

ಬೆಂಗಳೂರು: 'ಕಾಂತಾರ' ಚಿತ್ರದ ತುಳುವಿನಲ್ಲಿ ಬರಲಿದೆ ಎಂಬ ಸುದ್ದಿ ಹೊಸದೇನಲ್ಲ. ಈಗಾಗಲೇ ತುಳು ಅವತರಣಿಕೆಯ ಟ್ರೈಲರ್ ಸಹ ಬಿಡುಗಡೆಯಾಗಿದೆ. ಅಷ್ಟೇ ಅಲ್ಲ, ಚಿತ್ರವು ಡಿಸೆಂಬರ್ 2ರಂದು ಬಿಡುಗಡೆಯಾಗುತ್ತಿದೆ. ಅದಕ್ಕೂ ಮೊದಲು ಚಿತ್ರ ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್ಗಳಲ್ಲಿ ಬಿಡುಗಡೆಯಾಗಿದೆ.
ಹೌದು, 'ಕಾಂತಾರ' ಚಿತ್ರದ ತುಳು ಅವತರಣಿಕೆಯು ಶುಕ್ರವಾರ (ನ.25) ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್ನಲ್ಲಿ ಬಿಡುಗಡೆಯಾಗಿದೆ. ಈ ಚಿತ್ರವನ್ನು ಡ್ರೀಮ್ಸ್ ಸ್ಕ್ರೀನ್ಸ್ ಇಂಟರ್ನ್ಯಾಷನಲ್ ಸಂಸ್ಥೆಯು ಬಿಡುಗಡೆ ಮಾಡಿದೆ.
'ಕಾಂತಾರ' ಚಿತ್ರದಲ್ಲಿ ದಕ್ಷಿಣ ಕನ್ನಡದ ಹಲವು ಆಚರಣೆಗಳು ಇವೆ ಎಂಬ ಸುದ್ದಿಯಾಗುತ್ತಿದ್ದಂತೆಯೇ, ಚಿತ್ರವನ್ನು ತುಳುವಿನಲ್ಲಿ ಡಬ್ ಮಾಡುವುದಕ್ಕೆ ಬೇಡಿಕೆ ಇತ್ತು. ಆದರೆ, ಚಿತ್ರ ಆರಂಭವಾಗಿದ್ದು ಕನ್ನಡದಲ್ಲಾದ್ದರಿಂದ ಮೊದಲು ಕನ್ನಡದಲ್ಲಿ ಬಿಡುಗಡೆಯಾಯಿತು. ನಂತರ ಚಿತ್ರ ಯಶಸ್ವಿಯಾಗಿ, ಬೇಡಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ತೆಲುಗು, ತಮಿಳು, ಹಿಂದಿ ಮತ್ತು ಮಲಯಾಳಂಗೆ ಡಬ್ ಆಗಿ ಪ್ಯಾನ್ ಇಂಡಿಯಾ ಚಿತ್ರವಾಯಿತು. ಬಹಳ ಒತ್ತಾಯದ ನಂತರ ಇದೀಗ ತುಳುಗೆ ಡಬ್ ಆಗಿ ಚಿತ್ರ ಬಿಡುಗಡೆಯಾಗಿದೆ.
ತುಳು ರಂಗಭೂಮಿಯ ಜನಪ್ರಿಯ ನಟ ಡಾ.ದೇವದಾಸ್ ಕಾಪಿಕಾಡ್, ಅಚ್ಯುತ್ ಕುಮಾರ್ ಅವರ ಪಾತ್ರಕ್ಕೆ ಧ್ವನಿ ನೀಡಿದರೆ, ಅವರ ಮಗ ಹಾಗೂ ಅರ್ಜುನ್ ಕಾಪಿಕಾಡ್, ರಿಷಬ್ ಶೆಟ್ಟಿ ಪಾತ್ರಕ್ಕೆ ಧ್ವನಿಯಾಗಿದ್ದಾರೆ.
'ಕಾಂತಾರ' ಚಿತ್ರವನ್ನು ಹೊಂಬಾಳೆ ಫಿಲಂಸ್ನ ವಿಜಯ್ ಕುಮಾರ್ ಕಿರಗಂದೂರು ನಿರ್ಮಿಸಿದ್ದು, ರಿಷಭ್ ಶೆಟ್ಟಿ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ರಿಷಭ್, ಸಪ್ತಮಿ ಗೌಡ, ಅಚ್ಯುತ್ ಕುಮಾರ್, ಕಿಶೋರ್ ಮುಂತಾದವರು ಅಭಿನಯಿಸಿದ್ದು, ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಿದ್ದಾರೆ.