

ಮುಂಬೈ: ನಟಿ, ಮಾಡೆಲ್ ಪೂನಂ ಪಾಂಡೆ ಕಳೆದ ಕೆಲದಿನಗಳ ಹಿಂದಷ್ಟೇ ಸ್ಯಾಮ್ ಬಾಂಬೆ ಎಂಬುವವರನ್ನು ಮದುವೆಯಾಗಿದ್ದರು. ಸಿನಿಮಾ ಶೂಟಿಂಗ್ ಮತ್ತು ಹನಿಮೂನ್ಗೆಂದು ಗೋವಾಕ್ಕೂ ತೆರಳಿದ್ದರು. ಆದರೆ, ಪತಿ ನನ್ನ ಮೇಲೆ ಹಲ್ಲೆ ಮಾಡಿದ್ದಾನೆಂದು ಆರೋಪಿಸಿ ಸ್ಯಾಮ್ ವಿರುದ್ಧ ದೂರು ನೀಡಿದ ಹಿನ್ನೆಲೆಯಲ್ಲಿ ಸ್ಯಾಮ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಹಾಗಾದರೆ, ಪತಿ ಸ್ಯಾಮ್ ಮಾಡಿದ್ದಾದರೂ ಏನು? ಅದೆಲ್ಲವನ್ನು ಸ್ವತಃ ಪೂನಂ ಹೇಳಿಕೊಂಡಿದ್ದಾರೆ.
‘ಗೋವಾದಲ್ಲಿ ಹನಿಮೂನ್ ಸಂದರ್ಭದಲ್ಲಿ ನನ್ನ ಮತ್ತು ಸ್ಯಾಮ್ ವಿರುದ್ಧ ಒಂದಷ್ಟು ವಾದ ವಿವಾದ ನಡೆಯಿತು. ಆತ ನನ್ನ ಮೇಲೆ ಪ್ರಹಾರಕ್ಕೆ ಮುಂದಾದ. ನನ್ನನ್ನು ಕೊಲೆ ಮಾಡಲು ಯತ್ನಿಸಿದ. ಮುಖಕ್ಕೆ ಹೊಡೆಯುವುದಷ್ಟೇ ಅಲ್ಲ ಬೆಡ್ ಮೇಲೆ ನನ್ನನ್ನು ಬಿಸಾಕಿ, ಘಾಸಿಗೊಳಿಸಿದ. ಕೊನೆಗೆ ನಾನು ಆತನಿಂದ ತಪ್ಪಿಸಿಕೊಂಡು ಕೋಣೆಯಿಂದ ಹೊರಬರುತ್ತಿದ್ದಂತೆ, ಹೋಟೆಲ್ ಸಿಬ್ಬಂದಿ ಪೊಲೀಸ್ಗೆ ಮಾಹಿತಿ ನೀಡಿದರು. ತಕ್ಷಣ ಸ್ಯಾಮ್ನನ್ನು ಕರೆದೊಯ್ಯಲಾಯಿತು’ ಎಂದು ಪೂನಂ ಪಾಂಡೆ ಹೇಳಿಕೊಂಡಿದ್ದಾರೆ.
ಸ್ಯಾಮ್ ತುಂಬ ಸಿಡುಕಿನ ಸ್ವಭಾವದವನು ಮತ್ತು ಸಣ್ಣ ಸಣ್ಣ ವಿಷಯಕ್ಕೆ ಸಿಟ್ಟಾಗುತ್ತಿದ್ದ ಎಂಬ ವಿಚಾರವನ್ನೂ ಹೇಳಿಕೊಂಡಿರುವ ಪೂನಂ, ಮದುವೆಯಾದ ಮೇಲೆ ಸರಿಹೋಗಬಹುದು ಎಂದುಕೊಂಡಿದ್ದರಂತೆ. ಆದರೆ, ಇದೀಗ ಅವರಿಗೆ ಈ ಘಟನೆ ಮೂಲಕ ಪ್ರೀತಿ ಕುರುಡು ಎಂಬುದು ಅರಿವಾಗಿದೆಯಂತೆ.
ಅಂದಹಾಗೆ ಸ್ಯಾಮ್ರನ್ನು ಮದುವೆಯಾಗಿರುವುದಾಗಿ ಸೆಪ್ಟೆಂಬರ್ 11 ರಂದು ತನ್ನ ಇನ್ಸ್ಟಾಗ್ರಾಂನಲ್ಲಿ ಪೂನಂ ತಿಳಿಸಿದ್ದರು. ಮುಂಬೈನಲ್ಲಿ ಸಾಂಪ್ರದಾಯಿಕವಾಗಿ ಮದುವೆಯಾಗಿರುವ ಬಗ್ಗೆ ತಿಳಿಸಿ, ಕೆಲ ಫೋಟೋಗಳನ್ನು ಹಂಚಿಕೊಂಡಿದ್ದರು. (ಏಜೆನ್ಸೀಸ್)