'ನಾಟ್ ಔಟ್' ಆದ ರಚನಾ ಇಂದರ್​; ನರ್ಸ್​ ಪಾತ್ರದಲ್ಲಿ ನಟನೆ

Not Out
Published on

ಬೆಂಗಳೂರು: ಕನ್ನಡ ಚಿತ್ರರಂಗದ ಸದ್ಯದ ಬೇಡಿಕೆಯ ನಟಿಯರಲ್ಲಿ ರಚನಾ ಇಂದರ್​ ಸಹ ಒಬ್ಬರು. ನಿನ್ನೆ ಶುಕ್ರವಾರ (ನ.25) ಬಿಡುಗಡೆಯಾದ 'ತ್ರಿಬಲ್​ ರೈಡಿಂಗ್' ಸೇರಿದಂತೆ ರಚನಾ ಅಭಿನಯದ ನಾಲ್ಕು ಚಿತ್ರಗಳು ಈ ವರ್ಷ ಬಿಡುಗಡೆಯಾಗಿದೆ. ಈ ಮಧ್ಯೆ, ಅವರು 'ನಾಟ್​​ ಔ​ಟ್​' ಎಂಬ ಚಿತ್ರವನ್ನು ಒಪ್ಪಿಕೊಂಡಿದ್ದು, ಈ ಚಿತ್ರದಲ್ಲಿ ಅವರು ಮೊದಲ ಬಾರಿಗೆ ನರ್ಸ್​ ಆಗಿ ಕಾಣಿಸಿಕೊಂಡಿದ್ದಾರೆ.

ಈ ಹಿಂದೆ ಎ.ಪಿ. ಅರ್ಜುನ್​ ನಿರ್ದೇಶನದ 'ಕಿಸ್​' ಎಂಬ ಚಿತ್ರವನ್ನು ನಿರ್ದೇಶಿಸಿದ್ದ ರವಿಕುಮಾರ್​, ಈ ಚಿತ್ರವನ್ನು ತಮ್ಮ ರಾಷ್ಟ್ರಕೂಟ ಪಿಕ್ಚರ್ಸ್ ಸಂಸ್ಥೆಯಡಿ ನಿರ್ಮಿಸುತ್ತಿದ್ದಾರೆ. ಈ ಚಿತ್ರಕ್ಕೆ ಅವರ ಮಗ ಅಜಯ್​ ಪೃಥ್ವಿ ಹೀರೋ. ಇತ್ತೀಚೆಗೆ ಈ ಚಿತ್ರದ ಮೋಷನ್​ ಪೋಸ್ಟರ್​ ಸಹ ಬಿಡುಗಡೆಯಾಗಿದೆ.

ಈ ಚಿತ್ರವನ್ನು ಅಂಬರೀಶ್​ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದ ಕುರಿತು ವಿವರಿಸುವ ಅವರು, 'ಕಣ್ಣಿಗೆ ಕಾಣದೆ ಇರುವ ವ್ಯಕ್ತಿ ಕೊಡುವ ತೀರ್ಪೇ 'ನಾಟ್ ಔಟ್'. ಪ್ರತಿ ಆಟದಲ್ಲೂ ಒಬ್ಬ ಅಂಪೈರ್​ ಇರುತ್ತಾರೆ. ಜೀವನದ ಆಟಕ್ಕೂ ಒಬ್ಬ ಅಂಪೈರ್ ಇರುತ್ತಾನೆ. ಹುಲಿ - ಕುರಿ ಎಂಬ ಹಳ್ಳಿ ಸೊಗಡಿನ ಆಟವನ್ನ ಹೇಗೆ ಆಡುತ್ತಾರೋ, ಅದೇ ರೀತಿ ಚಿತ್ರದ ಕಥೆ ಸಾಗುತ್ತದೆ. ಕುರಿಗಳು ಬೆಟ್ಟವನ್ನು ಹತ್ತುವಾಗ ಮೇಲಿರುವ ಹುಲಿಗಳಿಂದ ತಪ್ಪಿಸಿಕೊಳ್ಳುವುದಕ್ಕೆ ಮಾಡುವ ಪ್ರಯತ್ನಗಳನ್ನು ಇಲ್ಲಿ ಚಿತ್ರದಲ್ಲಿ ನೋಡಬಹುದು' ಎನ್ನುತ್ತಾರೆ.

ಅಜಯ್​ ಪೃಥ್ವಿ ಮತ್ತು ರಚನಾ ಇಂದರ್​ ಜತೆಗೆ ರವಿಶಂಕರ್, ಕಾಕ್ರೋಜ್ ಸುಧಿ, ಗೋಪಾಲಕೃಷ್ಣ ದೇಶಪಾಂಡೆ, ಸಲ್ಮಾನ್, ಗೋವಿಂದೇಗೌಡ, ಪ್ರಶಾಂತ್ ಸಿದ್ದಿ ಮುಂತಾದವರು ನಟಿಸಿದ್ದಾರೆ. ಬೆಂಗಳೂರು, ಮೈಸೂರಿನಲ್ಲಿ ಚಿತ್ರೀಕರಣ ನಡೆದಿದೆ.

'ನಾಟ್​ ಔಟ್​' ಚಿತ್ರಕ್ಕೆ ಜ್ಯೂಡಾ ಸ್ಯಾಂಡಿ ಸಂಗೀತ, ಹಾಲೇಶ್​ ಛಾಯಾಗ್ರಹಣವಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net