

ಹೈದರಾಬಾದ್: ಟಾಲಿವುಡ್ನ ಜನಪ್ರಿಯ ನಿರ್ದೇಶಕ ಎಸ್.ಎಸ್. ರಾಜಮೌಳಿ, ಹಾಲಿವುಡ್ಗೆ ಹೋಗಬಹದು ಎಂಬ ಮಾತುಗಳು ಬಹಳ ದಿನಗಳಿಂದ ಕೇಳಿ ಬರುತ್ತಲೇ ಇವೆ. ಅದರಲ್ಲೂ 'ಕೆಜಿಎಫ್ 2' ಮತ್ತು 'ಆರ್.ಆರ್.ಆರ್' ನಂತರ ದೊಡ್ಡ ಬಜೆಟ್ನ ಮತ್ತು ಇಡೀ ವಿಶ್ವವೇ ತಿರುಗಿ ನೋಡುವಂತಹ ಚಿತ್ರಗಳನ್ನು ಕೊಟ್ಟ ನಂತರ, ಅವರು ಸಹಜವಾಗಿಯೇ ಹಾಲಿವುಡ್ಗೆ ಹಾರುತ್ತಾರೆ ಎಂಬ ಮಾತಿತ್ತು.
ಈಗ ಮಾರ್ವೆಲ್ ಸಂಸ್ಥೆಯ ಬಾಸ್ ಕೆವಿನ್ ಫೀಜ್, ರಾಜಮೌಳಿಗೆ ಒಂದು ಆಪರ್ ಕೊಟ್ಟಿದ್ದು, ಮಾರ್ವಲ್ ಕಾಮಿಕ್ಸ್ ಆಧಾರಿತ ಚಿತ್ರವೊಂದನ್ನು ನಿರ್ದೇಶಿಸಿ ಕೊಡುವಂತೆ ಹೇಳಿದ್ದಾರೆ ಎಂಬ ಸುದ್ದಿಯೊಂದು ಹರಿದಾಡುತ್ತಿದೆ.
ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ರಾಜಮೌಳಿ, 'ಹಾಲಿವುಡ್ನಿಂದ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಆಫರ್ಗಳು ಬರುತ್ತಿವೆ. ಆದರೆ, ಸದ್ಯಕ್ಕೆ ನನಗೆ ಬೇರೆ ಚಿತ್ರಗಳನ್ನು ಒಪ್ಪಿಕೊಳ್ಳುವುದಕ್ಕೆ ಆಗುತ್ತಿಲ್ಲ. ಕಾರಣ, ನಾನು ಮಹೇಶ್ ಬಾಬು ಅವರಿಗೊಂದು ಚಿತ್ರ ಮಾಡಿ ಕೊಡಬೇಕಾಗಿದೆ. ಹಾಗಾಗಿ, ಆ ಚಿತ್ರದ ಮೇಲೆ ನಾನು ಗಮನ ಹರಿಸಿದ್ದೇನೆ. ಅದನ್ನು ಮುಗಿಸುವುದಕ್ಕೆ ಸ್ವಲ್ಪ ಸಮಯ ಬೇಕು. ಅದು ಮುಗಿದ ನಂತರ ಏನು ಎಂದು ಈಗಲೇ ಯೋಚಿಸಿಲ್ಲ. ಈ ಚಿತ್ರ ಮೊದಲು ಮುಗಿಯಲಿ' ಎಂದು ಹೇಳಿದ್ದಾರೆ.
ಹಾಲಿವುಡ್ನಿಂದ ಕಲಿಯುವುದು ಸಾಕಷ್ಟು ಇದೆ ಎಂದು ಹೇಳಿರುವ ರಾಜಮೌಳಿ, 'ಹಾಲಿವುಡ್ನಿಂದ ಕಲಿಯುವುದು ಬಹಳ ಕಲಿಯುವುದಿದೆ. ಅವರ ಕೆಲಸ ಮಾಡುವ ಶೈಲಿ, ಅವರ ಮೆಥಡಾಲಜಿ ಎಲ್ಲವನ್ನು ಮೊದಲು ಅರಿತುಕೊಳ್ಳಬೇಕು. ಹಾಲಿವುಡ್ನಲ್ಲಿ ನೇರವಾಗಿ ಕೆಲಸ ಮಾಡುವುದಕ್ಕಿಂತ ಅವರ ಜತೆಗೆ ಸೇರಿ ಕೆಲಸ ಮಾಡುವುದಕ್ಕೆ ಸಾಧ್ಯವಾ? ಎಂದು ಯೋಚಿಸುತ್ತಿದ್ದೇನೆ' ಎಂದಿದ್ದಾರೆ.
ಸದ್ಯ, 'ಆರ್.ಆರ್.ಆರ್' ಚಿತ್ರವನ್ನು ಜಗತ್ತಿನ ಬೇರೆಬೇರೆ ಭಾಗಗಳಲ್ಲಿ ಬಿಡುಗಡೆ ಮಾಡುವುದರಲ್ಲಿ ತೊಡಗಿಸಿಕೊಂಡಿರುವ ರಾಜಮೌಳಿ, ಮುಂದಿನ ವರ್ಷ ಮಹೇಶ್ ಬಾಬು ಅಭಿನಯದ ಚಿತ್ರವನ್ನು ನಿರ್ದೇಶಿಸುವ ಸಾಧ್ಯತೆ ಇದೆ.