ಹಳೆಯ ಟೈಟಲ್​ ಹೊಸ ಚಿತ್ರ; ‘ಯುದ್ಧಕಾಂಡ’ದಲ್ಲಿ ಲಾಯರ್​ ಆದ ಅಜೇಯ್ ರಾವ್

Yuddha Kanda - Final
Published on

ಬೆಂಗಳೂರು: ರವಿಚಂದ್ರನ್​ ಅವರ ಮಹತ್ವದ ಚಿತ್ರಗಳಲ್ಲಿ 'ಯುದ್ಧಕಾಂಡ' ಸಹ ಒಂದು. ಅನಿಲ್​ ಕಪೂರ್​ ಅಭಿನಯದ 'ಮೇರಿ ಜಂಗ್​' ಎಂಬ ಜನಪ್ರಿಯ ಚಿತ್ರವನ್ನು ಕನ್ನಡದಲ್ಲಿ 'ಯುದ್ಧಕಾಂಡ' ಹೆಸರಿನಲ್ಲಿ ರೀಮೇಕ್​ ಮಾಡಲಾಗಿತ್ತು. ರವಿಚಂದ್ರನ್​ ಲಾಯರ್​ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಈ ಚಿತ್ರ ಸೂಪರ್​ ಹಿಟ್​ ಆಗಿತ್ತು. ಈಗ್ಯಾಕೆ ಈ ವಿಷಯವೆಂದರೆ, ಅಜೇಯ್​ ರಾವ್​ ಅಭಿನಯದ ಹೊಸ ಚಿತ್ರಕ್ಕೆ 'ಯುದ್ಧಕಾಂಡ' ಎಂಬ ಹೆಸರನ್ನು ಇಡಲಾಗಿದ್ದು, ಈ ಚಿತ್ರದಲ್ಲಿ ಅಜೇಯ್​ ಮೊದಲ ಬಾರಿಗೆ ಲಾಯರ್​ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಹೌದು. ಕೆಲವು ದಿನಗಳ ಹಿಂದಷ್ಟೇ ಅಜೇಯ್​ ತಮ್ಮದೇ ನಿರ್ಮಾಣ ಸಂಸ್ಥೆ 'ಶ್ರೀಕೃಷ್ಣ ಆರ್ಟ್ಸ್ ಅಂಡ್ ಕ್ರಿಯೇಷನ್ಸ್' ಮತ್ತು 'ಅಜಯ್ ರಾವ್ ಪ್ರೊಡಕ್ಷನ್ಸ್'ನಡಿ ಒಂದು ಹೊಸ ಚಿತ್ರ ನಿರ್ಮಿಸುತ್ತಿದ್ದಾರೆ ಎಂಬ ಸುದ್ದಿ ಕೇಳಿ ಬಂದಿತ್ತು. ಪವನ್​ ಭಟ್​ ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಇದೀಗ 'ಯುದ್ಧಕಾಂಡ' ಎಂಬ ಹೆಸರಿಡಲಾಗಿದ್ದು, ಇತ್ತೀಚೆಗೆ ಶೀರ್ಷಿಕೆಯನ್ನು ವಕೀಲರಿಂದಲೇ ಲಾಂಚ್ ಮಾಡಿಸಿದ್ದು ವಿಶೇಷವಾಗಿತ್ತು.

ಈ ಚಿತ್ರದ ಕುರಿತು ಮಾತನಾಡುವ ಅಜೇಯ್​ ರಾವ್, '‘ಯುದ್ಧಕಾಂಡ’ ಎಂದಾಗ ಎಲ್ಲರಿಗೂ ನೆನಪಾಗೋದು ರವಿ ಸಾರ್​ ಅವರ ಸಿನಿಮಾ. ಆ ಸಿನಿಮಾದ ನಿರ್ದೇಶಕರಾದ ಕೆ. ವಿ ರಾಜು ಸಾರ್ ಜೊತೆ ನಾನು ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಮಾಡಿದ್ದೇನೆ. ಅದು ನನ್ನ ಅದೃಷ್ಟ. ಈ ಸಿನಿಮಾ ಲಾಂಚ್ ಮಾಡೋವಾಗ ಮೊದಲು ರವಿ ಸರ್ ಭೇಟಿ ಮಾಡಿ ಆಶೀರ್ವಾದ ತೆಗೆದುಕೊಂಡು ಬಂದೆ. ಅವರು ಒಳ್ಳೆಯದಾಗಲೀ ಎಂದು ಆಶೀರ್ವಾದ ಮಾಡಿ ಕಳುಹಿಸಿದರು. ಆಗ ಬಂದ ‘ಯುದ್ಧಕಾಂಡ’ ಚಿತ್ರಕ್ಕೂ, ಈ ಚಿತ್ರಕ್ಕೂ ಯಾವುದೇ ಸಂಬಂಧ ಇಲ್ಲ. ಇದು ರಿಮೇಕ್ ಸಿನಿಮಾ ಅಲ್ಲ' ಎಂದು ಸ್ಪಷ್ಟಪಡಿಸಿದ್ದಾರೆ.

'ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು 20 ವರ್ಷ ಆಯ್ತು. ನಟನಾಗಿ ಯಶಸ್ಸು, ಸೋಲು ಎರಡನ್ನು ನೋಡಿದ್ದೇನೆ. ಕೇವಲ ನಟನಾಗಿ ಉಳಿಯದೇ ಸಿನಿಮಾದ ಎಲ್ಲಾ ಕ್ಷೇತ್ರದಲ್ಲಿ ಪ್ರಯೋಗ ಮಾಡಬೇಕು ಎಂದುಕೊಂಡು ಬೆಂಗಳೂರಿಗೆ ಬಂದವನು ನಾನು. ಹೀರೋ ಆಗಿದ್ದವನು ಪೋಷಕ ಪಾತ್ರಗಳನ್ನೂ ಮಾಡಿದ್ದೇನೆ. 'ಕೃಷ್ಣ ಲೀಲಾ' ಸಿನಿಮಾ ಮೂಲಕ ನಿರ್ಮಾಪಕನೂ ಆಗಿದ್ದೇನೆ. ಇದೀಗ ಏಳು ವರ್ಷದ ನಂತರ ಎರಡನೇ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದೇನೆ' ಎಂದು ತಮ್ಮ ಸಿನಿಪಯಣವನ್ನು ಮೆಲುಕು ಹಾಕುತ್ತಾರೆ ಅಜೇಯ್​ ರಾವ್.

ಈ ಹಿಂದೆ 'ಕಟಿಂಗ್​ ಶಾಪ್​' ಎಂಬ ಚಿತ್ರವನ್ನು ನಿರ್ದೇಶಿಸಿರುವ ಪವನ್​ ಭಟ್​, ‘ಯುದ್ಧಕಾಂಡ’ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಕಾರ್ತಿಕ್ ಶರ್ಮ ಅವರ ಛಾಯಾಗ್ರಹಣ ಮತ್ತು ಕೆ.ಬಿ. ಪ್ರವೀಣ್​ ಅವರ ಸಂಗೀತ ಈ ಚಿತ್ರಕ್ಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net