಆ ಖುಷಿಗೆ ಕಾರಣ ವಿಂಡೋಸೀಟ್​! ಅಂದರೆ, ಅವರೇ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ವಿಂಡೋಸೀಟ್​ ಚಿತ್ರದ ಫಸ್ಟ್​ಲುಕ್​ ಮತ್ತು ಕಿರು ವಿಡಿಯೋ ತುಣುಕು ಇಂದು ಬಿಡುಗಡೆ ಆಗಿದೆ.

ಹಿನ್ನೆಲೆ ಸಂಗೀತದ ಮೂಲಕವೇ ಅಚ್ಚರಿಯ ಪ್ರಯಾಣಕ್ಕೆ ನೂಕುವ ವಿಂಡೋಸೀಟ್​ನಲ್ಲಿ ಒಂದಷ್ಟು ವಿಶೇಷತೆಗಳ ಹೂರಣವಿದೆ. ಕಾಣದ ಹುಡುಗಿಯ ನೆರಳಿದೆ. ಹಾರಾಡುವ ಕೂದಲಿನ ಸೊಗಸಿದೆ. ಬೆರಗುಗಣ್ಣಲ್ಲೇ ಆಕೆಯನ್ನು ನೋಡಬೇಕೆನ್ನುವ ತುಡಿತ ನಾಯಕನಿಗೂ ಇದೆ. ಹೀಗೆ ಇದೆಲ್ಲವನ್ನು ನೋಡುತ್ತಿದ್ದರೆ ಇದೊಂದು ಪಕ್ಕಾ ಲವ್​ಸ್ಟೋರಿ ಸಿನಿಮಾ ಎಂದೆನಿಸದೇ ಇರದು.

ಸದ್ಯಕ್ಕೆ ಫಸ್ಟ್​ಲುಕ್​ ಮೂಲಕ ಈ ಎಲ್ಲವನ್ನು ಹೇಳಿರುವ ನಿರ್ದೇಶಕಿ ಶೀತಲ್​ ಶೆಟ್ಟಿ, ಅಸಲಿ ಕಥೆಯ ಗೌಪ್ಯತೆಯನ್ನು ಕಾಯ್ದುಕೊಂಡಿದ್ದಾರೆ. ಅರ್ಜುನ್​ ಜನ್ಯ ಸಂಗೀತ ಇಂಪಾದರೆ, ಆ ಸಂಗೀತಕ್ಕೆ ಒಂದೇ ಸಾಲಿನಲ್ಲಿ ಜೀವ ತುಂಬಿದ್ದಾರೆ ಗಾಯಕ ವಿಜಯ್​ ಪ್ರಕಾಶ್​. ನಿರೂಪ್​ ಭಂಡಾರಿ ಸಹ ಅಷ್ಟೇ ಚೆಂದವಾಗಿ ಕಾಣಿಸಿದ್ದಾರೆ.

ವಿಶೇಷ ಏನೆಂದರೆ, ನಿರ್ಮಾಪಕ ಜಾಕ್​ ಮಂಜು ನಿರ್ಮಾಣದಲ್ಲಿ ಮೂಡಿಬಂದಿರುವ ಈ ಚಿತ್ರ, ಕಿಚ್ಚ ಕ್ರಿಯೇಷನ್​ ಯೂಟ್ಯೂಬ್​ ಚಾನೆಲ್​ನಲ್ಲಿ ಬಿಡುಗಡೆಯಾಗಿದೆ. ಸ್ವತಃ ಸುದೀಪ್​ ಸೋಷಿಯಲ್​ ಮೀಡಿಯಾದಲ್ಲಿ ಶೀತಲ್ ಅವರ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಫಸ್ಟ್​ಲುಕ್​ ಹಂಚಿಕೊಂಡಿದ್ದಾರೆ. ನಿರೂಪ್​ ನಾಯಕನಾಗಿ ನಟಿಸಿರುವ ಈ ಚಿತ್ರದಲ್ಲಿ ಸಂಜನಾ ಆನಂದ್ ಮತ್ತು ಅಮೃತಾ ಅಯ್ಯಂಗಾರ್​ ನಾಯಕಿಯರಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net