'ಬ್ಯಾಚುಲರ್​ ಪಾರ್ಟಿ'ಯಿಂದ ರಿಷಭ್ ಔಟ್​ … ಸದ್ಯದಲ್ಲೇ 'ಕಾಂತಾರ 2' ಪ್ರಾರಂಭ?

Bachelor Party
Published on

ಬೆಂಗಳೂರು: ಕೆಲವು ತಿಂಗಳುಗಳ ಹಿಂದೆ ರಿಷಭ್​ ಶೆಟ್ಟಿ ಮತ್ತು ದಿಗಂತ್​ ಅಭಿನಯದ 'ಬ್ಯಾಚುಲರ್​ ಪಾರ್ಟಿ' ಎಂಬ ಚಿತ್ರ ಸೆಟ್ಟೇರಿದ್ದು ನೆನಪಿರಬಹುದು. ಈಗ ಆ ಚಿತ್ರದಿಂದ ರಿಷಭ್​ ಶೆಟ್ಟಿ ಹೊರಬಂದಿದ್ದಾರೆ. ಅಷ್ಟೇ ಅಲ್ಲ, ಅವರು ಸದ್ಯದಲ್ಲೇ 'ಕಾಂತಾರ' ಚಿತ್ರದ ಮುಂದುವರೆದ ಭಾಗವನ್ನು ಶುರು ಮಾಡುವ ಸಾಧ್ಯತೆಯೂ ಇದೆ.

ಆಶ್ಚರ್ಯವಾಗಬಹುದು. ಆದರೂ ಇದು ನಿಜ. ಹಾಗಂತ ಖುದ್ದು ನಟ ದಿಗಂತ್​ ಹೇಳಿದ್ದಾರೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, 'ಬ್ಯಾಚುಲರ್​ ಪಾರ್ಟಿ'ಯಿಂದ ರಿಷಭ್​ ಹೊರನಡೆದಿದ್ದು, ಅವರ ಬದಲು ಇನ್ನೊಬ್ಬ ನಟನ ಹುಡುಕಾಟ ನಡೆದಿದೆ ಎಂದು ಅವರು ಹೇಳಿಕೊಂಡಿದ್ದಾರೆ.

'ರಿಷಭ್​ ಅವರು 'ಕಾಂತಾರ 2' ಚಿತ್ರ ಮಾಡುತ್ತಿರುವುದಾಗಿ ಹೇಳಿದರು. ಹಾಗಾಗಿ, 'ಬ್ಯಾಚುಲರ್​ ಪಾರ್ಟಿ' ಚಿತ್ರದಲ್ಲಿನ ಅವರ ಪಾತ್ರಕ್ಕೆ ರೀಪ್ಲೇಸ್​ಮೆಂಟ್​ ಹುಡುಕುತ್ತಿದ್ದೇವೆ' ಎಂದು ಹೇಳಿದ್ದಾರೆ.

ಮಿಕ್ಕಂತೆ, 'ಕಾಂತಾರ 2' ಚಿತ್ರದ ನಿರ್ಮಾಣದ ಬಗ್ಗೆ ರಿಷಭ್​ ಶೆಟ್ಟಿಯಾಗಲೀ, ಚಿತ್ರತಂಡದವರಾಗಲೀ ಎಲ್ಲೂ ಮಾತನಾಡಿಲ್ಲ. ಈ ವಿಷಯವನ್ನು ಗೌಪ್ಯವಾಗಿ ಇಡಲಾಗಿದ್ದು, ಇನ್ನಷ್ಟೇ ಬಹಿರಂಗವಾಗಬೇಕಿದೆ.

'ಬ್ಯಾಚುಲರ್​ ಪಾರ್ಟಿ' ಚಿತ್ರವನ್ನು ಪರಂವಾಸ್​ ಸ್ಟುಡಿಯೋಸ್​ನಡಿ ರಕ್ಷಿತ್​ ಶೆಟ್ಟಿ ನಿರ್ಮಿಸುತ್ತಿದ್ದು, ಅಭಿಜಿತ್ ಮಹೇಶ್​ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ದಿಗಂತ್​ ಮತ್ತು ಅಚ್ಯುತ್​ ಕುಮಾರ್​ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದು, ಈಗಾಗಲೇ ಚಿತ್ರೀಕರಣ ಪ್ರಾರಂಭವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net