ಕಾತಿರ್ಯನ್ನು ನೋಡಿಯೂ ಮಾತನಾಡಿಸಲಿಲ್ಲವಂತೆ ವಿಜಯ್​ ... ಯಾಕೆ ಗೊತ್ತಾ?

Karthi - Vijay - Final
Published on

ಚೆನ್ನೈ: 'ಇಳಯ ದಳಪತಿ' ವಿಜಯ್​ ಅವರನ್ನು ಇತ್ತೀಚೆಗೆ ಒಂದಲ್ಲ ಒಂದು ವಿವಾದಗಳು ಸುತ್ತುವರೆದಿವೆ. ಇತ್ತೀಚೆಗೆ ಸಹ ರೋಲ್ಸ್​ ರಾಯ್ಸ್​ ಘೋಸ್ಟ್​ ಕಾರ್​ ವಿವಾದದಲ್ಲಿ ವಿಜಯ್​ ಅವರ ಹೆಸರು ಕೇಳಿಬಂದಿತ್ತು. ಆದರೆ, ವಿಜಯ್​ ಈ ಕುರಿತು ಅಪ್ಪಿತಪ್ಪಿಯೂ ಮಾತನಾಡಲಿಲ್ಲ. ತಮ್ಮ ತಂಡಕ್ಕೆ ಆ ಸಮಸ್ಯೆಯನ್ನು ಬಗೆಹರಿಸುವುದಕ್ಕೆ ಬಿಟ್ಟು, ಅವರು ನೆಲ್ಸನ್​ ದಿಲೀಪ್​ಕುಮಾರ್​ ಅಭಿನಯದ 'ಬೀಸ್ಟ್​' ಚಿತ್ರದ ಕೆಲಸಗಳಲ್ಲಿ ತೊಡಗಿಸಿಕೊಂಡರು.

ಈಗ ವಿಜಯ್​ ಕುರಿತು ಇನ್ನೊಂದು ಸುದ್ದಿ ಕೇಳಿಬರುತ್ತಿದೆ. ಇತ್ತೀಚೆಗೆ, ತಮಿಳು ನಟ ಕಾರ್ತಿ ಎದುರಿಗೆ ಬಂದರೂ, ಅವರು ತಮಗೆ ಪರಿಚಯವೇ ಇಲ್ಲ ಎನ್ನುವಂತೆ ನಡೆದು ಹೋದರು, ಆ ನಂತರ ಕಾರ್ತಿ ಬಂದು ಮಾತನಾಡಿಸಿದರು ಎಂಬ ಸುದ್ದಿಯೊಂದು ಹಬ್ಬಿಬಿಟ್ಟಿದೆ. ಇಷ್ಟು ಕೇಳಿ, ವಿಜಯ್​ ಇನ್ನೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡರೇನೋ ಎಂದು ಅವರ ಅಭಿಮಾನಿಗಳಿಗೆ ಕಳವಳವಾಗಬಹುದು. ಹಾಗೇನೂ ಇಲ್ಲ.

ಇಷ್ಟಕ್ಕೂ ಆಗಿದ್ದೇನೆಂದರೆ, ವಿಜಯ್​ ಅಭಿನಯದ 'ಬೀಸ್ಟ್​' ಮತ್ತು ಕಾರ್ತಿ ಅಭಿನಯದ 'ಸರ್ದಾರ್​' ಚಿತ್ರದ ಚಿತ್ರೀಕರಣ ಇತ್ತೀಚೆಗೆ ಚೆನ್ನೈನ ಶ್ರೀ ಗೋಕುಲಂ ಸ್ಟುಡಿಯೋಸ್​ನಲ್ಲಿ ನಡೆಯುತ್ತಿದೆ. ಈ ಸಂದರ್ಭದಲ್ಲಿ ವಿಜಯ್​ ಯಾರ ಜತೆಗೋ ಮಾತನಾಡುತ್ತಿದ್ದರಂತೆ. ಈ ಸಂದರ್ಭದಲ್ಲಿ ಸರ್ದಾರ್ಜಿ ಗೆಟಪ್​ನಲ್ಲಿದ್ದ ಕಾರ್ತಿ, ಅಲ್ಲಿಗೆ ಹೋಗಿದ್ದಾರೆ. ಆದರೆ, ಕಾರ್ತಿ ಬೇರೆ ಗೆಟಪ್​ನಲ್ಲಿ ಇದ್ದಿದ್ದರಿಂದ ವಿಜಯ್​ಗೆ ಅವರ ಗುರುತು ಸಿಕ್ಕಿಲ್ಲ. ಕೊನೆಗೆ, ಕಾರ್ತಿಯೇ ಹೋಗಿ ವಿಜಯ್​ಗೆ ಪರಿಚಯಿಸಿಕೊಂಡರಂತೆ. ತಾನ್ಯಾರು ಎಂದು ಹೇಳಿಕೊಂಡರಂತೆ.

ಕಾರ್ತಿ ತಮ್ಮ ಗೆಟಪ್​ ತೆಗೆಯುತ್ತಿದ್ದಂತೆಯೇ ಗುರುತು ಹಿಡಿದ ವಿಜಯ್​, ಅವರನ್ನು ಬರಮಾಡಿಕೊಂಡು ಹಲವು ನಿಮಿಷಗಳ ಕಾಲ ಮಾತಾಡಿದರಂತೆ. ಅಷ್ಟೇ ಅಲ್ಲ, ಕಾರ್ತಿಯ ಗೆಟಪ್​ ಬಗ್ಗೆ ಮೆಚ್ಚುಗೆ ಸೂಚಿಸುವುದರ ಜತೆಗೆ, ಚಿತ್ರತಂಡಕ್ಕೆ ಶುಭ ಹಾರೈಸಿ ಕಳಿಸಿದರಂತೆ. ಅಂದಹಾಗೆ, 'ಸರ್ದಾರ್​' ಚಿತ್ರವನ್ನು ಮಿತ್ರನ್​ ನಿರ್ದೇಶನ ಮಾಡುತ್ತಿದ್ದು, ಕಾರ್ತಿ ಜತೆಗೆ ಸಿಮ್ರಾನ್​, ರಾಶಿ ಖನ್ನಾ, ರಜೀಶಾ ವಿಜಯನ್​ ಮುಂತಾದವರು ನಟಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net